ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಎಲ್ಲಿದ್ದಾರೆ ‘ಕಾಲೇಜು ರಂಗ’ದ ಆಚಾರ್ಯ?

Last Updated 12 ಜೂನ್ 2020, 19:45 IST
ಅಕ್ಷರ ಗಾತ್ರ

1976ರಲ್ಲಿ ಬಿಡುಗಡೆಯಾದ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಾಲೇಜು ರಂಗ’ ಸಿನಿಮಾ, ಕಾಲೇಜು ಶಿಕ್ಷಣ ಹಿಡಿದ ನೈತಿಕ ಅಧಃಪತನದ ಹಾದಿಯನ್ನು ತೆರೆದಿಡುತ್ತದೆ. ಹಾಗೆಯೇ ಅತ್ಯುತ್ತಮ ಅಧ್ಯಾಪಕನೊಬ್ಬನ ಆತ್ಮವಿಶ್ವಾಸವನ್ನೂ ಉನ್ನತ ಶಿಕ್ಷಣಕ್ಕಾಗಿ ಬಂದ ವಿದ್ಯಾರ್ಥಿಗಳ ಎದುರು ತಮ್ಮ ಅಶೈಕ್ಷಣಿಕ ನಡವಳಿಕೆಗಳಿಂದ ಬೆತ್ತಲಾಗುವ ನಿರ್ಲಜ್ಜ ಅಧ್ಯಾಪಕರ ಅನೈತಿಕತೆಯನ್ನೂ 44 ವರ್ಷಗಳ ಹಿಂದೆ ತೋರಿಸಿದ ಚಿತ್ರ.

ಕಲಿಕೆಯ ಭಾವಪೂರ್ಣ ವಾತಾವರಣ ಹದಗೆಟ್ಟ ಸಂದರ್ಭದಲ್ಲಿ, ಪುಟ್ಟ ಚಳವಳಿಯ ರೂಪದಲ್ಲಿ ವಿದ್ಯಾರ್ಥಿಗಳು ‘ನಮಗೆ ಒಳ್ಳೆಯ ಅಧ್ಯಾಪಕರು ಬೇಕು’ ಎಂದು ಘೋಷಣೆ ಕೂಗುತ್ತ ಅಲ್ಲಿ ಆಗ್ರಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಹೆಮ್ಮೆಯ ಅಧ್ಯಾಪಕರು ನಿರ್ವಹಿಸುತ್ತಿರುವ ಶೈಕ್ಷಣಿಕ ವಾತಾವರಣದ ಗುಣಮಟ್ಟವನ್ನು ನೋಡಬಹುದು.

ಸ್ನಾತಕೋತ್ತರ ಪದವಿಗಳ ಜೊತೆಗೆ ಎಂ.ಫಿಲ್., ಪಿಎಚ್.ಡಿಯಂತಹ ಸಂಶೋಧನಾಧಾರಿತ ಪದವಿಗಳನ್ನು ಪಡೆದ ಸಾವಿರಾರು ಅಧ್ಯಾಪಕರಿದ್ದಾರೆ. ವೃತ್ತಿಪರ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಇಂತಹವರಿಗೆ ಉದ್ಯೋಗದ ಅವಕಾಶಗಳು ಕಡಿಮೆ. ಆದರೆ ಉದ್ಯೋಗಾಕಾಂಕ್ಷಿಗಳೇ ಹೆಚ್ಚಿರುವಾಗ ಬೇರೆ ಬೇರೆ ಅವಕಾಶಗಳ ಕಡೆಗೆ ಅವರ ಆಸಕ್ತಿಗಳನ್ನು ಸೆಳೆಯುವ ಸ್ಫೂರ್ತಿದಾಯಕ ಅಧ್ಯಾಪಕರ ಕೊರತೆ ಎದ್ದು ಕಾಣುತ್ತಿದೆ.

ಮಾನವಿಕ ವಿಷಯಗಳನ್ನು ಓದುವ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆಗೆ ಬೇಕಾದ ಅಗತ್ಯ ಗ್ರಹಿಕೆ ಮತ್ತು ಆಲೋಚನಾ ಕ್ರಮಗಳನ್ನು ಅಧ್ಯಾಪಕರು ಕಲಿಸಿಕೊಡುವ ಮೂಲಕ ಅವರನ್ನು ಸಮಾಜಮುಖಿಗಳನ್ನಾಗಿ ರೂಪಿಸಬೇಕಾಗಿದೆ. ಕ್ರಿಯಾತ್ಮಕ ಬದ್ಧತೆಯುಳ್ಳ ಮತ್ತು ಸಮರ್ಪಣಾ ಮನೋಭಾವದ ಕಡಿಮೆ ಸಂಖ್ಯೆಯ ಅಧ್ಯಾಪಕರು ಈ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.

ಕಾಲೇಜು ಅಧ್ಯಾಪಕರು ವಾರಕ್ಕೆ 40 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕು. ಇದರಲ್ಲಿ 16 ಗಂಟೆ ಬೋಧನೆ, ಉಳಿದಂತೆ ಆಡಳಿತಾತ್ಮಕ ಸಹಾಯ, ಪಠ್ಯೇತರ ಚಟುವಟಿಕೆಗಳು ಮತ್ತು ಅಧ್ಯಯನಕ್ಕೆ ಮೀಸಲು. ದಿನಕ್ಕೆರಡು ಸಲ ಸಹಿ ಹಾಕುವಂತೆ ಸೂಚಿಸುವುದೇ ಅಧ್ಯಾಪಕರಿಗೆ ಕೊಡುವ ಕಿರುಕುಳ ಎಂದು ಭಾವಿಸುವವರಿದ್ದಾರೆ. ಇನ್ನು ಅಧ್ಯಯನದ ಮಾತೆಲ್ಲಿ?

ಒಂದು ಕಾಲಕ್ಕೆ ಅಧ್ಯಾಪಕರು ಕ್ಯಾಂಟೀನಿನಲ್ಲಿ ಕುಳಿತರೆಂದರೆ, ಅಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಸಂವಾದಗಳು ನಡೆಯುತ್ತಿದ್ದವು. ಮುಂದೆ ಅವೇ ಸಿದ್ಧಾಂತಗಳಾಗಿ ವಿಧಾನಸಭೆ ಮತ್ತು ಸಂಸತ್ತುಗಳಲ್ಲಿ ಚರ್ಚೆಗಳಾಗಿ ಶಾಸನ ರೂಪಿಸುವಷ್ಟರ ಮಟ್ಟಿಗೆ ಗಟ್ಟಿ ಸಾಂಸ್ಕೃತಿಕ ದನಿಯಾಗುತ್ತಿದ್ದವು. ಈಗ ನಾಲ್ಕು ಜನ ಕೂತ ಕಡೆ ಒಂದೋ ಅವರಿವರ ಬಗೆಗೆ ಕೊಂಕು ಇಲ್ಲಾ ಅವರವರ ವಾಟ್ಸ್ಆ್ಯಪ್ ಕಸ ಎತ್ತಿ ಹಾಕುವ ‘ಪುಣ್ಯ’ಕಾಯಕ.

ಈ ಮೂರು ದಶಕಗಳಲ್ಲಿ ಅಧ್ಯಾಪಕ ಸಮುದಾಯ ಎಷ್ಟರಮಟ್ಟಿಗೆ ಸಿನಿಕವಾಗಿದೆ ಎಂದರೆ, ಇಲ್ಲಿ ಏನೂ ಸಾಧ್ಯವಿಲ್ಲ ಎನ್ನುವಂತಾಗಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವಿನ ಜಾತಿ ಸಂಬಂಧಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದ ಕಾಲವನ್ನು ದಾಟಿ, ಜಾತಿಯೇ ಅವರ ಸಂಬಂಧವನ್ನು ಗಟ್ಟಿಮಾಡುವ ಸ್ಪಷ್ಟ ಗುರುತಾಗಿಬಿಟ್ಟಿದೆ. ಅಧ್ಯಾಪಕರು ಸರಿಯಾದದ್ದರ ಪರವಾಗಿ ನಿಲ್ಲುವ ನೈತಿಕ ಪ್ರಜ್ಞೆಯುಳ್ಳವರಾಗದೆ, ಸ್ವರಕ್ಷಣೆಯ ಜಾಣ ನಡೆಯುಳ್ಳವರೂ ಆಗಿದ್ದಾರೆ. ಇಂತಹ ನೋವಿನ ಸಂಗತಿಯ ನಡುವೆ ಎಲ್ಲ ತರತಮಗಳ ಆಚೆ ಆಲೋಚಿಸಬಲ್ಲ ಕೆಲವರಾದರೂ ಅಧ್ಯಾಪಕರು ಇದ್ದಾರೆ ಅನ್ನುವುದು ಸಮಾಧಾನಕರ ಸಂಗತಿ.

ಇತಿಹಾಸದ ಅಧ್ಯಾಪಕರಿಗೆ ರೊಮಿಲಾ ಥಾಪರ್ ಹೆಸರೇ ಗೊತ್ತಿಲ್ಲ ಅಂದರೆ ಏನು ಮಾಡುವುದು? ವಿಜ್ಞಾನದ ಅಥವಾ ಯಾವುದೇ ವಿಷಯದ ಅಧ್ಯಾಪಕರು ಇಸ್ರೊ ಕುರಿತು ಕಾಲು ಗಂಟೆ ಮಾತನಾಡಿ ವಿಡಿಯೊ ಮಾಡುವುದು ಸಾಧ್ಯವಿಲ್ಲ ಎಂದರೆ ಹೇಗೆ? ಅಧ್ಯಯನದ ಬಲವಿಲ್ಲದೆ ಬರೀ ನೋಟ್ಸ್ ಬರೆಸುವವರಿಂದ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ? ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಕೆಲವು ಅಧ್ಯಾಪಕರ ಮನೆಗೆ ದಿನಪತ್ರಿಕೆಯೂ ಬರುವುದಿಲ್ಲ. ಇದು ಅವರ ಸ್ವಂತ ವಿಷಯ ಎಂದು ಬಿಟ್ಟುಬಿಡಬಹುದು. ಆದರೆ ಸಾಮಾಜಿಕ ಪ್ರಗತಿಯ ಹಾದಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಹುಡುಕಿಕೊಳ್ಳಬೇಕಾದ ಅಧ್ಯಾಪಕರು ಯಾವ ಆದರ್ಶ, ಯಾವ ಮೌಲ್ಯ, ಯಾವ ಮಾದರಿಗಳಿಂದ ಸಮಾಜವನ್ನು ಮುನ್ನಡೆಸಬಲ್ಲರು?

ಅಧ್ಯಯನಾಸಕ್ತರೂ ಕಾರ್ಯತತ್ಪರರೂ ಆದ ಅಧ್ಯಾಪಕರನ್ನು ತಾತ್ಸಾರ ಮಾಡುವವರಿದ್ದಾರೆ. ಸಹೋದ್ಯೋಗಿಗಳ ಬಗೆಗೇ ಸದಭಿಪ್ರಾಯ ಸಾಧ್ಯವಾಗದಿದ್ದಾಗ ಭಿನ್ನ ವಿಚಾರ, ನಂಬಿಕೆ, ಧೋರಣೆಯ ಸಹಜೀವಿಗಳ ಕುರಿತಾದ ಸದಾಶಯಗಳನ್ನು ರೂಪಿಸುವುದು ಹೇಗೆ?

‘ಕಾಲೇಜು ರಂಗ’ದ ಆ ಸಂವೇದನಾಶೀಲ, ವಿದ್ಯಾರ್ಥಿಗಳ ಆರಾಧ್ಯ ಆಚಾರ್ಯ ‘ಎಲ್ಲಿ ಅಧಿಕಾರಕ್ಕಾಗಿ ಬಡಿದಾಟ ಇಲ್ಲವೋ ಎಲ್ಲಿ ಪಕ್ಷಪಾತ ಇಲ್ಲವೋ ಎಲ್ಲಿ ಲಂಚ, ರುಷುವತ್ತು ಇಲ್ಲವೋ ಎಲ್ಲಿ ವಿದ್ಯಾರ್ಥಿಗಳು ಪ್ರೀತಿಯಿಂದ ವಿದ್ಯೆ ಕಲಿಯಬಹುದೋ ಅಂತಹ ಒಂದು ಕಾಲೇಜು ಕಟ್ಟುತ್ತೇನೆ’ ಎನ್ನುತ್ತಾ ಕಾಲೇಜಿನಿಂದ ಹೊರಡುತ್ತಾನೆ. ಆ ಅಧ್ಯಾಪಕನಿಗೆ ಒಲಿದ ವಿದ್ಯಾರ್ಥಿಗಳು ಹಿಂಬಾಲಿಸುತ್ತಾರೆ.

ದೇಶಕ್ಕೀಗ ಆಚಾರ್ಯರಾಗಬಲ್ಲ ಅಸೂಯಪರರಲ್ಲದ ಅಧ್ಯಾಪಕರು ಮತ್ತು ಅವರನ್ನು ಸೃಷ್ಟಿಸುವ ವಿದ್ಯಾರ್ಥಿಗಳು ಬೇಕಾಗಿದ್ದಾರೆ.

ಲೇಖಕ: ಸಹಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT