ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಮಸ್ಯಾತ್ಮಕ ಪರಿಹಾರದ ಮೇಲೇಕೆ ಒಲವು?

ಸಂಕುಚಿತ ಮನಃಸ್ಥಿತಿ ಈ ಕಾಲಕ್ಕೂ ಮೌಲ್ಯವಾಗಿ ಮುಂದುವರಿಯುವುದು ತರವಲ್ಲ
Last Updated 4 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಶಿಕ್ಷಕರೇ ಇರುವ ವಾಟ್ಸ್‌ಆ್ಯಪ್ ಗುಂಪಿಗೆ ಒಬ್ಬರು ಕಳಿಸಿದ್ದ ವಿಡಿಯೊ ವೀಕ್ಷಿಸಿದ ಮತ್ತೊಬ್ಬರು, ಈ ವಿಡಿಯೊವನ್ನು ಎಲ್ಲ ಪೋಷಕರಿಗೂ ತಲುಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಎಲ್ಲ ಪೋಷಕರೂ ನೋಡಬೇಕಾದಂಥದ್ದು ಏನಿದೆ ಎನ್ನುವ ಕುತೂಹಲದೊಂದಿಗೆ ವಿಡಿಯೊ ವೀಕ್ಷಿಸಿದೆ. ಪೊಲೀಸ್ ಸಿಬ್ಬಂದಿಯೊಬ್ಬರು, ಇತ್ತೀಚೆಗೆ ಸುದ್ದಿಯಾದ ಮಂಗಳೂರಿನ ವಿದ್ಯಾರ್ಥಿಗಳ ಚುಂಬನದ ಪ್ರಕರಣ
ವನ್ನು ಹಿನ್ನೆಲೆಯಾಗಿಟ್ಟುಕೊಂಡು ಪೋಷಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಆ ವಿಡಿಯೊ ಮೂಲಕ ಮಾಡಿದ್ದಾರೆ.

‘ಆಧುನಿಕ ಜೀವನಶೈಲಿಗೆ ಮಾರುಹೋಗುತ್ತಿರುವ ಇಂದಿನ ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳು ತರಗತಿ
ಗಳಿಗೆ ಹಾಜರಾಗದೆ ಪಾರ್ಕುಗಳಲ್ಲಿ ಪ್ರಣಯದಲ್ಲಿ ತಲ್ಲೀನರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಯಾರೊಂದಿಗೆ ಕಾಲ ಕಳೆಯುತ್ತಾರೆ ಎಂಬ ಕುರಿತು ಕಣ್ಣಿಡಬೇಕು. ತಾವು ಏನ್ ಮಾಡ್ತಿದ್ದೀವಿ ಅನ್ನೋದನ್ನು ತಮ್ಮ ತಂದೆ-ತಾಯಿ ಗಮನಿಸುತ್ತಿರುತ್ತಾರೆ ಎನ್ನುವ ಭಯ ಮಕ್ಕಳಲ್ಲಿ ಬೇರೂರದ ಹೊರತು ಇಂತಹದಕ್ಕೆಲ್ಲ ಕಡಿವಾಣ ಹಾಕುವುದು ಕಷ್ಟ. ಇಂದಿನ ಮಕ್ಕಳಲ್ಲಿ ಶಿಕ್ಷಕರು ಮತ್ತು ಪೊಲೀಸರ ಕುರಿತು ಮೊದಲಿನಂತೆ ಭಯ ಇಲ್ಲ. ತಮಗೆ ಹೇಳುವವರು ಕೇಳುವವರು ಯಾರೂ ಇಲ್ಲ, ಏನು ಬೇಕಾದರೂ ಮಾಡಬಹುದು ಎನ್ನುವ ಮನೋಭಾವ ಅವರಲ್ಲಿ ಬೇರೂರಿದೆ.

ಮುಂಬರುವ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ತೀರಾ ಕಷ್ಟವಾಗಲಿದೆ. ಮಕ್ಕಳನ್ನುನಿಯಂತ್ರಣದಲ್ಲಿಡುವ ಕೆಲಸವನ್ನು ಪೋಷಕರೇ ಮಾಡಬೇಕು. ಪೊಲೀಸರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ, ಸರಿಪಡಿಸುತ್ತಾರೆ ಎನ್ನುವ ನಿಲುವು ತಾಳಬೇಡಿ’ ಎಂಬುದನ್ನು ತಮಗೆ ತೋಚಿದ ಹಾಗೆ, ಕೆಲವೆಡೆ ಅಸಭ್ಯ ರೀತಿಯಲ್ಲಿ ಹೇಳಿದ್ದರು.

ತೀರಾ ಸಂಯಮದಿಂದ ವಿವೇಚಿಸಿ, ಪರಿಹಾರ ಕಂಡುಕೊಳ್ಳಬೇಕಿರುವ ಸಂಕೀರ್ಣ ಸಮಸ್ಯೆಗಳ ಕುರಿತು ತಮಗೆ ತೋಚಿದಂತೆ ಮಾತನಾಡಿ, ಈಗಾಗಲೇ ಬೇರೂರಿರುವ ಪೂರ್ವಗ್ರಹಗಳೇ ಸರಿ ಎಂದು ದೃಢೀಕರಿಸುವ ಮತ್ತು ಅವುಗಳಲ್ಲೇ ಪರಿಹಾರ ಅರಸುವವರ ಮಾತುಗಳೇ ಏಕೆ ಹಿತವಾಗುತ್ತಿವೆ? ಹದಿಹರೆಯದ ಮಕ್ಕಳ ನಡುವಿನ ಪರಸ್ಪರ ಆಕರ್ಷಣೆ, ಸ್ನೇಹ- ಪ್ರೀತಿ- ಪ್ರಣಯವನ್ನು ಭಯದಿಂದ ನಿಯಂತ್ರಿಸಲು ಸಾಧ್ಯವೇ, ಮತ್ತು ಅದು ಸಮಂಜಸವಾದುದೇ ಎಂದು ವಿವೇಚಿಸಬೇಕಲ್ಲವೇ?

ಈ ದಿಸೆಯಲ್ಲಿ ತೀರ್ಮಾನಕ್ಕೆ ಬರುವ ಮುನ್ನ ದಿನನಿತ್ಯ ಹದಿಹರೆಯದ ಮಕ್ಕಳೊಂದಿಗೆ ಒಡನಾಡುವ ಪೋಷಕರು ಹಾಗೂ ಶಿಕ್ಷಕರು ಮಾರ್ಗದರ್ಶನ ಪಡೆಯಬೇಕಿರುವುದು ಯಾರಿಂದ? ಸಮಸ್ಯೆಯ ಆಳ- ಅಗಲವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅರ್ಥೈಸಿಕೊಂಡು ಪರಿಹಾರ ಸೂಚಿಸಬಲ್ಲ ತಜ್ಞರಿಂದ
ಲ್ಲವೇ? ಹದಿಹರೆಯದ ಮಕ್ಕಳ ದೇಹದಲ್ಲಿ ಉಂಟಾಗುವ ಬದಲಾವಣೆಗಳು ಅವರಲ್ಲಿ ಸಹಜವಾಗಿ ಉದ್ದೀಪಿಸುವ ಭಾವನೆಗಳನ್ನು ಸಂಯಮದಿಂದ ನಿರ್ವಹಿಸಲು ಬಳಸಬೇಕಿರುವುದು ತಿಳಿವಳಿಕೆಯನ್ನೋ ಅಥವಾ ಭಯವನ್ನೋ?

ಮೊಬೈಲು ಅಂತರ್ಜಾಲದ ಮೂಲಕ ಮಕ್ಕಳ ಎದುರು ತೆರೆದುಕೊಳ್ಳುತ್ತಿರುವ ಸಂಗತಿಗಳು ಅವರನ್ನು ನಾನಾ ರೀತಿಯ ಪ್ರಚೋದನೆಗೆ ಒಳಪಡಿಸುತ್ತಿರುವುದು ವಾಸ್ತವವೇ ಆದರೂ, ತಪ್ಪೆಲ್ಲವನ್ನೂ ಆಧುನಿಕತೆ ಮತ್ತು ಅದರ ಬಳುವಳಿಯಾದ ತಂತ್ರಜ್ಞಾನದ ಮೇಲಷ್ಟೆ ಹೊರಿಸಿ ಸುಮ್ಮನಿರಲಾದೀತೇ? ಹಿಂದೆ ಎಲ್ಲವೂ ಸರಿ ಇತ್ತೆ? ದೊಡ್ಡವರೇ ಮುಂದೆ ನಿಂತು ನಡೆಸುತ್ತಿದ್ದ ಬಾಲ್ಯ ವಿವಾಹಗಳಿಗೆ, ದೇವದಾಸಿ ಪದ್ಧತಿಗೆ ಯಾವ ತಂತ್ರಜ್ಞಾನ ಕಾರಣವಾಗಿತ್ತು? ವಿವಾಹೇತರ ಹಾಗೂ ವಿವಾಹಪೂರ್ವ ಲೈಂಗಿಕ ಸಂಪರ್ಕಗಳು ಹಿಂದೆಲ್ಲ ಏರ್ಪಡುತ್ತಲೇ ಇರಲಿಲ್ಲವೆ?

ಆಧುನಿಕ ತಂತ್ರಜ್ಞಾನವನ್ನು ಅತಿ ಉತ್ಸಾಹದಿಂದ ಅಪ್ಪಿಕೊಳ್ಳಲು ಸಿದ್ಧವಿರುವ ನಮಗೆ, ಈ ಕಾಲಘಟ್ಟಕ್ಕೆ ಅಗತ್ಯವಿರುವ ಮನೋಭಾವ ರೂಢಿಸಿಕೊಳ್ಳಲು ಸಾಧ್ಯವಾಗುತ್ತಿದೆಯೇ? ಮೊಬೈಲಿನ ಮೂಲಕ ಕ್ಯಾಮೆರಾ ಎಲ್ಲರ ಕೈ ಸೇರಿರುವ ಹೊತ್ತಿನಲ್ಲೂ ನಗ್ನತೆ ಮತ್ತು ಲೈಂಗಿಕತೆಯ ಕುರಿತು ನಮ್ಮಲ್ಲಿ ಬೇರೂರಿರುವ ಸಂಕುಚಿತ ಮನಃಸ್ಥಿತಿಯನ್ನೇ ಈ ಕಾಲಕ್ಕೂ ಅಗತ್ಯವಿರುವ ಮೌಲ್ಯವಾಗಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆಯೇ? ವ್ಯಕ್ತಿಗಳ ನಡುವಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು ಹೆದರಿಸಿ ಬೆದರಿಸಿ ಹಣ ಕೀಳುವ, ಲೈಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಬೆಳಕಿಗೆ ಬಾರದ ಪ್ರಕರಣಗಳು ಎಷ್ಟಿರಬಹುದು?

ವ್ಯಕ್ತಿಯೊಬ್ಬರ ಮಾನ-ಮರ್ಯಾದೆಯನ್ನು ಅವರ ಲೈಂಗಿಕ ಆಯ್ಕೆಗಳನ್ನು ಆಧರಿಸಿ ಅಳೆಯುವ ಮಾನದಂಡ ಎಷ್ಟೋ ಜೀವಗಳನ್ನೇ ಬಲಿ ಪಡೆಯುತ್ತಿರುವ ಹೊತ್ತಿನಲ್ಲಾದರೂ ನಮ್ಮ ನಿಲುವು ಬದಲಾಗಬಾರದೆ? ಹದಿಹರೆಯದ ಮಕ್ಕಳು ಸರಸಸಲ್ಲಾಪದಲ್ಲಿ ತೊಡಗಿರುವ ದೃಶ್ಯಗಳು ಸಾರ್ವಜನಿಕಗೊಂಡಾಗ, ಸಮಾಜ ಅವರನ್ನು ನಿಕೃಷ್ಟವಾಗಿ ನಡೆಸಿಕೊಳ್ಳಬೇಕೋ ಅಥವಾ ಲೈಂಗಿಕ ಭಾವನೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಅಗತ್ಯ ಮಾರ್ಗದರ್ಶನ ನೀಡಬೇಕೋ?

ಲೈಂಗಿಕತೆಯ ಕುರಿತು ನಮ್ಮಲ್ಲಿ ಬೇರೂರಿರುವ ಪೂರ್ವಗ್ರಹಗಳಿಂದಾಗಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವ ಎಷ್ಟೋ ಮಕ್ಕಳು, ವಯಸ್ಕರು ಮುಕ್ತವಾಗಿ ಅದನ್ನು ಹೇಳಿಕೊಂಡು, ಅದರಿಂದ ಪಾರಾಗುವ ದಾರಿ ಕಂಡುಕೊಳ್ಳುವುದೂ ದುಸ್ತರವಾಗಿರುವುದು ಕಣ್ಣೆದುರಿನ ವಾಸ್ತವವಲ್ಲವೇ? ನಮ್ಮ ಆಕ್ರೋಶದ ದನಿ ಹೊರಡಬೇಕಿರುವುದು ಲೈಂಗಿಕ ದೌರ್ಜನ್ಯದ ವಿರುದ್ಧವೇ ಹೊರತು ಲೈಂಗಿಕತೆಯ ಕುರಿತು ಅಲ್ಲ. ಸಂಸ್ಕೃತಿ, ಸಂಪ್ರದಾಯದ ಹೆಸರಿನಲ್ಲಿ ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತೋರಿ ಕಂಡುಕೊಳ್ಳಲು ಹೊರಡುವ ಪರಿಹಾರಗಳೇ ಸಮಸ್ಯಾತ್ಮಕವಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT