ಚುರುಮುರಿ: ಬೆಲೆಯುಳ್ಳವರು

ಬೆಕ್ಕಣ್ಣ ಬಲುಬೇಜಾರಿನಲ್ಲಿ ಮುಖ ಬಾಡಿಸಿಕೊಂಡು ಕೂತಿತ್ತು.
‘ನೋಡಿಲ್ಲಿ... 800 ಕೋಟಿ ರೂಪಾಯಿ ಆಸ್ತಿ ಇರೂ ಒಲಿವಿಯಾ ಬೆನ್ಸನ್ ಅನ್ನೋ ಬೆಕ್ಕು ಮೂರನೇ ಶ್ರೀಮಂತ ಸಾಕುಪ್ರಾಣಿ ಅಂತೆ. 822 ಕೋಟಿ ರೂಪಾಯಿ ಆಸ್ತಿ ಇರೋ ನಲ ಅನ್ನೋ ಬೆಕ್ಕು ಎರಡನೇ ಶ್ರೀಮಂತ ಸಾಕುಪ್ರಾಣಿ ಅಂತೆ. ನಿನ್ನ ಎಲ್ಲಾ ಚುರುಮುರಿವಳಗ ನಾನೇ ಮುಖ್ಯ ಪಾತ್ರಧಾರಿ... ನನಗ ನೋಡಿದ್ರ ಏನೂ ಆಸ್ತಿ ಇಲ್ಲ’ ಅಳುಮುಖದಲ್ಲಿ ಹೇಳಿತು.
‘ನಿನಗೆ ಯಾರರೇ ಬೆಲೆ ಕಟ್ಟತಾರೇನು... ನಿ ಅಗದಿ ಅಮೂಲ್ಯ’ ಎಂದು ಸಮಾಧಾನಿಸಲು ನೋಡಿದೆ.
‘ಏನು ಹಂಗಂದ್ರ... ನನಗ ಕಿಮ್ಮತ್ತು, ಬೆಲೆ ಇಲ್ಲೇನು’ ಮತ್ತೆ ಕ್ಯಾತೆ ತೆಗೆಯಿತು.
‘ಹಂಗಲ್ಲಲೇ... ನಿನ್ನ ಬೆಲೆಯನ್ನ ರೊಕ್ಕದಾಗೆ ಅಳೆಯಾಕೆ ಆಗಂಗಿಲ್ಲ ಅಂತ’.
‘ನಿನ್ನಂಥ ಯಃಕಶ್ಚಿತ್ ಬರಹಗಾತಿ ಮನ್ಯಾಗೆ ಇರೋ ಬದ್ಲಿಗೆ ಹಿಂಗೆ ವಿದೇಶದಾಗೆ ಖ್ಯಾತನಾಮರ ಮನಿವಳಗ ಇದ್ದಿದ್ದರೆ ನಾನೂ ಇಷ್ಟೊತ್ತಿಗೆ ಎಷ್ಟು ಪ್ರಸಿದ್ಧಿ ಆಗತಿದ್ದೆ. ಒಟ್ಟು ನಿನ್ನ ಮನ್ಯಾಗೆ ಇದ್ದು ನನಗೆ ಬೆಲೆ ಇಲ್ಲದಂಗೆ ಆಗೈತೆ’.
‘ನೋಡಲೇ... ನಮ್ಮ ದೇಶದಾಗೆ ಬೆಲೆ ಇರೂದು ಶಾಸಕರು, ಮಂತ್ರಿಗಳು, ಅಧಿಕಾರಿಗಳ ಕುರ್ಚಿಗಳಿಗೆ ಮಾತ್ರ. ಅವುಗಳ ಬೆಲೆ ಮಾತ್ರ ಹೆಚ್ಚಾಗ್ತಲೇ ಹೊಂಟೈತಿ’ ಎಂದು ಮಾತು ಬದಲಿಸಿದೆ.
‘ಹೌದು ಮತ್ತ... ಎಲ್ಲಾರಿನ್ನೂ ಕೊಂಡುಕೊಳ್ಳೋ ದಮ್ಮು ಇರೂದು ಕೆಲವೇ ಕಾರ್ಪೊರೇಟ್ ಧಣಿಗಳಿಗೆ ಮಾತ್ರ’.
‘ನಿಮ್ಮ ಜನಾರ್ದನ ರೆಡ್ಡಿಯಂಕಲ್ಲು ಏನು ಕಡಿಮೆ... ನೋಡು, ಹೊಸ ಪಕ್ಷ ಕಟ್ಟಿ, ತನ್ನ ತಾಕತ್ತು ಎಷ್ಟ್ ಐತಿ ಅಂತ ತೋರಿಸಾಕೆ ಹತ್ಯಾರ’.
‘ನಮ್ಮ ರೆಡ್ಡಿಯಂಕಲ್ಲು ಮುಟ್ಟೋ ತಾಕತ್ತು ಮಾತ್ರ ಯಾರಿಗೂ ಇಲ್ಲ. ಕಮಲಕ್ಕನ ಮನಿಯವರು ಬ್ಯಾರೆಯವರ ಮ್ಯಾಗೆ ಇ.ಡಿ
ದಾಳಿ ನಡೆಸಿದಂತೆ ರೆಡ್ಡಿಯಂಕಲ್ಲಿನ ಮ್ಯಾಗೆ ಇ.ಡಿ ದಾಳಿ ಹೆಸರು ಎತ್ತೂ ದಮ್ಮು ತೋರಿಸಂಗಿಲ್ಲ ಬಿಡು’ ಎಂದು ಕುಹಕವಾಡಿ ನಕ್ಕಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.