ಬುಧವಾರ, ಜನವರಿ 29, 2020
30 °C
ವಿಡಂಬನೆ

ಅಂಥಿಂಥ ಉಪಚುನಾವಣೆ ಇದಲ್ಲ!

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಕೇಳ್ರಪ್ಪೋ ಕೇಳ್ರಿ...! ನೀವು ಹಿಂದೆಯೂ ನೋಡಿರಲಿಕ್ಕಿಲ್ಲ... ಮುಂದೆಯೂ ನೋಡಲಿಕ್ಕಿಲ್ಲ! ‘ಅನರ್ಹ’ ಶಾಸಕರ ಮೇಲೆ ಆಣೆ. ಮೊನ್ನೆ ನಡೆದ ಉಪಚುನಾವಣೆಯ ಖದರ‍್ರೇ ಬೇರೆ! ಸಾಧಾರಣವಾಗಿ ಅಭ್ಯರ್ಥಿಗಳಲ್ಲಿ ಕೆಲವರು ಶೇಕಡ ನೂರರಷ್ಟು ಅನರ್ಹರಾಗಿದ್ದರೂ, ಯಾರೂ ತಾನೊಬ್ಬ ಅನರ್ಹನೆಂದು ಘೋಷಿಸಿಕೊಂಡು ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ಈ ಉಪಚುನಾವಣೆಯಲ್ಲಿ ನೀವೇ ನೋಡಿದ್ದೀರಲ್ಲ! ಒಬ್ಬರು ಇಬ್ಬರಲ್ಲ, ಒಟ್ಟು ಹದಿಮೂರು ಮಂದಿ ಮಾಜಿ ‘ಶೋಷಕರು’ ಅನರ್ಹರೆಂಬ ಹಣೆಪಟ್ಟಿ ಧರಿಸಿಕೊಂಡೇ ಕಣಕ್ಕೆ ಇಳಿದಿದ್ದಾರೆ.

ಚುನಾವಣೆಯ ದುಃಸ್ಥಿತಿ ಎಲ್ಲಿವರೆಗೆ ಬಂದು ಮುಟ್ಟಿದೆ ಎಂದರೆ, ಅಭ್ಯರ್ಥಿಗಳು ಆಸ್ತಿಗಳೊಂದಿಗೆ ತಮ್ಮ ಅನರ್ಹತೆಯನ್ನೂ ಘೋಷಿಸಿದಂತಾಯಿತು! ಅಲ್ಲಿಗೆ ಸನ್ಮಾನ್ಯ ಮತದಾರರಿಗೆ ಆಯ್ಕೆ ಕೆಲಸ ಬಹಳ ಸುಲಭವಾಯಿತು ಎಂದು ಮಜಾಕೀಯ ಪಂಡಿತರು ಭಾವಿಸಿದ್ದಾರೆ.

ಈ ಉಪಚುನಾವಣೆಯ ಇನ್ನೊಂದು ವಿಶೇಷ ಏನಪ್ಪಾಂದರೆ... ಕೈಲಾಸ ಪಕ್ಷಕ್ಕೆ ಹಿಂದಿನಷ್ಟೇ ಸೀಟುಗಳು ಸಿಗುತ್ತವೆ ಎಂಬ ಅತೀ ವಿಶ್ವಾಸ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಯಾರದ್ದೇ ಮೈತ್ರಿ ಇಲ್ಲದೆ ಮಾಜಿ ಸಿಎಮ್ಮಯ್ಯರು ‘ನಾವೇ ಸರ್ಕಾರ ನಡೆಸುತ್ತೇವೆ’ ಎಂದು ಎದೆ ತಟ್ಟಿಕೊಂಡು ಸೀರಿಯಸ್ಸಾಗಿಯೇ ಸುಳ್ಳು ಹೇಳುತ್ತಿದ್ದಾರಲ್ಲ!

ಮಾಜಿ ಸಿಎಮ್ಮಯ್ಯರ ಹೇಳಿಕೆಗೆ ಮಾಜಿ ದೋಸ್ತು ಕಣ್ಣೀರಣ್ಣ ‘ಇನ್ನೆಂದಿಗೂ ಕೈಲಾಸ ಪಕ್ಷದೊಂದಿಗೆ ಡವ್ ಮಾಡಕ್ಕಿಲ್ಲಪ್ಪಾ’ ಎಂದು ಗುರುಗುಟ್ಟಿದ್ದಾರೆ. ಅಂದಹಾಗೆ ಕಣ್ಣೀರಣ್ಣ ಈವರೆಗೆ ಯಾವುದೇ ಚುನಾವಣೆಯಲ್ಲಿ ಈ ಪರಿಯಾಗಿ ಓತಿಕ್ಯಾತದಂತೆ
ಬಣ್ಣ ಬದಲಾಯಿಸಿದ್ದನ್ನು ಯಾರೂ ಕಂಡಿರಲಿಕ್ಕಿಲ್ಲ.

‘ಆಡಿಯೋರಪ್ಪ ಸರ್ಕಾರ ಬೀಳುವುದಕ್ಕೆ ಬಿಡೋಲ್ಲ‍’ ಎಂದು ಹೇಳಿದ ಮಾರನೇ ದಿವಸವೇ ಸರ್ಕಾರಕ್ಕೆ ಉಗುಳತೊಡಗಿದರು. ಅದಾಗಿ ಕೆಲ ದಿವಸಗಳಲ್ಲಿ ‘ಅನರ್ಹ ಶಾಸಕರನ್ನು ಸೋಲಿಸುವುದೊಂದೇ ನಮ್ಮ ಪಕ್ಷದ ಗುರಿ’ ಎಂದು ಹಗೆ ತೀರಿಸುವ ಮಾತನಾಡಿ
ದ್ದರು. ಅದೇ ದಿವಸ ಇನ್ನೊಂದು ಸಭೆಯಲ್ಲಿ ‘ಈಗಿರುವ ಸರ್ಕಾರ ಬೀಳುವುದಕ್ಕೆ ಖಂಡಿತ ಬಿಡೋಲ್ಲ’ ಎಂದು ಮತ್ತೆ ಗುನುಗುಟ್ಟಿದರು. ಮಾಧ್ಯಮ ಪ್ರಶ್ನಿಸಿದಾಗ ‘ನಾನು ಸರ್ಕಾರ ಬೀಳೋಕೆ ಬಿಡೋಲ್ಲ ಎಂದೇನೂ ಹೇಳಿಲ್ಲ... ಸರ್ಕಾರ ಬೀಳುವುದಿಲ್ಲ ಅಂದಿದ್ದೇನಷ್ಟೆ’ ಎಂದು ಪತ್ರಕರ್ತರ ತಲೆ ಚಿಟ್ಟು ಹಿಡಿಸಿಬಿಟ್ಟಿದ್ದರು.

ಈ ನಡುವೆ ಕೈಲಾಸ ಪಕ್ಷದ ಹಳೆಯ ತಲೆಗಳು ‘ಕೈ-ಜಾಂಡಿಸ್ ಮೈತ್ರಿ ಪಾರ್ಟ್-2’ ಎಂಬ ಸಿನಿಮಾ ತೆರೆಗೆ ತರುವ ಸುದ್ದಿ ಕೊಟ್ಟಾಗ ಕಣ್ಣೀರಣ್ಣ ಮತ್ತೆ ಬಣ್ಣ ಬದಲಾಯಿಸಿಕೊಂಡು, ಕೈಲಾಸ ಪಕ್ಷದ ‘ತಿಹಾರ್ ಹೀರೊ’ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸುವುದಕ್ಕೆ ಕುಳಿತೇಬಿಟ್ಟರು. ತಮ್ಮ ಪಕ್ಷದವರೊಬ್ಬರು ಮಂತ್ರಿಯಾಗಲಿದ್ದಾರೆ ಎಂದೂ ಹೇಳಿದರು. ಉಳಿದ ದಿನಗಳಲ್ಲಿ ಅವರು ನೆನಪಾದಾಗಲೆಲ್ಲಾ ‘ಸರ್ಕಾರ ಬೀಳಾಕೆ ಬಿಡೋಲ್ಲ’ ಅನ್ನುತ್ತಲೇ ಇದ್ದರು.

ಚುನಾವಣೆಗಳಲ್ಲೆಲ್ಲಾ ‘ಲಕ್ಷ್ಮಿ’ದ್ದೇ ಪ್ರಮುಖ ಪಾತ್ರ ಇರುವುದು ನಿಜ. ಆದರೆ ಈ ಉಪಚುನಾವಣೆಯಲ್ಲಿ ಕೈಲಾಸ ಪಕ್ಷದ ಲಕ್ಷ್ಮಿ ಮೇಡಂ ಕೂಡಾ ಕೆಸರೆರಚಾಟ
ದಲ್ಲಿ ಸಿಕ್ಕಿಬಿದ್ದು ದೊಡ್ಡ ಸುದ್ದಿಯಾದರು.

ಇಂತಹ ಅನವಶ್ಯಕ ವಿಷಯಗಳೇ ಕಣದಲ್ಲಿ ಹರಿದುಬಂದ ಸ್ಪೆಷಲ್ಲುಗಳು. ಜಾಸ್ತಿ ಉಪ್ಪು, ಜಾಸ್ತಿ ಖಾರ. ಚುನಾವಣೆಗೆ ಸಂಬಂಧವೇ ಇಲ್ಲದ ಬಾಜಪ್ಪ ನಾಯಕರೊಬ್ಬರು, ಎಷ್ಟೋ ವರ್ಷಗಳ ಹಿಂದೆ ಸೀರೆ ಕದ್ದದ್ದನ್ನೋ, ಇನ್ಯಾವುದೋ ಕದ್ದದ್ದನ್ನೋ ಈಗ ಕೋಟಿಗಟ್ಟಲೆ ಕದಿಯುವ ಜಮಾನದಲ್ಲಿ ಹೇಳಿದರೆ ಹೇಗೆ ಸ್ವಾಮಿ? ಕೈಲಾಸ ಪಕ್ಷದ ಪ್ರೆಸಿಡೆಂಟು ಬೆಂಗಳೂರಿನಲ್ಲಿ ಹಫ್ತಾ ಬಿಜಿನೆಸ್ಸು ಮಾಡ್ತಿದ್ದಾರೆ ಎಂದು ಹೇಳಿ
ಚಿಕ್ಕಬಳ್ಳಾಪುರದ ಮತದಾರರನ್ನು ಸೆಳೆಯುವುದಕ್ಕಾಗುತ್ತಾ? ಮುಖಂಡರೊಬ್ಬರು ‘ಪಕ್ಕದ ಕ್ಷೇತ್ರದಲ್ಲಿ ನಮ್ಮ ಪಕ್ಷದ ಪ್ರತಿಸ್ಪರ್ಧಿ ಗೆದ್ದರೆ ಆ ಕ್ಷೇತ್ರವನ್ನು ಮುಂಬೈಯ ಕಾಮಾಟಿಪುರ ಮಾಡಿಬಿಡುತ್ತಾರೆ?’ ಎಂದು ಮೊತ್ತ ಮೊದಲ ಬಾರಿಗೆ ಸೆಕ್ಸಿ ಎಚ್ಚರಿಕೆಯೊಂದನ್ನು ನೀಡಿದ್ದರೆ ಅದು ಈ ಮಹಾ ಉಪಚುನಾವಣೆಯಲ್ಲೇ!

ನಮ್ಮ ಮಾಜಿ ಸಿಎಮ್ಮಯ್ಯರು ಯಾವತ್ತೂ ಹೇಳಲು ಮರೆಯದ ಒಂದು ವಿಚಾರವನ್ನು ಈ ಬಾರಿ ಮಾತ್ರ ತಪ್ಪಿಯೂ ಎಲ್ಲೂ ಹೇಳಲಿಲ್ಲ. ಬಾಜಪ್ಪರನ್ನು ‘ಜೈಲಿಗೆ ಹೋಗಿ ಬಂದವರು’ ಎಂದು ಕೀಟಲೆ ಮಾಡುವುದು ಅವರ ಇಷ್ಟದ ವಿಚಾರವಾಗಿತ್ತು. ಅದನ್ನು ಹೇಳಲು ಬಾಯಿ ತೆರೆದರೆ ತಮ್ಮ ಪಕ್ಷದ ‘ತಿಹಾರ್ ಹೀರೊ’ ನೆನಪಾಗಿ ಸುಮ್ಮನಾಗುತ್ತಿದ್ದರಂತೆ.

ಆಡಿಯೋರಪ್ಪರು ಹೇಳುವಂತೆ, ಇದು ಅವರಿಗೆ ‘ಋಣ’ ತೀರಿಸುವ ಚುನಾವಣೆಯಷ್ಟೇ ಅಲ್ಲ. ಇದು ಅವರ ಮತ್ತು ಮಕ್ಕಳ ಭವಿಷ್ಯದ ಚುನಾವಣೆ. ಇಷ್ಟಾಗ್ಯೂ ಅವರಿಗಾಗಿ ದಿಲ್ಲಿಯಿಂದ ‘ಮಿತ್ರೋಂ...’ ಎಂದು ಕೊರೆಯುವವರು ಇತ್ತ ಕಾಲಿಡಲೇ ಇಲ್ಲ!
ಅಷ್ಟಕ್ಕೇ ಈ ಮಿನಿ ಚುನಾವಣೆಯ ವಿಶೇಷಗಳು ಮುಗಿಯುವುದಿಲ್ಲ. ಬಿರುಸಿನಿಂದ ಪ್ರಚಾರವನ್ನೋ ಅಥವಾ ಅಪಪ್ರಚಾರವನ್ನೋ ಮಾಡಬೇಕಿದ್ದ ಮೂರೂ ಪಕ್ಷಗಳ ಅಧ್ಯಕ್ಷರ ಧ್ವನಿಯೇ ಇಲ್ಲದಂತಾಗಿದೆ.

ರಾಜ್ಯದ ಇತಿಹಾಸದಲ್ಲೇ ಇಷ್ಟೊಂದು ‘ಭಯ’ದ ಬೈ-ಎಲೆಕ್ಷನ್‌ ಅನ್ನು ಯಾವ ಪಕ್ಷದವರೂ ಎದುರಿಸಿರಲಿಕ್ಕಿಲ್ಲ! ಬಹುಮತಕ್ಕಾಗಿ ಸದನದ ಬದಲು, ಮತದಾರರೆದುರು ಮರು ಪರೀಕ್ಷೆಗೆ ಕುಳಿತಿರುವ ಆಡಿಯೋರಪ್ಪರು ಭಯದಲ್ಲಿ ಫಲಿತಾಂಶ ಎದುರು ನೋಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು