ಗುರುವಾರ , ಮಾರ್ಚ್ 4, 2021
26 °C
ನೆಹರೂ ಅವರ ನಿರ್ಧಾರ ತಪ್ಪು ಎಂದು ಅನ್ನಿಸಿದರೆ, ಹಾಗೆ ಹೇಳುವುದು ನಮ್ಮ ಹಕ್ಕು. ಹಾಗೆ ಹೇಳುವಾಗ ಅನುದಾರವಾಗಿ ಅವರನ್ನು ಅಪಮೌಲ್ಯಗೊಳಿಸುವುದು ಸರಿಯಲ್ಲ

ತೂಕ ತಪ್ಪಿದ ಟೀಕೆ ಸಲ್ಲ

ಡಾ. ಆರ್. ಲಕ್ಷ್ಮೀನಾರಾಯಣ Updated:

ಅಕ್ಷರ ಗಾತ್ರ : | |

‘ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗದಿರುವುದಕ್ಕೆ ನೆಹರೂ ಅವರು ಮುಸ್ಲಿಮರನ್ನು ತುಷ್ಟೀಕರಣಗೊಳಿಸುವ ಉದ್ದೇಶದಿಂದ ತೆಗೆದುಕೊಂಡ ನಿರ್ಧಾರಗಳೇ ಕಾರಣ’ ಎಂದು ಲೇಖಕ ಎ. ಸೂರ್ಯಪ್ರಕಾಶ್ ಅವರು ಕಠೋರವಾದ ಪದಗಳ ಮೂಲಕ ಆರೋಪ ಮಾಡಿದ್ದಾರೆ (ಪ್ರ.ವಾ., ಜುಲೈ19). ಈ ಆರೋಪಗಳು ನೆಹರೂ ಅವರ ಆಗಿನ ನಡೆ ಮತ್ತು ವ್ಯಕ್ತಿತ್ವವನ್ನು ಸರಿಯಾಗಿ ಬಿಂಬಿಸುತ್ತವೆಯೋ ಇಲ್ಲವೋ ಎಂಬುದು ಚರ್ಚಾಸ್ಪದವಾದರೂ ಲೇಖಕರ ಉಗ್ರ ನೆಹರೂ ವಿರೋಧವನ್ನು ನಿಚ್ಚಳಪಡಿಸುತ್ತವೆ.

ಯಾರು ಎಷ್ಟೇ ಮಹಾನ್ ಜ್ಞಾನಿ, ವಿವೇಕಿ ಮತ್ತು ಪ್ರತಿಭಾವಂತರಾದರೂ ಎಲ್ಲರೂ ಕಾಲ, ದೇಶ ಮತ್ತು ಪರಿಸ್ಥಿತಿಗೆ ಬದ್ಧರು. ಅದೆಲ್ಲವನ್ನೂ ಮೀರಿ ಸಾರ್ವಕಾಲಿಕವಾಗಿ ಅನ್ವಯವಾಗುವಂಥ, ವಿವಾದಕ್ಕೆ ಅವಕಾಶವೇ ಆಗದಂಥ ನಿರ್ಧಾರಗಳನ್ನು ತಗೆದುಕೊಳ್ಳುತ್ತಾರೆಂದು ನಂಬುವುದಾಗಲಿ ನಿರೀಕ್ಷಿಸುವುದಾಗಲಿ ಕುರುಡು ಗಾಂಪು. ಧಾರ್ಮಿಕ ವ್ಯಕ್ತಿಗಳು, ಮತಸ್ಥಾಪಕರ ವಿಷಯದಲ್ಲಿ ಈ ಮಾತು ಎಷ್ಟು ನಿಜವೋ ರಾಜಕೀಯ ಮುತ್ಸದ್ದಿಗಳು ಮತ್ತು ಚಿಂತಕರ ವಿಷಯದಲ್ಲೂ ಅಷ್ಟೇ ನಿಜ.

ನೆಹರೂ, ಗಾಂಧಿ, ಪಟೇಲ್ ಅಂಥವರ ದೇಶಭಕ್ತಿಯನ್ನು ಅವರ ಕಡುವೈರಿಗಳೂ ಶಂಕಿಸಲು ಸಾಧ್ಯವಿಲ್ಲ. ದೇಶ ಸ್ವಾತಂತ್ರ್ಯ ಪಡೆದ ಹೊಸದರಲ್ಲಿ ಅನೇಕ ಸಮಸ್ಯೆಗಳು ದೇಶವನ್ನು ಕಾಡುತ್ತಿದ್ದುವು. ದೇಶವನ್ನು ಪ್ರಜಾಪ್ರಭುತ್ವದ ಅಡಿಗಲ್ಲಿನ ಮೇಲೆ ಕಟ್ಟುವ ಹೊಣೆಯು ನೆಹರೂ, ಡಾ. ಅಂಬೇಡ್ಕರ್, ಪಟೇಲ್‌ ಮತ್ತಿತರ ನಾಯಕರ ಮೇಲಿತ್ತು. ಧರ್ಮದ ಹೆಸರಿನಲ್ಲಿ ದೇಶವಿಭಜನೆಯ ದುರಂತ ಆಗತಾನೆ ನಡೆದು ಹತ್ತು ಲಕ್ಷಕ್ಕೂ ಹೆಚ್ಚು ಜನ ಹತ್ಯೆಗೀಡಾಗಿ ಮಾನವ ಚರಿತ್ರೆಯ ಅತ್ಯಂತ ರಕ್ತಸಿಕ್ತ ಅಧ್ಯಾಯಕ್ಕೆ ಇಡೀ ದೇಶ ಮೂಕ ಸಾಕ್ಷಿಯಾಗಿತ್ತು.

ಇಂಥ ಹತ್ತಾರು ಸಮಸ್ಯೆಗಳು ದೇಶವನ್ನು ಕಂಗೆಡಿಸಿದ್ದ ಸಮಯದಲ್ಲಿಯೇ ಏಕರೂಪ ನಾಗರಿಕ ಸಂಹಿತೆಯಂಥ ಶಾಸನವೊಂದರ ಜಾರಿಗೆ ತೀವ್ರವಾಗಿ ಪಟ್ಟುಹಿಡಿಯುವುದು ಕಷ್ಟವಾಗಿದ್ದಿರಬಹುದು. ಇಂಥ ಸಂದರ್ಭದಲ್ಲಿ ಅವರಿಗೆ ಆಗ ಸಮರ್ಪಕವೆಂದು ತೋರಿದ ತೀರ್ಮಾನಕ್ಕೆ ಬಂದಿದ್ದರೆಂದು ಭಾವಿಸುವುದೇ ಹೆಚ್ಚು ಸೂಕ್ತ.

‘ಮುಸ್ಲಿಮರ ಓಲೈಕೆಯ ಸಲುವಾಗಿ ನಿರ್ಧಾರ ಕೈಗೊಂಡರು’ ಎಂದು ನೆಹರೂ ಮೇಲೆ ಇಂದು ಆರೋಪ ಹೊರಿಸುವುದು ಸುಲಭ. ಹಾಗೆ ಆರೋಪಿಸುವ ಮುನ್ನ ನೆಹರೂ ಎಂಥವರೆಂದು, ಅವರ ವ್ಯಕ್ತಿತ್ವ ಎಂಥದೆಂದು ಪರ್ಯಾಲೋಚಿಸುವುದೂ ಅಗತ್ಯವೆನಿಸುತ್ತದೆ.

ಜಗತ್ತಿನ ಇತಿಹಾಸವನ್ನು ಓದಿಕೊಂಡಿದ್ದಷ್ಟೇ ಅಲ್ಲದೆ ಆ ಬಗ್ಗೆ ಸ್ವಯಂ ಗ್ರಂಥ ರಚಿಸಿದ್ದ ನೆಹರೂ ಅವರಿಗೂ ಇತಿಹಾಸವು ಮುಂದೊಂದು ದಿನ ತನ್ನ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಅರಿವು ಇದ್ದಿರಲೇಬೇಕು. ಹಿಂದಿಯ ಖ್ಯಾತ ಲೇಖಕ ರಾಮಧಾರಿ ಸಿಂಹ ದಿನಕರ್ ಅವರು ‘ಲೋಕದೇವ ನೆಹರೂ’ ಎಂಬ ಪುಸ್ತಕ ಬರೆದಿದ್ದಾರೆ. ಅದರಲ್ಲಿ ನೆಹರೂ ಅವರಿಗೆ ಯಾವ ರೀತಿಯ ಆತ್ಮ ನಿರೀಕ್ಷೆ ಇತ್ತು ಎಂಬುದನ್ನು ಒಂದು ಸಂದರ್ಭದ ಮೂಲಕ ವಿವರಿಸಿದ್ದಾರೆ.

ಪ್ರಧಾನಿಯಾದ ಕೆಲವು ವರ್ಷಗಳ ನಂತರ ತನ್ನ ಸುತ್ತಮುತ್ತ ಇದ್ದವರೆಲ್ಲರೂ ತನ್ನ ಮಾತುಗಳನ್ನು ಪ್ರಶ್ನೆ ಮಾಡದೆ ಒಪ್ಪುವ ವಿಧೇಯತೆ ತೋರಿಸುತ್ತಿದ್ದುದನ್ನು ಕಂಡುಕೊಂಡ ನೆಹರೂ ಅವರಿಗೆ ‘ನಾನು ಸರ್ವಾಧಿಕಾರಿ ಮನೋಭಾವದವನಾಗುತ್ತಿದ್ದೇನೋ’ ಎಂಬ ಅನುಮಾನ ಕಾಡತೊಡಗುತ್ತದೆ.

ಅದಕ್ಕಾಗಿ ತಾವೇ ಒಂದು ಗುಪ್ತ ಹೆಸರಿನಲ್ಲಿ ತನ್ನ ಸರ್ವಾಧಿಕಾರಿ ಮನೋಧರ್ಮ, ಪ್ರತಿಷ್ಠೆ ಇವನ್ನೆಲ್ಲ ಕಟುವಾಗಿ ಟೀಕಿಸಿ ‘ಈತನನ್ನು ಪ್ರಶ್ನಿಸದೆ ಹೀಗೇಯೇ ಬಿಟ್ಟುಬಿಟ್ಟರೆ ಮುಂದೆ ಈತ ಸರ್ವಾಧಿಕಾರಿಯಾಗುವುದರಲ್ಲಿ ಸಂಶಯವಿಲ್ಲ’ ಎಂದೆಲ್ಲ ಪತ್ರಿಕೆಯೊಂದರಲ್ಲಿ ಬರೆದುಕೊಂಡಿದ್ದರಂತೆ. ಹಾಗಾಗಿ ನೆಹರೂ ಅವರದ್ದು ‘ರಾಕ್ಷಸ ಮೂರ್ಖತನ’ ಎಂಬ ತೀರ್ಮಾನಕ್ಕೆ ಬರುವಾಗ ಇನ್ನಿಲ್ಲದ ಎಚ್ಚರ ತೋರಬೇಕಾಗುತ್ತದೆ.

‘ಅಂದು ನೆಹರೂ ಅವರು ಸೈನ್ಯಕ್ಕೆ ಸರಿಯಾಗಿ ನಿರ್ದೇಶನ ಕೊಟ್ಟಿದ್ದಿದ್ದರೆ ಇಂದು ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ’ ಎಂದೆಲ್ಲ ವಾದಿಸಬಹುದು. ಆದರೆ ಪ್ರಜಾಪ್ರಭುತ್ವವಾದಿ ಭಾರತದ ಆಗಿನ ಪ್ರಧಾನಿಗೆ ನೆರೆಯ ದೇಶದೊಳಕ್ಕೆ ಸೈನ್ಯವನ್ನು ನುಗ್ಗಿಸುವುದು ಯುಕ್ತವಲ್ಲ ಎಂದು ಅನ್ನಿಸಿದ್ದೀತು. ಏನೇ ಆಗಲಿ, ಅಂದಿನ ಪರಿಸ್ಥಿತಿಗೆ ಅವರು ತಮಗೆ ಸರಿ ಎನಿಸಿದ ನಿರ್ಧಾರವನ್ನು, ಎಲ್ಲವನ್ನೂ ತೂಗಿನೋಡಿಯೇ ತೆಗೆದುಕೊಂಡಿರುತ್ತಾರೆ. ಅವರ ನಿರ್ಧಾರ ತಪ್ಪಾಗಿತ್ತು ಎಂದು ಇಂದು ನಮಗೆ ಅನ್ನಿಸಿದರೆ, ಅದನ್ನು ಹಾಗೆ ಹೇಳುವುದು ನಮ್ಮ ಹಕ್ಕು. ಆದರೆ ಹಾಗೆ ಹೇಳುವಾಗ ಅತ್ಯಂತ ಅನುದಾರವಾಗಿ, ಅವರಿಗೆ ದೇಶದ ಬಗ್ಗೆ ಕಳಕಳಿಯೇ ಇರಲಿಲ್ಲ ಎಂಬ ರೀತಿಯಲ್ಲಿ ಅಪಮೌಲ್ಯಗೊಳಿಸುವುದು ಸರಿಯಲ್ಲ. ಈ ಬಗ್ಗೆ ‘ನೆಹರೂ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಸಲ್ಲ’ ಎಂಬ ಬರಗೂರರ ಮಾತು ಸರಿಯಾದ್ದು (ಪ್ರ.ವಾ., ಜುಲೈ 20).

ಇನ್ನು ನಮ್ಮ ಮುಸ್ಲಿಂ ಬಂಧುಗಳಾದರೂ ಸ್ವಲ್ಪ ತೆರೆದ ಮನಸ್ಸಿನಿಂದ ಯೋಚಿಸಬೇಕು. ಜಗತ್ತು ಎಷ್ಟೆಲ್ಲ ಬದಲಾವಣೆಗಳನ್ನು ಕಂಡಿದೆ. ಕಾಲಕ್ಕೆ ತಕ್ಕಂತೆ ಜಗತ್ತಿನ ಎಲ್ಲ ಧರ್ಮಗಳ ಎಲ್ಲ ಜನಾಂಗಗಳೂ, ಒಂದು ಕಾಲಕ್ಕೆ ಸರಿಯೆನಿಸಿದ್ದ ಧಾರ್ಮಿಕ ನಿಯಮಗಳನ್ನು, ನಂಬಿಕೆಗಳನ್ನು ಮರುಪರಿಶೀಲನೆಗೊಡ್ಡಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿವೆ. ಏಸು, ಬುದ್ಧ ಮಹಮ್ಮದ್ ಪೈಗಂಬರ್, ಶಂಕರಾಚಾರ್ಯ... ಯಾರೇ ಆದರೂ ತಮ್ಮತಮ್ಮ ಕಾಲದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ನೀಡಿದ ಮಹಾನ್ ವ್ಯಕ್ತಿಗಳು. ಕೆಲವು ಎಲ್ಲ ಕಾಲಕ್ಕೆ ಸರಿಯೆನಿಸಿದರೂ ಎಲ್ಲವೂ ಎಲ್ಲ ಕಾಲಕ್ಕೂ ಅಲ್ಲವೇ ಅಲ್ಲ.

ಮಹಮ್ಮದ್ ಬರುವುದಕ್ಕೆ ಮುನ್ನ ಆ ಭೂಭಾಗದಲ್ಲಿ ಬೇರೆ ಬೇರೆ ಬಣದವರು ಪರಸ್ಪರ ನೂರಾರು ಯುದ್ಧಗಳನ್ನು ಮಾಡಿ ಅನೇಕ ಜನ ಸತ್ತಿದ್ದ ಕಾರಣಕ್ಕೆ ಆಗ ಬದುಕಿನ ದಾರಿಕಾಣದೆ ಕಂಗೆಟ್ಟಿದ್ದ ಬಹುಸಂಖ್ಯಾತ ವಿಧವೆಯರ ಬಾಳಿಗೊಂದು ಪರಿಹಾರವಾಗಿ ಬಹುಪತ್ನಿತ್ವವನ್ನು ಪೈಗಂಬರರು ವಿಧಿಸಿದರು. ಈಗಲೂ ಅದನ್ನೇ ಸರಿ ಎಂದು ಯಾರು ತಾನೆ ಒಪ್ಪಲು ಸಾಧ್ಯ? ಹಾಗೆಯೇ ತ್ರಿವಳಿ ತಲಾಕ್ ಅನ್ನು ಮುಸ್ಲಿಂ ಮಹಿಳೆಯರೇ ವಿರೋಧಿಸುತ್ತಿದ್ದಾರೆ.

ಕೆಲವು ಮುಸ್ಲಿಂ ರಾಷ್ಟ್ರಗಳೇ ಇಂದು ಹಳೆಯ ಎಷ್ಟೋ ಪದ್ಧತಿಗಳಿಗೆ ಮುಕ್ತಾಯ ಹಾಡಿ, ಹೊಸ ಕಾಲದ ಬದಲಾವಣೆಗಳಿಗೆ ಒಡ್ಡಿಕೊಂಡಿರವಾಗ, ನಮ್ಮ ದೇಶದ ಮುಸ್ಲಿಂ ಬಂಧುಗಳೂ ಎಲ್ಲ ನಾಗರಿಕರಿಗೂ ಅನ್ವಯವಾಗುವ ‘ಏಕರೂಪ ನಾಗರಿಕ ಸಂಹಿತೆ’ ಜಾರಿಯ ಬಗ್ಗೆ ಮುಕ್ತವಾಗಿ ವಿಚಾರ ಮಾಡಬೇಕು. ಅದು ಎಂದೆಂದಿಗೂ ಪ್ರತಿಷ್ಠೆಯ ಅಥವಾ ಹಟದ ಪ್ರಶ್ನೆ ಆಗಲೇ ಬಾರದು. ಮೊಂಡುತನಕ್ಕೂ ಎಡೆ ಇರಬಾರದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.