ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಣ: ಕಥೆಗಳ ಕಾಲ ಇದಲ್ಲ

ನಿಸರ್ಗದಲ್ಲಿ ಘಟಿಸುವ ಗ್ರಹಣದಂಥ ಸಂದರ್ಭಗಳನ್ನು ಸುರಕ್ಷಿತವಾಗಿ ವೀಕ್ಷಿಸಿ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕೇ ವಿನಾ ಅಪಪ್ರಚಾರಕ್ಕೆ ಕಿವಿಗೊಡಬಾರದು
Last Updated 20 ಜೂನ್ 2020, 10:03 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಭಾನುವಾರ (ಜೂನ್ 21) ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪಾರ್ಶ್ವ ಸೂರ್ಯಗ್ರಹಣ ಕಾಣಿಸಲಿದೆ. ಬೆಳಗಿನ ಅವಧಿಯಲ್ಲಿ ಸಂಭವಿಸುತ್ತಿರುವ ಸುದೀರ್ಘ ಗ್ರಹಣವಿದು. ಮುಂಗಾರು ಮೋಡವಿದ್ದರೂ ಈ ಅವಧಿಯಲ್ಲಿ ಯಾವಾಗ ಬೇಕಾದರೂ ಗ್ರಹಣದ ದರ್ಶನವಾಗುವ ಸಾಧ್ಯತೆಯಿದೆ.

ಕಳೆದ ಡಿ. 26ರಂದು ಪೂರ್ಣ ಕಂಕಣ ಸೂರ್ಯಗ್ರಹಣವು ಕರ್ನಾಟಕದ ಕರಾವಳಿ, ಕೊಡಗು, ಕೇರಳದ ಪಾಲಕ್ಕಾಡ್, ತಮಿಳುನಾಡಿನ ತಿರುಪ್ಪೂರ್ ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಆಗ ಗ್ರಹಣವು ನಮ್ಮ ರಾಜ್ಯದ ಇತರ ಭಾಗಗಳಲ್ಲಿ ಶೇ 90ರಷ್ಟು, ಉತ್ತರ ಭಾರತದಲ್ಲಿ ಶೇ 40ರಷ್ಟು ಕಾಣಿಸಿಕೊಂಡಿತ್ತು. ಖಗೋಳಾಸಕ್ತರು ದೇಶ ವಿದೇಶಗಳಿಂದ ಕರ್ನಾಟಕಕ್ಕೆ ಬಂದು ವೀಕ್ಷಿಸಿದ್ದರು. ಪ್ರಸ್ತುತ, ಉತ್ತರ ಭಾರತದ ರಾಜಸ್ಥಾನ, ಉತ್ತರಾಖಂಡ ಮತ್ತು ಜಾರ್ಖಂಡ್‌ನ ಕೆಲವೆಡೆ ಪೂರ್ಣ ಕಂಕಣ ಸೂರ್ಯಗ್ರಹಣ ಕಾಣಲಿದ್ದು, ನಮ್ಮ ರಾಜ್ಯದಲ್ಲಿ ಶೇ 40ರಷ್ಟು ಪ್ರಮಾಣದಲ್ಲಿ ಗೋಚರವಾಗಲಿದೆ.

ಈ ಗ್ರಹಣಕ್ಕೆ ಸಂಬಂಧಿಸಿ ಎರಡು ರೀತಿಯ ಪ್ರತಿಕ್ರಿಯೆಗಳನ್ನು ಕಾಣುತ್ತೇವೆ. ಒಂದೆಡೆ, ಖಗೋಳಾಸಕ್ತರು, ವಿಜ್ಞಾನ ಪ್ರಚಾರಕರು ಸುರಕ್ಷಿತ ಸಾಧನಗಳ ಮೂಲಕ ಗ್ರಹಣವನ್ನು ನೋಡುವ, ಇತರರೂ ನೋಡುವಂತೆ ಪ್ರೇರೇಪಿಸುವ, ಅದರ ಬಗ್ಗೆ ಅಧ್ಯಯನ ನಡೆಸುವ ಕೆಲಸದಲ್ಲಿ ತೊಡಗುತ್ತಾರೆ. ಮತ್ತೊಂದೆಡೆ, ಈ ಗ್ರಹಣದಿಂದ ಯಾರಿಗೆ ಏನೇನು ತೊಂದರೆಯಾಗಲಿದೆ, ಏನೇನು ಅವಘಡಗಳು ಸಂಭವಿಸಲಿವೆ, ಯಾವ ಯಾವ ನಾಯಕರಿಗೆ ಅಶುಭವಾಗಲಿದೆ ಎಂಬುದರ ಅಪಪ್ರಚಾರದಲ್ಲಿ ಕೆಲವರು ತೊಡಗುತ್ತಾರೆ.

ನಮ್ಮ ಸೌರವ್ಯೂಹದಲ್ಲಿ ಪ್ರಸ್ತುತ ಇರುವ ಎಂಟು ಗ್ರಹಗಳು ತಮ್ಮ ಅಕ್ಷದ ಸುತ್ತ ಹಾಗೂ ಸೂರ್ಯನ ಸುತ್ತ ಸುತ್ತುತ್ತಿವೆ. ಈ ಗ್ರಹಗಳ ಉಪಗ್ರಹಗಳು ಆಯಾ ಗ್ರಹದ ಸುತ್ತಲೂ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಸುತ್ತುತ್ತಿವೆ. ಈ ಚಲನೆಯ ಸಂದರ್ಭದಲ್ಲಿ ಗ್ರಹ, ಅದರ ಉಪಗ್ರಹ ಮತ್ತು ಸೂರ್ಯ ಒಂದೇ ಗೆರೆಯಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಒಂದು ವೇಳೆ ಭೂಮಿಗೆ ಚಂದ್ರನೆಂಬ ಉಪಗ್ರಹ ಇಲ್ಲದಿದ್ದರೆ, ನಮಗೆ ಗ್ರಹಣದ ಅನುಭವವೇ ಆಗುತ್ತಿರಲಿಲ್ಲ.

ಒಂದು ಆಕಾಶಕಾಯವನ್ನು ಮತ್ತೊಂದು ಆಕಾಶ ಕಾಯ ಸ್ವಲ್ಪ ಸಮಯದ ಕಾಲ ಮರೆ ಮಾಡುವ ಈ ಕ್ರಿಯೆಯ ಬಗ್ಗೆ ಮಾಹಿತಿಯ ಕೊರತೆ ಇದ್ದ ಕಾಲದಲ್ಲಿ, ಮನುಷ್ಯನು ಗ್ರಹಣಗಳ ಬಗ್ಗೆ ಭಯಪಡುತ್ತಿದ್ದ. ಅನೇಕ ಕಥೆಗಳನ್ನು ಹೆಣೆದ. ಆ ಕಾಲಕ್ಕೆ ಅದು ಸರಿಯಾಗಿರ
ಬಹುದು. ಆದರೆ ಈಗ ನಾವು ಗ್ರಹಣ ವೀಕ್ಷಣೆಯಿಂದ ಚಂದ್ರನ ಚಲನೆಯನ್ನು ವೀಕ್ಷಿಸಬಹುದು. ವಿವಿಧ ರೀತಿಯ ಗ್ರಹಣಗಳಿಗೆ ಕಾರಣಗಳೇನು ಎಂಬುದನ್ನೂ ಅರಿಯಲು ಸಾಧ್ಯವಾಗಿದೆ.

ನಮ್ಮ ಭೂಮಿಯ ಹಾಗೆಯೇ ಇತರ ಗ್ರಹಣಗಳಲ್ಲೂ ಗ್ರಹಣವಾಗುತ್ತದೆ. ಆದರೆ ಅಲ್ಲಿ ಜೀವಿಗಳಿಲ್ಲ ವಾದ್ದರಿಂದ, ಗ್ರಹಣ ವೀಕ್ಷಿಸುವುದಾಗಲೀ ಗ್ರಹಣದ ಬಗ್ಗೆ ಭಯವುಂಟು ಮಾಡುವ ಭಯೋತ್ಪಾದಕರಾಗಲೀ ಇಲ್ಲವಷ್ಟೆ.‌ ನಿಸರ್ಗದ ಇಂಥ ಸಂದರ್ಭಗಳನ್ನು ವೀಕ್ಷಿಸಿ ಅನುಭವಿಸುವ ಮೂಲಕ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಆದರೆ ನಮ್ಮಲ್ಲಿ ಸತ್ಯ ಹೇಳುವವರು ಮತ್ತು ಅದನ್ನು ಕೇಳುವವರು ಕಡಿಮೆ ಸಂಖ್ಯೆಯಲ್ಲಿದ್ದು, ಸುಳ್ಳು ಹೇಳುವವರು ಹಾಗೂ ಅದನ್ನು ನಂಬುವವರ ಸಂಖ್ಯೆಯೇ ಜಾಸ್ತಿಯಾಗಿದೆ.

ಮಹಿಳೆಯೊಬ್ಬರು ಇತ್ತೀಚೆಗೆ ಜ್ಯೋತಿಷಿಯೊಬ್ಬರಿಗೆ ಆನ್‌ಲೈನ್ ಮೂಲಕ ₹ 15 ಲಕ್ಷ ನೀಡಿ ವಂಚನೆಗೊಳಗಾದ ಬಗ್ಗೆ ವರದಿಯಾಗಿದೆ. ಭವಿಷ್ಯ ಹೇಳುವ ಎಲ್ಲರೂ ಹುಟ್ಟಿದ ಸಮಯ ನೋಡುತ್ತಾರೆ. ಆ ಸಮಯ ಎಂದಿಗೂ ನಿಖರವಾಗಿರುವುದಿಲ್ಲ, ಅಂತೆಯೇ ಭವಿಷ್ಯ ಸಹ. ಭವಿಷ್ಯ ಹೇಳುವ ನೆಪದಲ್ಲಿ ಮೋಸ ಮಾಡುವವರು ಹೆಚ್ಚುತ್ತಿರುವುದಕ್ಕೆ ಕಾರಣ, ಜನರಲ್ಲಿನ ವೈಜ್ಞಾನಿಕ ಚಿಂತನೆಯ ಕೊರತೆ.

ಗ್ರಹಣ ಕಾಲದಲ್ಲಿ ಅಂಗವಿಕಲ ಮಕ್ಕಳನ್ನು ಮಣ್ಣಿನಲ್ಲಿ ಹೂಳುವಂತಹ ಅಮಾನವೀಯ ಘಟನೆಗಳು ನಡೆಯುತ್ತವೆ. ಆಹಾರ ವಿಷವಾಗುತ್ತದೆ, ಶೇಖರಿಸಿದ ನೀರನ್ನು ಹೊರ ಚೆಲ್ಲಬೇಕು, ಎರಡು ಸೂರ್ಯಗ್ರಹಣಗಳ ನಡುವೆ ಒಂದು ಚಂದ್ರಗ್ರಹಣ ಸಂಭವಿಸಿರುವುದರಿಂದ ನಾಯಕರೊಬ್ಬರ ಜೀವಹಾನಿಯಾಗುತ್ತದೆ ಎಂಬಿತ್ಯಾದಿ ಹೇಳಿಕೆ ಗಳು ವರದಿಯಾಗಿವೆ. ಸದಾ ಜನರನ್ನು
ಭೀತರನ್ನಾಗಿಸುವ ಇಂತಹ ಹೇಳಿಕೆಗಳ ಬಗ್ಗೆ ಜನ ಗಮನ ಹರಿಸದಿರುವುದು ಒಳಿತು.

ವೈಜ್ಞಾನಿಕ ಚಿಂತನೆಗೆ ಹೆಸರಾಗಿದ್ದ ಡಾ. ಎಚ್‌.ನರಸಿಂಹಯ್ಯ ಅವರು ಜನಸಮೂಹದ ಜೊತೆಗೆ ಕುಳಿತು ಗ್ರಹಣ ವೀಕ್ಷಿಸಿದವರು. ಈ ವರ್ಷ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಎಲ್ಲರೂ ಮೂಢನಂಬಿಕೆಯಿಂದ ಹೊರಬಂದು ಸೂರ್ಯಗ್ರಹಣವನ್ನು ವೀಕ್ಷಿಸುವುದು, ನರಸಿಂಹಯ್ಯ ಅವರಿಗೆ ಸಲ್ಲಿಸುವ ಗೌರವವಾಗಿದೆ. ಆದರೆ ನೇರವಾಗಿ ಗ್ರಹಣವನ್ನು ನೋಡದೆ, ಸುರಕ್ಷಿತ ಕನ್ನಡಕಗಳ ಮೂಲಕ ಅಥವಾ ಪಿನ್‌ಹೋಲ್ ಕ್ಯಾಮೆರಾ, ಬಾಲ್ ಮಿರರ್ ಮೂಲಕ ಗೋಡೆಯ ಮೇಲೆ ಗ್ರಹಣದ ಬಿಂಬವನ್ನು ನೋಡಬೇಕು.

ಕೊರೊನಾ ವೈರಸ್ ಕಾರಣದಿಂದ ಕೆಲವು ಕಡೆ ಅಂತರ ಕಾಯ್ದುಕೊಂಡು ಸಾಮೂಹಿಕ ಗ್ರಹಣ ವೀಕ್ಷಣೆ ಮತ್ತು ಆಹಾರ ಸೇವನೆಗೆ ವ್ಯವಸ್ಥೆ ಮಾಡಲಾಗಿದೆ. ಅಂಥ ಕಡೆಗಳಿಗೆ ಹೋಗಲು ಇಚ್ಛಿಸದವರು ತಮ್ಮ ಮನೆಗಳ ಮಹಡಿಯ ಮೇಲಿಂದಲೇ ಸುರಕ್ಷಿತವಾಗಿ ಗ್ರಹಣ ವೀಕ್ಷಿಸಬಹುದಾಗಿದೆ.

ಲೇಖಕ: ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT