ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಕಲಿಯುವವರ ಮುಖದಲ್ಲಷ್ಟೇ ನಗು ಸಾಕೆ?

ಸಾಮಾಜಿಕ ವ್ಯವಸ್ಥೆಯು ತಾನು ಮಾತ್ರ ಬಹಳ ದೂರಬಂದು ಶಿಕ್ಷಕ ಮಾತ್ರ ಹೇಗಿದ್ದಾನೊ ಹಾಗೆಯೇ ಇರಬೇಕೆಂದು ಬಯಸುವುದು ತರವಲ್ಲ
Last Updated 4 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

‘ಗುರು ದೊಡ್ಡ ಹೆಸರು, ನಾನು ಸಂಬಳದ ಉಪಾಧ್ಯಾಯ’ ಎನ್ನುತ್ತಿದ್ದರು ದ.ರಾ.ಬೇಂದ್ರೆ. ಮೇಷ್ಟ್ರುಗಳು ಗುರುವಿನ ಪಟ್ಟ ಬಿಡಿಸಿಕೊಂಡು ತುಂಬಾ ದಿನಗಳೇ ಆದವು. ಮೇಷ್ಟ್ರು ಆದವನು ಸಮಾಜದ ಮಧ್ಯದಿಂದಲೇ ಬಂದವನು ವಿನಾ ಎಲ್ಲಿಂದಲೋ ಅವತರಿಸಿದವನಲ್ಲ. ಹಾಗಾಗಿ ಇವತ್ತಿನ ಸಮಾಜದಂತೆ ಮೇಷ್ಟ್ರು ಕೂಡ ಇರುತ್ತಾನೆ.

ತಂದೆ-ತಾಯಿಯರ ಪಾತ್ರಗಳೇ ದುರ್ಬಲ ವಾಗುತ್ತಿರುವ ಈ ಹೊತ್ತಿನಲ್ಲಿ, ಶಿಕ್ಷಕನಾದ
ವನು ಮಾತ್ರ ಅದೇ ಮೊದಲಿನ ಗುರುವಿನಂತೆ ಇರಬೇಕೆಂದು ಬಯಸುವುದು ತಪ್ಪಾಗುತ್ತದೆ. ಅಷ್ಟಕ್ಕೂ ಪಾಠ ಹೇಳುವುದು ಹೆಚ್ಚಿನವರಿಗೆ ಒಂದು ಜೀವನೋಪಾಯದ ವೃತ್ತಿಯಾಗಿದೆಯೇ ವಿನಾ ಅದು ಸೇವೆಯ ಗಡಿ ದಾಟಿ ತುಂಬಾ ದಿನಗಳಾದವು. ಸಾಮಾಜಿಕ ವ್ಯವಸ್ಥೆಯು ತಾನು ಮಾತ್ರ ಬಹಳ ದೂರಬಂದು ಶಿಕ್ಷಕ ಮಾತ್ರ ಹೇಗಿದ್ದಾನೊ ಹಾಗೆಯೇ ಇರಬೇಕೆಂದು ಬಯಸುವುದು ತರವಲ್ಲ.

ಈಗ ಬರೀ ಕಲಿಸುವುದಷ್ಟೇ ಮೇಷ್ಟ್ರು ಕೆಲಸವಲ್ಲ. ಅವನಷ್ಟು ಏಕಪಾತ್ರಾಭಿನಯ ಮಾಡುವವರಿಲ್ಲ. ಪಠ್ಯಪುಸ್ತಕ, ಯೂನಿಫಾರಂ ಹೊರಬೇಕು, ಜನ, ದನ, ಕೋಳಿ ಎಣಿಸಬೇಕು, ಚುನಾವಣೆಗೆ ಹೋಗಬೇಕು, ಅಡುಗೆ ಲೆಕ್ಕ, ತರಕಾರಿ, ಮೊಟ್ಟೆ, ಬಾಳೆಹಣ್ಣು ಖರೀದಿ, ಶೌಚಾಲಯ ಜಾಗೃತಿ, ಆನ್‌ಲೈನ್‌ನಲ್ಲಿ ಮಕ್ಕಳ ಕಲಿಕಾ ಮಾಹಿತಿ ಸತತವಾಗಿ ತುಂಬುವುದು, ಕಂಪ್ಯೂಟರ್ ಮುಂದೆ ಕೂತು ಪಾಲಕರ ಪರವಾಗಿ ಸ್ಕಾಲರ್‌ಶಿಪ್ ಅರ್ಜಿ ಹಾಕುವುದರಿಂದ ಹಿಡಿದು ಶಾಲೆ ಸೋರುತ್ತಿದ್ದರೆ ಹತ್ತಿ ಹೆಂಚು ಹೊದಿಸುವವರೆಗೂ ಅವನ ಕೈಯಲ್ಲಿ ಕೆಲಸಗಳಿವೆ, ಪಾತ್ರಗಳಿವೆ.

ಮೊನ್ನೆಯಷ್ಟೆ ಬಂದ ವರದಿಯೊಂದು, ಒತ್ತಡದ ಪರಿಣಾಮವಾಗಿ ಶೇ 42ರಷ್ಟು ಶಿಕ್ಷಕಿಯರು ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎನ್ನುತ್ತದೆ. ಆದರೆ ಈ ಸಮಾಜ ಒಂದೆರಡು ಉದಾಹರಣೆಗಳನ್ನು ತೆಗೆದುಕೊಂಡು, ಈಗೀಗ ಮೇಷ್ಟ್ರುಗಳು ಸರಿಯಿಲ್ಲ ಅನ್ನುವ ತೀರ್ಮಾನಕ್ಕೆ ಬರುತ್ತದೆ. ರಸ್ತೆಯಲ್ಲಿ ನಡೆದುಹೋಗುವ ಯಾವುದೋ ಹುಡುಗನ ಉದ್ಧಟತನವನ್ನು ಕಂಡ ಸಮಾಜ ‘ಯಾರು ನಿಂಗೆ ಪಾಠ ಹೇಳಿದ್ದು?’ ಅಂತ ನೇರವಾಗಿ ಶಿಕ್ಷಕನ ಬುಡಕ್ಕೆ ಬರುತ್ತದೆ. ಆದರೆ ಅದೇ ಸಾಧನೆ ಮಾಡಿದರೆ ಮಾತ್ರ ‘ಯಾರ ಮಗ’ ಎಂದು ಕೇಳುತ್ತದೆ. ಈಗೀಗ ಮಗುವಿನ ಮೇಲೆ ಶಿಕ್ಷಕರಿಗಿಂತ, ಶಾಲೆಗಿಂತ ಹೆಚ್ಚು ಪ್ರಭಾವ ಬೀರಲು ಅವನದೇ ಮನೆಯ ಪರಿಸರ, ಮಾಧ್ಯಮಗಳಿವೆ. ಮಕ್ಕಳನ್ನು ಅಡ್ಡದಾರಿಗೆ ಎಳೆಯುವ ಹೆದ್ದಾರಿಗಳು ಮನೆ ಮುಂದೆ ಬಂದು ನಿಂತಿವೆ. ಕಲಿಸುವ ಶಿಕ್ಷಕ ಗೌಣವಾಗುತ್ತಿರುವುದು ಇದೇ ಕಾರಣಕ್ಕೆ. ‘ಯ ರ ಲ ವ ಕಲಿಸಿದವನನ್ನೇ ಯಾರ್ಲ ಅಂವ?’ ಅನ್ನುವ ಪೀಳಿಗೆಯ ಮಧ್ಯೆ, ಒಬ್ಬ ಒಳ್ಳೆಯ ಶಿಕ್ಷಕ ನಿಜಕ್ಕೂ ಕಳೆದುಹೋಗುತ್ತಿದ್ದಾನೆ.

ಮಕ್ಕಳು ನಲಿಯುತ್ತಾ ಕಲಿಯಬೇಕು. ಅದರಂತೆ ಕಲಿಸುವವನು ಕೂಡ ಅಷ್ಟೇ ಖುಷಿಯಿಂದ ಕಲಿಸಬೇಕು. ಆಗ ಮಾತ್ರ ಬೋಧನೆ ಪರಿಣಾಮಕಾರಿ. ನಾವೀಗ ಯೋಚಿಸಬೇಕಾದದ್ದು ಕಲಿಸುವವರ ಮುಖದಲ್ಲಿ ನಗು ಇದೆಯಾ? ‘ಶಿಕ್ಷಕನ ಸ್ಥಾನಮಾನಗಳು ಉತ್ತಮವಾಗಿ ಇಲ್ಲದ ನಾಡು ಪ್ರಗತಿ ಕಾಣುವುದು ಕಷ್ಟ’ ಎಂದು ಹೇಳುತ್ತದೆ ಒಂದು ಇಂಗ್ಲಿಷ್ ನಾಣ್ನುಡಿ.

ಸರಿಯಾದ ಸಮಯಕ್ಕೆ ಆಗದ ಸಂಬಳ, ನಿವೃತ್ತಿ ಅಂಚಿಗೆ ಬಂದರೂ ಸಿಗದ ಬಡ್ತಿ, ಒಂದೇ ಬಗೆಯ ಕೆಲಸವಾದರೂ ಕೇಂದ್ರಕ್ಕೂ ರಾಜ್ಯಕ್ಕೂ ಬೇರೆ ಬೇರೆ ವೇತನ ಎನ್ನುವ ಅಸಮಾಧಾನ, ‘ಬಡಮೇಷ್ಟ್ರು’ ಅನ್ನುವ ಪದವನ್ನು ನಾವು ಅಷ್ಟೇ ಜತನವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷಕರ ಪಾಲಿಗೆ ಲೈಫ್ ಟೈಮ್ ಖುಷಿಕೊಡುವ ವರ್ಗಾವಣೆ ಶೇ 90 ಶಿಕ್ಷಕರಿಗೆ ತಮ್ಮ ಸೇವಾವಧಿಯಲ್ಲಿ ಒಮ್ಮೆಯೂ ಸಿಗುವುದಿಲ್ಲ. ತರಬೇತಿಗಳು ಯಾಕೋ ಅವರನ್ನು ಅಪ್‌ಡೇಟ್ ಮಾಡುತ್ತಿಲ್ಲ. ಶಾಲೆ ಮುಚ್ಚುವುದರ ಬಗ್ಗೆ ಈಗ ಅವನನ್ನೇ ಮೊದಲ ಹೊಣೆಗಾರರನ್ನಾಗಿ ಮಾಡಿ ನಿಲ್ಲಿಸಲಾಗಿದೆ. ಇದಲ್ಲದೆ ಇಲಾಖೆಯ ಒಳಗೂ ಹತ್ತಾರು ಒತ್ತಡಗಳಿವೆ.

ಬೋಧಿಸುವ ವೃತ್ತಿ ಯಾಕೆ ಬೇರೆ ವೃತ್ತಿಗಳಷ್ಟು ಆಕರ್ಷಣೀಯವಾಗಿಲ್ಲ, ಯಾಕೆ ಯುವಕರು ಶಿಕ್ಷಕ ವೃತ್ತಿಯನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಳ್ಳುತ್ತಾರೆ? ಉತ್ತರವೇನೂ ಕಷ್ಟವಲ್ಲ. ಏಕೆಂದರೆ ಹೆಚ್ಚು ಸಂಬಳ, ಹೆಚ್ಚು ಅಧಿಕಾರದ ವೃತ್ತಿಯತ್ತಲೇ ಎಲ್ಲರ ಗಮನ.

ಶಿಕ್ಷಕರು ಸರಿಯಾಗಿ ಬೋಧಿಸುತ್ತಿಲ್ಲ. ಅವನು ಬಹಳಷ್ಟು ಓದಿಕೊಳ್ಳುವುದಿಲ್ಲ. ರಾಜಕೀಯ ಮಾಡ್ತಾನೆ. ಸರಿಯಾದ ಟೈಮಿಗೆ ಸ್ಕೂಲಿಗೆ ಬರಲ್ಲ.. ಹೀಗೆ ಕೆಲವು ದೂರುಗಳಿವೆ. ಇವತ್ತಿಗೂ ಮೊದಲ ಬಾರಿಗೆ ಶಾಲೆಗೆ ಬರುವ ಮಗುವಿಗೆ ಶಿಕ್ಷಕನೇ ದೇವರು. ಶಿಕ್ಷಕ ವೃತ್ತಿ ಅತೀ ಜವಾಬ್ದಾರಿಯುತವಾದದ್ದು, ತಮ್ಮ ವೈಯಕ್ತಿಕ ವಿಚಾರಗಳಿಂದ ಮಕ್ಕಳಿಗೆ ಅನ್ಯಾಯವಾಗುವುದು ಸರಿಯಲ್ಲ ಎಂದು ಯೋಚಿಸುವ ಶಿಕ್ಷಕರ ಸಂಖ್ಯೆ ಕಡಿಮೆ. ಅವೆಲ್ಲವೂ ಸರಿಯಾದರೆ ಇಡೀ ಸಮಾಜಕ್ಕೆ ಶಿಕ್ಷಕರನ್ನು ದೂರಲು ಒಂದೇ ಒಂದು ಕಾರಣ ಇರುವುದಿಲ್ಲ.

ಮತ್ತೊಂದು ಶಿಕ್ಷಕರ ದಿನಾಚರಣೆ ಬಂದಿದೆ. ಮೇಷ್ಟ್ರುಗಳನ್ನು ಹೊಗಳಲು ಎಲ್ಲರೂ ಸಜ್ಜಾಗಿದ್ದಾರೆ. ಅವನಿಗೆ ಹೊಗಳಿಕೆ ಅಷ್ಟೇ ಸಾಕೆ? ಬದಲಾದ ಕಾಲದಲ್ಲಿ ತನ್ನ ಸ್ಥಾನಕ್ಕಾಗಿ ಹೊಡೆದಾಡುವ ಈ ಹೊತ್ತಿನಲ್ಲಿ, ಶಿಕ್ಷಕರ ದಿನದಂದು ಅವನ ಮುಖದಲ್ಲಿ ಒಂದು ನಗು ತರುವ ಪ್ರಯತ್ನವಾದರೂ ಆಗಬೇಕಲ್ಲವೇ? ಈ ದಿನಕ್ಕೊಂದು ಅರ್ಥವಾದರೂ ಬರಬೇಕಲ್ಲವೇ?

ಲೇಖಕ: ಶಿಕ್ಷಕ, ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT