ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ: ಹಲವು ಆಯಾಮ

ಆತ್ಮಹತ್ಯೆಯು ಸುತ್ತಲಿನ ಅನೇಕರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿಮುಕ್ತವಾಗಿ ಚಿಕಿತ್ಸೆ ಪಡೆದು ಗುಣಮುಖರಾಗುವತ್ತ ಮುನ್ನಡೆಯಬೇಕು
Last Updated 9 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ವಿಶ್ವ ಆತ್ಮಹತ್ಯಾ ವಿರೋಧಿ ದಿನವನ್ನು, ಆತ್ಮಹತ್ಯೆಗೆ ಕಾರಣಗಳು ಹಾಗೂ ತಡೆಗಟ್ಟುವ ವಿಧಾನಗಳ ಬಗೆಗೆ ಅರಿವು ಮೂಡಿಸುವ ದಿನವಾಗಿ ಸೆ. 10ರಂದು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಆತ್ಮಹತ್ಯೆಗೂ ಕಾನೂನಿಗೂ ಇರುವ ಬಲವಾದ ನಂಟು ಬಹುಜನರಿಗೆ ಗೊತ್ತಿಲ್ಲ. ನಮಗಂತೂ ‘ಕಾನೂನು’ ಎಂಬ ಪದಕ್ಕೆ ಭಯ, ಆತಂಕ ಎಂಬ ಪದಗಳು ಸಮಾನಾರ್ಥಕವೇ ಆಗಿಬಿಟ್ಟಿವೆ.

ಈ ಮೊದಲು, ಆತ್ಮಹತ್ಯೆಗೆ ಪ್ರಯತ್ನಿಸುವ ಎಲ್ಲ ವ್ಯಕ್ತಿಗಳು ವೈದ್ಯರನ್ನು ಭೇಟಿಯಾದ ತಕ್ಷಣವೇ ಅದನ್ನು ‘ಮೆಡಿಕೊ ಲೀಗಲ್‌’ ಕೇಸ್ ಆಗಿ ದಾಖಲಿಸಬೇಕಾಗುತ್ತಿತ್ತು. ಹಾಗಾಗಿಯೇ ‘ಏಕೆ 25 ಮಾತ್ರೆ ಒಟ್ಟಿಗೆ ನುಂಗಿದಿರಿ’ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಸಿಕ್ಕುತ್ತಿದ್ದ ಉತ್ತರ ‘ತುಂಬಾ ಹೊಟ್ಟೆನೋವು ಬಂತು, ಯಾವುದೋ ಮಾತ್ರೆ ಕಾಣಿಸಿತು ನುಂಗಿಬಿಟ್ಟೆ’. ಪೊಲೀಸು- ಕಾನೂನು- ಶಿಕ್ಷೆ- ದಂಡಗಳ ಹೆದರಿಕೆಯಿಂದ, ಇಂತಹ ವ್ಯಕ್ತಿಗಳ ಹತ್ತಿರ ಮಾತನಾಡಿ ಸಾಂತ್ವನ ಹೇಳುವುದು, ನಿಜವಾದ ಕಾರಣ ಹುಡುಕುವುದು, ಮತ್ತೆ ಹಾಗೆ ಪ್ರಯತ್ನಿಸದಂತೆ ಚಿಕಿತ್ಸೆ ನೀಡುವ ಕಾರ್ಯ ಈವರೆಗೆ ನಡೆಯುತ್ತಿದ್ದದ್ದುಅರ್ಧಂಬರ್ಧ ಮಾತ್ರ! ಆದರೆ, ಈಗ ಮಾನಸಿಕ ಆರೋಗ್ಯ ಆರೈಕೆಗೆ ಸಂಬಂಧಿಸಿದಂತೆ ಹೊಸ ಕಾನೂನು (2017) ಬಂದಿದೆ. ಆತ್ಮಹತ್ಯೆ ಅಪರಾಧವಲ್ಲ, ಅದಕ್ಕೆ ಶಿಕ್ಷೆಯ ಬದಲು ಚಿಕಿತ್ಸೆ ಬೇಕು ಎಂಬ ಮಹತ್ವದ ಹೆಜ್ಜೆಯನ್ನು ಭಾರತೀಯ ಕಾನೂನು ಇಟ್ಟಿದೆ.

ಆತ್ಮಹತ್ಯೆಗೂ ಭಾರತೀಯ ಕಾನೂನಿಗೂ ಇರುವ ಸಂಬಂಧ ಕಳೆದ 150 ವರ್ಷಗಳಲ್ಲಿ ನಡೆದುಬಂದ ದಾರಿಯನ್ನು ಗಮನಿಸೋಣ. ಥಾಮಸ್ ಬ್ಯಾಬಿಂಗ್‍ಟನ್ ಮೆಕಾಲೆಯ ನೇತೃತ್ವದಲ್ಲಿ ಮೊದಲ ಕಾನೂನು ಆಯೋಗದ ಶಿಫಾರಸುಗಳಿಂದ 1862ರಲ್ಲಿ ಜಾರಿಗೆ ಬಂದ ಭಾರತೀಯ ದಂಡಸಂಹಿತೆಯ ಹಲವು ಭಾಗಗಳು ಹೆಚ್ಚಿನ ತಿದ್ದುಪಡಿಗಳಾಗದೇ ಮುಂದುವರಿದವು. ಆದರೆ ಸಮಾಜ ಒಂದೇ ರೀತಿಯಿರಲು ಸಾಧ್ಯವಿಲ್ಲವಷ್ಟೆ! ನಿರಂತರವಾಗಿ ಬದಲಾಗುವ ಜನರ ಜೀವನಶೈಲಿ, ಬದಲಾವಣೆಗಳಿಗೆ ತೆರೆದುಕೊಳ್ಳಬೇಕಾದ ಅನಿವಾರ್ಯವು ಕಾಲದಿಂದ ಕಾಲಕ್ಕೆ ಕಾನೂನನ್ನು ಮರುಪರಿಶೀಲಿಸಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ. ಅಂಥದ್ದೇ ಒಂದು ಉದಾಹರಣೆ ಸೆಕ್ಷನ್ 309ರ 16ನೇ ಅಧ್ಯಾಯ. ಯಾರೇ ಆತ್ಮಹತ್ಯೆಗೆ ಪ್ರಯತ್ನಿಸಿದರೆ ಅವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ನೀಡಲು ಅವಕಾಶ ಕಲ್ಪಿಸಿತ್ತು ಇದು. ಅದನ್ನು ತಿದ್ದುಪಡಿ ಮಾಡುವ ಸಾಹಸಕ್ಕೆ ಆಧುನಿಕ ಚಿಂತನೆ ತೊಡಗಿರಲೇ ಇಲ್ಲ ಎನ್ನುವುದು ಅಚ್ಚರಿಯ, ವಿಷಾದದ ಮಾತಾದರೂ ಸತ್ಯವೇ! ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ‘ಕ್ರಾಂತಿಕಾರಕ’ ಎನ್ನುವಂತೆ ನಡೆದಿರುವ ಸಂಶೋಧನೆಗಳು, ಚಿಕಿತ್ಸಾ ವಿಧಾನಗಳ ಬೆಳವಣಿಗೆಗಳು, ಮಾನಸಿಕ ರೋಗಿಗಳು ಹಾಗೂ ಅವರ ಹಕ್ಕುಗಳ ಬಗ್ಗೆ ಸಮಾಜದ ಜಾಗೃತಿಯ ನಡುವೆಯೂ ಈ ಕಾನೂನು ಬದಲಾಗದೆ, ಆತ್ಮಹತ್ಯೆ ಪ್ರವೃತ್ತಿಯ ಲಕ್ಷಾಂತರ ಜನರನ್ನು ಸರಿಯಾದ ಚಿಕಿತ್ಸೆಯಿಂದ ವಂಚಿತರನ್ನಾಗಿಸಿದ್ದು ದುರದೃಷ್ಟಕರ.

ಡರ್‍ಕೀಮ್ ಎಂಬ ಮನಃಶಾಸ್ತ್ರಜ್ಞನಿಂದ ಆರಂಭ ಆದ ಆತ್ಮಹತ್ಯೆ ಕುರಿತ ಅಧ್ಯಯನ, ಸಾಮಾಜಿಕ ಒತ್ತಡಗಳು ಆತ್ಮಹತ್ಯೆಗೆ ಕಾರಣವಾಗುವುದನ್ನು ಸ್ಪಷ್ಟವಾಗಿ ತೋರಿಸಿತು. ಜೊತೆಗೆ ಮಾನಸಿಕ ಕಾಯಿಲೆಗಳು ನಿಜವಾಗಿ ಮೆದುಳಿನ ಕಾಯಿಲೆಗಳು, ವಾತಾವರಣ- ದೇಹದ ಜೈವಿಕತೆ ಇವುಗಳ ನಿರಂತರ ಪ್ರತಿಸ್ಪಂದಿಸುವಿಕೆಯಲ್ಲಿ ಏರುಪೇರುಗಳಾದಾಗ, ಇತರ ‘ದೈಹಿಕ’ ಎಂದುಕೊಳ್ಳುವ ಕಾಯಿಲೆಗಳಂತೆಯೇ ಕಂಡುಬರುತ್ತವೆ ಎಂಬುದು ಇಂದು ಸುಸ್ಪಷ್ಟ. ಈ ಜ್ಞಾನ ‘ಆತ್ಮಹತ್ಯೆ’ ಎಂಬ ಪ್ರಕ್ರಿಯೆಗೂ ವಿಸ್ತರಿಸುತ್ತದೆ.

ಅಂತರರಾಷ್ಟ್ರೀಯವಾಗಿ ಜರ್ಮನಿಯು 1751ರಷ್ಟು ಹಿಂದೆಯೇ, ಆತ್ಮಹತ್ಯೆ ಅಪರಾಧವಲ್ಲ ಎಂದು ಘೋಷಿಸಿತು. ಫ್ರೆಂಚ್ ಕ್ರಾಂತಿಯ ನಂತರ, ಯುರೋಪಿನ ಎಲ್ಲಾ ದೇಶಗಳು ಹಾಗೂ ಅಮೆರಿಕ ಅದೇ ನಿರ್ಧಾರ ಕೈಗೊಂಡವು. 1983ರಲ್ಲಿ ಕ್ಯಾಥೊಲಿಕ್ ಚರ್ಚು, ಆತ್ಮಹತ್ಯೆಯಿಂದ ಸತ್ತವರಿಗೆ ಅಂತ್ಯಕ್ರಿಯೆಗಳನ್ನು ನಿರ್ಬಂಧಿಸುತ್ತಿದ್ದ ‘ಕ್ಯಾನನ್’ ಎಂಬ ಕಾನೂನನ್ನು ತೆಗೆದುಹಾಕಿತ್ತು. ಸ್ಕಾಟ್‍ಲೆಂಡ್ ಎಂದೂ ಆತ್ಮಹತ್ಯೆಯನ್ನು ಅಪರಾಧ ಎಂದು ಪರಿಗಣಿಸಿಯೇ ಇರಲಿಲ್ಲ. 2017ರಲ್ಲಿ ಭಾರತವೂ ಈ ಮಹತ್ವದ ನಿರ್ಧಾರ ಕೈಗೊಂಡಿತು! ನಮ್ಮ ನೆರೆಹೊರೆ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ಮಲೇಷ್ಯಾ ಇನ್ನೂ ನಮ್ಮನ್ನು ಅನುಸರಿಸಬೇಕಷ್ಟೆ!

ಹಲವು ಏಳುಬೀಳು, ಅಡ್ಡಿ ಆತಂಕಗಳ ನಡುವೆಯೂ ಕಾನೂನು ಆಯೋಗ ತನ್ನ 210ನೇ ವರದಿಯಲ್ಲಿ ‘ಆತ್ಮಹತ್ಯೆ ಆರೋಗ್ಯಕ್ಕೆ ಸಂಬಂಧಿಸಿದ್ದು, ಅದಕ್ಕೆ ಬೇಕಾದ್ದು ಚಿಕಿತ್ಸೆ, ಶಿಕ್ಷೆಯಲ್ಲ’ ಎಂದು ಶಿಫಾರಸು ಮಾಡಿತು. ಬೇರೆ ಬೇರೆ ಕಾನೂನು ಆಯೋಗಗಳು, ಭಾರತೀಯ ಮನೋವೈದ್ಯಕೀಯ ಸಂಘ, ವಿಶ್ವ ಆರೋಗ್ಯ ಸಂಸ್ಥೆ, ಜಾಗತಿಕ ಆತ್ಮಹತ್ಯಾ ವಿರೋಧಿ ಸಂಘ, ರಾಜ್ಯ ಸರ್ಕಾರಗಳು ಇವೆಲ್ಲದರ ಒತ್ತಾಯ- ಬೇಡಿಕೆ- ಸಲಹೆಯನ್ನು ಪುರಸ್ಕರಿಸಿ, ಸುಮಾರು 30 ವರ್ಷಗಳ ದೀರ್ಘ ಹೋರಾಟದಿಂದ, ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಗಳು ಜೈಲಿನ ಭಯವಿಲ್ಲದೆ ಆಸ್ಪತ್ರೆಯಲ್ಲಿ ಮುಕ್ತವಾಗಿ ಚಿಕಿತ್ಸೆ ಪಡೆಯುವ ಹಕ್ಕು ಲಭಿಸಿತು.

ಆತ್ಮಹತ್ಯೆಗೆ ಇರುವ ಆಯಾಮಗಳು ಹಲವಾರು. ಆದರೆ, ಒಂದು ಆತ್ಮಹತ್ಯೆ ತನ್ನ ಸುತ್ತಲಿರುವ ನೂರಾರು ಜನರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆತ್ಮಹತ್ಯೆ ತಡೆಯುವಲ್ಲಿ ಕಾನೂನಿನ ಅಡ್ಡಿಯಿಲ್ಲದೆ ಮುಕ್ತವಾಗಿ ಚಿಕಿತ್ಸೆ ಪಡೆದು ಗುಣಮುಖವಾಗುವತ್ತ ಎಲ್ಲರೂ ಮುನ್ನಡೆಯಬೇಕಿದೆ.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT