ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಶಿಕ್ಷಕರ ದಿನ– ಲೆಕ್ಕಕ್ಕೆ ಸಿಗದು ಕಲಿಕೆಯ ವ್ಯವಹಾರ!

ಒಬ್ಬ ನಿಜವಾದ ಶಿಕ್ಷಕ ಬರೀ ಜ್ಞಾನ ನೀಡುವುದಿಲ್ಲ. ಎಷ್ಟೋ ವಿಚಾರಗಳನ್ನು ಅವನು ಇರುವಿಕೆಯ ಮಾತ್ರದಿಂದಲೇ ಕಲಿಸುತ್ತಾ ಹೋಗುತ್ತಾನೆ
Published : 4 ಸೆಪ್ಟೆಂಬರ್ 2024, 19:20 IST
Last Updated : 4 ಸೆಪ್ಟೆಂಬರ್ 2024, 19:20 IST
ಫಾಲೋ ಮಾಡಿ
Comments

‘ನೀಟ್’ ಪಾಸಾಗಿ ಮೆಡಿಕಲ್ ಸೀಟು ಗಿಟ್ಟಿಸಿಕೊಂಡಿದ್ದ ನನ್ನ ವಿದ್ಯಾರ್ಥಿನಿಯೊಬ್ಬಳು ಅದನ್ನು ಬಿಟ್ಟು ಶಿಕ್ಷಕ ತರಬೇತಿ ಕೋರ್ಸ್‌ ಸೇರಿಕೊಳ್ಳುವುದಾಗಿ ಹೇಳಿದಾಗ ಪೋಷಕರು ಗಾಬರಿಯಾಗಿ ನನಗೆ ಕರೆ ಮಾಡಿದ್ದರು. ನಂತರ ಅವಳೂ ಮಾತನಾಡಿದಳು. ‍‘ಶಿಕ್ಷಕಿ ಆಗಬೇಕು ಅನ್ನುವುದಕ್ಕೆ ನೀವು ಪ್ರೇರಣೆ ಸರ್. ಮೆಡಿಕಲ್‌ ಸೀಟು ಸಿಗಲಿಲ್ಲ‌ವೆಂಬ ಕಾರಣಕ್ಕೆ ನಾನು ಶಿಕ್ಷಕಿಯಾದೆ ಅಂತ ಅನ್ಕೊಬಾರದಲ್ಲ ಅಂತ ನೀಟ್ ಬರೆದೆ ಅಷ್ಟೆ. ನನ್ನ ನಿರ್ಧಾರ ಅಚಲ ಸರ್’ ಅಂದಳು‌. ಈಗ ಅವಳು ಸರ್ಕಾರಿ ಶಾಲೆಯೊಂದರಲ್ಲಿ ಉತ್ತಮ ಶಿಕ್ಷಕಿ.

ಯಾವುದೋ ಶಾಲೆಯ ಶಿಕ್ಷಕರೊಬ್ಬರು ಇತ್ತೀಚೆಗೆ ವರ್ಗಾವಣೆಯಾಗಿ ಹೋದಾಗ, ಮಕ್ಕಳು ತಾವೂ ವರ್ಗಾವಣೆ ಪತ್ರ ತೆಗೆದುಕೊಂಡು ತಮ್ಮ ಶಿಕ್ಷಕರು ಹೋದ ಶಾಲೆಗೇ ಹೋಗಿ ಸೇರಿಕೊಳ್ಳುವುದಾಗಿ ಹಟ ಹಿಡಿದಿದ್ದರು.

ಶಿಕ್ಷಕರು ವರ್ಗಾವಣೆಯಾಗಿ ಹೋಗುವಾಗ ಮಕ್ಕಳು ಅವರು ಹೋಗದಂತೆ ಹಟ ಹಿಡಿಯುವ, ಅಳುವ ಸುದ್ದಿಗಳೂ ಆಗಾಗ ಪತ್ರಿಕೆಯಲ್ಲಿ, ಟಿ.ವಿ.ಯಲ್ಲಿ ಬರುತ್ತಿರುತ್ತವೆ. ಹಳೆಯ ವಿದ್ಯಾರ್ಥಿಗಳು ತಮ್ಮ ಮೇಷ್ಟ್ರುಗಳಿಗೆ ಬೈಕ್ ಕೊಡಿಸುವ, ಮನೆ ಕಟ್ಟಿಕೊಳ್ಳಲು ಸಹಾಯ ಮಾಡುವ, ಅವರ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸುವಂತಹ ಸುದ್ದಿಗಳನ್ನೂ ಆಗಾಗ ಕೇಳುತ್ತಿರುತ್ತೇವೆ.

ಅಕ್ಷರ ಬರೆಸು, ಹೋಮ್‌ವರ್ಕ್ ತಿದ್ದಿಸು, ಬೋಧಿಸು, ಉತ್ತಮ ಅಂಕ ತೆಗೆಯುವಂತೆ ಮಾಡು... ಬರೀ ಇವಿಷ್ಟೇ ಆಗಿದ್ದರೆ ಶಿಷ್ಯ ವರ್ಗ ತಮ್ಮ ಶಿಕ್ಷಕರನ್ನು ಅಷ್ಟರಮಟ್ಟಿಗೆ ಹಚ್ಚಿಕೊಳ್ಳುತ್ತಿತ್ತೇ? ಒಬ್ಬ ನಿಜವಾದ ಶಿಕ್ಷಕನ ಬಳಿ ಬೇರೆ ಏನೋ ಇದೆ ಅನಿಸುತ್ತದೆ ಅಲ್ಲವೇ? ಅದರಿಂದಲೇ ತಾನೆ ಅವರು ಹೊರಟು ನಿಂತಾಗ ಮಕ್ಕಳು ಕಣ್ಣೀರು ಸುರಿಸುತ್ತಾರೆ, ಅವರಿಗಾಗಿ ಮಿಡಿಯುತ್ತಾರೆ.

ಇತ್ತೀಚೆಗೆ ಒಂದು ಚರ್ಚೆ ಸಾಮಾನ್ಯವಾಗಿದೆ. ಶಿಕ್ಷಕನ ಜಾಗಕ್ಕೆ ಕೃತಕ ಬುದ್ಧಿಮತ್ತೆಯ ಶಿಕ್ಷಕ ಬಂದು ನಿಲ್ಲುತ್ತಾನೆ, ಒಬ್ಬನೇ ಕೃತಕ ಬುದ್ಧಿಮತ್ತೆಯ ಶಿಕ್ಷಕ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಬೋಧಿಸುತ್ತಾನೆ, ಮಗುವಿನ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ, ಇನ್ನುಮೇಲೆ ಮನುಷ್ಯರೂಪಿ ಶಿಕ್ಷಕನಿಗೆ ಕೆಲಸವಿಲ್ಲ, ಅವನು ಆ ಕೃತಕ ಬುದ್ಧಿಮತ್ತೆಯ ಶಿಕ್ಷಕನ ಎದುರು ನಿಲ್ಲಲಾರ... ಎಂಬೆಲ್ಲ ಮಾತುಗಳು ಕೇಳಿಬರುತ್ತವೆ.

ನಾವೀಗ ಹೆಚ್ಚು ಅಂಕ ತೆಗೆದುಕೊಳ್ಳುವಂತೆ ಮಾಡುವವನು ಮಾತ್ರ ಉತ್ತಮ ಶಿಕ್ಷಕ ಎಂಬುದನ್ನು ಒಪ್ಪಿಕೊಳ್ಳುವ ಕಾಲಘಟ್ಟದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆಯ ಶಿಕ್ಷಕನ ಬೋಧನೆಯು ಮಾನವೀಯ ಹೃದಯದ ಒಬ್ಬ ಶಿಕ್ಷಕನ ಬೋಧನೆಗಿಂತ ಹೆಚ್ಚು ಅದ್ಭುತ ಮತ್ತು ಕಲಿಕೆಗೆ ತುಂಬಾ ಸಹಾಯಕ ಎಂಬುದನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ ಮತ್ತು ಅದನ್ನೇ ಸರಿಯೆಂದು ವಾದಿಸಬೇಕಾಗುತ್ತದೆ.

ವಾಸ್ತವದಲ್ಲಿ ಕೃತಕ ಬುದ್ಧಿಮತ್ತೆಯ ಶಿಕ್ಷಕ, ರಕ್ತ–ಮಾಂಸದಿಂದ ಕೂಡಿದ ಶಿಕ್ಷಕನಿಗೆ ಎಂದೂ ಸಮನಾಗಲಾರ. ಒಬ್ಬ ನಿಜವಾದ ಶಿಕ್ಷಕ ಬರೀ ಜ್ಞಾನ ನೀಡುವುದಿಲ್ಲ. ನೀಡುವ ಜ್ಞಾನವನ್ನು ಬರೀ ತರಗತಿಯಲ್ಲಿ ನೀಡುವುದಿಲ್ಲ. ಅವನು ಎಷ್ಟೋ ವಿಚಾರಗಳನ್ನು ಇರುವಿಕೆಯ ಮಾತ್ರದಿಂದಲೇ ಕಲಿಸುತ್ತಾ ಹೋಗುತ್ತಾನೆ. ಮಗುವೂ ತನಗೆ ಗೊತ್ತಿಲ್ಲದೆಯೇ ಕಲಿಯುತ್ತದೆ. ಶಿಕ್ಷಕನ ವ್ಯಕ್ತಿತ್ವದಿಂದ ಮಗುವಿನೆಡೆಗೆ ಬದುಕು ಸುಪ್ತವಾಗಿ ಹರಿಯುತ್ತಿರುತ್ತದೆ.‌ ಹೀಗಾಗಿ, ಕಲಿಕೆ ಎಂಬುದು ಬರೀ ವಿಚಾರ ಜ್ಞಾನವಲ್ಲ. ಎಲ್ಲವನ್ನೂ ತರಗತಿಯಲ್ಲಿ ಪುಸ್ತಕ ಹಿಡಿದು ಕಲಿಸಲಾಗುವುದಿಲ್ಲ.

ಕೃತಕ ಬುದ್ಧಿಮತ್ತೆ ಬರೀ ಜ್ಞಾನವನ್ನು ತುಂಬುತ್ತದೆ. ಉಳಿದ ವಿಚಾರಗಳನ್ನು ಕಲಿಸುವವರು ಯಾರು? ಯಂತ್ರದಿಂದ ಕಲಿಯುವ ಮಕ್ಕಳು ಯಂತ್ರದಂತೆಯೇ ನಿರ್ಭಾವುಕರಾಗುತ್ತಾರೆ, ಯಾಂತ್ರಿಕವಾಗುತ್ತಾರೆ. ಒಬ್ಬರು ಅಡುಗೆ ಪುಸ್ತಕ ಓದಿಕೊಂಡು ಚಪಾತಿ ಹಿಟ್ಟು ಕಲೆಸಿ, ದೇವರ ಮನೆಯ ಗಂಟೆಯನ್ನು ತಂದು ಅದರ ಮೇಲೆ ಇಟ್ಟರಂತೆ. ಅದನ್ನು ನೋಡಿದ ಯಾರೋ ಕೇಳಿದರಂತೆ ‘ಯಾಕಿದು’ ಅಂತ? ಆಗ ಚಪಾತಿ ಹಿಟ್ಟು ಕಲೆಸಿದವರು ಹೇಳಿದರಂತೆ, ‘ಚಪಾತಿ ಹಿಟ್ಟು ಕಲೆಸಿ ಒಂದು ಗಂಟೆ ಇಡಿ ಅಂತ ಪುಸ್ತಕದಲ್ಲಿ ಬರೆಯಲಾಗಿದೆ, ಅದಕ್ಕೆ ಗಂಟೆ ಇಟ್ಟೆ’ ಅಂದರಂತೆ. ಯಂತ್ರದ ಮೂಲಕ ಬರೀ ಜ್ಞಾನ ಪಡೆದುಕೊಳ್ಳಲು ಮುಂದಾಗುವುದು ಹೀಗೆ ಚಪಾತಿ ಮಾಡಿದಂತೆ ಆಗುತ್ತದೆ.

ಕೃತಕ ಬುದ್ಧಿಮತ್ತೆ ಬದುಕಿನ ಎಲ್ಲಾ ಕೆಲಸಗಳನ್ನು ಸುಲಭಗೊಳಿಸಿರಬಹುದು. ಬಹಳಷ್ಟು ಪರಿಣಾಮಾತ್ಮಕವಾಗಿಯೂ ಮಾಡಿರಬಹುದು. ಆದರೆ ಬೋಧನೆಯಲ್ಲಿ ಕೃತಕ ಬುದ್ಧಿಮತ್ತೆಯ ಶಿಕ್ಷಕನನ್ನು ಬಳಸಿಕೊಂಡರೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಕಲಿಕೆ ಬಹಳ ಸೂಕ್ಷ್ಮವಾದದ್ದು.‌ 

ತನಗೆ ಪಾಠ ಹೇಳಿಕೊಡುವ ಮಿಸ್ಸಿಗೆ ಮುಡಿಯಲು ದಿನಾ ಹೂವು ತಂದುಕೊಡುವ ಮಗುವಿನಿಂದ ಶಿಕ್ಷಕಿ ಗಳಿಸುವ ಪ್ರೀತಿ, ಅಷ್ಟು ಪ್ರೀತಿಸುವ ಮಕ್ಕಳನ್ನು ತನ್ನ ಬೋಧನೆ ಮತ್ತು ಕಲಿಕೆಯ ಮೂಲಕ ಪೊರೆಯುವ ಶಿಕ್ಷಕಿ ಈ ಇಬ್ಬರ ನಡುವಿನ ಭಾವನಾತ್ಮಕ ಕಲಿಕೆಯ ವ್ಯವಹಾರವು ಲೋಕದ ಯಾವ ಲೆಕ್ಕಾಚಾರಕ್ಕೂ ಸಿಗುವುದಿಲ್ಲ. ಎಷ್ಟೇ ಕಾಲ ಸಾಗಿದರೂ ಈ ದಿನ (ಸೆ. 5) ಉತ್ತಮ ಸಮಾಜಕ್ಕಾಗಿ ಶಿಕ್ಷಕರ ದಿನವಾಗಿಯೇ ಉಳಿಯಲಿ. ಯಂತ್ರದ ಶಿಕ್ಷಕರ ದಿನವಾಗಿ ಅಲ್ಲ. ಯಾಕೆಂದರೆ ಬರೀ ನಿರ್ಭಾವುಕ ಬದುಕು ಬದುಕಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT