ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ರಾಜ್ಯ, ರಾಜ್ಯಪಾಲರು ಮತ್ತು ಅಂಕುಶ

Published 7 ಜುಲೈ 2023, 23:30 IST
Last Updated 7 ಜುಲೈ 2023, 23:30 IST
ಅಕ್ಷರ ಗಾತ್ರ

ದೇಶದಲ್ಲಿ ಕೇಂದ್ರ- ರಾಜ್ಯಗಳ ನಡುವಿನ ಸಂಬಂಧವು ಸದಾ ಒಂದಲ್ಲ ಒಂದು ವಿವಾದವನ್ನು ಸೃಷ್ಟಿಸುತ್ತಲೇ ಇರುತ್ತದೆ. ಸಂವಿಧಾನದ ಒಂದನೇ ವಿಧಿಯ ಪ್ರಕಾರ, ಭಾರತವು ರಾಜ್ಯಗಳ ಒಕ್ಕೂಟ. ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರವು ಹಿರಿಯಣ್ಣನಂತೆ ವರ್ತಿಸುತ್ತಾ ಕೆಲವು ಬಾರಿ ಜನತಂತ್ರದ ಅತಿರೇಕಕ್ಕೆ ಕಾರಣವಾದ ನಿದರ್ಶನಗಳು ಇವೆ. ರಾಜ್ಯಗಳಲ್ಲಿನ ಚುನಾಯಿತ ಸರ್ಕಾರಗಳನ್ನು, ವಿಧಿ 356ರ ಅನ್ವಯ ಅನೇಕ ಬಾರಿ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದೆ.

ಪಕ್ಷ ರಾಜಕಾರಣದ ಮೇಲಾಟದ ಭಾಗವಾಗಿ ಇಂಥ ಕ್ರಮಗಳು ಆಗಿವೆ. ಆದರೆ 1994ರಲ್ಲಿ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು, ಇಂತಹ ವಜಾ ಕ್ರಮಗಳನ್ನು ಕೇಂದ್ರವು ಮನಸೋಇಚ್ಛೆ ಕೈಗೊಳ್ಳದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ನಿಯಂತ್ರಿಸಲು ಬಳಸುವ ಪ್ರಧಾನ ಅಂಕುಶವೆಂದರೆ ರಾಜ್ಯಪಾಲರು. ರಾಜ್ಯಪಾಲರನ್ನು ನೇಮಿಸುವುದಕ್ಕೆ ಮೊದಲು ಕೇಂದ್ರವು ರಾಜ್ಯಗಳೊಡನೆ ಸಮಾಲೋಚಿಸಬೇಕು ಎಂಬ ಅಲಿಖಿತ ಸಂಪ್ರದಾಯ ಇದೆ. ಆದರೆ ಇದು, ಆಯಾ ರಾಜ್ಯದ ಮುಖ್ಯಮಂತ್ರಿಗೆ ನೀಡುವ ಮಾಹಿತಿಯ ರೂಪದಲ್ಲಿ ಇರುತ್ತದೆಯೇ ವಿನಾ ಮುಖ್ಯಮಂತ್ರಿಯ ಸಮ್ಮತಿ ಪಡೆಯುವ ರೂಪದಲ್ಲಿ ಇರುವುದಿಲ್ಲ.

ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಅಲ್ಲಿನ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾ ಮಾಡಿ, ಆನಂತರ ಕೆಲವೇ ತಾಸುಗಳಲ್ಲಿ ಆ ಆದೇಶವನ್ನು ಹಿಂದಕ್ಕೆ ಪಡೆದ ಪ್ರಕರಣವು ರಾಜ್ಯಪಾಲರು ದಾಳವಾಗಿ ಬಳಕೆಯಾದುದರ ಇತ್ತೀಚಿನ ನಿದರ್ಶನ. ಮುಖ್ಯಮಂತ್ರಿಯ ಸಲಹೆ ಮೇರೆಗೆ ರಾಜ್ಯಪಾಲರು ಸಚಿವರನ್ನು ನೇಮಿಸಬೇಕೆಂಬ ಸಂಪ್ರದಾಯದಂತೆಯೇ ಸಚಿವರನ್ನು ವಜಾ ಮಾಡುವುದಕ್ಕೂ ಇದೇ ಮಾರ್ಗವನ್ನು ಅನುಸರಿಸಬೇಕು. ಆದರೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಸಲಹೆ ಇಲ್ಲದೆ ರಾಜ್ಯಪಾಲರು ಸ್ವತಃ ವಜಾ ಆದೇಶ ಹೊರಡಿಸಿದ್ದರು. ವಜಾ ಆದೇಶವನ್ನು ಕೇಂದ್ರ ಗೃಹ ಸಚಿವರ ಸಲಹೆಯಂತೆ ಅಮಾನತಿನಲ್ಲಿ ಇರಿಸಲಾಗಿದೆ. ತಮ್ಮ ಆದೇಶದ ಸಾಧಕ– ಬಾಧಕಗಳ ಕುರಿತು ಅಟಾರ್ನಿ ಜನರಲ್‌ ಅವರೊಡನೆ ಸಮಾಲೋಚನೆ ನಡೆಸುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಇವೆಲ್ಲವೂ ಕೇಂದ್ರ- ರಾಜ್ಯ ಸಂಬಂಧಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೊಸ ವಿವಾದಕ್ಕೆ ನಾಂದಿ ಹಾಡಿವೆ. ರಾಜ್ಯಪಾಲರ ತೀರ್ಮಾನವು ಸಂವಿಧಾನಕ್ಕೆ ವಿರುದ್ಧವಾದ ಹಾಗೂ ಒಂದು ಅತಿರೇಕದ ನಡೆಯಂತೆ ಕಾಣುತ್ತದೆ. ಸಚಿವರೊಬ್ಬರನ್ನು ವಜಾಗೊಳಿಸುವ ಅಧಿಕಾರವು ರಾಜ್ಯಪಾಲರಿಗೆ ಇಲ್ಲ ಎಂಬುದು ಸಂವಿಧಾನದ ಸ್ಪಷ್ಟೋಕ್ತಿ.

ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಅನ್ವಯ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು. ಆದರೆ, ಬಾಲಾಜಿ ಅವರ ವಿಚಾರದಲ್ಲಿ ರಾಜ್ಯಪಾಲರ ಕ್ರಮ ಏಕಪಕ್ಷೀಯ ಹಾಗೂ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದುದು.

ರಾಜ್ಯಪಾಲರಿಗೆ ಕೆಲವು ವಿಚಾರಗಳಲ್ಲಿ ವಿವೇಚನಾ ಅಧಿಕಾರ ಇರುತ್ತದೆ. ಆದರೆ ಅದನ್ನು ಬಳಸುವುದಕ್ಕೆ ಕೆಲವು ಪ್ರಕ್ರಿಯೆಗಳು ಇರುತ್ತವೆ. ಉದಾಹರಣೆಗೆ, ನ್ಯಾಯಾಲಯದಲ್ಲಿ ಶಿಕ್ಷೆಗೆ ಒಳಗಾದವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವುದು ಹಾಗೂ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಂತಹವು ವಿವೇಚನಾ ಅಧಿಕಾರದ ವ್ಯಾಪ್ತಿಗೆ ಒಳಪಡುತ್ತವೆ. ಆದರೆ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಶ್ವವಿದ್ಯಾಲಯಗಳಲ್ಲಿ ರಾಜ್ಯಪಾಲರ ಮಧ್ಯಪ್ರವೇಶವನ್ನು ತಡೆಯಲು ಇತ್ತೀಚೆಗೆ ಕಾನೂನಿಗೆ ಬದಲಾವಣೆ ತರಲಾಗಿದೆ. ಈ ಬೆಳವಣಿಗೆಗೆ ಕಾರಣವಾಗಿರುವುದು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷವೇ ಆಗಿದೆ. ಹಾಗೆಯೇ ವಿಧಾನಮಂಡಲದ ಅನುಮೋದನೆ ಪಡೆದ ಕೆಲವು ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕದೇ ಇರುವುದರಿಂದ ಅವು ತ್ರಿಶಂಕು ಸ್ಥಿತಿಯಲ್ಲಿ ಇರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.‌

ಕೇಂದ್ರೀಯ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ವಿರೋಧ ಪಕ್ಷಗಳು ಅನೇಕ ಸಂದರ್ಭಗಳಲ್ಲಿ ರಾಜಕೀಯ ಪ್ರತೀಕಾರದ ಕ್ರಮ ಎಂದು ವ್ಯಾಖ್ಯಾನಿಸಿವೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರು ಬಂಧನದ ನಂತರವೂ ಆರು ತಿಂಗಳು ಸಚಿವರಾಗಿ ಮುಂದುವರಿದ ನಿದರ್ಶನ ಒಂದು ಕಡೆ ಇದೆ. ಮತ್ತೊಂದೆಡೆ, ಬಾಲಾಜಿ ಪ್ರಕರಣದಲ್ಲಿ ರಾಜ್ಯಪಾಲರು ವಜಾಗೊಳಿಸಿದ ಪ್ರಕ್ರಿಯೆ ಕೂಡ ಸಂವಿಧಾನ ವಿರೋಧಿ ಎಂದು ವಿಶ್ಲೇಷಿಸಲಾಗಿದೆ. ಇಪ್ಪತ್ನಾಲ್ಕು ಗಂಟೆ ಬಂಧನಕ್ಕೆ ಒಳಗಾಗುವ ಸರ್ಕಾರಿ ನೌಕರರನ್ನು ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಅಮಾನತಿನಲ್ಲಿ ಇರಿಸಬೇಕಾಗುತ್ತದೆ.

ಸಂಸದರು, ಶಾಸಕರು ಬರೀ ಶಿಕ್ಷೆಗೆ ಒಳಗಾದರೂ ಸಾಕು, ಸದಸ್ಯ ಸ್ಥಾನವನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿ ಅವರ ಪ್ರಕರಣವೇ ನಿದರ್ಶನ. ಹೀಗಿರುವಾಗ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿರುವ ಸಚಿವರ ಸಚಿವ ಸ್ಥಾನದ ಸ್ಥಿತಿ ಏನು? ಇವರು ಜೈಲಿನಿಂದಲೇ ಕಾರ್ಯ ನಿರ್ವಹಣೆ ಮಾಡಬಹುದೇ? ರಾಜ್ಯಪಾಲರ ಕ್ರಮ ಪ್ರತೀಕಾರದ್ದೇ ಅಥವಾ ಸಂವಿಧಾನಬಾಹಿರವೇ? ಮುಖ್ಯಮಂತ್ರಿಯಿಂದ ಸಲಹೆ ಪಡೆಯದೇ ಕ್ರಮಕ್ಕೆ ಮುಂದಾದ ರಾಜ್ಯಪಾಲರ ಕ್ರಮ, ಭವಿಷ್ಯದಲ್ಲಿ ಅನೇಕ ಅಪಾಯದ ಸಂದರ್ಭಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಲೇಖಕ: ಹೈಕೋರ್ಟ್‌ನ ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT