ಗುರುವಾರ , ಮೇ 6, 2021
25 °C
ಅಪಾರ ನೈಸರ್ಗಿಕ ಸಂಪತ್ತೇ ಪರ್ವತಗಳಿಗೆ ಮುಳುವಾಗಿದೆ

ಗಿರಿಶ್ರೇಣಿ ಎಂಬ ತೆರೆದಿಟ್ಟ ‘ತಿಜೋರಿ’

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಸಾಹಸ ಪ್ರವೃತ್ತಿಯ ಜೊತೆಗೆ ಪರಿಸರ ಪ್ರೀತಿಯನ್ನೂ ಬೆಳೆಸುವ ಅಧ್ಯಯನಚಾರಣಗಳು ಯುವಕರನ್ನು ಆಕರ್ಷಿಸಿ, ಪರ್ವತಗಳ ಬಗೆಗೆ ಪ್ರೀತಿ ಹುಟ್ಟಿಸಿ ಕ್ರಿಯಾಶೀಲರನ್ನಾಗಿಸುತ್ತವೆ. ‘ಯುವಕರಿಗೆ ಪರ್ವತಗಳೆಂದರೆ ಪ್ರೀತಿ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಸಲದ ವಿಶ್ವ ಪರ್ವತ ದಿನಾಚರಣೆ (ಡಿ. 11) ನಡೆಯುತ್ತಿದೆ.

ಬೆಟ್ಟ– ಗುಡ್ಡಗಳು ಮೋಡಗಳನ್ನು ತಡೆದು ಮಳೆ ಸುರಿಸಿ, ನದಿಯುಕ್ಕಿಸಿ ಕೋಟ್ಯಂತರ ಜನ– ಜಾನುವಾರುಗಳ ಅಸ್ತಿತ್ವದ ಮುಂದುವರಿಕೆಗೆ ಕಾರಣವಾಗಿವೆ. ಆದರೆ ಗಣಿಗಾರಿಕೆ, ಜಲ-ಅಣು ವಿದ್ಯುತ್ ಯೋಜನೆ, ಪ್ರವಾಸೋದ್ಯಮ, ಚಹಾ ಬೇಸಾಯ, ಪವನ ವಿದ್ಯುತ್ ಸ್ಥಾವರ ಮತ್ತು ಅತಿಯಾದ ಚಾರಣಗಳಿಂದ ಈ ಬೆಟ್ಟ– ಗುಡ್ಡಗಳು ಮೂಲ ಸ್ವರೂಪವನ್ನು ಕಳೆದುಕೊಂಡು ದಿನೇ ದಿನೇ ಬರಡಾಗುತ್ತಿವೆ. ಉತ್ತರದ ಹಿಮಾಲಯ, ಪಶ್ಚಿಮದ ಅರಾವಳಿ ಬೆಟ್ಟ ಸಾಲು, ದಕ್ಷಿಣದ ಪಶ್ಚಿಮಘಟ್ಟವು ಅಪಾರ ನೈಸರ್ಗಿಕ ಸಂಪತ್ತಿನ ನಿಧಿಯಾಗಿರುವುದೇ ಅವುಗಳ ಶೋಷಣೆಗೆ ಕಾರಣವಾಗಿದೆ. ಔಷಧ ಸಸ್ಯಮೂಲಗಳ ಆಗರವಾಗಿರುವ ಒಡಿಶಾದ ನಿಯಮಗಿರಿ ಬೆಟ್ಟ, ಗದಗ ಜಿಲ್ಲೆಯ ಕಪ್ಪತಗುಡ್ಡವು ಯಂತ್ರಗಳ ಕೈಗೆ ಸಿಕ್ಕಿ ನರಳುತ್ತಿವೆ. ಚಾರಣಿಗರ ಅತಿಯಾದ ನೂಕುನುಗ್ಗಲಿನಿಂದ ಹಿಮಾಲಯದ ಚಾರಣ ದಾರಿಗಳು ಅತಿಹೆಚ್ಚು ಮಲಿನವಾಗಿವೆ. ಜೀವನೋಪಾಯಕ್ಕಾಗಿ ಪ್ರವಾಸೋದ್ಯಮವನ್ನೇ ನಂಬಿರುವ ಕಾಶ್ಮೀರಿಗರು ಎತ್ತರದ ಪ್ರದೇಶಗಳಿಗೆ ವಲಸೆ ಹೋದಂತೆಲ್ಲ ಅಲ್ಲಿನ ಹಿಮಕರಡಿಗಳು ನೆಲೆ ಕಳೆದುಕೊಳ್ಳುತ್ತಿವೆ.

ವಿಶ್ವದ ಪ್ರವಾಸ ವಿಧಗಳಲ್ಲಿ ಪರ್ವತ ಪ್ರವಾಸದ ಪಾಲು ಶೇ 20ರಷ್ಟಿದ್ದು, ಹೆಚ್ಚಿನ ರಂಜನೆ ನೀಡುವ ಪ್ರವಾಸ ಎಂದು ನಂಬಲಾಗಿದೆ. ಆಯಾ ಪ್ರದೇಶದ ಸರ್ಕಾರಗಳು ಆದಾಯದ ಕಾರಣದಿಂದ ಅದಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿವೆ. ಕಾಶ್ಮೀರದ ಲಿಡ್ಡರ್ ಮತ್ತು ಸಿಂಧ್ ಕಣಿವೆಗಳಲ್ಲಿ ಅನಿಯಂತ್ರಿತ ಚಾರಣ, ಆಲ್‍ಟೆರೇನ್ ವಾಹನಗಳ ಭಾರಿ ಶಬ್ದ, ಸ್ಕೈಡೂ ವಾಹನಗಳ ಬಿಡುವಿಲ್ಲದ ಓಡಾಟದಿಂದ ಅಲ್ಲಿನ ವನ್ಯಜೀವಿಗಳಿಗೆ ಆಹಾರ ಹುಡುಕಿಕೊಳ್ಳುವುದೇ ಸಮಸ್ಯೆಯಾಗಿದೆ. ಹಿಮಕರಡಿಗಳು ಹೇರಳವಾಗಿರುವ ದಚ್‍ಗಾಮ್ ರಾಷ್ಟ್ರೀಯ ಉದ್ಯಾನದಲ್ಲಿ ಸ್ಕೈಡೂಗಳು, ಜೀಪುಗಳ ಹಾವಳಿಯಿಂದ ಕರಡಿಗಳು ದಿಕ್ಕಾಪಾಲಾಗುತ್ತಿವೆ ಎಂದು ಸಂರಕ್ಷಣಾ ತಂಡಗಳು ದೂರಿವೆ.

ಸುಪ್ರೀಂ ಕೋರ್ಟ್‌ ಆದೇಶದ ಮೇಲೆ 2018ರಲ್ಲಿ ರೂಪುಗೊಂಡ ಕೇಂದ್ರೀಯ ಅಧಿಕಾರ ಮಂಡಳಿ, ರಾಜಸ್ಥಾನದ ವ್ಯಾಪ್ತಿಯ 128 ಬೆಟ್ಟಗಳಲ್ಲಿ 31 ಬೆಟ್ಟಗಳು ಪೂರ್ಣ ನೆಲಸಮವಾಗಿರುವುದನ್ನು ವರದಿ ಮಾಡಿತ್ತು. ಕೋಟ್ಯಂತರ ವರ್ಷಗಳ ಹಿಂದೆ ಇಡೀ ಗೋಳ ಹಿಮಾವೃತವಾಗಿದ್ದಾಗ ಅರಾವಳಿ ಭಾಗದಲ್ಲಿ ಭುಗಿಲೆದ್ದ ಮಲಾನಿ ಜ್ವಾಲಾಮುಖಿಯ ಸ್ಫೋಟದಿಂದ ಹರಿದ ಲಾವಾರಸವು ಭೂಮಿಯ ಮೇಲೆ ಬಹುಕೋಶ ಜೀವಿಗಳ ಹುಟ್ಟಿಗೆ ಕಾರಣವಾಯಿತು ಎಂದು ನಂಬಲಾಗಿದೆ. ಆದ್ದರಿಂದ ವಿಶ್ವದ ವಾಯುಗುಣ ನಿಯಂತ್ರಿಸುವಲ್ಲಿ ಅರಾವಳಿ ವಿಶೇಷ ಪಾತ್ರ ವಹಿಸುತ್ತದೆ. ಆದರೆ ಗ್ರಾನೈಟ್ ಕೊರೆಯುವಾಗ ಏಳುವ ದೂಳಿನಿಂದ ಶ್ವಾಸಕೋಶವನ್ನು ದುರ್ಬಲಗೊಳಿಸುವ ಸಿಲಿಕೋಸಿಸ್ ಉಂಟಾಗಿ ಕಳೆದ ಎರಡು ವರ್ಷಗಳಲ್ಲಿ ರಾಜಸ್ಥಾನದಲ್ಲಿ 700 ಜನ ಅಸುನೀಗಿದ್ದಾರೆ. ರಾಜಧಾನಿ ದೆಹಲಿಯಿಂದ ಕೇವಲ 40 ಕಿ.ಮೀ. ದೂರದಲ್ಲಿ ಗಣಿಗಾರಿಕೆ ಎಗ್ಗಿಲ್ಲದೆ ಸಾಗಿರುವುದರಿಂದ ದೆಹಲಿಯ ಗಾಳಿಯನ್ನು ವಿಷಮಯವಾಗಿಸುವಲ್ಲಿ ಅರಾವಳಿಯ ಗ್ರಾನೈಟಿನ ದೂಳೂ ಸೇರಿಕೊಂಡಿದೆ. ಗಣಿಗಾರಿಕೆಗೆ ನಿಷೇಧ ಇದ್ದರೂ ಈ ಕಾರ್ಯ ಕಳ್ಳತನದಲ್ಲಿ ಮುಂದುವರಿದಿದೆ.

ದಕ್ಷಿಣ ಭಾರತದ ‘ಜಲಶಿಖರ’ವಾದ ಪಶ್ಚಿಮಘಟ್ಟದ ಕತೆಯೇನೂ ಆಶಾದಾಯಕವಾಗಿಲ್ಲ. ತಮಿಳುನಾಡಿನಿಂದ ಗುಜರಾತಿನ ಗಡಿಯಂಚಿನವರೆಗೆ ಹಬ್ಬಿರುವ ಪಶ್ಚಿಮಘಟ್ಟವು ಗಣಿಗಾರಿಕೆ, ಸುರಂಗ ಮಾರ್ಗ, ರೈಲು ಮಾರ್ಗ, ಜಲವಿದ್ಯುತ್ ಯೋಜನೆ, ಮರಳು ಸಾಗಣೆ, ಕೈಗಾ ಅಣುಸ್ಥಾವರದಂಥ ಯೋಜನೆಗಳಿಂದ ತತ್ತರಿಸಿ ಹೋಗಿದೆ. ಒಂಬತ್ತು ರಾಷ್ಟ್ರೀಯ ಹೆದ್ದಾರಿಗಳು, 30ಕ್ಕೂ ಹೆಚ್ಚು ರಾಜ್ಯ ರಸ್ತೆಗಳು ಹಾದು ಹೋಗಿ ಇಡೀ ಘಟ್ಟವನ್ನು ಸೀಳಿ ಹಾಕಿವೆ. ಕುದುರೆಮುಖ ಬೆಟ್ಟದ ಅದಿರು ಗಣಿಗಾರಿಕೆಯಿಂದ, ಅಲ್ಲಿನ ಗಂಗಾಮೂಲದಲ್ಲಿ ಹುಟ್ಟುವ ತುಂಗಾ, ಭದ್ರಾ, ನೇತ್ರಾವತಿ ನದಿಗಳೇ ನಾಶವಾಗುವ ಅಪಾಯವಿತ್ತು. ಕಾನೂನು ಹೋರಾಟದ ಮೂಲಕ ಗಣಿಗಾರಿಕೆಗೆ ತಡೆಯೊಡ್ಡಿದ್ದರಿಂದ ನದಿಗಳು ಮೂಲ ಸ್ವರೂಪಕ್ಕೆ ಮರಳಿವೆ.

ಶೋಲಾ ಅರಣ್ಯಗಳು ನೈರುತ್ಯ ಮುಂಗಾರು ಮಳೆಯನ್ನು ಹಿಡಿದಿಟ್ಟುಕೊಂಡು, ಬಳಿಕ ನೀರನ್ನು ಚಿಲುಮೆಯಂತೆ ಚಿಮ್ಮಿಸಿ, ನದಿ- ಜಲಪಾತಗಳನ್ನು ಸೃಷ್ಟಿಸಿ, ಕೆಳಪಾತಳಿಯಲ್ಲಿ ವಾಸಿಸುವವರ ಬದುಕು ಕಟ್ಟಿಕೊಡುತ್ತಿವೆ. ಕಾಫಿ ಬೆಳೆಗಾರರ ಒತ್ತುವರಿ ಮತ್ತು ಅಭಿವೃದ್ಧಿ ಯೋಜನೆಗಳಿಂದ ಇವೂ ಅಪಾಯದಲ್ಲಿವೆ. 1986ರಲ್ಲಿ ‘ಪಶ್ಚಿಮಘಟ್ಟ ಉಳಿಸಿ’ ಎಂಬ ಬೃಹತ್ ಚಳವಳಿ ನಡೆದಿತ್ತು. ಈಗ ಕಸ್ತೂರಿ ರಂಗನ್ ಮತ್ತು ಮಾಧವ ಗಾಡ್ಗೀಳರ ವರದಿಗಳಲ್ಲಿ ಘಟ್ಟದ ರಕ್ಷಣೆಗೆ ಒತ್ತು ನೀಡಿರುವುದು ಸರ್ಕಾರಗಳಿಗೆ ನುಂಗಲಾರದ ತುತ್ತಾಗಿದೆ.

ಲೆಬನಾನಿನಲ್ಲಿ ಪೈನ್‍ಮರಗಳಿರುವ ಗಿರಿಗಳನ್ನು ಮರಳು ಮತ್ತು ಗ್ರಾನೈಟ್‍ಗಾಗಿ ಸಿಡಿಸಲಾಗುತ್ತಿದೆ. ಚಿಲಿಯ ಆಂಡಿಯನ್ ಪರ್ವತ, ಉತ್ತರ ಅಮೆರಿಕದ ಅಪಲಾಚಿಯನ್ಸ್, ತಾಂಜಾನಿಯಾದ ಕಿಲಿಮಾಂಜರೋ, ದಕ್ಷಿಣ ಅಮೆರಿಕದ ಆ್ಯಂಡಿಸ್,
ರಕ್ತಕ್ಯಾನ್ಸರ್ ಗುಣಪಡಿಸುವ ಮಡಗಾಸ್ಕರ್‌ನ ಗಿಡಮೂಲಿಕೆ ಬೆಟ್ಟಗಳು... ಹೀಗೆ ವಿಶ್ವದಾದ್ಯಂತ ಗಿರಿಶ್ರೇಣಿಗಳು ಧ್ವಂಸಗೊಳ್ಳುತ್ತಿವೆ. ವಿಶ್ವಸಂಸ್ಥೆ ಪ್ರಕಾರ, ಆಫ್ರಿಕಾದ ಗಿರಿಶ್ರೇಣಿಯ ಶೇ 67ರಷ್ಟು ಭಾಗವು ಮನುಷ್ಯರ ನಡುವಿನ ಆಂತರಿಕ ಯುದ್ಧಗಳಿಂದ ನಾಶವಾಗುವ ಭೀತಿಯಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು