ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಜೀವಶಾಸ್ತ್ರದ ಮಹತ್ವ ಅರಿಯೋಣ

ವಿವಿಧ ಜ್ಞಾನಶಾಖೆಗಳಿಗೆ ತೆರೆದುಕೊಳ್ಳುವ ಮುಕ್ತ ಅವಕಾಶಗಳನ್ನು ಮಕ್ಕಳಿಗೆ ಇಲ್ಲವಾಗಿಸುವುದೇಕೆ?
Last Updated 18 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಪರಿಚಿತರೊಬ್ಬರು ಇತ್ತೀಚೆಗೆ ಕರೆ ಮಾಡಿ, ಎಸ್‍ಎಸ್‍ಎಲ್‍ಸಿ ಮುಗಿಸಿರುವ ತಮ್ಮ ಮಗ ಪಿಯುವಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ವಿಷಯಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬ ಗೊಂದಲದಲ್ಲಿದ್ದಾನೆ, ಈ ಎರಡರಲ್ಲಿ ಯಾವುದನ್ನು ಓದುವುದು ಒಳ್ಳೆಯದು ಅಂತ ವಿಚಾರಿಸಿದರು.

ಪಿಯುವಿನಲ್ಲಿ ಈ ಎರಡು ವಿಷಯಗಳ ಬದಲು ಬಯಾಲಜಿ (ಜೀವಶಾಸ್ತ್ರ) ಆರಿಸಿಕೊಂಡಿದ್ದ ನಾನು, ಇವೆರಡಕ್ಕಿಂತ ಬಯಾಲಜಿ ಓದುವುದೇ ಉತ್ತಮವೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆನಂತರ ಕುತೂಹಲದಿಂದ ಪಿಯು ಕಂಪ್ಯೂಟರ್ ಸೈನ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ಪಠ್ಯದತ್ತ ಕಣ್ಣುಹಾಯಿಸಿದೆ. ಪಿಯು ನಂತರ ಪದವಿ ವ್ಯಾಸಂಗದ ವೇಳೆ ವಿಸ್ತೃತವಾಗಿ ಅಧ್ಯಯನ ಮಾಡಲು ಅವಕಾಶವಿರುವ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್‌ನಂತಹ ವಿಷಯಗಳನ್ನು ಪಿಯುವಿನಲ್ಲೇ ಅದೂ ಜೀವಶಾಸ್ತ್ರದಂತಹ ಅತಿ ಮಹತ್ವದ ವಿಷಯ ಬದಿಗಿರಿಸಿ ಓದಲು ವಿದ್ಯಾರ್ಥಿಗಳು ಏಕೆ ಮುಂದಾಗುತ್ತಿದ್ದಾರೆ ಎಂಬ ಪ್ರಶ್ನೆಯೂ ಕಾಡತೊಡಗಿತು.

ವಿದ್ಯಾರ್ಥಿಗಳ ಆಯ್ಕೆಯನ್ನು ಪ್ರಭಾವಿಸುತ್ತಿರುವುದು ಆಯಾ ವಿಷಯದೆಡೆಗೆ ಅವರಿಗಿರುವ ಆಸಕ್ತಿಯೋ ಅಥವಾ ಮಾರುಕಟ್ಟೆಯಲ್ಲಿ ಯಾವ ವಿಷಯಕ್ಕೆ ಹೆಚ್ಚು ಮನ್ನಣೆ ಇದೆ ಎನ್ನುವ ವ್ಯಾವಹಾರಿಕ ಕಾಳಜಿಯೋ ಎನ್ನುವುದನ್ನು ಪರಿಶೀಲಿಸುವ ಅಗತ್ಯವಿದೆ. ಒಂದು ವೇಳೆ ಪಿಯುವಿನಲ್ಲಿ ವಿಜ್ಞಾನ ಆರಿಸಿಕೊಳ್ಳುವ ವಿದ್ಯಾರ್ಥಿ ಪಿಸಿಎಂಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ) ಕಾಂಬಿನೇಷನ್ ಬದಲಿಗೆ ಪಿಸಿಎಂಸಿ (ಸಿ- ಗಣಕ ವಿಜ್ಞಾನ), ಪಿಸಿಎಂಇ (ಇ- ಎಲೆಕ್ಟ್ರಾನಿಕ್ಸ್) ಮತ್ತು ಪಿಸಿಎಂಎಸ್ (ಎಸ್‌- ಸ್ಟ್ಯಾಟಿಸ್ಟಿಕ್ಸ್) ಈ ಮೂರರಲ್ಲಿ ಒಂದನ್ನು ಆರಿಸಿಕೊಂಡರೆ, ಮುಂದೆ ಶೈಕ್ಷಣಿಕ ಪಠ್ಯದ ಭಾಗವಾಗಿ ಜೀವಶಾಸ್ತ್ರಕ್ಕೆ
ಸಂಬಂಧಿಸಿದ ವಿಷಯಗಳನ್ನು ಓದುವ ಸಾಧ್ಯತೆ ತೀರಾ ಕಡಿಮೆ. ಆದರೆ ಪಿಯುವಿನಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್‌ನಂತಹ ವಿಷಯಗಳನ್ನು ಓದದಿದ್ದರೂ ಮುಂದೆ ಪದವಿಯಲ್ಲಿ ಈ ವಿಷಯಗಳನ್ನು ವಿಸ್ತೃತವಾಗಿ ಓದಲು ಯಾವುದೇ ಅಡೆತಡೆಗಳಿಲ್ಲ.

ನಮ್ಮ ಪರಿಸರ ಮತ್ತು ನಮ್ಮದೇ ದೇಹದ ಕುರಿತಾದ ತಿಳಿವಳಿಕೆ ಹೆಚ್ಚಿಸುವ ಜೀವಶಾಸ್ತ್ರ ವಿಷಯದ ಬದಲಿಗೆ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್‌ನಂತಹ ವಿಷಯಗಳತ್ತ ಏಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಸಕ್ತಿ ತೋರುತ್ತಿದ್ದಾರೆ ಎಂಬುದನ್ನು ಅರಿಯಲು ಹೆಚ್ಚೇನೂ ತಿಣುಕಾಡಬೇಕಿಲ್ಲ. ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಡೇಟಾ ಅನಾಲಿಸಿಸ್‍ನಂತಹ ತಂತ್ರಜ್ಞಾನ ಶಾಖೆಗಳು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ದೊರೆಯಲಿವೆ, ಕಂಪ್ಯೂಟರ್ ಸೈನ್ಸ್ ಓದಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎನ್ನುವ ಭಾವನೆ ಅವರಲ್ಲಿ ಬೇರೂರತೊಡಗಿದೆ. ಹೀಗಾಗಿ, ಆದಷ್ಟೂ ಬೇಗ ಈ ವಿಷಯಗಳನ್ನು ಮಕ್ಕಳು ಕಲಿತರೆ ಅವರ ಭವಿಷ್ಯ ಉಜ್ವಲಗೊಳ್ಳಲಿದೆ ಎನ್ನುವ ನಿರೀಕ್ಷೆ ಅವರದ್ದು. ಪೋಷಕರ ಈ ಆತುರವನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲ ಸಂಸ್ಥೆಗಳು, ಪುಟ್ಟ ಮಕ್ಕಳಿಗೂ ಕೋಡಿಂಗ್ ಕಲಿಸುವ ಉತ್ಸಾಹ ತೋರುತ್ತಿರುವುದೂ ಇದೆ.

ತನ್ನ ಸುತ್ತಲಿನ ಜಗತ್ತನ್ನು ಅರಿಯಲು ಅನುವು ಮಾಡಿಕೊಡುವ ವಿವಿಧ ಜ್ಞಾನಶಾಖೆಗಳಿಗೆ ತೆರೆದುಕೊಳ್ಳುವ ಮುಕ್ತ ಅವಕಾಶಗಳನ್ನು ಮಕ್ಕಳಿಗೆ ಇಲ್ಲವಾಗಿಸುತ್ತ, ಅವರನ್ನು ಸಾಫ್ಟ್‌ವೇರ್ ಎಂಜಿನಿಯರುಗಳನ್ನಾಗಿಸುವ ಆತುರ ತೋರುವುದರಿಂದ ಸಾಧಿಸುವುದು ಏನೂ ಇಲ್ಲವೆಂಬುದನ್ನು ಅರಿಯುವ ಸಂಯಮವೂ ಕೆಲ ಪೋಷಕರಲ್ಲಿ ಇಲ್ಲವಾಗಿದೆ.

ನಾನಾ ಕಾರಣಗಳಿಂದಾಗಿ ಉತ್ಪಾದನಾ ವಲಯವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದ ಉದ್ಯೋಗ ಸೃಷ್ಟಿ ಸಾಧ್ಯವಾಗದಿರುವ ಕಾರಣಕ್ಕೆ, ಬಹುತೇಕರ ಚಿತ್ತ ಸಹಜವಾಗಿಯೇ ಸಾಫ್ಟ್‌ವೇರ್ ಕ್ಷೇತ್ರದತ್ತ ನೆಟ್ಟಿದೆ. ಹೀಗಾಗಿಯೇ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇನ್‍ಫರ್ಮೇಷನ್ ಸೈನ್ಸ್ ವಿಭಾಗಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳು ಪದವಿ ಪೂರೈಸಿ ಕೆಲಸ ಅರಸಲು ಹೊರಡುವ ಹೊತ್ತಿಗೆ ಸಾಫ್ಟ್‌ವೇರ್ ಕ್ಷೇತ್ರ ಎಷ್ಟು ಮಂದಿಗೆ ಉದ್ಯೋಗ ಒದಗಿಸಲಿದೆ ಮತ್ತು ಉದ್ಯೋಗದಾತರ ನಿರೀಕ್ಷೆಗಳು ಏನಿರಲಿವೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ.

ಸಾಫ್ಟ್‌ವೇರ್ ಎಂಜಿನಿಯರ್ ಆಗಲು ಪದವಿ ಹಂತದಲ್ಲಿ ಅದಕ್ಕೆ ಸಂಬಂಧಿಸಿದ ವಿಭಾಗ ಆರಿಸಿಕೊಂಡರೆ ಸಾಕು. ಎಂಜಿನಿಯರಿಂಗ್ ಪದವಿಯಲ್ಲಿ ಬೇರೆ ವಿಷಯಗಳನ್ನು ಓದಿ ಆನಂತರ ಅಲ್ಪಾವಧಿಯ ಕೋರ್ಸುಗಳನ್ನು ಮಾಡಿಕೊಂಡು ಸಾಫ್ಟ್‌ವೇರ್ ಕ್ಷೇತ್ರಕ್ಕೆ ಧುಮುಕುವವರೂ ಇದ್ದಾರೆ. ಹೀಗಾಗಿ ಪ್ರಾಣಿ-ಪಕ್ಷಿ, ಸಸ್ಯಸಂಕುಲದ ಕುರಿತು ತಿಳಿವಳಿಕೆ ಮೂಡಿಸುತ್ತ, ತಮ್ಮದೇ ದೇಹದಲ್ಲಾಗುವ ಸ್ಥಿತ್ಯಂತರಗಳಿಗೆ ಕಾರಣವಾಗುವ ಅಂಶಗಳನ್ನು ವಿವರಿಸುತ್ತ, ತಕ್ಕಮಟ್ಟಿಗೆ ಲೈಂಗಿಕ ಶಿಕ್ಷಣವನ್ನೂ ನೀಡುವ ಜೀವಶಾಸ್ತ್ರದ ವಿಷಯವನ್ನು ಆದ್ಯತೆಯಾಗಿ ಪರಿಗಣಿಸುವಂತೆ ಮಕ್ಕಳ ಮನವೊಲಿಸುವ ಪ್ರಯತ್ನವನ್ನು
ಪೋಷಕರು ಮಾಡಬೇಕಲ್ಲವೇ?

ಹೆಚ್ಚು ಸ್ಕೋಪ್ ಇದೆ ಎನ್ನುವ ನಿಲುವು ತಾಳಿ, ತನ್ನದೇ ದೇಹದ ಬದಲಿಗೆ ನಿರ್ಜೀವ ವಸ್ತುವೊಂದರ ದೇಹದ ಬಿಡಿಭಾಗಗಳ ಅಧ್ಯಯನಕ್ಕೆ ಮಕ್ಕಳನ್ನು ಪ್ರೇರೇಪಿಸುವುದು ಸೂಕ್ತವೇ ಎಂದು ಅವಲೋಕಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT