ಸೋಮವಾರ, ಸೆಪ್ಟೆಂಬರ್ 20, 2021
20 °C
ರಂಗಕಲಾವಿದರು ಹೊಸತನ ಹುಡುಕಲು ಪ್ರಯತ್ನಿಸಬೇಕಾಗಿದೆ

ಸಂಗತ: ರಂಗಭೂಮಿಗೆ ರಂಗಿನ ಗುಂಗು

ಮಂಜು ಸಿರಿಗೇರಿ Updated:

ಅಕ್ಷರ ಗಾತ್ರ : | |

Prajavani

ಶತಮಾನಗಳ ಹಿಂದಿನಿಂದಲೂ ರಂಗಭೂಮಿ ಕುಂಟುತ್ತಾ ಬೀಳುತ್ತಾ ಏಳುತ್ತಾ ತೆವಳುತ್ತಾ ಹಟದಿಂದ ನಡೆಯುತ್ತಾ ಬಂದಿತ್ತು. ಆದರೆ, ಕೊರೊನಾ ಸೋಂಕು ಜಗತ್ತನ್ನೆಂತೋ ಅಂತೆಯೇ ಭಾರತವನ್ನೂ ಇಲ್ಲಿನ ಜನಸಾಮಾನ್ಯರ ಬದುಕನ್ನೂ ಮುಗ್ಗರಿಸಿ ಬೀಳಿಸಿ, ಒಮ್ಮೆ ಹಿಂದಿರುಗಿ ನೋಡಿಕೊಳ್ಳುವಂತೆ, ಮುಂದೇನು... ಎಂದು ಯೋಚಿಸುವಂತೆ ಮಾಡಿದೆ. ಇದಕ್ಕೆ ತೀವ್ರವಾಗಿ ಬಲಿಯಾದ ಪ್ರಮುಖರಲ್ಲಿ ರಂಗಭೂಮಿ ಕಲಾವಿದರೂ ಸೇರಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಸ್ಥಗಿತಗೊಂಡ ಇತರ ಎಲ್ಲಾ ಪ್ರಕಾರದ ಬದುಕುಗಳು ಸೆಪ್ಟೆಂಬರ್ ಹೊತ್ತಿಗೆ ಸ್ವಲ್ಪಮಟ್ಟಿಗಾದರೂ ಸುಧಾರಿಸಿಕೊಂಡು ಮತ್ತೆ ಜೀವನೋಪಾಯ ಕಂಡುಕೊಳ್ಳುವ ಹಾದಿಯಲ್ಲಿವೆ. ಆದರೆ, ರಂಗಭೂಮಿ ಮೊದಲಿನ ಲಯ ಕಂಡುಕೊಳ್ಳಲು ಇನ್ನೂ ಮೂರ್ನಾಲ್ಕು ತಿಂಗಳು ಅಥವಾ ಅದಕ್ಕೂ ಹೆಚ್ಚು ಕಾಲ ಬೇಕಾಗಬಹುದು.

ಯಾಕೆ ಹೀಗೆ? ರಂಗಭೂಮಿ ತರಬೇತಿ ಪಡೆದವರಿಗೆ ಜೀವನೋಪಾಯ ಕಂಡುಕೊಳ್ಳುವ ಮಾರ್ಗಗಳೇ ಗೊತ್ತಿಲ್ಲವೇ? ರಂಗಶಿಕ್ಷಣ ಕೇಂದ್ರಗಳು ಅಥವಾ ರಂಗ ಸಂಸ್ಥೆಗಳು ಇವರಿಗೆಲ್ಲಾ ಬದುಕು ಕಟ್ಟಿಕೊಳ್ಳುವ ತರಬೇತಿ ನೀಡಿಲ್ಲವೇ?

ಕೊರೊನಾ ಕಾಲದಲ್ಲಿ ರಂಗಭೂಮಿಯ ಹಿರಿಯರೆಲ್ಲ ಸೇರಿ, ಸುಮಾರು 10 ಸಾವಿರ ಕಲಾವಿದರ ಪಟ್ಟಿ ಮಾಡಿಕೊಟ್ಟರೆ, ರಾಜ್ಯ ಸರ್ಕಾರ ಅದರಲ್ಲಿ 6,000ದಷ್ಟು ಕಲಾವಿದರಿಗೆ ಮಾತ್ರ ತಲಾ ₹ 2000 ನೀಡಿತು. ಇನ್ನುಳಿದವರ ಗತಿಯೇನು?

ಸರ್ಕಾರದ ಬಳಿ ಕಲಾವಿದರ ಪಟ್ಟಿಯಾಗಲೀ ದಾಖಲಾತಿಗಳಾಗಲೀ ಇಲ್ಲ. ಅಲ್ಲಿಗೆ ರಂಗ ಕಲಾವಿದರಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇಲ್ಲ ಎಂದಾಯಿತು. ರಂಗಭೂಮಿ ಕಲಾವಿದರಲ್ಲಿ, ಶಿಕ್ಷಣ ಪಡೆದವರು ಶಿಕ್ಷಣದ ಆಧಾರದ ಮೇಲೆ ಬೇರೆಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡರು. ಜಮೀನು ಇದ್ದವರಲ್ಲಿ ಕೆಲವರು ಕೃಷಿಯಲ್ಲಿ ತೊಡಗಿಸಿಕೊಂಡರು. ಬೇರೆ-ಬೇರೆ ಕೂಲಿ ಕೆಲಸಗಳನ್ನು ಕಲಿತವರು, ಕರಕುಶಲ ಕೆಲಸ ಗೊತ್ತಿದ್ದವರು, ಕುಲಕಸುಬುಗಳನ್ನು ಕಲಿತವರು ಆಯಾ ಕೆಲಸದಲ್ಲಿ ತೊಡಗಿಕೊಂಡರು. ಇನ್ನು ಕೆಲವರು ಸಿನಿಮಾ, ಧಾರಾವಾಹಿ, ರಿಯಾಲಿಟಿ ಷೋದಂತಹ ಪ್ರಕಾರಗಳಲ್ಲಿಯೂ ಕೆಲಸ ಕಂಡುಕೊಂಡರು. ಆದರೆ, ಕೇವಲ ರಂಗಭೂಮಿಯಿಂದಲೇ ತಮ್ಮ ಮತ್ತು ತಮ್ಮ ಕುಟುಂಬದ ಹೊಟ್ಟೆ ತುಂಬಿಸಬಹುದು ಎಂದು ನಂಬಿಕೊಂಡು ಕುಳಿತ, ಇನ್ಯಾವುದೇ ಕಸುಬುಗಾರಿಕೆ ಗೊತ್ತಿಲ್ಲದವರು ಕಂಗಾಲಾಗಿ ಕೂರುವಂತಾಯಿತು.

ಹಾಗಾದರೆ ರಂಗಭೂಮಿ ಕಲಿಕೆ, ರಂಗಶಿಕ್ಷಣ ಕೇಂದ್ರ, ರಂಗ ಮಾರ್ಗದರ್ಶನ ಎಲ್ಲವೂ ಇಷ್ಟು ವರ್ಷಗಳ ಕಾಲ ಭವಿಷ್ಯದ ಯೋಚನೆಯಿಲ್ಲದೆ ಏಕಮುಖವಾಗಿ ಸಾಗುತ್ತಿದ್ದವೇ? ಇವು ಕಲಾವಿದರು ಬದುಕು ಕಟ್ಟಿಕೊಳ್ಳಲು ಸೂಕ್ತವಾಗಿಲ್ಲವೇ ಅಥವಾ ಈ ಪ್ರಕಾರವನ್ನು ನಂಬಿಕೊಂಡು ಬದುಕುವುದೇ ಕಷ್ಟವೆಂದು ಇದರಿಂದ ದೂರ ಸರಿಯಬೇಕೇ? ಇಂತಹ ಎಲ್ಲಾ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.

ರಂಗಭೂಮಿ ಕಲಾವಿದರು ಎರಡು ರೂಪಗಳಲ್ಲಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬಹುದು. ಅವುಗಳೆಂದರೆ, ಸರ್ಕಾರ ಹಾಗೂ ರಂಗಶಿಕ್ಷಣ ಕೇಂದ್ರ ಅಥವಾ ರಂಗ ಸಂಸ್ಥೆಗಳು.

ಕೇಂದ್ರ ಅಥವಾ ರಾಜ್ಯ ಸರ್ಕಾರವು ಇತರ ಕ್ಷೇತ್ರಗಳವರಿಗೆ ಸ್ವಲ್ಪಮಟ್ಟಿಗಾದರೂ ಆರ್ಥಿಕವಾಗಿ ಸಹಾಯ ನೀಡಿದಂತೆ, ರಂಗಭೂಮಿ ಕಲಾವಿದರಿಗೂ 10 ವರ್ಷಗಳ ರಂಗಭೂಮಿಯ ಅನುಭವದ ಆಧಾರದ ಮೇಲೆ ಧನಸಹಾಯ ಸಿಗುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಆರ್ಥಿಕ ಭದ್ರತೆ ಒದಗಿಸಬೇಕು. ಶಾಲೆ ಮತ್ತು ಕಾಲೇಜುಗಳಲ್ಲಿ ರಂಗ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು. ಇವು ಸರ್ಕಾರದಿಂದ ಆಗಬೇಕಾಗಿರುವ ಬಹುಮುಖ್ಯ ನಿರ್ಧಾರಗಳು. ಇವೆಲ್ಲವುಗಳ ಜೊತೆಗೆ ರಂಗಭೂಮಿ ಕಲಾವಿದರು, ರಂಗಶಿಕ್ಷಣ ಕೇಂದ್ರ ಅಥವಾ ರಂಗಸಂಸ್ಥೆಗಳ ಮೂಲಕ ವೈಯಕ್ತಿಕವಾಗಿ ಬದಲಾವಣೆ ತಂದುಕೊಳ್ಳಬೇಕಾಗಿರುವುದು ಅನಿವಾರ್ಯ. ಅದಕ್ಕೆ ‘ರೀ ಥಿಂಕ್ ಥಿಯೇಟರ್’ ಎಂದು ಹೆಸರಿಡಬಹುದು.

ಜನಸಮುದಾಯದ ಜೊತೆಗೇ ರಂಗಭೂಮಿಯೂ ಇರುವುದರಿಂದ ಜನರ ಜೊತೆ ಇದ್ದುಕೊಂಡೇ ರಂಗಭೂಮಿ ಬೆಳೆಯಬೇಕಿದೆ. ಮತ್ತೆ ಅದೇ ಹಳೆಯ ಮಬ್ಬಿನಲ್ಲಿ ಮುಂದುವರಿಯುವ ಬದಲು, ಹೊಸತನವನ್ನು ಹುಡುಕಲು ಪ್ರಯತ್ನಿಸಬೇಕಾಗಿದೆ.

ರಂಗಶಿಕ್ಷಣ ಕೇಂದ್ರ ಅಥವಾ ರಂಗಸಂಸ್ಥೆ, ರಂಗತಂಡಗಳು, ತರಬೇತಿಯ ಅವಧಿಯಲ್ಲಿ ಕೇವಲ ನಾಟಕಕ್ಕೆ ಪೂರಕವಾದ ಅಂಶಗಳನ್ನಷ್ಟೇ ಕಲಿಸಿಕೊಡುವುದರ ಜೊತೆಗೆ ಯಾವ ಕಾಲಕ್ಕೂ ಬದುಕು ಕಂಡುಕೊಳ್ಳುವುದಕ್ಕೆ ಪೂರಕವಾಗಿ ಕೃಷಿ, ವ್ಯವಹಾರ ಜ್ಞಾನ, ಕರಕುಶಲ ಕಲೆ, ಪಶುಸಂಗೋಪನೆ, ಗೃಹ ಕೈಗಾರಿಕೆ, ಪ್ರವಾಸೋದ್ಯಮ, ಆರೋಗ್ಯ, ಸಿನಿಮಾ ಮಾಧ್ಯಮ, ಆನ್‌ಲೈನ್‌ ರಂಗಭೂಮಿಯಂತಹ ತರಬೇತಿಗಳನ್ನೂ ನೀಡಬೇಕು. ರಂಗ ಚಟುವಟಿಕೆಗಳ ಜೊತೆ ಜೊತೆಗೆ ಇವುಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಆಗಬೇಕು.

ಕಲಾವಿದರಾಗಲು ಬಯಸುವವರು ಮೂಲಭೂತವಾಗಿ ರಂಗಕಲೆಯ ಜೊತೆಗೆ ಇಂತಹ ಅನೇಕ ಕೌಶಲಗಳನ್ನು ಪ್ರಾಯೋಗಿಕವಾಗಿ ಕಲಿಯುವುದರಿಂದ, ರಂಗಭೂಮಿ ಮತ್ತು ಜನಸಮುದಾಯಗಳ ಜೊತೆಗೆ ಬದುಕಬಹುದು. ಇಲ್ಲವಾದಲ್ಲಿ, ಮುಂದೆ ಕೊರೊನಾದಂತಹ ಮತ್ತಷ್ಟು ಅಡಚಣೆಗಳು ಬಂದರೆ, ಅವುಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳುವುದು ಬಹಳ ಕಷ್ಟವಾಗಿಬಿಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು