ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕಾಲ ಕೆಟ್ಟಿಲ್ಲ, ಪ್ರಾಮಾಣಿಕತೆ ಉಳಿದಿದೆ!

Published 4 ಮಾರ್ಚ್ 2024, 22:17 IST
Last Updated 4 ಮಾರ್ಚ್ 2024, 22:17 IST
ಅಕ್ಷರ ಗಾತ್ರ

ಹೀಗೊಂದು ಸಂದರ್ಭ ಊಹಿಸಿಕೊಳ್ಳಿ. ನೀವು ಒಂದು ಉದ್ಯಾನಕ್ಕೆ ಹೋಗಿದ್ದೀರಿ. ಅಲ್ಲಿ ಒಂದು ಪರ್ಸ್ ಬಿದ್ದಿದೆ. ತೆರೆದು ನೋಡಿದರೆ, ಒಂದು ಕೀಲಿಕೈ, ದಿನಸಿ ಸಾಮಾನಿನ ಪಟ್ಟಿ, ₹ 500ರ ಎರಡು ನೋಟುಗಳು, ವಿಸಿಟಿಂಗ್ ಕಾರ್ಡುಗಳು, ಅದರ ಮೇಲೆ ಹೆಸರು, ಫೋನ್‌ ನಂಬರ್‌ ಇವಿಷ್ಟೂ ಇವೆ. ಆಗ ನೀವೇನು ಮಾಡುತ್ತೀರಿ?

ಸುಮಾರು 8 ವರ್ಷಗಳ ಹಿಂದೆ, ಮೂರು ವರ್ಷಗಳ ಕಾಲ ಅಂದರೆ 2013ರಿಂದ 2016ರವರೆಗೆ ಜಗತ್ತಿ
ನಾದ್ಯಂತ 17,000 ಜನರಿಗೆ ಈ ‘ಪರ್ಸ್ ಪರೀಕ್ಷೆ’ ಮಾಡಲಾಯಿತು. ಏಕೆ?! ಪ್ರಾಮಾಣಿಕತೆಯ ಬಗ್ಗೆ ಅಧ್ಯಯನ ಮಾಡುವುದೇ ಇದರ ಹಿಂದಿನ ಮುಖ್ಯ ಉದ್ದೇಶ. ಅಧ್ಯಯನದಲ್ಲಿ ಬಂದ ಫಲಿತಾಂಶಗಳು ಸಂಶೋಧಕರು, ಆರ್ಥಿಕ ತಜ್ಞರಿಗೆ ಅಚ್ಚರಿ ಮೂಡಿಸುವಂತಿದ್ದವು.

ಪ್ರಯೋಗದ ಫಲಿತಾಂಶಗಳ ಬಗ್ಗೆ ಗಮನಹರಿಸುವ ಮುನ್ನ, ಪ್ರಾಮಾಣಿಕತೆಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಸತ್ಯವನ್ನು ಹೇಳುವುದು, ಇದ್ದುದನ್ನು ಇದ್ದಂತೆ ಹೇಳುವುದು ಪ್ರಾಮಾಣಿಕತೆ ಎನಿಸಿ
ಕೊಳ್ಳುತ್ತದೆ. ಪ್ರತಿ ಸ್ವಸ್ಥ ಸಮಾಜವೂ ಪ್ರಾಮಾಣಿಕತೆಯ ತಳಹದಿಯ ಮೇಲೆಯೇ ನಿಂತಿರುತ್ತದೆ. ವ್ಯಾಪಾರ- ವಾಣಿಜ್ಯ, ಸಂಚಾರ, ಸಾರ್ವಜನಿಕ ಸೇವೆಗಳು ಇಲ್ಲೆಲ್ಲ ಪ್ರಾಮಾಣಿಕತೆಯ ನಿರೀಕ್ಷೆ, ಜೊತೆಯಲ್ಲಿಯೇ ಸಾಧ್ಯವಾಗುವ ನಂಬಿಕೆಯೂ ಮುಖ್ಯವಾದದ್ದು. ದೊಡ್ಡ ಜನಸಂಖ್ಯೆಯ ಭಾರತದಂತಹ ದೇಶದಲ್ಲಿಯೂ ಪ್ರತಿನಿತ್ಯ ಕಳ್ಳತನ, ದರೋಡೆ ಎಲ್ಲೆಡೆ ನಡೆಯುವುದಿಲ್ಲ ಎಂದರೆ, ಅದಕ್ಕೆ ಕಾರಣ ಬರೀ ಸುಭದ್ರ ಸುರಕ್ಷತಾ ವ್ಯವಸ್ಥೆಯಲ್ಲ; ಜನರಲ್ಲಿರುವ ಪ್ರಾಮಾಣಿಕತೆ ಎಂದೇ ಹೇಳಬಹುದು.

ವಾಹನದ ಕೀಲಿಕೈ ಕಳೆದುಹೋದರೆ, ಕೀ ತೆಗೆಯಲು ಮೆಕ್ಯಾನಿಕ್ಕನ್ನು ಕರೆಸುತ್ತೇವೆ. ಆತನ ಬಳಿ ಇರುವ ಅಸಂಖ್ಯಾತ ಕೀಲಿಕೈಗಳು, ಕೆಲವೊಮ್ಮೆ ಸಾದಾ ಹೇರ್ ಪಿನ್ನಿನಿಂದಲೂ ತೆಗೆಯುವ ಅವನ ಕೈಚಳಕ ನೋಡಿದರೆ, ಆತನ ಪ್ರಾಮಾಣಿಕತೆಯಷ್ಟೇ ನಮ್ಮೆಲ್ಲರ ವಾಹನಗಳನ್ನು ಕದಿಯದಿರುವುದರಿಂದ ಉಳಿಸಿರುವುದು ಎನ್ನುವುದು ನಮಗೆ ಖಾತರಿಯಾಗಿಬಿಡುತ್ತದೆ!

ಒಬ್ಬ ವ್ಯಕ್ತಿ ತನ್ನ ಸುತ್ತಲಿರುವ ಜನರನ್ನು ‘ಪ್ರಾಮಾಣಿ ಕರು’ ಎಂದು ನಂಬುವುದು, ಆ ನಂಬಿಕೆಯ ಮೇಲೆ ಜೀವನ ನಡೆಸುವುದು ಇಡೀ ಸಮಾಜಕ್ಕೆ ಮುಖ್ಯವಾಗುತ್ತದೆ. ಹಾಗಾಗಿಯೇ ಪ್ರಾಮಾಣಿಕತೆಯ ಬಗ್ಗೆ ಆರ್ಥಿಕ ತಜ್ಞರು, ಮನೋವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು ಎಲ್ಲರಿಗೂ ಕುತೂಹಲವೇ. ಆದರೆ ಪ್ರಾಮಾಣಿಕತೆಯ ಬಗೆಗಿನ ಅಧ್ಯಯನ ಅಷ್ಟು ಸುಲಭವಲ್ಲ. ತಮ್ಮನ್ನು ಮತ್ತೊಬ್ಬರು ನೋಡುತ್ತಿದ್ದಾರೆ ಎಂಬ ಅರಿವು ‘ಪ್ರಾಮಾಣಿಕತೆ’ಯನ್ನು ಸರಿಯಾಗಿ ಅಧ್ಯಯನ ಮಾಡಲು ಇರುವ ಬಹು ದೊಡ್ಡ ಅಡ್ಡಿ. ಹಾಗಾಗಿಯೇ ಅಧ್ಯಯನಗಳ ಪ್ರಯೋಗಶಾಲೆಯ ಹೊರಗೆ, ಸಹಜ ಪರಿಸರದಲ್ಲಿ ಒಂದು ಪ್ರಯೋಗವನ್ನು ಮಿಷಿಗನ್, ಉಟಾಹ್, ಜೂರಿಚ್ ವಿಶ್ವವಿದ್ಯಾಲಯ ಗಳು ನಡೆಸಿದವು. ಅವುಗಳ ಮುಂದಿದ್ದ ಪ್ರಶ್ನೆ ಒಂದೇ, ‘ಸಿಕ್ಕಿಹಾಕಿಕೊಳ್ಳುವುದು’ ಎನ್ನುವ ಅಪಾಯವಿರದಿದ್ದರೆ ತಮಗೆ ಅನುಕೂಲವಾಗುವ ರೀತಿಯಲ್ಲಿ ಜನರು ವರ್ತಿಸುತ್ತಾರೆಯೇ? ಈ ಪ್ರಯೋಗವನ್ನು ‘ಕಳೆದ ಪರ್ಸ್ ಪರೀಕ್ಷೆ’ (ದಿ ಲಾಸ್ಟ್‌ ವಾಲೆಟ್‌ ಟೆಸ್ಟ್‌) ಎಂದು ಕರೆಯಲಾಯಿತು. 13 ಸಂಶೋಧಕರು 40 ಬೇರೆ ಬೇರೆ ದೇಶಗಳ 355 ನಗರಗಳಿಗೆ ತೆರಳಿದರು. ಹೋಟೆಲ್, ಬ್ಯಾಂಕ್, ಕಚೇರಿಗಳು, ಉದ್ಯಾನ, ರಂಗಮಂದಿರ... ಹೀಗೆ ಬೇರೆ ಬೇರೆ ಸ್ಥಳಗಳಲ್ಲಿ ಈ ಪ್ರಯೋಗ ನಡೆಯಿತು.

ಅರ್ಧದಷ್ಟು ಜನರಿಗೆ ಸಿಕ್ಕ ಪರ್ಸ್‌ನಲ್ಲಿ ಬರೀ ವಿಳಾಸದ ಕಾರ್ಡು, ದಿನಸಿ ಪಟ್ಟಿ, ಕೀ ಇದ್ದರೆ, ಉಳಿದ ಅರ್ಧ ಜನರಿಗೆ ಇವುಗಳೊಂದಿಗೆ ದುಡ್ಡೂ ಸಿಗುವಂತೆ ಏರ್ಪಾಡಾಗಿತ್ತು. ದುಡ್ಡು ಇದ್ದಾಗ ಅದು ಪ್ರಾಮಾಣಿ
ಕತೆಯನ್ನು ಕೆಳಗೆಳೆಯುತ್ತದೆ ಎಂದು ಸಂಶೋಧಕರು ನಿರೀಕ್ಷಿಸಿದ್ದರು. ಆದರೆ ಅವರ ಊಹೆ ತಪ್ಪಾಗಿತ್ತು! ದುಡ್ಡಿದ್ದ ಶೇ 61ರಷ್ಟು ಪರ್ಸುಗಳು ಹಿಂತಿರುಗಿ ಬಂದಿದ್ದವು, ದುಡ್ಡಿರದ ಪರ್ಸುಗಳಲ್ಲಿ ಶೇ 46ರಷ್ಟು ಮಾತ್ರ ಹಿಂತಿರುಗಿ ಬಂದಿದ್ದವು! ಅಚ್ಚರಿಯ ಮಾತೆಂದರೆ, ವಯಸ್ಸು, ಲಿಂಗ, ದೇಶ, ಸಂಸ್ಕೃತಿಗಳ ಅಂತರವಿದ್ದೂ ಇದು ನಿಜವಾಗಿತ್ತು. ಅಷ್ಟೇ ಅಲ್ಲ ಇತರರು ನೋಡುತ್ತಿರಲಿ, ಇಲ್ಲದಿರಲಿ ಈ ಬೆಳವಣಿಗೆ ಕಂಡುಬಂದಿತ್ತು.

ಸಂಶೋಧಕರು ಕುತೂಹಲದಿಂದ ಹಣದ ಆಮಿಷದ ಮೊತ್ತವನ್ನು ಏರಿಸಿದರು. ಆದರೂ ಈ ಬಾರಿಯೂ ಅವರಿಗೆ ಆಘಾತವೇ ಆಯಿತು! ಶೇ 72ರಷ್ಟು ಜನ ಪರ್ಸ್ ಹಿಂತಿರುಗಿಸಿಬಿಟ್ಟರು! ‘ಪ್ರಾಮಾಣಿಕತೆ’ ಏರಿಬಿಟ್ಟಿತ್ತು. ಹೇಗೆ? ಅಂತರರಾಷ್ಟ್ರೀಯವಾಗಿ ನಡೆಸಿದ ಈ ಸಮೀಕ್ಷೆಗಳ ಸರಣಿಯ ಫಲಿತಾಂಶಗಳನ್ನು ವಿಜ್ಞಾನಿಗಳು ಇನ್ನೂ ಕೆದಕಿ ಕೆದಕಿ ನೋಡುತ್ತಲೇ ಇದ್ದಾರೆ. ಕೆಲವು ಸ್ವಾರಸ್ಯಕರ ಅಂಶಗಳು ಹೊರಬಿದ್ದಿವೆ. ದೊಡ್ಡ ಮೊತ್ತದ ಹಣವನ್ನು ತೆಗೆದುಕೊಳ್ಳುವುದು ‘ಕದ್ದ ಹಾಗೆ’ ಎಂಬ ಮನೋಭಾವ ಜನರಲ್ಲಿ ಆಳವಾಗಿತ್ತು. ತಮ್ಮ ‘ಇಮೇಜ್’ಗೆ ಧಕ್ಕೆ ಉಂಟಾಗಬಹುದು ಎಂಬ ಭಾವನೆಯೂ ಕಂಡುಬಂತು. ಹಾಗೆಯೇ ದುಡ್ಡು ಹೆಚ್ಚಿದಷ್ಟೂ ಅದನ್ನು ಕಳೆದುಕೊಳ್ಳುವ ವ್ಯಕ್ತಿಗೆ ಆಗುವ ತೊಂದರೆಯೂ ಹೆಚ್ಚು ಎಂದು ಜನರು ಭಾವಿಸಿದ್ದರು.

ಕಾಲ ಕೆಟ್ಟಿಲ್ಲ! ‘ಸ್ವಾರ್ಥ’ ಎನ್ನುವುದು ನಾವಂದು ಕೊಂಡಷ್ಟು ನಮ್ಮೆಲ್ಲರ ಪ್ರಮುಖ ಗುಣವಲ್ಲ! ಪ್ರಾಮಾ ಣಿಕವಾಗಿ ಇರುವುದೇ ನಮ್ಮೆಲ್ಲರ ಸಹಜ ಗುಣ. ನಮ್ಮ ಪ್ರಾಮಾಣಿಕತೆ ಇತರರಲ್ಲಿಯೂ ಪ್ರಾಮಾಣಿಕತೆಯನ್ನು ಪ್ರಚೋದಿಸಬಲ್ಲದು. ಇಡೀ ಸಮಾಜ ಪ್ರಾಮಾಣಿಕವಾದರೆ ಅದರ ಲಾಭ ಎಲ್ಲರಿಗೆ. ಆಗ ನೆಮ್ಮದಿಯ ಜೀವನ ನಮ್ಮದೂ ಹೌದು, ಇತರರದ್ದೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT