ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ರಸ್ತೆಉಬ್ಬು: ಅಪಾಯವೇ ಹೆಚ್ಚು!

Last Updated 26 ಡಿಸೆಂಬರ್ 2022, 7:30 IST
ಅಕ್ಷರ ಗಾತ್ರ

ಬೆಂಗಳೂರಿನ ನಲವತ್ತೆಂಟು ವರ್ಷ ವಯಸ್ಸಿನ ಉದ್ಯಮಿಯೊಬ್ಬರು ಇತ್ತೀಚೆಗೆ ಸಾವನ್ನಪ್ಪಿದರು. ಕಾರಣ, ವಾಹನ ಚಲಾಯಿಸುವಾಗ ಹಂಪ್ಸ್ ಅಂದರೆ ರಸ್ತೆ ಉಬ್ಬಿನಿಂದ ಉರುಳಿ ಬಿದ್ದು ತಲೆಗೆ ಆದ ಗಂಭೀರ ಪೆಟ್ಟು. ಅತಿ ವೇಗದ ಚಾಲನೆ ಮತ್ತು ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಅದರೊಂದಿಗೇ ಈ ರಸ್ತೆಉಬ್ಬುಗಳ ಪಾತ್ರವನ್ನೂ ಕಡೆಗಣಿಸುವಂತಿಲ್ಲ. ಏಕೆಂದರೆ ಬೆಂಗಳೂರು ಮಾತ್ರವಲ್ಲ, ಇತರ ಪ್ರಮುಖ ನಗರ, ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ದಿನವೂ ರಸ್ತೆಉಬ್ಬುಗಳಿಂದ ಸಾವು-ನೋವು ಸಂಭವಿಸುತ್ತಲೇ ಇವೆ.

ಅತಿವೇಗವನ್ನು ನಿಯಂತ್ರಿಸಿ ಆ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು, ರಸ್ತೆಸುರಕ್ಷತೆ ನಿಯಮ ಪಾಲಿಸಲು ರೂಪಿತವಾದದ್ದು ಈ ರಸ್ತೆಉಬ್ಬು. ಆದರೆ ವಿನ್ಯಾಸ, ಹಾಕಬೇಕಾದ ಜಾಗದ ಆಯ್ಕೆ ಮತ್ತು ಕಳಪೆ ನಿರ್ಮಾಣದಿಂದ ರಸ್ತೆಉಬ್ಬುಗಳೇ ಅಪಾಯಕಾರಿಯಾಗಿರುವುದು ವಿಪರ್ಯಾಸವೇ ಸರಿ. ಹಾಗಾದರೆ ಇವುಗಳಿಗೆ ಮಾನದಂಡವೇ ಇಲ್ಲವೇ? ಖಂಡಿತವಾಗಿ ಇದೆ!

ವಾಹನಗಳ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕಾಗಿ ಇಂಡಿಯನ್ ರೋಡ್ ಕಾಂಗ್ರೆಸ್ ಸ್ಪಷ್ಟ ನಿರ್ದೇಶನವನ್ನು ನೀಡಿದೆ. ರಸ್ತೆಉಬ್ಬುಗಳ ಎತ್ತರ 0.10 ಮೀಟರ್‌, ಅಗಲ 3.7 ಮೀಟರ್‌ ಇರಬೇಕು. ಚಾಲನೆಯಲ್ಲಿರುವ ವಾಹನದ ವೇಗವನ್ನು ಗಂಟೆಗೆ 25 ಕಿ.ಮೀ.ಗಿಂತ ತಗ್ಗಿಸುವಂತೆ ಇರಬಾರದು. ಹಾಗೆಯೇ ಇವುಗಳನ್ನು ಸಣ್ಣ ರಸ್ತೆ ಮುಖ್ಯರಸ್ತೆಗಳು ಸೇರುವಲ್ಲಿ, ದಿಢೀರ್ ತಿರುವುಗಳು ಇರುವ ಕಡೆ, ಅಪಘಾತ ವಲಯಗಳು, ಜನವಸತಿ ಹೆಚ್ಚಿರುವ ನಿರ್ದಿಷ್ಟ ಪ್ರದೇಶಗಳು, ಶಾಲೆ-ಕಾಲೇಜುಗಳು ಮತ್ತು ಆಸ್ಪತ್ರೆಗಳ ಬಳಿ ನಿರ್ಮಿಸಲು ಅನುಮತಿ ಇದೆ. ಈ ಉಬ್ಬುಗಳು ನಿರ್ದಿಷ್ಟ ಆಕಾರದಲ್ಲಿದ್ದು ಅವುಗಳಿಗೆ ಕಪ್ಪು– ಬಿಳಿ ಅಥವಾ ಕಪ್ಪು– ಹಳದಿ ಬಣ್ಣವನ್ನು ‘ವಿ’ ಆಕಾರದಲ್ಲಿ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಬಳಿದಿರಬೇಕು. ಸೂಚನಾ ಫಲಕ ಹಾಗೂ ಗುರುತುಗಳಿಂದ ಇವುಗಳನ್ನು ಸೂಚಿಸಬೇಕು. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರಭಾವಿ ವ್ಯಕ್ತಿಗಳು, ವಾಣಿಜ್ಯ ಸಂಕೀರ್ಣಗಳವರುತಮ್ಮ ಅನುಕೂಲಕ್ಕೆ ತಕ್ಕಂತೆ ರಸ್ತೆಉಬ್ಬುಗಳನ್ನು ನಿರ್ಮಿಸುತ್ತಿದ್ದಾರೆ.

ಇಂಥ ರಸ್ತೆಉಬ್ಬುಗಳು ಖಂಡಿತಾ ಅಪಾಯಕಾರಿ. ಅವೈಜ್ಞಾನಿಕವಾದ ಈ ರಸ್ತೆಉಬ್ಬುಗಳಿಂದ ಬೆನ್ನುಹುರಿಗೆ ಪೆಟ್ಟು, ಕತ್ತುನೋವು, ಬೆನ್ನುನೋವು, ಸ್ಲಿಪ್ ಡಿಸ್ಕ್‌ನಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಸ್ಪೀಡಿಗೆ ಬ್ರೇಕ್ ಹಾಕುವ ಬದಲು ಬದುಕಿಗೇ ಬ್ರೇಕ್ ಹಾಕುತ್ತಿವೆ ಈ ರಸ್ತೆಉಬ್ಬುಗಳು. ಸಣ್ಣ ಗುಡ್ಡವನ್ನೇ ಹತ್ತಿದ ಅನುಭವ ನೀಡುವ ಈಗಿರುವ ರಸ್ತೆಉಬ್ಬುಗಳು ವಾಹನಗಳ ಕೆಳಭಾಗಕ್ಕೆ ಬಹಳಷ್ಟು ಹಾನಿಯನ್ನು ಉಂಟುಮಾಡುತ್ತವೆ. ಬಳಕೆಯಾಗುವ ಇಂಧನ ಪ್ರಮಾಣವೂ ಹೆಚ್ಚು.

ಕೆಲ ವರ್ಷಗಳ ಹಿಂದೆ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಂಡು, ಬೆಂಗಳೂರಿನಲ್ಲಿ ಇದ್ದ ಶೇಕಡ 60ರಷ್ಟು ಅವೈಜ್ಞಾನಿಕವಾದ ರಸ್ತೆಉಬ್ಬುಗಳನ್ನು ಮಾರ್ಪಡಿಸಲಾಗಿತ್ತು ಅಥವಾ ಸಂಪೂರ್ಣ ತೆಗೆಯಲಾಗಿತ್ತು. ಆದರೆ ಆಗಿಂದಾಗ್ಗೆ ಅಲ್ಲಲ್ಲಿ ಮತ್ತೆ ಹೊಸ ರಸ್ತೆಉಬ್ಬುಗಳು ರಾತ್ರೋರಾತ್ರಿ ನಿರ್ಮಾಣವಾಗುತ್ತಿವೆ. ಯಾರು, ಏಕೆ ಇವುಗಳನ್ನು ನಿರ್ಮಿಸಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿಯೇ ಇಲ್ಲ. ಆದರೆ ಸಾರ್ವಜನಿಕರಲ್ಲಿ ಈ ರಸ್ತೆಉಬ್ಬುಗಳ ಬಗ್ಗೆ ಅಸಮಾಧಾನವಿದ್ದರೂ ಪ್ರಾಣವನ್ನೇ ತೆಗೆಯುವ ಯಮದೂತರಂತೆ ಗಾಡಿ ಓಡಿಸುವ ದ್ವಿಚಕ್ರ ವಾಹನಗಳ ಸವಾರರ ಬಗ್ಗೆ ಭಯ ಬಹಳಷ್ಟಿದೆ. ಸರ್ಕಾರಿ ವ್ಯವಸ್ಥೆಯ ಬಗ್ಗೆ ಬೇಸರವಿದೆ.

‘ವೇಗ ತಗ್ಗಿಸಲು ವೈಜ್ಞಾನಿಕವಾಗಿ ರಸ್ತೆಉಬ್ಬು ಗಳನ್ನು ನಿರ್ಮಿಸಬೇಕು ನಿಜ. ಆದರೆ ಆ ಕೆಲಸಕ್ಕೆ ತಗಲುವ ಸಮಯದ ಬಗ್ಗೆ ಅಂದಾಜಿದೆಯೇ? ಸರ್ಕಾರದ ಪ್ರತಿನಿಧಿಗಳಿಗೆ ದೂರು ಸಲ್ಲಿಸಿದರೆ ಅರ್ಜಿ ತನ್ನಿ ಎಂಬ ಉತ್ತರ, ಅರ್ಜಿ ಸಲ್ಲಿಸಿದರೆ ನೋಡೋಣ ಎಂಬ ಪ್ರತಿಕ್ರಿಯೆ, ನಂತರ ಬೇರೆ ಬೇರೆ ವಿಭಾಗಗಳಿಗೆ ಅಲೆದಾಟ, ಕಡೆಗೆ ರಸ್ತೆಉಬ್ಬು ಹಾಕಿದರೂ ಕಳಪೆ ಕಾಮಗಾರಿ, ಇದೆಲ್ಲಕ್ಕಿಂತ ನಾವೇ ದುಡ್ಡು ಹಾಕಿ ನಿರ್ಮಿಸಿಕೊಂಡು ಒಂದಿಷ್ಟು ನೆಮ್ಮದಿ ಪಡೆಯುತ್ತೇವೆ. ಹೇಗಿದ್ದರೂ ಹೇಳುವವರು, ಕೇಳುವವರು ಯಾರೂ ಇಲ್ಲ’ ಎಂಬ ಉತ್ತರ ಸಿಗುತ್ತದೆ. ಈ ಧೋರಣೆಯಿಂದ ಪ್ರತೀ ಬೀದಿಯಲ್ಲೂ ಹತ್ತಾರು ರಸ್ತೆಉಬ್ಬುಗಳು ಸಾಮಾನ್ಯವಾಗಿವೆ!

ಪ್ರತಿಬಾರಿ ವಿಧಾನಮಂಡಲದ ಅಧಿವೇಶನದಲ್ಲಿ ರಸ್ತೆಉಬ್ಬುಗಳ ವಿಷಯ ಸಾವು–ನೋವಿನ ಅಂಕಿ-ಅಂಶದೊಂದಿಗೆ ಚರ್ಚೆಯಾಗುತ್ತದೆ. ಎಲ್ಲವನ್ನೂ ದುರಸ್ತಿ ಮಾಡುವ ಭರವಸೆಯೂ ಸಿಗುತ್ತದೆ. ಕೆಲಮಟ್ಟಿಗೆ ಅದು ಈಡೇರುತ್ತದೆ ಎಂಬುದೂ ನಿಜವೇ. ಆದರೆ ಮತ್ತೆ ಅಲ್ಲಲ್ಲಿ ರಸ್ತೆಉಬ್ಬುಗಳು ಏಳುತ್ತವೆ, ಯಥಾಪ್ರಕಾರ ಜನರು ಬೀಳುತ್ತಾರೆ! ಅಂದರೆ ಇವುಗಳ ನಿರ್ಮಾಣ ಮತ್ತು ನಿರ್ವಹಣೆ ಬಗ್ಗೆ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿಲ್ಲ. ಇದೆಲ್ಲದರ ಮಧ್ಯೆ ಹೆಚ್ಚುತ್ತಿರುವ ಅಪಘಾತಗಳ ತಡೆಗೆ ಹಾಗೂ ಸುಗಮಸಂಚಾರದ ಉದ್ದೇಶದಿಂದ ರಾಜಧಾನಿಯ ವಿವಿಧ ಪ್ರದೇಶಗಳ ರಸ್ತೆಗಳಲ್ಲಿ ಐದುನೂರಕ್ಕೂ ಹೆಚ್ಚು ರಸ್ತೆಉಬ್ಬುಗಳನ್ನು ಹಾಕುವಂತೆ ಸಂಚಾರ ‍ಪೊಲೀಸರು ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಅದರೊಂದಿಗೇ ಬೆಂಗಳೂರಿನಲ್ಲಿ ನಾಲ್ಕುನೂರಕ್ಕೂ ಹೆಚ್ಚು ಅವೈಜ್ಞಾನಿಕ ರಸ್ತೆಉಬ್ಬುಗಳು ಇದ್ದು, ಅವುಗಳನ್ನು ಬದಲಾಯಿಸು ವಂತೆಯೂ ಸೂಚಿಸಿದ್ದಾರೆ.

ಅವೈಜ್ಞಾನಿಕ ರಸ್ತೆಉಬ್ಬುಗಳನ್ನು ತೆಗೆಯಲಿ, ಮಾರ್ಗದರ್ಶಕ ಮಾನದಂಡಗಳಿಗೆ ಅನುಗುಣವಾದವು ಹೆಚ್ಚಲಿ. ಅದರೊಂದಿಗೇ ವಾಹನ ಚಾಲಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವುದೂ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸುವುದೂ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT