ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಭಾಷಾಂತರ: ಗುಣಮಟ್ಟ ಸುಧಾರಿಸಲಿ

Published : 10 ಸೆಪ್ಟೆಂಬರ್ 2024, 23:15 IST
Last Updated : 10 ಸೆಪ್ಟೆಂಬರ್ 2024, 23:15 IST
ಫಾಲೋ ಮಾಡಿ
Comments

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಹಳಷ್ಟು ಚರ್ಚೆಗೆ ಗ್ರಾಸವಾಯಿತು. ಕನ್ನಡದಲ್ಲಿದ್ದ ಪ್ರಶ್ನೆಗಳಲ್ಲಿ ಗಮನಾರ್ಹ ಪ್ರಮಾಣದ ತಪ್ಪುಗಳು ಇರುವುದು ಖಾತರಿಯಾದ ನಂತರ, ಇದೀಗ ಮರುಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಇಡೀ ಪ್ರಕರಣ ಅನುವಾದದ ಗುಣಮಟ್ಟದ ಕುರಿತು ಚರ್ಚೆ ಏರ್ಪಡಲು ಕಾರಣವಾಯಿತು. ತಪ್ಪಿಲ್ಲದ ಹಾಗೆ ಮತ್ತು ಸರಾಗವಾಗಿ ಅರ್ಥೈಸಿಕೊಳ್ಳುವ ರೀತಿಯಲ್ಲಿ ಭಾಷಾಂತರ ಕಾರ್ಯ ನಡೆಯದೇ ಹೋದಲ್ಲಿ ಆಗಬಹುದಾದ ಅಪಸವ್ಯಗಳಿಗೆ ಈ ಪ್ರಕರಣ ಕನ್ನಡಿ ಹಿಡಿದಿದೆ.

ಕಿರುತೆರೆ, ಸಿನಿಮಾ, ಜಾಹೀರಾತು, ಸಾಹಿತ್ಯ, ಶಿಕ್ಷಣ ಒಳಗೊಂಡಂತೆ ನಾನಾ ಕ್ಷೇತ್ರಗಳಲ್ಲಿ ಭಾಷಾಂತರ ಕಾರ್ಯ ಬಹಳಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ನೇರವಾಗಿ ಕನ್ನಡದಲ್ಲಿಯೇ ರಚಿಸಿದ ಪಠ್ಯ ಮತ್ತು ಮಾಹಿತಿ ಕೂಡ ಸುಲಭವಾಗಿ ಗ್ರಹಿಸಲು ಸಾಧ್ಯವಾಗದ ರೀತಿಯಲ್ಲಿ ಇರುವುದನ್ನು ಹಲವೆಡೆ ಗಮನಿಸಬಹುದು. ಸರ್ಕಾರಿ ದಾಖಲೆಗಳಲ್ಲಿ, ಬಳಕೆದಾರರು ತುಂಬಬೇಕಿರುವ ಅರ್ಜಿ ನಮೂನೆಗಳಲ್ಲಿ, ಉತ್ಪನ್ನಗಳ ಬಳಕೆಗೆ ಸಂಬಂಧಿಸಿದ ಸೂಚನೆಗಳಲ್ಲಿ ಬಳಸುವ ಕನ್ನಡವನ್ನು ಅರ್ಥೈಸಿಕೊಳ್ಳಲು ಕೂಡ ಜನಸಾಮಾನ್ಯರು ತಿಣುಕಾಡಬೇಕಾದ ಪರಿಸ್ಥಿತಿ ಇದೆ.

ಪರೀಕ್ಷೆಯ ಎಡವಟ್ಟಿನ ಪ್ರಕರಣ ಕನ್ನಡದಲ್ಲಿ ನಡೆಯುತ್ತಿರುವ ಭಾಷಾಂತರ ಪ್ರಕ್ರಿಯೆಯ ಗುಣಮಟ್ಟ ಸುಧಾರಿಸುವ ಅಗತ್ಯದತ್ತಲೂ ಬೆಟ್ಟು ಮಾಡಿದೆ. ಗೂಗಲ್ ಟ್ರಾನ್ಸ್‌ಲೇಟರ್ ಸೇರಿದಂತೆ ತಂತ್ರಾಂಶಗಳನ್ನು ಬಳಸಿ ಭಾಷಾಂತರ ಮಾಡುವ ಕೆಲಸ ಅಗಾಧ ಪ್ರಮಾಣದಲ್ಲಿ ನಡೆಯುತ್ತಿದೆ. ಸದ್ಯದ ಮಟ್ಟಿಗೆ ಕನ್ನಡದಲ್ಲಿ ಯಾಂತ್ರಿಕ ಭಾಷಾಂತರದ (ಮಷೀನ್ ಟ್ರಾನ್ಸ್‌ಲೇಷನ್) ಗುಣಮಟ್ಟ ಕಳಪೆಯಾಗಿರುವುದರಿಂದ ಅದನ್ನು ಬಳಸಿ ಮಾಡುವ ಅನುವಾದದಲ್ಲಿ ಬಹಳಷ್ಟು ಎಡವಟ್ಟುಗಳು ಸಂಭವಿಸುತ್ತಿವೆ. ನುರಿತ ಅನುವಾದಕರಿಂದ ಭಾಷಾಂತರ ಮಾಡಿಸಿದರೆ ಮಾತ್ರ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ ಎನ್ನುವ ಪರಿಸ್ಥಿತಿ ಇದೆ.

ಅಂತರ್ಜಾಲದ ಮೇಲೆ ಹೆಚ್ಚು ಅವಲಂಬಿತರಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಕನ್ನಡದ ಬಳಕೆಯನ್ನು ವಿಸ್ತರಿಸುವಲ್ಲಿ ಯಾಂತ್ರಿಕ ಭಾಷಾಂತರ ಮಹತ್ವದ ಪಾತ್ರ ನಿರ್ವಹಿಸಲಿದೆ. ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಬಳಕೆ ಮತ್ತು ಬೆಳವಣಿಗೆ ಹೆಚ್ಚಿಸುವ ದಿಸೆಯಲ್ಲಿ ಯಾಂತ್ರಿಕ ಭಾಷಾಂತರ ನಿರ್ವಹಿಸಬಹುದಾದ ಗಮನಾರ್ಹ ಪಾತ್ರದತ್ತಲೂ ನಮ್ಮ ಚಿತ್ತ ಹರಿಯಬೇಕಿದೆ.

ಯಾವುದಾದರೂ ಪಠ್ಯ ಅಥವಾ ಮಾಹಿತಿಯನ್ನು ವಿವಿಧ ಭಾಷೆಗಳಿಗೆ ಅನುವಾದಿಸುವ ಅಗತ್ಯ ಎದುರಾದಾಗ, ಮೊದಲಿಗೆ ಯಾಂತ್ರಿಕ ಭಾಷಾಂತರದ ಮೊರೆ ಹೋಗಿ ಆನಂತರ ಅನುವಾದದ ಗುಣಮಟ್ಟ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಮಾಡಲು ಅನುವಾದಕರ ನೆರವು ಪಡೆಯುವ ಪರಿಪಾಟ ಸದ್ಯ ಹೆಚ್ಚು ಚಾಲ್ತಿಯಲ್ಲಿದೆ. ಒಕ್ಕೂಟ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಅನುದಾನ ಪಡೆದು ದೇಶದ ಪ್ರತಿಷ್ಠಿತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಐಐಟಿಗಳು ಮತ್ತು ಐಐಎಸ್‍ಸಿ 2003ರಿಂದ ಎನ್‍ಪಿಟಿಇಎಲ್ (ತಂತ್ರಜ್ಞಾನ ಆಧಾರಿತ ಕಲಿಕೆಯ ರಾಷ್ಟ್ರೀಯ ಕಾರ್ಯಕ್ರಮ) ಅಡಿ ಆನ್‍ಲೈನ್ ಕೋರ್ಸ್‌ಗಳನ್ನು ನಡೆಸುತ್ತಾ ಬಂದಿವೆ. ಸದ್ಯ ಎನ್‍ಪಿಟಿಇಎಲ್ ಪ್ರತಿ ಸೆಮಿಸ್ಟರ್‌ನಲ್ಲೂ 22 ವಿಭಾಗಗಳಲ್ಲಿ 600ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಆಸಕ್ತ ಕಲಿಕಾರ್ಥಿಗಳಿಗೆ ಲಭ್ಯವಿರಿಸುತ್ತಿದೆ. ಇದುವರೆಗೂ ಬಹುತೇಕ ಇಂಗ್ಲಿಷ್ ಭಾಷೆಯಲ್ಲಷ್ಟೇ ಲಭ್ಯವಿದ್ದ ಕಲಿಕಾ ಸಂಪನ್ಮೂಲಗಳನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಒಳಗೊಂಡಂತೆ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಭಾರತೀಯ ತಂತ್ರಜ್ಞಾನ ಸಂಸ್ಥೆ- ಮದ್ರಾಸ್ (ಐಐಟಿ-ಮದ್ರಾಸ್) ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಭಾಷಾಂತರ ಪ್ರಕ್ರಿಯೆಯಲ್ಲಿ ಕೂಡ ಯಾಂತ್ರಿಕ ಭಾಷಾಂತರಕ್ಕೆ ಒತ್ತು ನೀಡಲಾಗಿದೆ. ಈ ಯೋಜನೆಯ ಸಾಕಾರಕ್ಕಾಗಿ ಅಭಿವೃದ್ಧಿಪಡಿಸಿರುವ ‘ಟ್ರಾನ್ಸ್‌ಲಿಂಗ್ವ’ ಮತ್ತು ‘ಚಿತ್ರಲೇಖ’ ಎಂಬ ಎರಡು ತಂತ್ರಾಂಶಗಳಲ್ಲಿ ಮೊದಲಿಗೆ ಯಾಂತ್ರಿಕ ಭಾಷಾಂತರದ ಮೂಲಕ ಪ್ರಾದೇಶಿಕ ಭಾಷೆಗಳಿಗೆ ಪಠ್ಯವನ್ನು ಅನುವಾದಿಸಲಾಗುತ್ತಿದೆ. ಆನಂತರ ಅನುವಾದ ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿ, ಸೂಕ್ತ ತಿದ್ದುಪಡಿ ಮಾಡಲು ಮಾತ್ರ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆ ಎರಡೂ ತಿಳಿದಿರುವ ವಿಷಯ ತಜ್ಞರ ಮೊರೆ ಹೋಗಲಾಗುತ್ತಿದೆ. ಈ ಯೋಜನೆಯ ಭಾಗವಾಗಿರುವವರ ಪೈಕಿ ಬಹುತೇಕ ಮಂದಿ ನುರಿತ ಅನುವಾದಕರಲ್ಲ. ಇಂಗ್ಲಿಷ್ ಮತ್ತು ನಿರ್ದಿಷ್ಟ ಪ್ರಾದೇಶಿಕ ಭಾಷೆಯಲ್ಲಿ ಓದಲು ಮತ್ತು ಬರೆಯಲು ಬಲ್ಲವರಷ್ಟೇ.

ಯಾಂತ್ರಿಕ ಭಾಷಾಂತರದ ಗುಣಮಟ್ಟ ಸುಧಾರಣೆಯಾದರೆ, ಇಂತಹ ಯೋಜನೆಗಳ ಮೂಲಕ ನಡೆಯುವ ಅನುವಾದದ ಗುಣಮಟ್ಟದಲ್ಲೂ ಗಮನಾರ್ಹ ಸುಧಾರಣೆಯಾಗಲಿದೆ. ವಿವಿಧ ಭಾಷೆಗಳಲ್ಲಿ ಸೇವೆ ಒದಗಿಸಲು ಕೂಡ ಕೃತಕ ಬುದ್ಧಿಮತ್ತೆಯನ್ನು ಗಣನೀಯವಾಗಿ ಬಳಸಲಾಗುತ್ತಿದೆ. ಹೀಗಾಗಿ, ಯಾಂತ್ರಿಕ ಭಾಷಾಂತರದ ಗುಣಮಟ್ಟ ಸುಧಾರಣೆಗೆ ಇರುವ ಸವಾಲುಗಳನ್ನು ಗುರುತಿಸಿ, ಅವುಗಳನ್ನು ನಿವಾರಿಸಲು ಕೈಗೊಳ್ಳಬೇಕಿರುವ ಕ್ರಮಗಳತ್ತ ಸರ್ಕಾರ ಹಾಗೂ ಕನ್ನಡಪರ ಕೆಲಸಗಳಲ್ಲಿ ತೊಡಗಿಕೊಂಡಿರುವ ತಂತ್ರಜ್ಞರು ಒಟ್ಟಾಗಿ ಕೆಲಸ ಮಾಡಬೇಕಿದೆ.

ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ಸಲುವಾಗಿ ಅಸ್ತಿತ್ವದಲ್ಲಿರುವ ಸಂಸ್ಥೆಗಳು ಕೂಡ ಈ ದಿಸೆಯಲ್ಲಿ ಗಮನಹರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT