ಬುಧವಾರ, ಮಾರ್ಚ್ 3, 2021
18 °C
ಮಕ್ಕಳ ಪ್ರಯಾಣದ ಪಡಿಪಾಟಲನ್ನು ತಗ್ಗಿಸಲು ಸಹಾಯವಾಣಿ ತೆರೆಯಬೇಕಾಗಿದೆ

ವಿದ್ಯಾರ್ಥಿಗಳಿಗೆ ಸಾರಿಗೆ ಸವಾಲು

ಎಚ್.ಕೆ.ಶರತ್ Updated:

ಅಕ್ಷರ ಗಾತ್ರ : | |

Prajavani

ಪಿಯು ಕಾಲೇಜು ವಿದ್ಯಾರ್ಥಿನಿಯರು ಕೆಎಸ್‍ಆರ್‌ಟಿಸಿ ಅಧಿಕಾರಿಯೊಬ್ಬರಿಗೆ ಬರೆದ ಮನವಿಪತ್ರ ಸರಿ ಇದೆಯೇ ಎಂದು ಒಮ್ಮೆ ಓದಿ ಅಭಿಪ್ರಾಯ ಹೇಳುವಂತೆ ಇತ್ತೀಚೆಗೆ ಸ್ನೇಹಿತರೊಬ್ಬರು ಕೋರಿದರು. ಅದು ಹಾಸನ- ಹಳೇಬೀಡು ಮಾರ್ಗದಲ್ಲಿ ಚಲಿಸುವ ಬಸ್‍ಗಳನ್ನು ಸಾಲಗಾಮೆ ರಸ್ತೆಯ ಎಂಸಿಇ ಸ್ಟಾಪ್‍ನಲ್ಲಿ ನಿಲ್ಲಿಸದೇ ಹೋಗುತ್ತಿರುವುದರಿಂದ ತಮಗಾಗುತ್ತಿರುವ ತೊಂದರೆ ಕುರಿತು ತಿಳಿಸುವ ಮತ್ತು ಚಾಲಕರಿಗೆ ಈ ಸ್ಟಾಪ್‍ನಲ್ಲಿ ಬಸ್ ನಿಲುಗಡೆ ಮಾಡುವಂತೆ ಸೂಚಿಸಲು ಕೋರಿ ಬರೆದ ಪತ್ರವಾಗಿತ್ತು.

ಪ್ರತಿದಿನ ಸಂಜೆ ಕಾಲೇಜು ಮುಗಿದ ನಂತರ ವಿದ್ಯಾರ್ಥಿನಿಯರು ತಮ್ಮ ಮನೆ ಎದುರು ಬಸ್‍ಗಾಗಿ ಗಂಟೆಗಟ್ಟಲೆ ಕಾಯುವ ಮತ್ತು ಕೆಲವೊಮ್ಮೆ ಮೊದಲೇ ಭರ್ತಿಯಾಗಿ ಬರುವ ಬಸ್‍ಗಳನ್ನು ನಿಲ್ಲಿಸದ ಕಾರಣಕ್ಕೆ ಕತ್ತಲಾದ ನಂತರವಷ್ಟೇ ಊರು ತಲುಪುವುದನ್ನು ಗಮನಿಸಿದ್ದ ಸ್ನೇಹಿತ, ತಮಗೆ ಪರಿಚಯವಿರುವ ಕೆಎಸ್‍ಆರ್‌ಟಿಸಿ ಅಧಿಕಾರಿಗೆ ಮಕ್ಕಳಿಂದ ಮನವಿಪತ್ರ ಬರೆಸಿ ಸಮಸ್ಯೆ ಪರಿಹರಿಸಲು ಮುಂದಾಗಿದ್ದರು. ಒಂದು ವೇಳೆ ಮನವಿಪತ್ರ ನೀಡಿದ ನಂತರವೂ ಸಮಸ್ಯೆ ಬಗೆಹರಿಯದೇ ಹೋದರೆ ಮಕ್ಕಳೊಂದಿಗೆ ಸೇರಿ ರಸ್ತೆತಡೆ ನಡೆಸುವ ಮೂಲಕ ಸಂಬಂಧಪಟ್ಟವರ ಮೇಲೆ ಒತ್ತಡ ಹೇರುವ ಕುರಿತೂ ಚಿಂತಿಸುತ್ತಿರುವುದಾಗಿ
ಹೇಳಿದರು.

ಗ್ರಾಮಾಂತರ ಪ್ರದೇಶದಿಂದ ಪ್ರತಿನಿತ್ಯ ಪಟ್ಟಣದ ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳು, ನಿಗದಿತ ಸಮಯಕ್ಕೆ ಬಸ್‍ಗಳು ಬಾರದಿರುವ ಕಾರಣಕ್ಕೆ, ಬಂದರೂ ತಮ್ಮನ್ನು ಹತ್ತಿಸಿ ಕೊಳ್ಳಲು ಹಿಂದೆ ಮುಂದೆ ನೋಡುವ ಚಾಲಕರು-ನಿರ್ವಾಹಕರ ಧೋರಣೆಯಿಂದ ಸಮಸ್ಯೆ ಎದುರಿಸುವುದು ಸಾಮಾನ್ಯ ವಿದ್ಯಮಾನವೇ ಆಗಿ ಹೋಗಿದೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ಸಮೀಪ ಹೀಗೆ ವಿದ್ಯಾರ್ಥಿಯನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಇತ್ತೀಚೆಗಷ್ಟೆ ತರಾಟೆಗೆ ತೆಗೆದುಕೊಂಡದ್ದು ವರದಿಯಾಗಿತ್ತು. ಆದರೆ ಇದು ವ್ಯಕ್ತಿಗತ ನೆಲೆಯಲ್ಲಿ ಬಗೆಹರಿಸ ಬಹುದಾದ ಸಮಸ್ಯೆಯಾಗಿ ಉಳಿದಿಲ್ಲ. ಬಸ್‌ಪಾಸ್ ಮಾಡಿಸಿಕೊಂಡು ದಿನನಿತ್ಯ ನಿರ್ದಿಷ್ಟ ಮಾರ್ಗದಲ್ಲಿ ಓಡಾಡುವ ವಿದ್ಯಾರ್ಥಿಗಳ ಕುರಿತು ಸಾರಿಗೆ ಸಿಬ್ಬಂದಿ ತೋರುವ ಅನಾದರ, ಬಸ್‍ಗಳಲ್ಲಿ ಪ್ರಯಾಣಿಸುವ ಬಹುಪಾಲು ಮಂದಿಯ ಗಮನಕ್ಕೆ ಸಹಜವಾಗಿಯೇ ಬಂದಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಹಿತ ಕಾಯುವ ನಿಜವಾದ ಕಾಳಜಿ ಸರ್ಕಾರಕ್ಕೆ ಇದ್ದರೆ, ಲಾಭ- ನಷ್ಟದ ಲೆಕ್ಕಾಚಾರ ಬದಿಗಿರಿಸಿ, ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಗ್ರಾಮಾಂತರ ಪ್ರದೇಶದಲ್ಲಿ ಬಸ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕಿದೆ.

ಕೆಲವೊಂದು ಮಾರ್ಗಗಳಲ್ಲಿ ನಿಲ್ಲಲು ಸಹ ಸ್ಥಳಾವಕಾಶ ಇರದ ಹಾಗೆ ಜನರನ್ನು ತುಂಬಿಕೊಂಡು ಬಸ್‍ಗಳು ಓಡಾಡುವುದು ತಿಳಿದಿದ್ದರೂ ಅಂತಹ ಮಾರ್ಗಗಳಲ್ಲಿ ಹೆಚ್ಚು ಬಸ್‍ಗಳನ್ನು ಓಡಿಸದೆ, ಲಾಭದಾಯಕ ಎನ್ನುವ ಕಾರಣಕ್ಕೆ ಕೆಲವೊಮ್ಮೆ ಅರ್ಧದಷ್ಟು ಸೀಟುಗಳು ಕೂಡ ಭರ್ತಿಯಾಗದ ಮಾರ್ಗಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲೇ ಬಸ್‍ಗಳನ್ನು ಓಡಿಸಲು ಸಾರಿಗೆ ಸಂಸ್ಥೆ ಮುತುವರ್ಜಿ ತೋರುತ್ತದೆ. ವಿದ್ಯಾರ್ಥಿಗಳನ್ನು ಹೊರೆಯಾಗಿ ಪರಿಗಣಿಸುವ ಇಂತಹ ಪ್ರವೃತ್ತಿಗೆ ಅಂತ್ಯ ಹಾಡಬೇಕಿದೆ.

ಕೊರೊನಾ ನಿಯಂತ್ರಣದ ಸಲುವಾಗಿ ಹೇರಿದ ಲಾಕ್‍ಡೌನ್ ಮತ್ತು ಆನಂತರದ ಕೆಲ ನಿರ್ಬಂಧ ಗಳಿಂದಾಗಿ ಸಂಸ್ಥೆಯು ಆರ್ಥಿಕ ಮುಗ್ಗಟ್ಟು ಎದುರಿಸು ತ್ತಿರುವುದು ಬಹಿರಂಗ ಸತ್ಯ. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗ್ರಾಮಾಂತರ ಸಾರಿಗೆ ಬಸ್ಸುಗಳ ಸಂಖ್ಯೆ ಹೆಚ್ಚಿಸಲು ಮತ್ತು ಅದಕ್ಕೆ ತಗಲುವ ವೆಚ್ಚ ಭರಿಸುವ ಹೊಣೆ ಹೊರುವುದು ಸರ್ಕಾರಕ್ಕೆ ದೊಡ್ಡ ಸವಾಲೇನಲ್ಲ. ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುವ ಸಂದೇಶ ಸಾರಿದ ಮಹನೀಯರಿಗೂ ಸ್ಥಾವರ ನಿರ್ಮಿಸಲು ನೂರಾರು ಕೋಟಿ ವ್ಯಯಿಸಲು ಸಿದ್ಧವಿರುವ, ವಿವಿಧ ಸಮುದಾಯಗಳ ಕಣ್ಮಣಿಗಳ ಬೃಹದಾಕಾರದ ಪ್ರತಿಮೆಗಳ ನಿರ್ಮಾಣಕ್ಕೆ ಹಣ ವ್ಯಯಿಸಲು ಹಿಂದೆ ಮುಂದೆ ನೋಡದ ಸರ್ಕಾರಕ್ಕೆ, ವಿದ್ಯಾರ್ಥಿಗಳ ದೈನಂದಿನ ಓಡಾಟದ ಖರ್ಚು- ವೆಚ್ಚದಲ್ಲಿ ಒಂದಿಷ್ಟು ಪಾಲು ನಿಭಾಯಿಸುವುದು ದೊಡ್ಡ ಹೊರೆಯೇ?

ವಿದ್ಯಾರ್ಥಿಗಳ ಪ್ರಯಾಣದ ಪಡಿಪಾಟಲನ್ನು ತಗ್ಗಿಸುವ ಕಾಳಜಿ ಸರ್ಕಾರಕ್ಕೆ ಇರುವುದೇ ಆದಲ್ಲಿ, ಅವರು ಈ ಕುರಿತು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸುಲಭ ಸಾಧ್ಯವಾಗುವಂತೆ ಸಹಾಯವಾಣಿಯೊಂದನ್ನು ತೆರೆದು, ಅಲ್ಲಿಗೆ ಬರುವ ದೂರುಗಳನ್ನು ಪರಿಶೀಲಿಸಿ ಪರಿಹರಿಸಲು ಮುಂದಾಗಬೇಕಿದೆ.

ಸಿಇಟಿ, ನೀಟ್, ಜೆಇಇ ಸೇರಿದಂತೆ ತಮ್ಮ ಆದ್ಯತೆ ಮತ್ತು ಆಸಕ್ತಿಗನುಗುಣವಾಗಿ ಪ್ರವೇಶ ಪರೀಕ್ಷೆಗಳಿಗೆ ತಯಾರಾಗಬೇಕಿರುವ ಒತ್ತಡವೂ ಇರುವುದರಿಂದ ನಗರ ಪ್ರದೇಶದ ಕಾಲೇಜುಗಳತ್ತ ವಿದ್ಯಾರ್ಥಿಗಳು ಸಹಜವಾಗಿಯೇ ಮುಖ ಮಾಡುತ್ತಿದ್ದಾರೆ. ಪ್ರತಿನಿತ್ಯದ ಓಡಾಟಕ್ಕೆ ಹೆಚ್ಚಿನ ಸಮಯ ವ್ಯಯಿಸಬೇಕಿರುವುದರಿಂದ ಮೊದಲೇ ತೊಂದರೆಗೀಡಾಗುವ ವಿದ್ಯಾರ್ಥಿ ಗಳನ್ನು, ಅಸಮರ್ಪಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಆತಂಕಕ್ಕೆ ದೂಡುತ್ತಿದೆ. ಹಲವು ಅಡೆತಡೆಗಳ ನಡುವೆಯೂ ಓದಿನತ್ತ ಆಸಕ್ತಿ ತಳೆಯುವ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ ಸಮೂಹದ ಬವಣೆಗಳನ್ನು ಅರಿಯುವ ಸಂಯಮ ಮತ್ತು ಪರಿಹರಿಸುವ ಮುತುವರ್ಜಿಯನ್ನು ಸರ್ಕಾರ ತೋರಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು