ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಕೈಗಾರಿಕೆಗಳಲ್ಲಿ ‘ಬಹುತ್ವ ಭಾರತ’!

ಗುಣಮಟ್ಟದ ಉತ್ಪಾದನೆಗೆ ಪೂರಕವಾಗಿ ‘ಶ್ರಮಶಕ್ತಿ’ಯನ್ನು ಬಳಸಿಕೊಳ್ಳುವ ವಿಚಾರದಲ್ಲಿ ನಾವು ವಿಶಾಲವಾದ ಮನೋಭಾವ ಹೊಂದುವುದು ಅಗತ್ಯ
Published : 13 ಆಗಸ್ಟ್ 2024, 23:35 IST
Last Updated : 13 ಆಗಸ್ಟ್ 2024, 23:35 IST
ಫಾಲೋ ಮಾಡಿ
Comments

ಕಬ್ಬಿನ ಫಸಲು ಕಟಾವು ಮಾಡಲು ರಾಜ್ಯದ ಸಕ್ಕರೆ ಕಾರ್ಖಾನೆಗಳವರು ಮಹಾರಾಷ್ಟ್ರದ ಭೀಡ್‌, ನಾಂದೇಡ್, ಲಾತೂರ್, ಪರಬಣಿ ಭಾಗದಿಂದ ಪ್ರತಿ ವರ್ಷ ಸುಮಾರು ನಾಲ್ಕು ಲಕ್ಷ ಕಾರ್ಮಿಕರನ್ನು ಕರೆತರುತ್ತಾರೆ. ಮಹಾರಾಷ್ಟ್ರ ಕಾರ್ಮಿಕರು ಕುಟುಂಬದೊಂದಿಗೆ ಬಂದು ಹೊಲಗಳಲ್ಲಿಯೇ ವಾಸಿಸುತ್ತಾ ಹಗಲೂ ರಾತ್ರಿ ಕಬ್ಬು ಕಟಾವು ಮಾಡುತ್ತಾರೆ. ಗಂಡ– ಹೆಂಡತಿ ಕೂಡಿ 6ರಿಂದ 7 ತಿಂಗಳು ದುಡಿಮೆ ಮಾಡುತ್ತಾರೆ. ಇವರಿಗೆ ಮುಂಗಡ ಹಣ ಕೊಟ್ಟು, ಕರಾರುಪತ್ರ ಬರೆಸಿ ಕರೆದುಕೊಂಡು ಬರಲಾಗುತ್ತದೆ. ಇವರು ಬಾರದಿದ್ದರೆ ಸಕ್ಕರೆ ಕಾರ್ಖಾನೆಗಳು ನಡೆಯುವುದೇ ಇಲ್ಲ ಎನ್ನುವ ಸ್ಥಿತಿ ಇದೆ. ಸ್ಥಳೀಯ ಕಾರ್ಮಿಕರು ಕಬ್ಬು ಕಟಾವು ಮಾಡುವ ಕೆಲಸಕ್ಕೆ ಬರುವುದಿಲ್ಲ. ಅವರಿಗೆ ತರಬೇತಿ ನೀಡಿದರೂ ಪ್ರಯೋಜನವಾಗಿಲ್ಲ. ಬೇರೆ ಬೇರೆ ಪ್ರದೇಶಗಳ ಜನರ ದುಡಿಮೆಯ ಮನೋಭಾವ ಭಿನ್ನವಾಗಿರುವುದು ಇದಕ್ಕೆ ಮುಖ್ಯ ಕಾರಣ.

ಉತ್ತರ ಕರ್ನಾಟಕ ಭಾಗದ ಬಹಳಷ್ಟು ಕಾರ್ಮಿಕರು ಗೋವಾಕ್ಕೆ ಹೋಗಿ ದುಡಿಯುತ್ತಾರೆ. ಅಲ್ಲಿ ಕರ್ನಾಟಕದ ಕಾರ್ಮಿಕರಿಗೆ ಬಹುದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಹುಟ್ಟೂರನ್ನು ತೊರೆದು ಬೇರೆಡೆ ಹೋಗಿ ನೆಲಸುವ ಕಾರ್ಮಿಕರಲ್ಲಿ ದುಡಿಯುವ ಮನೋಭಾವ ಸಹಜವಾಗಿಯೇ ಬೆಳೆಯುತ್ತದೆ. ಅವರು ದುಡಿಮೆ ಮತ್ತು ಸಂಪಾದನೆ ಮಾಡುವ ತುಡಿತ ಹೊಂದಿರುತ್ತಾರೆ. ಇದರಿಂದ ಕೈಗಾರಿಕೆಗಳ ಉತ್ಪಾದಕತೆಗೆ ನೆರವಾಗುತ್ತದೆ. ಹೀಗಾಗಿ, ಉದ್ಯಮಿಗಳು ವಲಸೆ ಕಾರ್ಮಿಕರಿಗೆ ಆದ್ಯತೆ ನೀಡುತ್ತಾರೆ. ಹೀಗೆ ಕೈಗಾರಿಕೆಗಳಲ್ಲಿ ‘ಬಹುತ್ವ ಭಾರತ’ದ ದರ್ಶನವಾಗುತ್ತದೆ.

ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶ ದೊರೆಯಲಿ ಎಂಬ ಆಶಯದಿಂದ ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳು, ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಮೀಸಲಾತಿ ನಿಗದಿ ಮಾಡಬೇಕು ಎನ್ನುವ ಸರ್ಕಾರದ ಆಶಯ ಒಳ್ಳೆಯದು. ಆದರೆ ಶ್ರಮಿಕರ ಕಾರ್ಯಕ್ಷಮತೆಯ ವಾಸ್ತವ ಸಂಗತಿಗಳು ಭಿನ್ನವಾಗಿರುವುದರಿಂದ ಉದಾರ ನಿಲುವು ಅವಶ್ಯ.

ಕೈಗಾರಿಕಾ ಕಾರ್ಮಿಕರಿಗೆ ತಮ್ಮದೇ ಆದ ದುಡಿಮೆಯ ಸಂಸ್ಕೃತಿ ಇದೆ. ಕಾರ್ಮಿಕರ ಕೌಶಲ ಮತ್ತು ಪರಿಣತಿ ಮಾತ್ರವಲ್ಲ, ಕಠಿಣ ಪರಿಶ್ರಮದಿಂದ ದೀರ್ಘಾವಧಿಯಲ್ಲಿ ನಿಂತುಕೊಂಡು ಕೆಲಸ ಮಾಡುವ ಶಕ್ತಿ, ತಾಳ್ಮೆಯನ್ನು ಉದ್ದಿಮೆಗಳು ಬಯಸುತ್ತವೆ. ಯಂತ್ರಗಳ ಚಕ್ರ ಉರುಳುತ್ತಲೇ ಇರುತ್ತದೆ. ಕೆಲಸಗಾರರು ಪಾಳಿಗಳಲ್ಲಿ ಬಂದು ದುಡಿಯಬೇಕಾಗುತ್ತದೆ. ಮುಂದಿನ ಪಾಳಿಗೆ ಬರಬೇಕಾಗಿದ್ದ ಕೆಲಸಗಾರ ಬಾರದೇ ಹೋದರೆ ಸ್ಥಳದಲ್ಲಿರುವ ಕಾರ್ಮಿಕ ಮತ್ತೆ ಎಂಟು ತಾಸು ದುಡಿಯಬೇಕು. ಅನಿವಾರ್ಯ ಸಂದರ್ಭಗಳಲ್ಲಿ 24 ತಾಸೂ ಕೆಲಸ ಮಾಡಬೇಕಾಗುತ್ತದೆ. ಕಾರ್ಮಿಕರು ಕೂಡ ಯೋಧರಂತೆ ಕಾರ್ಯನಿರ್ವಹಿಸುತ್ತಾರೆ.

ಕರ್ನಾಟಕದಿಂದ ಹೊರ ರಾಜ್ಯಗಳಿಗೆ ವಲಸೆ ಹೋದ ಕಾರ್ಮಿಕರ ಸಂಖ್ಯೆ ತುಂಬಾ ದೊಡ್ಡದಿದೆ. ಬೇರೆ ರಾಜ್ಯಗಳ ಕಾರ್ಮಿಕರನ್ನು ತಡೆಯುವ ಪ್ರಯತ್ನ ಮಾಡಿದರೆ, ಆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರಿಗೂ ಇದೇ ಸಮಸ್ಯೆ ಎದುರಾಗಬಹುದು. ಈ ಸೂಕ್ಷ್ಮ ವಿಷಯವನ್ನು ಎಚ್ಚರಿಕೆಯಿಂದ ನೋಡುವುದು ಅವಶ್ಯ. ಕಾರ್ಖಾನೆ ಕಟ್ಟಡಗಳ ನಿರ್ಮಾಣ ಮತ್ತು ಎತ್ತರದ ಸ್ಥಳದಲ್ಲಿ ಯಂತ್ರಗಳನ್ನು ಜೋಡಿಸುವ ಕೆಲಸವನ್ನು ಬಿಹಾರದ ಕಾರ್ಮಿಕರು ಬಹಳ ಜಾಣ್ಮೆಯಿಂದ ಮಾಡುತ್ತಾರೆ. ದೇಶದ ಬಹಳಷ್ಟು ಕೈಗಾರಿಕೆಗಳು ಯಂತ್ರ ಜೋಡಣೆಯ ಜವಾಬ್ದಾರಿಯನ್ನು ಈ ಕಾರ್ಮಿಕರಿಗೆ ವಹಿಸುತ್ತವೆ.

ಚಿನ್ನದ ಗಣಿಗಳಲ್ಲಿ ತೀರಾ ಆಳಕ್ಕೆ ಇಳಿದು ಕೆಲಸ ಮಾಡುವ ಕಾರ್ಮಿಕರ ಕಷ್ಟವನ್ನು ನೋಡಿದರೆ, ಚಿನ್ನ ಧರಿಸಲೇಬಾರದು ಎನಿಸುತ್ತದೆ. ಉತ್ತಮ ದೈಹಿಕ ಬಲ ಹೊಂದಿದ ಕುಶಲ ಕೆಲಸಗಾರರನ್ನು ಪರೀಕ್ಷಿಸಿ ಆಯ್ಕೆ ಮಾಡಿ ಚಿನ್ನದ ಗಣಿಗಳಿಗೆ ಇಳಿಸಲಾಗುತ್ತದೆ. ಇಲ್ಲಿ ಸಾಮರ್ಥ್ಯವೇ ಮಾನದಂಡವಾಗಿರುತ್ತದೆ. ಕೋವಿಡ್-19ರ ಸಂಕಷ್ಟದ ಕಾಲದಲ್ಲಿ ಹೊರಟುಹೋದ ವಲಸೆ ಕಾರ್ಮಿಕರಲ್ಲಿ ಬಹಳಷ್ಟು ಜನ ಮರಳಿಬಂದಿಲ್ಲ. ಇವರೆಲ್ಲ ಕಠಿಣ ಪರಿಶ್ರಮದ ಕುಶಲ ಕಾರ್ಮಿಕರಾಗಿದ್ದಾರೆ. ಇವರು ಇಲ್ಲದ್ದರಿಂದ ಗುಣಮಟ್ಟದ ಉತ್ಪಾದನೆಗೆ ಹಿನ್ನಡೆಯಾಗಿದೆ ಎಂದು ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

ಆಂಧ್ರಪ್ರದೇಶದ ಖಾಸಗಿ ಉದ್ಯಮ ರಂಗದಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಮೀಸಲಾತಿಯನ್ನು 2019ರಲ್ಲಿ ಜಾರಿಗೆ ತರಲಾಗಿತ್ತು. ಇದು ಅಸಾಂವಿಧಾನಿಕ ಎಂದು ಅಲ್ಲಿನ ಹೈಕೋರ್ಟ್‌ ಆದೇಶ ನೀಡಿದೆ. ಹರಿಯಾಣದಲ್ಲಿ ಇದೇ ಮಾದರಿಯ ಕಾಯ್ದೆಗೆ ಅಲ್ಲಿನ ಹೈಕೋರ್ಟ್ ತಡೆಯೊಡ್ಡಿದೆ. ಜಾರ್ಖಂಡ್ ರಾಜ್ಯದಲ್ಲಿಯೂ ಇಂಥ ಮಸೂದೆಯವನ್ನು ಅಂಗೀಕರಿಸಲಾಗಿತ್ತು. ಅಲ್ಲಿಯ ರಾಜ್ಯಪಾಲರು ‘ಇದು ನಾಗರಿಕ ಹಕ್ಕ’ನ್ನು ಉಲ್ಲಂಘಿಸುತ್ತದೆ ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ವಿಶೇಷ ಎಂದರೆ, ರಾಜಸ್ಥಾನ ಸರ್ಕಾರ ಉದ್ಯೋಗ ಮತ್ತು ವ್ಯಾಪಾರಕ್ಕೆ ಹೊರ ರಾಜ್ಯಗಳಿಗೆ ಹೋಗುವ ಯುವಕರಿಗೆ ಬಡ್ಡಿರಹಿತ ಸಾಲ ನೀಡಿ ಪ್ರೋತ್ಸಾಹಿಸುವ ಯೋಜನೆ ಜಾರಿಗೊಳಿಸಿದೆ.

‘ಒಂದು ರಾಜ್ಯ, ಹಲವು ಜಗತ್ತು!’ ಎಂಬುದು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಘೋಷವಾಕ್ಯ. ವಿಶ್ವದ ಉದ್ಯಮಿಗಳನ್ನು ರಾಜ್ಯಕ್ಕೆ ಕರೆತರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಸಂಘಟಿಸುವ ಸಿದ್ಧತೆಯನ್ನು ಸರ್ಕಾರ ನಡೆಸಿದೆ. ಇದಕ್ಕೆ ಪೂರಕವಾಗಿ ‘ವಿಶ್ವ ಶ್ರಮಶಕ್ತಿ’ಯನ್ನು ಸ್ವಾಗತಿಸುವುದು ಅವಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT