ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸ್ಪೀಕರ್‌ ಮತ್ತು ಮರೆತು ಹೋದಮೌಲ್ಯ

ಅಕ್ಷರ ಗಾತ್ರ

ನಮ್ಮ ದೇಶದ ಸಂಸತ್ ಹಾಗೂ ವಿಧಾನಸಭೆಗಳ ಅಧ್ಯಕ್ಷರ‌‌ ‘ಸ್ಥಾನ’ ಎನ್ನುವುದು ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್‌ಗೆ (ಪಾರ್ಲಿಮೆಂಟ್) ಸಮಾನಾಂತರ ವ್ಯವಸ್ಥೆಯಾಗಿದೆ. ವಿಧಾನಸಭೆ ಎನ್ನುವ ಸಂಸ್ಥೆಯನ್ನು‌‌ ಸಭಾಧ್ಯಕ್ಷರು ಪ್ರತಿನಿಧಿಸುತ್ತಾರಲ್ಲದೆ ಶಿಷ್ಟಾಚಾರದ ವಿಚಾರದಲ್ಲಿ ಅವರು ಅತ್ಯುನ್ನತ ಸ್ಥಾನವನ್ನು ಅಲಂಕರಿಸುತ್ತಾರೆ. ಆದರೆ, ಅವರ ಈ ವಿಶೇಷ ಸ್ಥಾನಮಾನಕ್ಕೆ‌‌ ಹಾಗೂ ಅಧಿಕಾರ ತತ್ವಕ್ಕೆ ಬಹುಮುಖ್ಯವಾದ ಒಂದು ಪೂರ್ವ ಷರತ್ತಿದೆ. ಅದರಂತೆ, ಅಧ್ಯಕ್ಷ‌ ಸ್ಥಾನವನ್ನುಅಲಂಕರಿಸಿದ ವ್ಯಕ್ತಿ ಸದನದ‌ ಸದಸ್ಯರ ನಡವಳಿಕೆಯನ್ನು ಸಮಚಿತ್ತದಿಂದ, ಯಾವುದೇ ಪಕ್ಷಪಾತವಿಲ್ಲದ ಧೋರಣೆಯಿಂದ ಗಮನಿಸಬೇಕು. ಆ ಮನೋಧರ್ಮದ ಮೂಲಕವೇ ಅವರು ಸದನವನ್ನು ನಿರ್ವಹಿಸಿ ಅಲ್ಲಿ ಶಿಸ್ತನ್ನು ಸ್ಥಾಪಿಸಬೇಕಾಗುತ್ತದೆ‌.

ಜನಸಾಮಾನ್ಯರ ಗ್ರಹಿಕೆಗೂ ಈ ನಿಷ್ಪಕ್ಷಪಾತವಾದ ಧೋರಣೆ ನಿಲುಕುತ್ತದೆ ಎನ್ನುವುದು ಬಹಳ‌ ಮುಖ್ಯವಾದ ಅಂಶ. ಸಿಬಿಐ, ಜಾರಿ ನಿರ್ದೇಶನಾಲಯದಂತಹ ಶಾಸನಬದ್ಧ ಸಂಸ್ಥೆಗಳು, ರಾಜ್ಯಪಾಲರ ಕಚೇರಿಯಂತಹ ಸಾಂವಿಧಾನಿಕ ಸಂಸ್ಥೆಗಳಿಗೆ ಹೋಲಿಸಿದಲ್ಲಿ ಹಲವಾರು ವರ್ಷಗಳಿಂದ ಕರ್ನಾಟಕದ ಸಭಾಧ್ಯಕ್ಷ‌ರ ಸ್ಥಾನಮಾನ ಇನ್ನೂ ಅಪಾಯದ ಅಂಚಿಗೆ ತಲುಪದೇ ಉಳಿದಿದೆ ಎನ್ನುವುದು ಸಮಾಧಾನವೆನಿಸಿದರೂ ಅದರ ಪ್ರಸ್ತುತ ಹಾದಿಯ ಬಗ್ಗೆ ಆತಂಕವಾಗುವುದು ಸಹಜವೆ.

ಈಗಿನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪಕ್ಷಪಾತವೂ ರಾಜಕೀಯಪ್ರೇರಿತವೂ ಆದ ಹೇಳಿಕೆ ಅವರ ಆ ಸ್ಥಾನದ ಘನತೆಗೆ ತೀವ್ರ ಧಕ್ಕೆಯನ್ನು ತಂದಿದೆ. ಕಾಗೇರಿ ಅವರು ‘ನಮ್ಮ ಆರ್‌ಎಸ್ಎಸ್ ಮುಂದಿನ ದಿನಗಳಲ್ಲಿ ತನ್ನ ಪ್ರಬಲ ಅಸ್ತಿತ್ವವನ್ನು ಸ್ಥಾಪಿಸಲಿದೆ’ ಎಂದು ಘಂಟಾಘೋಷವಾಗಿ ವಿಧಾನಸಭಾಧ್ಯಕ್ಷ ಪೀಠದಲ್ಲಿ ಕುಳಿತೇ ಹೇಳಿದ್ದಾರೆ. ಇಷ್ಟೇ ಸಾಲದೆಂಬಂತೆ, ಶಿಷ್ಟಾಚಾರ ಉಲ್ಲಂಘನೆಗಾಗಿ ಕ್ಷಮೆಯನ್ನು ನಿರೀಕ್ಷಿಸಿದ ಸಂದರ್ಭದಲ್ಲಿ ಅವರು ಅದಕ್ಕೆ‌‌ ವಿರುದ್ಧವಾಗಿ ತಮ್ಮ ಹೇಳಿಕೆಯನ್ನೇ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅವರನ್ನು ಸಭಾಧ್ಯಕ್ಷರನ್ನಾಗಿ ನೇಮಿಸಿದ ಬಿಜೆಪಿಯ ಬೆನ್ನೆಲುಬಾಗಿರುವ ಆರ್‌ಎಸ್ಎಸ್ ಕುರಿತಂತೆ ಕಾಗೇರಿ ಅವರ ಹೇಳಿಕೆ ಸ್ಪಷ್ಟವಾಗಿ ಪಕ್ಷಪಾತವೇ ವಿನಾ ಬೇರೇನೂ ಅಲ್ಲ. ಅವರ ಹೇಳಿಕೆಯು ಅವರ ಸ್ಥಾನದ ವ್ಯಕ್ತಿಯೊಬ್ಬರು ಘನ ಸದನದಲ್ಲಿ ನಿಷ್ಪಕ್ಷಪಾತವಾಗಿ ವ್ಯವಹರಿಸಬೇಕಾದ ಪ್ರಾಥಮಿಕ ಪೂರ್ವ ಷರತ್ತನ್ನೇ ಗಾಳಿಗೆ ತೂರಿದೆ.

ಆರ್‌ಎಸ್ಎಸ್ ಏನನ್ನು ಪ್ರತಿನಿಧಿಸುತ್ತದೆ? ಹಿಂದುತ್ವದ ಯೋಜನೆಯು ಆರ್‌ಎಸ್ಎಸ್ ವಂಶವಾಹಿನಿಯಲ್ಲಿಯೇ ಇದೆ. ಅದರ ಸಾಮಾಜಿಕ- ಧಾರ್ಮಿಕ ಸ್ವಭಾವದೊಂದಿಗೆ, ಹಿಂದುತ್ವದ ಪುನಶ್ಚೇತನದ ಮೂಲಭೂತ ಆಶಯವೂ ಅದಕ್ಕಿದೆ. 1925ರಲ್ಲಿ ಅದು ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಆರ್‌ಎಸ್ಎಸ್, ಬ್ರಿಟಿಷರ ವಸಾಹತು ಮೌಲ್ಯಗಳ ವಿರುದ್ಧ ಪ್ರಚಾರ ಮಾಡುವ ಕೆಲಸ‌ವನ್ನಷ್ಟೇ ಮಾಡುತ್ತಿತ್ತು. ನಂತರದ ದಿನಗಳಲ್ಲಿ‌ ಸಾವರ್ಕರ್ ತರ್ಕಗಳನ್ನು ಬಳಸಿಕೊಂಡು ಅದು ಇನ್ನಷ್ಟು ಮೊನಚಾದ ಕ್ರಿಯಾಯೋಜನೆಯನ್ನು ರೂಪಿಸಿಕೊಂಡಿತು. ಇಸ್ಲಾಂರಹಿತ ದೇಶವನ್ನು ಹೇಗೆ ರೂಪಿಸಬೇಕೆಂಬ ಆಲೋಚನೆ ಸಾವರ್ಕರ್ಪ್ರತಿಪಾದಿಸಿದ್ದೇ ಆಗಿತ್ತು.

ಸೈದ್ಧಾಂತಿಕವಾಗಿ ಮತ್ತಷ್ಟು ಆಕರ್ಷಣೀಯ ಲೇಖಕರಾಗಿದ್ದ ಎಂ.ಎಸ್.ಗೋಲ್ವಾಲ್ಕರ್, ಒಂದು ದೇಶ ಎಂದರೆ ಭೌಗೋಳಿಕ, ಜನಾಂಗೀಯ, ಧಾರ್ಮಿಕ (ಹಿಂದುತ್ವ), ಸಾಂಸ್ಕೃತಿಕ ಹಾಗೂ ಭಾಷೆಗಳ (ಅಂದಿನ ಸಂದರ್ಭಕ್ಕೆ ಸಂಸ್ಕೃತ ಭಾಷೆ) ಏಕತೆ ಎನ್ನುತ್ತಾರೆ. ‘ಈ ತತ್ವಗಳ ಆಚೆ ಇದ್ದವರು ರಾಷ್ಟ್ರೀಯ ಜೀವನದಿಂದಲೂ ಹೊರಗೆ ಉಳಿಯುವವರು’ ಎಂದೇ ಅವರು ದಾಖಲಿಸಿದ್ದಾರೆ (ಹಿಟ್ಲರನ ಜರ್ಮನಿ, ಮುಸೋಲಿನಿಯ ಇಟಲಿ ಅವರಿಗೆ ಮಾದರಿಯಾಗಿದ್ದವು).

ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ಕಾಗೇರಿ ಅವರು ಜಗತ್ತಿನಾದ್ಯಂತ ಶ್ಲಾಘನೀಯ ಎನಿಸಿಕೊಂಡಿರುವ ಭಾರತದ ಸಂವಿಧಾನ, ಅದರ ಪ್ರಸ್ತಾವನೆಯಲ್ಲಿ ವಿವರಿಸಿರುವ ಮೌಲ್ಯಗಳನ್ನು ಮರೆತೇ ಹೋಗಿದ್ದಾರೇನೋ ಎನ್ನುವ ಅನುಮಾನ ಮೂಡುತ್ತದೆ. ಜಾತ್ಯತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನು ಪ್ರತಿಪಾದಿಸುವ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಗಳನ್ನು, ಅವಕಾಶಗಳನ್ನು ಒದಗಿಸುತ್ತದೆ ಎನ್ನುವ ಮೂಲಭೂತ ತತ್ವವೂ‌ ಅವರ ನೆನಪಿನಲ್ಲಿದ್ದ ಹಾಗಿಲ್ಲ. ನಮ್ಮ ಸಂವಿಧಾನದ ಪ್ರಸ್ತಾವನೆ, ಬಹಳ ಮುಖ್ಯವಾಗಿ ‘ವ್ಯಕ್ತಿಯ ಘನತೆಗೆ ಧಕ್ಕೆಯಾಗದ ಭ್ರಾತೃತ್ವ’ವನ್ನು ಪ್ರತಿಪಾದಿಸುತ್ತದೆ ಎನ್ನುವುದನ್ನು ನಾವು ಗಮನಿ
ಸಬೇಕು. ಸಂವಿಧಾನ ರಚನಾ ಸಮಿತಿಯು ವ್ಯಕ್ತಿಯ ‘ಘನತೆ’ಯನ್ನು ‘ದೇಶ’ದ ನಂತರ ಉಲ್ಲೇಖಿಸುವ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು.

ಆರ್‌ಎಸ್ಎಸ್ ಹಾಗೂ ಹಿಂದೂ ಜಾಗರಣ ವೇದಿಕೆಯು ಈಗಾಗಲೇ ಸಂವಿಧಾನ ಹಾಗೂ ನೀತಿನಿಯಮಗಳನ್ನು ಅಂಚಿಗೆ ತಳ್ಳುವ‌ ಪ್ರಯತ್ನದ ಮೂಲಕ ದ್ವೇಷ, ಭಯಗಳೆಂಬ ದ್ವಿಮುಖ ನೀತಿಗಳನ್ನು ದೇಶದೆಲ್ಲೆಡೆ ಬಿತ್ತುತ್ತಿವೆ. ಸಣ್ಣಪುಟ್ಟ ಕಾರಣಗಳಿಗೆ ಹಿಂಸೆಗಳನ್ನು ಪ್ರಚೋದಿಸುವುದು, ಧರ್ಮಸಂಸತ್‌ ಮತ್ತಿತರ ವೇದಿಕೆಗಳ ಮೂಲಕ ಪ್ರಚೋದಕ ಭಾಷಣಗಳನ್ನು ಆಯೋಜಿಸುವುದು ದಿನೇದಿನೇ ಹೆಚ್ಚಾಗುತ್ತಿವೆ.ಪ್ರಭುತ್ವದ ಬೆಂಬಲ, ಬಿಜೆಪಿಯೇತರ ಪಕ್ಷಗಳ ಚಿಂತಾಕ್ರಾಂತ ಸ್ಥಿತಿ ಮತ್ತು ಒಗ್ಗೂಡುವ ನಿರಾಸಕ್ತಿಯು ಆರ್‌ಎಸ್ಎಸ್‌ನ ಈ ಭರಾಟೆಯನ್ನು ಸದ್ಯಕ್ಕೆ ತಡೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಲೇಖಕ: ವಿಧಾನಪರಿಷತ್ತಿನ ಮಾಜಿ ಸಭಾಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT