‘ಗೆಲುವಿನ ಸೂತ್ರ: ಹಿಂಸೆಯ ಮುಖ್ಯಪಾತ್ರ’ ಲೇಖನದಲ್ಲಿ (ಲೇ: ವಿಶಾಖ ಎನ್., ಪ್ರ.ವಾ., ಸೆಪ್ಟೆಂಬರ್ 1) ಇವತ್ತಿನ ಚಲನಚಿತ್ರಗಳು ಹಿಂಸೆಯನ್ನು ಹೇಗೆ ಯಶಸ್ಸಿನ ಸೂತ್ರವಾಗಿ ಬಳಸುತ್ತಿವೆ ಎನ್ನುವುದರ ಪ್ರತಿಪಾದನೆ ಸಮರ್ಪಕವಾಗಿದೆ. ಹೀಗಾಗುತ್ತಿರುವುದು ಕೇವಲ ಆಕಸ್ಮಿಕವಲ್ಲ ಅಥವಾ ಆಶ್ಚರ್ಯಕರವೂ ಆಗಬೇಕಾಗಿಲ್ಲ. ಇವತ್ತು ಚಲನಚಿತ್ರಗಳನ್ನು ಕಲಾ ಮಾಧ್ಯಮಕ್ಕಿಂತ ಹೆಚ್ಚಾಗಿ ಒಂದು ಉದ್ಯಮ ಎಂದು ಗುರುತಿಸಿದ ಮೇಲೆ ಲಾಭವನ್ನು ನಿರೀಕ್ಷಿಸುವುದು ಅದರ ಸಹಜ ಗುಣವಾಗಬೇಕಲ್ಲವೇ? ಆದರೆ, ಒಟ್ಟಾರೆ ಸಮಾಜವಾಗಿ ನಾವೆಲ್ಲಾ ಯೋಚಿಸಬೇಕಾಗಿರುವುದು– ಹಿಂಸೆ ಸುಲಭವಾಗಿ ಮಾರಾಟಗೊಳ್ಳುವ ಸ್ಥಿತಿಯನ್ನು ನಾವು ಹೇಗೆ ತಲುಪಿದ್ದೇವೆ ಎನ್ನುವ ಕುರಿತಾಗಿ.

ಸುತ್ತಲಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕುದಿಯುತ್ತಿರುವ ಹಿಂಸೆಯ ಮೂಲಗಳನ್ನು ನಮ್ಮೆಲ್ಲರಲ್ಲೂ ಗುರುತಿಸಲು ಸಾಧ್ಯ. ಇವತ್ತು ಅಸಮಾನತೆ ಎಲ್ಲಾ ಹಂತಗಳಲ್ಲಿ ತಾಂಡವವಾಡುತ್ತಿದೆ. ಜಾತಿ, ಉಪಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ, ಆರ್ಥಿಕತೆ, ಲಿಂಗ ಅಸಮಾನತೆ, ವಿದ್ಯೆಯ ಅವಕಾಶಗಳು, ನಗರಿಗರು ಮತ್ತು ಹಳ್ಳಿಗರು, ಹೀಗೆ ಎಲ್ಲಾ ಹಂತಗಳಲ್ಲಿಯೂ ಅಸಮಾನತೆ ಇದೆ. ಪಕ್ಷಭೇದವಿಲ್ಲದೆ ಎಲ್ಲಾ ಆಡಳಿತ ವ್ಯವಸ್ಥೆಗಳು ಈ ಅಸಮಾನತೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.

ಚುನಾವಣಾ ಪ್ರಣಾಳಿಕೆಯ ಹೇಳಿಕೆಗಳು ಐದು ವರ್ಷ ನರಳಿ, ಮುಂದಿನ ಚುನಾವಣೆಯಲ್ಲಿ ಹೊಸ ನುಡಿಗಟ್ಟಿನಲ್ಲಿ ಕಂಗೊಳಿಸುತ್ತವೆ. ಆರ್ಥಿಕ ಅಸಮಾನತೆಯಂತೂ ಹೆಚ್ಚುತ್ತಲೇ ಇದೆ. ಸರ್ಕಾರಗಳ ಆರ್ಥಿಕ ನೀತಿಗಳು ಸಂಪತ್ತಿನ ಕೇಂದ್ರೀಕರಣಕ್ಕೆ ಒತ್ತು ನೀಡುತ್ತಿರುವುದು ಇವತ್ತು ಗುಟ್ಟಾಗಿ ನಡೆಯದೆ ಅಭಿವೃದ್ಧಿ, ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿದೆ.

ಅಸಮಾನತೆಯ ಕೆಳಹಂತದಲ್ಲಿರುವವರು ತಮ್ಮೊಳಗೆ ಮೂಡುವ ಹತಾಶೆ, ಅಸಹಾಯಕತೆಗಳನ್ನು ಎಷ್ಟೆಂದು ಸಹಿಸಲು ಸಾಧ್ಯ? ಇಂತಹ ಹತಾಶೆ, ಅಸಹಾಯಕತೆಗಳು ಅವರ ಮನಸ್ಸಿನಲ್ಲಿ ಹಿಂಸೆಯನ್ನು ಪ್ರಚೋದಿಸುವುದು ಸಹಜ. ಆದರೆ, ಅಂತಹ ಹಿಂಸೆಯನ್ನು ವ್ಯಕ್ತರೂಪಕ್ಕೆ ತಂದಾಗ ಆಗುವ ಪರಿಣಾಮಗಳ ಅರಿವು ಹೆಚ್ಚಿನ ಜನರಲ್ಲಿ ಇರುತ್ತದೆ. ಕೆಲವರು ಹತಾಶೆ, ಅಸಹಾಯಕತೆಗಳನ್ನು ತಾತ್ಕಾಲಿಕವಾಗಿ ನೆನಪಿನ ಭಿತ್ತಿಯಿಂದ ಹೊರತಳ್ಳಲು ನಶೆಯ ವಸ್ತುಗಳಿಗೆ ಮೊರೆ ಹೋಗಬಹುದು. ಉಳಿದವರಿಗೆ ಅನ್ಯಾಯದ ವಿರುದ್ಧ ರಕ್ತಸಿಕ್ತ ಹೋರಾಟ ನಡೆಸುವ ಚಲನಚಿತ್ರಗಳ ನಾಯಕರು ತಮ್ಮ ನೈಜ ಅಭಿವ್ಯಕ್ತಿಯ ರೂಪವಾಗಿ ಮುದ ನೀಡುತ್ತಾರೆ. ವಾಸ್ತವದಲ್ಲಿ ಸಿಗಲಾಗದ ಸಾಮಾಜಿಕ ನ್ಯಾಯವನ್ನು ಪರದೆಯ ಮೇಲೆ ಆನಂದಿಸುತ್ತಾರೆ.

ಬಾಲ್ಯದಲ್ಲಿ ಹಳ್ಳಿಯ ಟೆಂಟ್ಗಳಲ್ಲಿ ಸಿನಿಮಾ ನೋಡುವಾಗ ಅತ್ಯಾಚಾರ ಮಾಡಲು ಯತ್ನಿಸಿದ ವಜ್ರಮುನಿಯನ್ನು, ರಾಜ್ಕುಮಾರ್ ಹಿಡಿದು ಚಚ್ಚುವಾಗ ಪ್ರೇಕ್ಷಕರು ‘ಹಾಕು ಅವನಿಗೆ, ಬಿಡಬೇಡ, ಇನ್ನೂ ಹಾಕು’ ಎಂದು ಜೋರಾಗಿ ಕೂಗುತ್ತಿದ್ದ ಸಂದರ್ಭಗಳು ನನಗಿನ್ನೂ ಕಣ್ಣಿಗೆ ಕಟ್ಟಿದಂತಿವೆ. ಇವತ್ತೂ ಕೂಡ ನಾಯಕ ಕ್ರೂರಿಗಳನ್ನು ಸದೆಬಡಿಯುತ್ತಿರುವಾಗ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಉದ್ವೇಗದ ನಡುವೆಯೂ ಒಂದು ರೀತಿಯ ಬಿಡುಗಡೆಯ ನಿಟ್ಟುಸಿರು ಬಿಡುತ್ತಿರುವುದನ್ನು ಗಮನಿಸಿದ್ದೇನೆ.

ಎಲ್ಕೆಜಿ ಪ್ರವೇಶ ಪರೀಕ್ಷೆಯಿಂದ ಹಿಡಿದು ಪ್ರತಿ ಹಂತದಲ್ಲಿಯೂ ಇವತ್ತು ಬದುಕು ಸ್ಪರ್ಧಾತ್ಮಕವಾಗಿದೆ. ಇದು ಮೇಲುನೋಟಕ್ಕೆ ಅನಿವಾರ್ಯ ಎನ್ನಿಸಬಹುದು. ಆದರೆ, ಸ್ಪರ್ಧೆಯಲ್ಲಿ ಹಿಂದುಳಿದವರು ಏನಾಗುತ್ತಿದ್ದಾರೆ ಎಂದು ಸಮಾಜ ನೋಡುತ್ತಲೇ ಇಲ್ಲವಲ್ಲ. ಸ್ಪರ್ಧೆಯಲ್ಲಿ ಗೆದ್ದವರನ್ನು ‘ಸಾಧಕರು’ ಎಂದು ವೈಭವೀಕರಿಸುತ್ತಾ ಅವರೊಳಗೆ ಅನಗತ್ಯ ಹೆಚ್ಚುಗಾರಿಕೆಯನ್ನು ಮತ್ತು ಹಿಂದೆ ಬಿದ್ದವರ ಮನಸ್ಸಿನಲ್ಲಿ ಕೀಳರಿಮೆಯನ್ನು ತುಂಬುತ್ತಿದ್ದೇವೆ. ಸ್ಪರ್ಧೆಯಲ್ಲಿ ಮುಂದಿರುವವರು ಅದಕ್ಕೆ ತಾವು ಜನ್ಮಜಾತ ಹಕ್ಕುದಾರರು ಎನ್ನುವಂತೆ ವರ್ತಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಹಿಂದೆ ಬಿದ್ದವರಿಗೆ ಸಹಾಯ ಮಾಡಿ, ಸಾಧ್ಯವಿರುವಷ್ಟು ಅವರನ್ನೂ ಮೇಲೆತ್ತಿ ಆತ್ಮಸ್ಥೈರ್ಯ ತುಂಬುವುದು ತಮ್ಮ ಜವಾಬ್ದಾರಿ ಎಂಬ ಅರಿವನ್ನು ಸಾಧಕರಿಗೆ ಮೂಡಿಸುವುದು ನಮ್ಮ ಶೈಕ್ಷಣಿಕ ವ್ಯವಸ್ಥೆ, ಸರ್ಕಾರ ಹಾಗೂ ಸಮಾಜದ ಜವಾಬ್ದಾರಿ ಆಗಬೇಕಲ್ಲವೇ? ಹಾಗೆ ಮಾಡದೆ ಹಿಂದೆ ಬಿದ್ದವರನ್ನು ಹೆಚ್ಚು ಹೆಚ್ಚು ನರಳಿಸುವುದು ಅವಮಾನಿಸುವುದರಿಂದ ಅವರೊಳಗೆ ಹಿಂಸೆ ಕೆರಳುವುದನ್ನು ತಪ್ಪಿಸುವುದು ಅಸಾಧ್ಯ.

ಇವತ್ತಿನ ಮಕ್ಕಳಲ್ಲಿ ಸರ್ವಮಾನ್ಯವಾಗಿರುವ ವಿಡಿಯೊ ಗೇಮ್ಗಳಲ್ಲಿ ಹಿಂಸೆಯೇ ಮೂಲಧಾತು. ಇಂತಹ ವಿಡಿಯೊ ಗೇಮ್ಗಳನ್ನು ವಯಸ್ಕರು ಕೂಡ ಆನಂದಿಸುವುದು ಸರ್ವೇಸಾಮಾನ್ಯ. ನಮ್ಮ ರಾಜಕೀಯ ನಾಯಕರು ಬಳಸುವ ಭಾಷೆಯಲ್ಲಿ ಕೂಡ ‘ಹೊಡಿ ಬಡಿ ಕಡಿ’ಗಳೇ ಕೇಳಿಬರುತ್ತವೆ. ಮಾತೆತ್ತಿದ್ದರೆ ಎಫ್ಐಆರ್, ಗಲ್ಲುಶಿಕ್ಷೆ, ಗಡೀಪಾರುಗಳಿಗೆ ಒತ್ತಾಯಿಸಲಾಗುತ್ತದೆ. ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಹಿಂಸೆಯನ್ನು ಸಮರ್ಥಿಸಲಾಗುತ್ತಿದೆ.

ಧಾರ್ಮಿಕ ನಾಯಕರ ಭಾಷೆಯಲ್ಲಿ ವ್ಯಕ್ತವಾಗುವ ಹಿಂಸೆ ಕೂಡ ಅವರ ಮನದಾಳದಲ್ಲಿ ಇರುವುದೇ ಎನ್ನುವುದು ನಿಸ್ಸಂದೇಹ. ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುವ ಹಿಂಸೆಯು ನಾಜಿ ಹತ್ಯಾಕಾಂಡದ ಶಬ್ದರೂಪದಂತಿರುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವುದು ನಮ್ಮ ಸಮಾಜದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಎಲ್ಲಾ ರೀತಿಯ ಹಿಂಸೆಯ ಅತ್ಯಂತ ಕೆಳಹಂತವಿರಬಹುದೇ?

ಭಾರತದ ಪುಣ್ಯಭೂಮಿ ಹಿಂಸೆಗೆ ಇಷ್ಟು ಫಲವತ್ತಾಗಿರುವಾಗ ಫಸಲುಣ್ಣುವವರನ್ನು ತಡೆಯುವುದಾದರೂ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.