ವಿರಾಟ್ ಹಿಟ್‌ವಿಕೆಟ್!

7

ವಿರಾಟ್ ಹಿಟ್‌ವಿಕೆಟ್!

Published:
Updated:
Deccan Herald

ಮೂರು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮಾಧ್ಯಮ ಗ್ಯಾಲರಿಯಲ್ಲಿ ನಡೆದಿದ್ದ ಸಂವಾದದಲ್ಲಿ ಮಿಲ್ಲಿ ಡಿವಿಲಿಯರ್ಸ್ ಮತ್ತು ಎಬಿ ಡಿವಿಲಿಯರ್ಸ್‌(ಸೀನಿಯರ್) ಗದ್ಗದಿತರಾಗಿದ್ದರು.

‘ನನ್ನ ಮಗನ ಬಗ್ಗೆ ಇಲ್ಲಿಯ ಜನರ ಪ್ರೀತಿ ಕಂಡು ನನಗೆ ಮಾತುಗಳೇ ಬರುತ್ತಿಲ್ಲ. ಆತ ನಿಮ್ಮ ಊರಿನವನೇ ಆಗಿದ್ದಾನೆ. ಪ್ರತಿವರ್ಷ ಇಲ್ಲಿಗೆ ಆರ್‌ಸಿಬಿಯಲ್ಲಿ (ಇಂಡಿಯನ್ ಪ್ರೀಮಿಯರ್‌ ಲೀಗ್‌ನ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ) ಆಡಲು ಬರುತ್ತಾನೆ. ಅಪಾರ ಅಭಿಮಾನಿಗಳನ್ನು ಗಳಿಸಿದ್ದಾನೆ. ನಿಮ್ಮೊಳಗೊಬ್ಬನಾಗಿದ್ದಾನೆ’ ಎಂದು ಮಿಲ್ಲಿ ಹೇಳಿದ್ದರು. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ಮತ್ತು ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ಗೆ ಬೆಂಗಳೂರಿನಲ್ಲಿ ಸಾವಿರಾರು ಅಭಿಮಾನಿಗಳು ಇದ್ದಾರೆ. ಹಾಗಿದ್ದರೆ ಈ ಇಬ್ಬರು ದಿಗ್ಗಜ ಆಟಗಾರರ ಆಪ್ತಸ್ನೇಹಿತ ವಿರಾಟ್ ಕೊಹ್ಲಿ ಅವರು ಬುಧವಾರ ನೀಡಿದ ಹೇಳಿಕೆಯ ಪ್ರಕಾರ, ಆ ಅಭಿಮಾನಿಗಳು ಭಾರತವನ್ನು ಬಿಟ್ಟು ಹೋಗಬೇಕೇ?

‘ನಮ್ಮ ದೇಶದ ಆಟಗಾರರನ್ನು ಇಷ್ಟಪಡದಿದ್ದರೆ ಬೇರೆ ದೇಶಕ್ಕೆ ತೊಲಗು’ ಎಂದು ವಿರಾಟ್ ತಮ್ಮ ಆ್ಯಪ್‌ ಮೂಲಕ ಕ್ರಿಕೆಟ್‌ಪ್ರೇಮಿಯೊಬ್ಬರಿಗೆ ಹೇಳಿರುವ ಮಾತು ಕೇಳಿ ಈ ಘಟನೆ ನೆನಪಿಗೆ ಬಂದಿತು.

ವಿರಾಟ್ ಹೇಳಿರುವ ಮಾತನ್ನು ಯಾವುದೋ ರಾಜಕಾರಣಿ ಅಥವಾ ಇನ್ನಾರೋ ಹೇಳಿದ್ದರೆ ಅದರ ಹಿಂದಿನ ಉದ್ದೇಶ ಎಲ್ಲರಿಗೂ ಅರ್ಥವಾಗುತ್ತಿತ್ತು. ಆದರೆ ಒಬ್ಬ ಕ್ರೀಡಾಪಟು ಈ ರೀತಿ ಹೇಳಿದ್ದು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ. ಅಲ್ಲದೇ ಪ್ರತಿಯೊಂದು ವಿಷಯವನ್ನು ‘ದೇಶಭಕ್ತಿ’ ಮತ್ತು ‘ದೇಶದ್ರೋಹ’ದ ತಕ್ಕಡಿಯಲ್ಲಿ ತೂಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ
ಕ್ರಿಕೆಟ್‌ ಅಭಿಮಾನಿಗಳನ್ನು ಎರಡು ಭಾಗಗಳಲ್ಲಿ ವಿಭಜಿಸುವ ಮಟ್ಟಕ್ಕೆ ಈ ಹೇಳಿಕೆ ಈಗ ಪರಿಣಾಮ ಬೀರಿದೆ. ಅವರು ಇಂದಿನ ‘ದೇಶಭಕ್ತಿ’ ಟ್ರೆಂಡ್‌ ಅನುಸರಿಸಿದ್ದಾರೆ ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

‘ಹಾಗಿದ್ದರೆ, ಬೇರೆ ದೇಶದ ಕ್ರೀಡಾಪಟುಗಳನ್ನು ಮೆಚ್ಚುವುದು ದೇಶದ್ರೋಹವೇ? ಆದರೆ ವಿರಾಟ್ ಅವರೇ 19 ವರ್ಷದೊಳಗಿನವರ ಕ್ರಿಕೆಟ್‌ ತಂಡದಲ್ಲಿ ಆಡುವಾಗ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್‌ ತಮ್ಮ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿದ್ದರು. ಕೆಲವೇ ದಿನಗಳ ಹಿಂದೆ ಪೋರ್ಚುಗಲ್‌ನ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ನೆಚ್ಚಿನ ಫುಟ್‌ಬಾಲ್ ಆಟಗಾರ ಎಂದಿದ್ದರು. ಅವರಿಗೆ ಇಲ್ಲಿಯ ಸುನಿಲ್ ಚೆಟ್ರಿ ಇಷ್ಟವಿಲ್ಲವೇ’ ಎಂಬ ಪ್ರಶ್ನೆಗಳಿಗೆ ಕೊಹ್ಲಿಯೇ ಉತ್ತರ ಕೊಡಬೇಕು.

‘ರಿಕಿ ಪಾಂಟಿಂಗ್, ಶಾನ್ ಪೊಲಾಕ್, ಕೆವಿನ್ ಪೀಟರ್ಸನ್ ಅವರ ಅಪ್ಪಟ ಅಭಿಮಾನಿ ನಾನು. ಆದರೆ ನಾನು ಇಷ್ಟಪಡುವ ಆಟಗಾರರು ಬೇರೆ ಬೇರೆ ದೇಶದವರು. ನಾನು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಯಾವ ದೇಶಕ್ಕೆ ಹೋಗಬೇಕು ಗೊತ್ತಾಗುತ್ತಿಲ್ಲ, ಪ್ಲೀಸ್‌ ಹೆಲ್ಪ್‌ ಮೀ ಕೊಹ್ಲಿ’ ಎಂದು ಒಬ್ಬರು ಮನವಿ ಮಾಡಿದ್ದಾರೆ!

‘ಭಾರತದ ಆಟಗಾರರಿಗೆ ಪಾಕಿಸ್ತಾನದಲ್ಲಿ ಹಲವಾರು ಅಭಿಮಾನಿಗಳಿದ್ದಾರೆ. ಅವರೇನು ಮಾಡಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಇನ್ನೊಬ್ಬರು, ‘ಈಚೆಗಷ್ಟೇ ವಿರಾಟ್ ಅವರು ಭಾರತದ ಪ್ರಧಾನಿಯನ್ನು ಭೇಟಿಯಾಗಿದ್ದರು. ಆದ್ದರಿಂದ ಅವರು ನೀಡಿರುವ ಹೇಳಿಕೆಯನ್ನು ಅನಗತ್ಯವಾಗಿ ವಿಜೃಂಭಿಸಲಾಗುತ್ತಿದೆ. ಅವರು ಹೇಳಿರುವುದರಲ್ಲಿ ತಪ್ಪೇನಿದೆ?’ ಎಂದಿದ್ದಾರೆ.

ಬ್ರಿಟಿಷರು ಪರಿಚಯಿಸಿದ ಕ್ರಿಕೆಟ್‌ ಆಟದಲ್ಲಿ ಭಾರತ ಇವತ್ತು ಅಗ್ರಸ್ಥಾನದಲ್ಲಿದೆ. ಭಾರತದ ಕ್ರಿಕೆಟಿಗರಿಗೆ ಇರುವಷ್ಟು ತಾರಾ ವರ್ಚಸ್ಸು ಬಹುಶಃ ಇಂಗ್ಲೆಂಡ್‌ನ ಆಟಗಾರರಿಗೂ ಇಲ್ಲ. ಹಣ, ಖ್ಯಾತಿಗಳು ಇಲ್ಲಿಯ ಕ್ರಿಕೆಟಿಗರಿಗೆ ಒಲಿದಿವೆ. ಅದೆಲ್ಲವೂ ಇಲ್ಲಿಯ ಕೋಟಿ ಕೋಟಿ ಕ್ರಿಕೆಟ್‌ಪ್ರಿಯರಿಂದಾಗಿಯೇ ಎಂಬುದಂತೂ ಸತ್ಯ. ತಮ್ಮನ್ನು ದೇವರಂತೆ ಆರಾಧಿಸುವ ಜನರಿಗೆ ಮಾದರಿಯಾಗುವ ಜವಾಬ್ದಾರಿ ಕ್ರಿಕೆಟ್‌ ತಾರೆಯರಿಗೆ ಇದೆ. ಕ್ರೀಡಾಂಗಣದಲ್ಲಿ ಅವರು ಆಡುವ ಆಟದ ಜೊತೆಗೆ ಅವರ ವೈಯಕ್ತಿಕ ಜೀವನವನ್ನೂ ಜನರು ಗಮನಿಸುತ್ತಾರೆ. ಅವರನ್ನು ಅನುಸರಿಸುತ್ತಾರೆ. ಜಾಹೀರಾತುಗಳಲ್ಲಿ ತಮ್ಮ ನೆಚ್ಚಿನ ಆಟಗಾರರು ತೋರಿಸುವ ಉತ್ಪನ್ನಗಳನ್ನು ಖರೀದಿಸುತ್ತಾರೆ.

‘ಮದುವೆಯಾಗಲು ವಿದೇಶದ ತಾಣ ಬೇಕು. ಓಡಾಡಲು ವಿದೇಶಿ ವಾಹನ ಬೇಕು. ಆದರೂ ನೀವು ದೇಶಪ್ರೇಮಿಯೇ’ ಎಂದು ಅಭಿಮಾನಿಯೊಬ್ಬರು ಕೇಳಿರುವ ಪ್ರಶ್ನೆಗೆ ವಿರಾಟ್ ಇನ್ನೂ ಉತ್ತರ ಕೊಟ್ಟಿಲ್ಲ.

ಐಪಿಎಲ್‌ನಲ್ಲಿ ವಿರಾಟ್ ನಾಯಕತ್ವದ ಆರ್‌ಸಿಬಿ ತಂಡದಲ್ಲಿ ಕರ್ನಾಟಕದ ಎಷ್ಟು ಆಟಗಾರರಿದ್ದಾರೆ? ವಿದೇಶಿ ತಾರೆಗಳು ಎಷ್ಟು ಜನರಿದ್ದಾರೆ? ಕನ್ನಡದ ಅಭಿಮಾನಿಗಳು ವಿರಾಟ್ ಅವರಂತೆ ಯೋಚನೆ ಮಾಡಿದರೆ ಹೇಗಿರುತ್ತದೆ? ಆದರೆ, ಈ ದೇಶದ ಕ್ರಿಕೆಟಿಗರ ಅದೃಷ್ಟ ಏನೆಂದರೆ, ಇಲ್ಲಿಯ ಅಭಿಮಾನಿಗಳು ಹೆಚ್ಚು ಕ್ಷಮಾಗುಣವನ್ನು ಹೊಂದಿರುವುದು. ತಮ್ಮ ನೆಚ್ಚಿನ ಆಟಗಾರ ಒಂದು ಶತಕ ಹೊಡೆದರೆ ಆತನ ಹತ್ತು ವೈಫಲ್ಯಗಳನ್ನು ಮರೆತುಬಿಡುವಷ್ಟು ಉದಾರಿಗಳು. ಆದರೆ ಕ್ರಿಕೆಟ್‌ ಅನ್ನು ದೇಶಭಕ್ತಿಯ ಒಂದು ಭಾಗವಾಗಿ ಪಾಲಿಸುವ ಅಭಿಮಾನಿಗಳು, ಬೇರೆ ದೇಶದ ಆಟಗಾರರನ್ನೂ ಗೌರವಿಸುತ್ತಾರೆ. ಪ್ರೀತಿಸುತ್ತಾರೆ. ಆದರೆ ಅಭಿಮಾನಿಗಳಿಗೆ ಇರದ ಸಂಕುಚಿತ ಮನೋಭಾವ ಅವರ ‘ರೋಲ್‌ ಮಾಡೆಲ್‌’ಗಳಲ್ಲಿ ಇರುವುದು ಹೇಗೆ?

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !