ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಲಿಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಶಿಕ್ಷಕರಿಂದ ಗುಂಪು ತಾರತಮ್ಯ ಏಕೆ?

ವಿದ್ಯಾರ್ಥಿಗಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಗುಂಪುಗಳನ್ನು ಮಾಡುವ ವಿಷಯದಲ್ಲಿ ಶಿಕ್ಷಕರು ಒಂದಷ್ಟು ಸೂಕ್ಷ್ಮ ಸಂವೇದನೆಯನ್ನು ತೋರಬೇಕಾಗುತ್ತದೆ
Published 18 ಅಕ್ಟೋಬರ್ 2023, 19:10 IST
Last Updated 18 ಅಕ್ಟೋಬರ್ 2023, 19:10 IST
ಅಕ್ಷರ ಗಾತ್ರ

ಲೇಖನ– ಎಚ್‌.ಬಿ. ಚಂದ್ರಶೇಖರ್

–––

ಕೆಲ ದಿನಗಳ ಹಿಂದೆ ಪ್ರೌಢಶಾಲೆಯ ಭೇಟಿಯಲ್ಲಿ, ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ತಿಳಿದುಬಂದ ವಿಷಯವೊಂದು ಚಿಂತನೆಗೆ ಹಚ್ಚುವಂತಿತ್ತು. ತರಗತಿಯಲ್ಲಿ ಬುದ್ಧಿವಂತ ವಿದ್ಯಾರ್ಥಿಗಳನ್ನು ‘ಎ’ ಗುಂಪು, ಅವರಿಗಿಂತ ಕಡಿಮೆ ಬುದ್ಧಿವಂತರನ್ನು ‘ಬಿ’ ಗುಂಪು ಹಾಗೂ ಅತಿಕಡಿಮೆ ಬುದ್ಧಿವಂತರನ್ನು ‘ಸಿ’ ಗುಂಪು ಎಂದು ವರ್ಗೀಕರಿಸಿ, ಅವರ ಕಲಿಕಾ ಮಟ್ಟ ಸುಧಾರಣೆಗೆ ಒಂದಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ಶಿಕ್ಷಕರೊಂದಿಗೆ ಮಾತನಾಡಿದಾಗ, ‘ನಾವು ವರ್ಗೀಕರಣ ಮಾಡಿರುವುದು ಅವರಿಗೆ ತಿಳಿಯದು ಹಾಗೂ ಕಡಿಮೆ ಬುದ್ಧಿವಂತ ವಿದ್ಯಾರ್ಥಿಗಳನ್ನು ‘ಸಿ’ ಗುಂಪು ಎಂದು ವರ್ಗೀಕರಿಸುವುದರಿಂದ ಅವರಿಗೇನೂ ಬೇಸರವಿಲ್ಲ’ ಎಂದರು. ಶಿಕ್ಷಕರನ್ನು ತರಗತಿಯಾಚೆ ಕಳುಹಿಸಿ ವಿದ್ಯಾರ್ಥಿಗಳೊಂದಿಗೆ ಖಾಸಗಿಯಾಗಿ ಮಾತನಾಡಿದಾಗ, ತಾವು ಯಾವ ಗುಂಪು ಎಂಬ ಬಗ್ಗೆ ತಮಗೆ ಮಾಹಿತಿ ಇರುವುದಾಗಿ ಅವರು ತಿಳಿಸಿದರು. ತಾವು ಓದಿನಲ್ಲಿ ಹಿಂದಿರುವ ಅಂಶದ ಆಧಾರದ ಮೇಲೆ ಪ್ರತ್ಯೇಕ ಗುಂಪು ಮಾಡಿರುವುದು ಎಲ್ಲರಿಗೂ ತಿಳಿದಿರುವುದರಿಂದ, ತಮ್ಮನ್ನು ಬುದ್ಧಿವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೋಡುವ ರೀತಿ ಬೇಸರ, ನೋವು ತರಿಸುತ್ತಿದೆ ಎಂದು ‘ಸಿ’ ಗುಂಪಿನವರು ಹೇಳಿದರು. ಈ ರೀತಿಯ ವರ್ಗೀಕರ ಣದಿಂದ ಆಗುವ ಅಪಾಯದ ಬಗ್ಗೆ ಶಿಕ್ಷಕರ ಸಭೆಯಲ್ಲಿ ಮನವರಿಕೆ ಮಾಡಿಕೊಡಲು ಯತ್ನಿಸಲಾಯಿತು.

ಶಿಕ್ಷಕರನ್ನು ಸಹ ಬೋಧನಾ ಗುಣಮಟ್ಟದ ಆಧಾರದ ಮೇಲೆ ‘ಎ’, ‘ಬಿ’, ‘ಸಿ’ ಎಂದು ವರ್ಗೀಕರಣ ಮಾಡಬಹುದಲ್ಲವೇ? ಅದಕ್ಕೆ ತಮ್ಮ ಒಪ್ಪಿಗೆ ಇದೆಯೇ ಎಂದು ಶಿಕ್ಷಕರನ್ನು ಕೇಳಿದಾಗ, ಹಾಗೆ ಮಾಡಿದರೆ ತಮಗೆ
ಬೇಸರವಾಗುತ್ತದೆ ಎಂಬ ಉತ್ತರ ಎಲ್ಲರಿಂದಲೂ ಬಂದಿತು. ಒಂದಷ್ಟು ಚಿಂತನೆಯ ನಂತರ ಶಿಕ್ಷಕರು ಈ ಬಗೆಯ ವರ್ಗೀಕರಣದಿಂದ ಮಕ್ಕಳಿಗೂ ಬೇಸರವಾಗು ತ್ತದೆ ಎಂಬುದನ್ನು ಒಪ್ಪಿಕೊಂಡರು.

ಈ ಕುರಿತು ಇನ್ನಷ್ಟು ವ್ಯಾಪಕವಾಗಿ ಪರಿಶೀಲಿಸಿದಾಗ, ರಾಜ್ಯದ ಹೆಚ್ಚಿನ ಪ್ರೌಢಶಾಲೆ
ಗಳಲ್ಲಿ ಅಂಕಗಳ ಆಧಾರದ ಮೇಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ‘ಎ’, ‘ಬಿ’, ‘ಸಿ’ ಎಂದು ವರ್ಗೀಕರಣ ಮಾಡುತ್ತಿರುವುದು ತಿಳಿದುಬಂದಿತು. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಆಧರಿಸಿ ಗುಂಪುಗಳನ್ನು ಮಾಡಿ ಸುಧಾರಣೆಗೆ ಕ್ರಮ ಕೈಗೊಳ್ಳುವ ವಿಧಾನ ಕೆಲವು ದೇಶಗಳ ಶಾಲೆಗಳಲ್ಲಿ ಜಾರಿಯಲ್ಲಿದೆ. ಇನ್ನು ಕೆಲವು ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ, ನಿಧಾನ ಕಲಿಕೆಯವರನ್ನೆಲ್ಲಾ ಸೇರಿಸಿ ಪ್ರತ್ಯೇಕ ತರಗತಿಗಳ ನ್ನಾಗಿಸಿ ಕಲಿಸುತ್ತಿದ್ದಾರೆ. ತಮ್ಮನ್ನು ‘ಸಿ’ ಗುಂಪಿನಲ್ಲಿಟ್ಟು ಕಲಿಸುತ್ತಿದ್ದ ಕಾರಣ ತಮ್ಮ ಬಗ್ಗೆ ತೋರುತ್ತಿದ್ದ ತಾತ್ಸಾರ, ತರತಮದಿಂದ ತಮಗೆ ಉಂಟಾಗುತ್ತಿದ್ದ ನೋವನ್ನು ಅನೇಕರು ನನ್ನ ಬಳಿ ಹಂಚಿಕೊಂಡಿದ್ದಾರೆ.

ಸಾಮರ್ಥ್ಯ ಆಧಾರಿತ ಗುಂಪುಗಳನ್ನು ಮಾಡಿ ಕಲಿಸುವ ಬಗ್ಗೆ ತಜ್ಞರಲ್ಲಿಯೂ ಪರ-ವಿರೋಧದ ಅಭಿಪ್ರಾಯಗಳಿವೆ. ವಿಷಯವನ್ನು ಗ್ರಹಿಸಿ, ಕಲಿತು, ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ ನಿಧಾನ ಕಲಿಕೆಯ ವಿದ್ಯಾರ್ಥಿಗಳಲ್ಲಿ ಕಡಿಮೆ ಇರುವುದರಿಂದ, ಅವರಿಗೆ ವಿಷಯಗಳನ್ನು ನಿಧಾನವಾಗಿ ಪುನರಾವರ್ತಿಸಿ ತಿಳಿಸಿ ಕಲಿಸುವ ಅಗತ್ಯ ಇರುತ್ತದೆ; ಹೀಗಾಗಿ, ಅವರನ್ನು ಪ್ರತ್ಯೇಕ ಗುಂಪು ಅಥವಾ ತರಗತಿ ಮಾಡಿ ಕಲಿಸುವುದು ಪರಿಣಾಮಕಾರಿ ಎಂಬುದು ಪರ ಇರುವವರ ವಾದವಾಗಿದೆ. ಕಡಿಮೆ ಸಾಮರ್ಥ್ಯದ ವಿದ್ಯಾರ್ಥಿಗ
ಳನ್ನು ಪ್ರತ್ಯೇಕಿಸಿ ಕಲಿಸುವುದರಿಂದ ಅವರಿಗೆ ತಾರತಮ್ಯ ಎಸಗಿದಂತೆ ಆಗುವುದಲ್ಲದೆ ಮಾನಸಿಕ ಆಘಾತ, ನೋವು ಉಂಟಾಗುತ್ತದೆ, ಈ ಕಾರಣದಿಂದ ಈ ರೀತಿ ಪ್ರತ್ಯೇಕ ಗುಂಪು ಮಾಡುವುದು ಸಲ್ಲದು ಎಂಬುದು ಈ ವಿಷಯದ ವಿರೋಧ ಇರುವವರ ವಾದವಾಗಿದೆ.

ನಮ್ಮ ಬಗ್ಗೆ ಇತರರು ಹೊಂದಿರಬಹುದಾದ ನಂಬಿಕೆ ಅಥವಾ ನಿರೀಕ್ಷೆಗಳು ನಮ್ಮ ವರ್ತನೆ
ಗಳನ್ನು ನಿಧಾನವಾಗಿ ಪ್ರಭಾವಿಸುತ್ತಾ ಹೋಗಿ, ಅಂತಹ ನಂಬಿಕೆಗಳನ್ನು ಕೆಲ ಕಾಲದ ನಂತರ ನಾವು ನಿಜವಾಗಿಸುವ ಸಾಧ್ಯತೆ ಇದೆ. ಇದನ್ನು ಸೆಲ್ಫ್ ಫುಲ್‌ಫಿಲ್ಲಿಂಗ್‌ ಪ್ರೊಫೆಸಿ ಎನ್ನಲಾಗುತ್ತದೆ. ಈ ಕಾರಣದಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಬಗ್ಗೆ, ಮಾಲೀಕರು ಅವರ ಉದ್ಯೋಗಿಗಳ ಬಗ್ಗೆ ಹೊಂದುವ ನಂಬಿಕೆ ಅಥವಾ ನಿರೀಕ್ಷೆಗಳು ಉತ್ತಮವಾಗಿ ಇರುವಂತೆ ನೋಡಿಕೊಳ್ಳುವುದು ಪ್ರಮುಖವಾದ ಅಂಶ.

1968ರಲ್ಲಿ ರೊಸೆಂಥಲ್‌ ಮತ್ತು ಜಾಕೊಬ್‌ಸೆನ್‌ ಎಂಬ ತಜ್ಞರು, ಅಮೆರಿಕದ ಪ್ರಾಥಮಿಕ ಶಾಲೆಯೊಂದರ ತರಗತಿಯ ವಿದ್ಯಾರ್ಥಿಗಳಿಗೆ ಬುದ್ಧಿಶಕ್ತಿ ಪರೀಕ್ಷೆ ಕೈಗೊಳ್ಳುತ್ತಾರೆ. ಕೆಲವು ನಿರ್ದಿಷ್ಟ ವಿದ್ಯಾರ್ಥಿಗಳನ್ನು ಹೆಸರಿಸಿ, ಈ ವಿದ್ಯಾರ್ಥಿಗಳು ಅತ್ಯುತ್ತಮ ಬುದ್ಧಿಶಕ್ತಿ
ಉಳ್ಳವರೆಂದು ತಿಳಿಸುತ್ತಾರೆ. ಕೆಲ ತಿಂಗಳ ನಂತರ ಶಿಕ್ಷಕರು ಕೈಗೊಂಡ ಪರೀಕ್ಷೆಯಲ್ಲಿ, ಬುದ್ಧಿವಂತರು ಎನ್ನಲಾಗಿದ್ದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ. ಅವರಿಗೆ ಶಿಕ್ಷಕರು ಇತರ ವಿದ್ಯಾರ್ಥಿಗಳಿ ಗಿಂತಲೂ ವಿಶೇಷ ಗಮನ, ಆದ್ಯತೆ, ಅವಕಾಶ ನೀಡಿದ್ದರಿಂದ ಉತ್ತಮ ಸಾಧನೆ ಮಾಡಿರುತ್ತಾರೆ.

ವಿದ್ಯಾರ್ಥಿಗಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಗುಂಪುಗಳನ್ನು ಮಾಡಿ, ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ ಶಿಕ್ಷಕರು ಒಂದಷ್ಟು ಸೂಕ್ಷ್ಮ ಸಂವೇದನೆಯನ್ನು ತೋರುವ ಅಗತ್ಯ ಇರುತ್ತದೆ. ಯಾವುದೇ ವಿದ್ಯಾರ್ಥಿಯ ಮನಸ್ಸಿಗೆ ಗಾಸಿಯಾಗದಂತೆ, ಅವರಲ್ಲಿ ಕಲಿಯುವ ಆಸಕ್ತಿ, ಉತ್ಸಾಹ ಮೂಡುವಂತೆ ತಾಳ್ಮೆ ವಹಿಸಬೇಕಾಗು
ತ್ತದೆ. ಅವರು ಕಲಿತೇ ಕಲಿಯುತ್ತಾರೆ ಎಂಬ ವಿಶ್ವಾಸ, ನಂಬಿಕೆಯೊಂದಿಗೆ, ಅವರು ಕಲಿಯುವ ವೇಗಕ್ಕೆ ತಕ್ಕಂತೆ ಕಲಿಸುವ ವಿಧಾನವನ್ನು ಅನುಸರಿಸುವುದು ಉಪಯುಕ್ತವಾದುದಾಗಿದೆ.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT