ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಹಿಮಾಚಲದಲ್ಲಿ ಇಂಗಿನ ಗುಂಗು

ಹಿಮಾಲಯದ ತಪ್ಪಲಿನಲ್ಲಿ ಪ್ರಾಯೋಗಿಕವಾಗಿ ಬೆಳೆಯಲಾಗುತ್ತಿರುವ ಇಂಗಿನ ಬೆಳೆ ಯಶಸ್ವಿಯಾದರೆ, ದೇಶದ ರೈತರಲ್ಲಿ ಹೊಸ ಭರವಸೆ ಮೂಡಲಿದೆ
Last Updated 26 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಅವರ ಹೆಸರು ಮೋತಿಲಾಲ್. ಹಿಮಾಚಲ ಪ್ರದೇಶದ ಹಿಮ ತುಂಬಿದ ಗಿರಿಶ್ರೇಣಿಗಳ ನಡುವಿನ ಲಾಹುಲ್ ಕಣಿವೆಯ ಒಂದು ಹೆಕ್ಟೇರ್ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಅವರು ಈಗ ಅತ್ಯಂತ ಖುಷಿ ಯಲ್ಲಿದ್ದಾರೆ. ಅದಕ್ಕೆ ಕಾರಣ, ಭಾರತದ ಯಾವ ರೈತನೂ ಮಾಡಿರದ ದಾಖಲೆ ಮತ್ತು ಬೆಳೆಯಿಂದ ಸಿಗಲಿರುವ ಎರಡು ಲಕ್ಷ ರೂಪಾಯಿ ಹೆಚ್ಚುವರಿ ಆದಾಯ! ಆಶ್ಚರ್ಯವಾಗುತ್ತಿದೆಯೇ? ಎಲ್ಲವೂ ಅಂದುಕೊಂಡಂತೆ ನಡೆದರೆ ಇದು ಅತಿದೊಡ್ಡ ಸಾಧನೆ ಎನಿಸಲಿದೆ.

ಅಂದಹಾಗೆ ಮೋತಿಲಾಲ್‌ ಬೆಳೆದಿರುವುದು ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುವ, ಆಹಾರ ಪದಾರ್ಥಗಳಿಗೆ ಹಾಕುವ ಒಗ್ಗರಣೆಯ ಘಮ ಹೆಚ್ಚಿಸುವ ‘ಇಂಗಿ’ನ ಗಿಡಗಳನ್ನು. ನೆಟ್ಟ 60ರಲ್ಲಿ 30ಕ್ಕೂ ಹೆಚ್ಚು ಸಸಿಗಳು ಯಾವ ಕೀಟಬಾಧೆಯೂ ಇಲ್ಲದೆ ಸಮೃದ್ಧವಾಗಿ ಬೆಳೆದುನಿಂತಿವೆ. ಫೆರುಲಾ ಅಸಾಫೆಟಿಡ (ಫೆಟಿಡ ಎಂದರೆ ದುರ್ವಾಸನೆ ಬೀರುವ ವಸ್ತು) ಎಂಬ ತಳಿಯ ಈ ಗಿಡಗಳನ್ನು ‘ಸಾವಿಲ್ಲದ ಶಾಶ್ವತ ಸಸ್ಯ’ಗಳೆಂದು ಕರೆಯುತ್ತಾರೆ. ಪಾಲಂಪುರದ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೊರಿಸೋರ್ಸ್ ಟೆಕ್ನಾಲಜಿಯವರು (ಐಎಚ್‌ಬಿಟಿ) ಕಳೆದ ಅಕ್ಟೋಬರ್‌ನಲ್ಲಿ ಮೋತಿಲಾಲ್‍ಗೆ 60 ಇಂಗಿನ ಸಸಿಗಳನ್ನು ನೀಡಿದ್ದರು.

ಅದುವರೆಗೂ ತರಕಾರಿ ಬೆಳೆಯುತ್ತಿದ್ದ ಮೋತಿಲಾಲ್ ಸಸಿಗಳನ್ನು ನೆಟ್ಟು ಆರೈಕೆ ಶುರುಮಾಡಿದರು. ಆಗಾಗ ಜಮೀನಿಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಿದ ಐಎಚ್‌ಬಿಟಿಯ ಕೃಷಿ ವಿಜ್ಞಾನಿಗಳು, ‘ಬೆಳೆ ಕೈಗೆ ಬಂದರೆ ಕೆ.ಜಿಗೆ
₹ 20 ಸಾವಿರದಿಂದ 30 ಸಾವಿರ ದೊರಕುತ್ತದೆ ಮತ್ತು ಈ ಭಾಗದಲ್ಲಿ ಇದನ್ನು ಬೆಳೆದ ಪ್ರಪ್ರಥಮ
ರೈತ ನೀನಾಗುತ್ತೀಯೆ’ ಎಂದು ಹುರಿದುಂಬಿಸಿದ್ದರು.

ಇಂಗಿಗೆ ಭಾರತ ಮತ್ತು ಉಪಖಂಡಗಳಲ್ಲಿ ಭಾರೀ ಬೇಡಿಕೆಯಿದೆ. ತಂಪಾದ ಹವೆ ಮತ್ತು ಒಣಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುವ ಇಂಗು ಮಸಾಲೆಯಾಗಿ ಮತ್ತು ನಾಟಿ ಔಷಧಿಯಾಗಿ ಬಳಕೆಯಲ್ಲಿದೆ. ಮಧ್ಯ ಮತ್ತು ಪೂರ್ವ ಏಷ್ಯಾದ ಶೀತ ಹಾಗೂ ಒಣಹವೆಯ ಪ್ರದೇಶಗಳ ಕಾಡುಗಳಲ್ಲಿ ಇಂಗಿನ ಗಿಡ ಹುಲುಸಾಗಿ ಬೆಳೆಯುತ್ತದೆ. ಕಳೆದ ಸಾಲಿನಲ್ಲಿ ನಾವು ಸಾವಿರ ಕೋಟಿ ರೂಪಾಯಿ ಮೌಲ್ಯದ 1,540 ಟನ್ ಕಚ್ಚಾ ಇಂಗನ್ನು ಇರಾನ್,
ಅಫ್ಗಾನಿಸ್ತಾನ, ಉಜ್ಬೇಕಿಸ್ತಾನದಿಂದ ಆಮದು ಮಾಡಿಕೊಂಡಿದ್ದೇವೆ.

ಅಚ್ಚರಿಯ ಸಂಗತಿ ಏನು ಗೊತ್ತೇ? ನಮ್ಮ ದೇಶದಲ್ಲಿ ಇಂಗನ್ನು ಬೆಳೆಯಲು ಪ್ರಾರಂಭಿಸಿದ್ದು 2018ರಲ್ಲಿ! ದೆಹಲಿಯ ನ್ಯಾಷನಲ್ ಬ್ಯೂರೊ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್‌ನವರು (ಎನ್‌ಬಿಪಿಜಿಆರ್‌) ಇರಾನ್‌ನಿಂದ ಬೀಜಗಳನ್ನು ತರಿಸಿ, ಐಎಚ್‌ಬಿಟಿಯ ಅಂಗಸಂಸ್ಥೆಯಾದ ಸೆಂಟರ್ ಫಾರ್ ಹೈ ಆಲ್ಟಿಟ್ಯೂಡ್ ಬಯಾಲಜಿಗೆ (ಸಿಇಎಚ್‌ಎಬಿ) ನೀಡಿ, ‘ನಮ್ಮ ನೆಲದಲ್ಲಿ ಬೆಳೆಯಲು ಸಾಧ್ಯವೇ ಪರೀಕ್ಷಿಸಿ ಹೇಳಿ’ ಎಂದರು.

ಐಎಚ್‌ಬಿಟಿ ಸಂಶೋಧಕರು ಬೆಳೆಗೆ ಬೇಕಾದ ವಾತಾವರಣವನ್ನು ನರ್ಸರಿಗಳಲ್ಲಿ ಕೃತಕವಾಗಿ ನಿರ್ಮಿಸಿ, ಹಾರ್ಮೋನ್ ಚಿಕಿತ್ಸೆಯನ್ನೂ ನೀಡಿ ಹಲವು ಸಲ ಪ್ರಯತ್ನಿಸಿದರು. ನಿರ್ದೇಶಕ ಕುಮಾರ್ ಅವರ ಪ್ರಕಾರ, ಬೀಜ ಮೊಳಕೆಯ ಪ್ರಮಾಣ ಶೇ 60-70 ಮಾತ್ರ. ‘ಸಹಜ ವಾತಾವರಣದಲ್ಲಿ ಪ್ರಯತ್ನಿಸಿದರೆ ಹೇಗೆ?’ ಎಂದು ಸಿಇಎಚ್‌ಎಬಿ ಸಹಯೋಗದಲ್ಲಿ ಲಾಹುಲ್, ರಿಬ್ಲಿಂಗ್ ಮತ್ತು ಸ್ಪಿತಿ ಕಣಿವೆಯ ಹತ್ತಾರು ರೈತರಿಗೆ ಇರಾನ್‍ನಿಂದ ತರಿಸಿದ ಸಸಿಗಳನ್ನೇ ನೀಡಿ, ಒಟ್ಟು ಎಂಟೂವರೆ ಎಕರೆಯಲ್ಲಿ ನೆಡಿಸಲಾಯಿತು. ಮೋತಿಲಾಲ್ ನೆಟ್ಟ ಸಸಿಗಳು ಈ ಮಾರ್ಚ್‌ನಲ್ಲಿ ಎಲೆ ಬಿಡಲಾರಂಭಿಸಿದವು. ಇನ್ನೊಬ್ಬ ರೈತ ಸಂತೋಷ್ ನೆಟ್ಟಿದ್ದ 30 ಸಸಿಗಳಲ್ಲಿ 18 ಉಳಿದಿವೆ. ಇವು ಇನ್ನೂ ನಾಲ್ಕು ವರ್ಷಕಾಲ ಬದುಕುಳಿದರೆ ಫಲ ಗ್ಯಾರಂಟಿ ಎನ್ನುವ ಅಧಿಕಾರಿ ಅಶೋಕ್, ‘ನಮ್ಮ ಈ ಪ್ರಾಯೋಗಿಕ ಯೋಜನೆ ಯಶಸ್ಸು ಕಂಡರೆ, ಇಂಗಿನ ಬೆಳೆಗೆ ಹೆಚ್ಚು ಒತ್ತು ನೀಡಲಾಗುತ್ತದೆ’ ಎಂದಿದ್ದಾರೆ.

ಹದವಾದ ಬಿಸಿಲು, 250- 300 ಮಿ.ಮೀ ಮಳೆ ಮತ್ತು 35 ಡಿಗ್ರಿ ಸೆಂಟಿಗ್ರೇಡ್‍ಗಿಂತ ಕಡಿಮೆ ಉಷ್ಣಾಂಶದಲ್ಲಿ ಮಾತ್ರ ಬದುಕುವ ಇಂಗಿನ ಗಿಡ ಫಲ ಕೊಡಲು 5 ವರ್ಷ ಬೇಕು.

ಗಜ್ಜರಿಯಂಥ ಬೇರು ಮತ್ತು ಸೀಳಿದ ಎಲೆಗಳಿರುವ ಗಿಡವು ಐದು ವರ್ಷಗಳ ಬೆಳವಣಿಗೆಯ ನಂತರ ಹೂ ಬಿಡುತ್ತದೆ. ಆಗ ಕಾಂಡವನ್ನು ನೆಲದವರೆಗೆ ಕತ್ತರಿಸಿ ಬೇರನ್ನು ಬಿಸಿಲಿಗೆ ಒಣಗಿಸಿದಾಗ, ಹಾಲಿನಂಥ ಪದಾರ್ಥವನ್ನು ಬೇರು ಸ್ರವಿಸುತ್ತದೆ. ಕ್ರಮೇಣ ಇದು ಮೇಣದ ರೂಪ ಪಡೆದು ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ತರಿದು ಸಂಗ್ರಹಿಸಿ ಬೇರನ್ನು ಮತ್ತೆ ನಾಲ್ಕೈದು ದಿನ ಬಿಸಿಲಿಗೆ ಹರವುತ್ತಾರೆ. ಮತ್ತಷ್ಟು ಮೇಣ ಉತ್ಪತ್ತಿಯಾಗುತ್ತದೆ. ಇದೇ ಕಟುವಾದ ವಾಸನೆಯಿರುವ ಇಂಗು. ಇದಕ್ಕೆ ಸ್ವಲ್ಪ ಅಕ್ಕಿ ಅಥವಾ ಗೋಧಿ ಹಿಟ್ಟನ್ನು ಸವರಿ ಪ್ಯಾಕ್ ಮಾಡಲಾಗುತ್ತದೆ. ಒಂದು ಗಿಡವು ಸುಮಾರು 20ರಿಂದ 25 ಗ್ರಾಂ ಇಂಗು ನೀಡುತ್ತದೆ. ಒಂದು ಹೆಕ್ಟೇರ್‌ನಲ್ಲಿ ಬೆಳೆಯುವ ಇಂಗು ಪ್ರತೀ ಐದು ವರ್ಷಕ್ಕೆ ₹ 10 ಲಕ್ಷ ಆದಾಯ ತರಬಲ್ಲದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT