ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮನಸ್ಸು ಅರಿಯದಿದ್ದರೆ...

ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ದೃಶ್ಯಾವಳಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವವರ ಸಂಖ್ಯೆ ದುಪ್ಪಟ್ಟಾಗಿರುವುದು ಚಿಂತೆಗೆ ಈಡುಮಾಡುವ ಸಂಗತಿ
Last Updated 12 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಕೊರೊನಾ ಕಾಲ ಹಲವಾರು ಹೊಸತುಗಳನ್ನು, ಬದಲಾವಣೆಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ. ಇದರಲ್ಲಿ ಆನ್‍ಲೈನ್‌ ಶಿಕ್ಷಣ, ವಿದ್ಯಾಗಮ, ವರ್ಕ್ ಫ್ರಂ ಹೋಂ, ತಂತ್ರಜ್ಞಾನದ ಜಾಲದಲ್ಲಿ ಸಿಲುಕಿದ ಯುವಜನ ಹಾಗೂ ಅದರ ಪರಿಣಾಮ, ಶಿಕ್ಷಣದ ಮೂಲ ಧ್ಯೇಯವಾದ ವ್ಯಕ್ತಿತ್ವ ನಿರ್ಮಾಣದ ಮೂಲ ಉದ್ದೇಶಕ್ಕಾಗುವ ಧಕ್ಕೆಯಂತಹ ಅನೇಕ ಸಂಗತಿಗಳಿವೆ.

ಈ ಪಟ್ಟಿಯಲ್ಲಿ, ಅಂತರ್ಜಾಲದ ಮೂಲಕ ಮಕ್ಕಳ ಮೇಲೆ ನಡೆಯುವ ಲೈಂಗಿಕ ಕಿರುಕುಳ ಹಾಗೂ ಆ ವರ್ತುಲದೊಳಗೆ ಬೀಳುವ ಹದಿಹರೆಯದ ವಿದ್ಯಾರ್ಥಿಗಳ ವಿಷಯ ಸಹ ಸೇರಿಕೊಂಡಿದೆ. ಇದಕ್ಕೆ ಇತ್ತೀಚೆಗಿನ ನಿದರ್ಶನ, ಮಂಗಳೂರಿನಲ್ಲಿ ಎರಡು ವಾರಗಳ ಹಿಂದೆ ನಡೆದ ಪ್ರಸಂಗ. ತಮ್ಮ 14 ವರ್ಷದ ಮಗಳ ಮೊಬೈಲ್ ರಿಚಾರ್ಜ್ ಮಾಡಿಸಲು ಹೋದ ತಾಯಿ, ಅಂಗಡಿಯಾತನಿಗೆ ನೀಡಿದ ಮೊಬೈಲ್ ಸಂಖ್ಯೆಯನ್ನು ಗುರುತಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ, ಆ ಬಾಲಕಿಗೆ ಸಂದೇಶ ರವಾನಿಸಿ, ಆ ಮೂಲಕ ಸ್ನೇಹ ಬೆಳೆಸಿ ಸಾಮಾಜಿಕ ಜಾಲತಾಣಗಳಲ್ಲೂ ಆಕೆಯ ಸಂಪರ್ಕ ಸಾಧಿಸುತ್ತಾನೆ. ಜೊತೆಗೆ ತನ್ನ ಸ್ನೇಹಿತರಿಗೂ ಆಕೆಯನ್ನು ಅಂತರ್ಜಾಲದಲ್ಲೇ ಪರಿಚಯಿಸುತ್ತಾನೆ. ಕೆಲ ದಿನಗಳ ನಂತರ ಕೆಟ್ಟು ಹೋದ ಆ ಮೊಬೈಲ್‍ ಅನ್ನು ಸರ್ವಿಸ್ ಅಂಗಡಿಗೆ ನೀಡಲಾಗುತ್ತದೆ. ಅಂಗಡಿಯಾತ ಆ ಬಾಲಕಿಯ ಮತ್ತು ಅಪರಿಚಿತರ ನಡುವೆ ರವಾನೆಯಾದ ಅನುಚಿತ ಚಿತ್ರಗಳನ್ನು ಗಮನಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಿಕೃತಿ ಮೆರೆಯುತ್ತಾನೆ. ಈ ವಿಷಯ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇಂತಹ ಹಲವಾರು ಪ್ರಕರಣಗಳು ಪ್ರಪಂಚದಾದ್ಯಂತ ನಡೆಯುತ್ತಿವೆ ಹಾಗೂ ಅವುಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಪ್ರಕಾರ, ವಾರವೊಂದಕ್ಕೆ ಜಿಲ್ಲೆಯಲ್ಲಿ ಕನಿಷ್ಠವೆಂದರೂ ಇಂತಹ ಮೂರು ಪ್ರಕರಣಗಳು ದಾಖಲಾಗುತ್ತಿವೆ. ಲೈಂಗಿಕ ಕಿರುಕುಳಕ್ಕೆ ಗುರಿಯಾಗುವ ಬಹುತೇಕರು 13ರಿಂದ 16 ವರ್ಷದ ಒಳಗಿನ ವಿದ್ಯಾರ್ಥಿಗಳಾಗಿದ್ದಾರೆ. ಆನ್‍ಲೈನ್ ಶಿಕ್ಷಣದ ನೆಪದಲ್ಲಿ ಅಂತರ್ಜಾಲದ ಮೂಲಕ ಕಿಡಿಗೇಡಿಗಳ ಸಂಪರ್ಕ ಜಾಲದೊಳಗೆ ಬೀಳುವ ಅಥವಾ ಸಂಪರ್ಕ ಸಾಧಿಸುವ ಬಾಲಕ ಅಥವಾ ಬಾಲಕಿಯನ್ನು ಲೈಂಗಿಕ ತೃಷೆಗಾಗಿ ಬಳಸಿಕೊಳ್ಳುವ ವಿಕೃತ ಮನಃಸ್ಥಿತಿ ದಿನೇ ದಿನೇ ಹೆಚ್ಚಾಗುತ್ತಿದೆ.‌

ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ಭಾರತದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಬರುವ ಕರೆಗಳ ಪ್ರಮಾಣ ಸುಮಾರು ಶೇ 50ರಷ್ಟು ಹೆಚ್ಚಾಗಿದೆ. ಇದರಲ್ಲಿ ಕೌಟುಂಬಿಕ ದೌರ್ಜನ್ಯದ ಜೊತೆಗೆ ಅಂತರ್ಜಾಲದ ಮೂಲಕ ನಡೆಯುವ ದೌರ್ಜನ್ಯಗಳ ವಿರುದ್ಧದ ದೂರುಗಳೂ ಸೇರಿವೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ (ಎನ್‌ಸಿಆರ್‌ಬಿ) ಅಂಕಿಅಂಶವೂ ಈ ವರದಿಗೆ ಪುಷ್ಟಿ ನೀಡುತ್ತಿದೆ.

ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಹಾಗೂ ಅನುಚಿತ ಎನ್ನಿಸಿಕೊಳ್ಳುವ 25,000 ಚಿತ್ರಗಳನ್ನು ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿಹರಿಯಬಿಡಲಾಗಿತ್ತು. ಆದರೆ ಈ ಸಂಖ್ಯೆ, ಕೊರೊನಾ ಕಾಲದಲ್ಲಿ ದುಪ್ಪಟ್ಟಾಗಿದೆ. ಇದರ ಜೊತೆಗೆ ಭಾರತೀಯ ಮಕ್ಕಳ ರಕ್ಷಣಾ ನಿಧಿ ಎಂಬ ಸ್ವಯಂಸೇವಾ ಸಂಸ್ಥೆಯ ವರದಿಯು ಕಹಿಸತ್ಯವನ್ನು ತೆರೆದಿಟ್ಟಿದೆ. ಇದರ ಪ್ರಕಾರ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳವನ್ನು ಬಿಂಬಿಸುವ ದೃಶ್ಯಾವಳಿಗಳು ಹಾಗೂ ಚಿತ್ರಗಳನ್ನುಅಂತರ್ಜಾಲದಲ್ಲಿ ವೀಕ್ಷಿಸುವವರ ಸಂಖ್ಯೆ ಸುಮಾರು ಶೇ 95ರಷ್ಟು ಹೆಚ್ಚಾಗಿದೆ! ಈ ವರದಿಯು ಪೋಷಕರನ್ನು ಚಿಂತೆಗೆ ಈಡುಮಾಡಿದೆ.

ಕೋವಿಡ್- 19ರ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳೆಲ್ಲರೂ ಮನೆಯಲ್ಲೇ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಅನಿವಾರ್ಯವಾಗಿ ಒಳಗಾಗಬೇಕಾಯಿತು. ಮಕ್ಕಳು ಮೊಬೈಲ್ ಉಪಯೋಗಿಸುವುದಕ್ಕೆ ಆವರೆಗೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಪೋಷಕರು ಅಸಹಾಯಕರಾಗಿ ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಇಡಬೇಕಾಗಿ ಬಂತು.

ಅನ್‍ಲಾಕ್ ಆರಂಭವಾದ ನಂತರ ಪೋಷಕರು ತಮ್ಮ ವೃತ್ತಿಯಲ್ಲಿ ನಿರತರಾಗಿದ್ದಾರೆ. ಹದಿಹರೆಯದ ಮಕ್ಕಳ ಮೇಲೆ ನಿಗಾ ವಹಿಸಲು ಸಾಧ್ಯವಾಗದೇ ಇದ್ದುದೇ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರಬಹುದು. ಈಗಿನ ಸ್ಥಿತಿಯಲ್ಲಿ ಅನಿವಾರ್ಯವಾಗಿರುವ ತಂತ್ರಜ್ಞಾನ ಬಳಕೆಯನ್ನೇ ಬಂಡವಾಳವಾಗಿಸಿಕೊಂಡು ತಮ್ಮ ವಿಕೃತ ಕಾಮನೆಗಳಿಗೆ ಬಳಸಿಕೊಳ್ಳುವ ವ್ಯಕ್ತಿಗಳ ಜಾಲಕ್ಕೆ ಕೆಲ ಮಕ್ಕಳು ಬಿದ್ದರು ಅಥವಾ ಇಂತಹ ದೌರ್ಜನ್ಯಕ್ಕೆ ಒಳಗಾಗದಿದ್ದರೂ ಅಚಾನಕ್ ಆಗಿ ಅನುಚಿತ ಚಿತ್ರಗಳನ್ನೂ ವಿಡಿಯೊಗಳನ್ನೂ ವೀಕ್ಷಿಸಿದ ಕೆಲ ಮಕ್ಕಳು ಅದರ ಪಾಶದಲ್ಲಿ ಸಿಲುಕುವ ಆತಂಕವಂತೂ ಇದ್ದೇ ಇದೆ.

ಬಹುಶಃ ಆನ್‌ಲೈನ್ ಶಿಕ್ಷಣವು ಅಧ್ಯಾಪಕ- ವಿದ್ಯಾರ್ಥಿಗಳ ಸಂಪರ್ಕ, ಶಾಲಾ ಶಿಕ್ಷಣದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಇದರ ನೆರಳಲ್ಲಿ ಅತ್ಯಂತ ಗಂಭೀರವಾಗಿ ಚಿಂತಿಸಬೇಕಾದ ಪರಿಣಾಮವನ್ನೂ ತಂದೊಡ್ಡಿದೆ. ಇ- ಶಿಕ್ಷಣದ ಸಂದರ್ಭದಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆಯ ಜೊತೆಗೆ ಅವರು ಮೊಬೈಲ್ ಫೋನ್ ಹೇಗೆ ಬಳಕೆ ಮಾಡುತ್ತಿದ್ದಾರೆ ಎನ್ನುವುದನ್ನೂ ಪೋಷಕರು ತಿಳಿದುಕೊಳ್ಳಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT