ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ಟಿಲಿನ ಹಂಗಿಲ್ಲದೇ ಸಾಧನೆಯ ಮೆಟ್ಟಿಲೇರಿದವರು

Last Updated 5 ನವೆಂಬರ್ 2013, 19:30 IST
ಅಕ್ಷರ ಗಾತ್ರ

ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳಿಗೆ ಆರೋಗ್ಯ, ಶಿಕ್ಷಣದ ಹಕ್ಕು ಸೇರಿದಂತೆ ಘನತೆಯಿಂದ ಬದುಕುವ ಎಲ್ಲ ಹಕ್ಕುಗಳೂ ಇವೆ.
ಆ ಹಕ್ಕುಗಳನ್ನು ಅವರು ಪೂರ್ಣ ರೀತಿಯಲ್ಲಿ ಅನುಭವಿಸಲು ಸೂಕ್ತ ವಾತಾವರಣ ಕಲ್ಪಿಸುವುದು ನಾಗರಿಕ ಸಮಾಜದ ಕರ್ತವ್ಯ.

ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತ ಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ (M.L.I.Sc) ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಕನ್ಯಾಕುಮಾರಿ ಅವರ ಕುರಿತು ಕಣ್ಣು ತೆರೆಸುವ ವರದಿ­ಯೊಂದು ‘ಪ್ರಜಾವಾಣಿ’ಯಲ್ಲಿ (ಅ.26) ಪ್ರಕಟವಾಗಿತ್ತು.

ಅದಕ್ಕೆ ಎರಡು ದಿನಗಳ ಹಿಂದೆಯಷ್ಟೇ ನಾಲ್ಕಾರು ತಿಂಗಳಿನಿಂದ ಸುಮ್ಮನಿದ್ದ ನನ್ನ ಗೆಳತಿ ಕಿರ್ಸ್ಟಿ ಹೂವೆನ್ ಫೇಸ್ ಬುಕ್‌ನಲ್ಲಿ ಉದ್ದನೆಯ ಪ್ರತಿಕ್ರಿಯೆ ಒಂದನ್ನು ಹರಿಯ ಬಿಟ್ಟಿದ್ದರು ಮತ್ತು ಬಹಳ ಜನರು Gratulerer  ಎಂದು ಮಾರುತ್ತರಿಸಿದ್ದರು. ಕುತೂಹಲ ತಾಳ ಲಾರದೆ ನಾನು ಗೂಗಲ್ ಅನುವಾದದ ಸಹಾಯದಿಂದ ನೋಡಿದಾಗ, Gratulerer ಎಂದರೆ ನಾರ್ವೇಜಿನ್ ಭಾಷೆಯಲ್ಲಿ ಅಭಿನಂದನೆ ಗಳು ಎಂದು ಹಾಗೂ ಕಿರ್ಸ್ಟಿ ಕ್ಲಿನಿಕಲ್ ಫಾರ್ಮಸಿ ಯಲ್ಲಿ ಇನ್ನೊಂದು ಸ್ನಾತಕೋತ್ತರ ಪದವಿ ತೆಗೆದುಕೊಂಡಿದ್ದಕ್ಕೆ ಎಲ್ಲರೂ ಬಹಳ ಸಂತೋಷ ದಿಂದ ಅಭಿನಂದಿಸಿದ್ದರು ಎಂಬುದು ಗೊತ್ತಾಯಿತು.

ಪ್ರತಿವರ್ಷ ವಿಶ್ವದೆಲ್ಲೆಡೆ ಸಹಸ್ರಾರು ಹುಡುಗಿಯರು ಏನೆಲ್ಲ ಬಗೆಯ ವಿವಿಧ ಕೋರ್ಸ್‌ಗಳನ್ನು ಮಾಡುವ ಇಂದಿನ ಸಂದರ್ಭದಲ್ಲಿ ಗುಲ್ಬರ್ಗದ ಕನ್ಯಾಕುಮಾರಿ ಎಂಬ ಹುಡುಗಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವುದು ಮತ್ತು ನಾರ್ವೆ ಯಲ್ಲಿರುವ 50 ವರ್ಷ ದಾಟಿದ ಕಿರ್ಸ್ಟಿ ಇನ್ನೊಂದು ಸ್ನಾತಕೋತ್ತರ ಪದವಿ ಪಡೆದರೆ ಅದರಲ್ಲೇನಿದೆ ವಿಶೇಷ?

ಖಂಡಿತ ವಿಶೇಷವಿದೆ, ಏಕೆಂದರೆ ಪೋಲಿಯೊದಿಂದ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಕನ್ಯಾಕುಮಾರಿ  ತರಗತಿಕೋಣೆಗೆ ಹೋಗಲು ಪ್ರತಿನಿತ್ಯ 48 ಮೆಟ್ಟಿಲು ಹತ್ತಿಳಿಯಬೇಕು, ಅಲ್ಲಲ್ಲ, ತೆವಳಿ ಕೊಂಡು ಹೋಗಬೇಕು. ಮಧ್ಯೆ ಶೌಚಾಲಯಕ್ಕೆ ಹೋಗಬೇಕೆಂದರೆ ಅಷ್ಟೇ ಮೆಟ್ಟಿಲಿಳಿದು ಕೆಳಗೆ ಬರಬೇಕು. ಇ

ನ್ನು ಕಿರ್ಸ್ಟಿಯ ವಿಚಾರಕ್ಕೆ ಬಂದರೆ 18ನೇ ವಯಸ್ಸಿನಲ್ಲಿ ಆದ ಭೀಕರ ಕಾರು ಅಪಘಾತದಿಂದ ಸೊಂಟದಿಂದ ಕೆಳಭಾಗದಲ್ಲಿ ಸ್ವಾಧೀನ ಕಳೆದುಕೊಂಡಿರುವ ಕಿರ್ಸ್ಟಿ ಗಾಲಿಕುರ್ಚಿ ಯಲ್ಲಿ ಕುಳಿತೇ ಫಾರ್ಮಸಿಯಲ್ಲಿ ಈಗಿನದೂ ಸೇರಿದಂತೆ  ಎರಡು ಸ್ನಾತಕೋತ್ತರ ಪದವಿ ಪಡೆ ದಿದ್ದಾರೆ. ಅಷ್ಟೇ ಅಲ್ಲ; 1988 ಮತ್ತು 1994ರ ಪ್ಯಾರಲಿಂಪಿಕ್ಸ್‌ನಲ್ಲಿ  ಕ್ರಾಸ್ ಕಂಟ್ರಿ ಸ್ಕೀಯಿಂಗ್ ಹಾಗೂ ಐಸ್ ಸ್ಲೆಜ್ ಸ್ಪೀಡ್ ರೇಸಿಂಗ್‌ನಲ್ಲಿ ಮೂರು ಚಿನ್ನ ಸೇರಿದಂತೆ ಒಟ್ಟು 12 ಪದಕ ಗೆದ್ದಿದ್ದಾರೆ.

ಕನ್ಯಾಕುಮಾರಿ ಮತ್ತು ಕಿರ್ಸ್ಟಿ ಇಬ್ಬರಲ್ಲಿರುವ ಸಾಮ್ಯತೆ ಎಂದರೆ ಇಬ್ಬರೂ ತಮ್ಮ ದೈಹಿಕ ಸವಾಲುಗಳನ್ನು ಮೆಟ್ಟಿನಿಂತು, ಮಾನವನಿರ್ಮಿತ ಮೆಟ್ಟಿಲಿನ ಹಂಗಿಲ್ಲದೇ ಸಾಧನೆಯ ಮೆಟ್ಟಿ ಲೇರುವ ಛಲ ತೋರಿದವರು. ಇಬ್ಬರಿಗೂ ಇರುವ ಭಿನ್ನತೆ ಎಂದರೆ (ದುರದೃಷ್ಟವಶಾತ್) ಕನ್ಯಾಕುಮಾರಿ ಭಾರತದಲ್ಲಿ ಹುಟ್ಟಿರುವುದು ಮತ್ತು ಕಿರ್ಸ್ಟಿ (ಅದೃಷ್ಟವಶಾತ್) ನಾರ್ವೆಯಲ್ಲಿ ಹುಟ್ಟಿರುವುದು. ಅಪಘಾತಕ್ಕೆ ಮೊದಲು ಕ್ರಾಸ್ ಕಂಟ್ರಿ ಅಥ್ಲೀಟ್ ಆಗಿದ್ದ ಕಿರ್ಸ್ಟಿಗೆ ಅವರ ಅಭ್ಯಾಸ ಮುಂದುವರೆಸಲು, ಪ್ಯಾರಾಲಿಂಪಿಕ್ಸನಲ್ಲಿ ಭಾಗ ವಹಿಸಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಅಲ್ಲಿಯ ಸರ್ಕಾರ ಮತ್ತು ನಾಗರಿಕ ಸಮು ದಾಯ ಒಂದಿಷ್ಟೂ ಕೊರತೆ ಮಾಡದೇ ಒದಗಿಸಿದೆ.

ಕನ್ಯಾಕುಮಾರಿ ವಿಚಾರಕ್ಕೆ ಬಂದರೆ ಇವರಿಗೆ ಕಟ್ಟಡಗಳ ಒಳಗೆ ಓಡಾಡಲು ಗಾಲಿಕುರ್ಚಿ ಯಿಲ್ಲ, ಅಂಗಾಲುಗಳ ಮೇಲೆ ಕೈಯೂರಿಕೊಂಡು ತೆವಳಿಕೊಂಡೇ ಸಾಗಬೇಕು. ರಸ್ತೆಯಲ್ಲಿ ಓಡಾಡಲು ತ್ರಿಚಕ್ರ ವಾಹನವೂ ಇಲ್ಲ. ನಮ್ಮ ಶೈಕ್ಷಣಿಕ ಆವರಣಗಳ ಒಳಗಿನ ಕಟ್ಟಡಗಳೂ ಸೇರಿ ದಂತೆ ಸಾರ್ವಜನಿಕ ಬಳಕೆಯ ಸ್ಥಳಗಳನ್ನು ಗಾಲಿಕುರ್ಚಿ ಬಳಸುವವರಿಗೆ, ದೃಷ್ಟಿದೋಷ, ವಾಕ್ ಮತ್ತು ಶ್ರವಣ ದೋಷವಿರುವವರಿಗೆ ಬಳಕೆ-ಸ್ನೇಹಿ ರೀತಿಯಲ್ಲಿ ನಿರ್ಮಿಸುವ ಕುರಿತು ನಮಗೆ ಇನ್ನೂ ಕೆಟ್ಟ ನಿರ್ಲಕ್ಷ್ಯವಿದೆ.

ಕಿರ್ಸ್ಟಿಯ ದೇಶವಾದ ನಾರ್ವೆಯ ಉದಾಹರಣೆಯನ್ನೇ ತೆಗೆದುಕೊಂಡರೆ, ಅಲ್ಲಿ ದೈಹಿಕ ಮತ್ತು ಮಾನಸಿಕ ಸವಾಲು ಎದುರಿಸುವ ಮಕ್ಕಳಿಗೆ ವಿಶೇಷ ಶಾಲೆಗಳಿಲ್ಲ, ಅವರು ಸಾಮಾನ್ಯ ಮಕ್ಕಳ ಜೊತೆ ಸಾಮಾನ್ಯ ಶಾಲೆಗೆ ಹೋಗುತ್ತಾರೆ.

ಆದರೆ ಶಾಲೆಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯವಾದ ಭೌತಿಕ ಸೌಲಭ್ಯಗಳ ಜೊತೆಗೆ ಒಬ್ಬರು ಶಿಕ್ಷಕರು ವಿಶೇಷ ಅಗತ್ಯವುಳ್ಳ ಮಕ್ಕಳ ಜೊತೆ ಕುಳಿತುಕೊಳ್ಳುತ್ತಾರೆ. ಇಂತಹ ಶಿಕ್ಷಕರಿಗೆ ತರಬೇತಿ ನೀಡಲಾಗಿರುತ್ತದೆ ಮತ್ತು ಅವರಿಗೆ ಸರ್ಕಾರದಿಂದಲೇ ವೇತನವೂ ಇರುತ್ತದೆ. ವಿ.ವಿ.ಗಳಲ್ಲಿ ಎರಡನೇ, ಮೂರನೇ ಇತ್ಯಾದಿ ಮಹಡಿಗಳಲ್ಲಿ ತರಗತಿಗಳು ನಡೆಯುತ್ತವೆ ಎಂದಾದರೆ ಲಿಫ್ಟ್ ಅಳವಡಿಸುವುದು ಅತ್ಯಗತ್ಯ. ಆದರೆ ಅಲ್ಲಿ ಕೂಡ ಸಾರ್ವಜನಿಕ ಕಟ್ಟಡ ಗಳಲ್ಲಿಯೂ ದೈಹಿಕ ಮತ್ತು ಮಾನಸಿಕ ಸವಾಲು ಗಳನ್ನು ಎದುರಿಸುವವರಿಗೆ ಅನುಕೂಲ ರೀತಿ ಯಲ್ಲಿ ಸೌಲಭ್ಯಗಳು ಇರಬೇಕು ಎಂದು ಕಾನೂನುಗಳಿದ್ದರೂ, ಅದು ಇನ್ನೂ ಅಷ್ಟಾಗಿ ಜಾರಿಗೆ ಬಂದಿಲ್ಲ ಎನ್ನುತ್ತಾರೆ ಕಿರ್ಸ್ಟಿ.

ಹಾಗೆಂದು ಕಿರ್ಸ್ಟಿಗೆ 80ರ ದಶಕದಲ್ಲಿ ವಿಶ್ವ ವಿದ್ಯಾಲಯದಲ್ಲಿ ಫಾರ್ಮಸಿ ಅಧ್ಯಯನ ಮುಂದುವರೆಸುವುದು ಹೂವಿನ ಹಾಸಿಗೆ ಯೇನೂ ಆಗಿರಲಿಲ್ಲ. ಇಡೀ ನಾರ್ವೆಯಲ್ಲಿ ಪ್ರತಿ ವರ್ಷ ಕೇವಲ 30 ವಿದ್ಯಾರ್ಥಿಗಳನ್ನು ಈ ಕೋರ್ಸ್‌ಗೆ ಆಯ್ಕೆ ಮಾಡಲಾಗುತ್ತಿತ್ತು. ಆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡು, ಗಾಲಿಕುರ್ಚಿ ಬದುಕಿಗೆ ಹೊಂದಿಕೊಳ್ಳುತ್ತ, ತರಗತಿಗೆ ಬಂದಿದ್ದ ಕಿರ್ಸ್ಟಿಗೆ ಇನ್ನೊಂದು ಆಘಾತ ಕಾದಿತ್ತು. ವಿ.ವಿಯ ಒಬ್ಬರು ಹಿರಿಯ ಪ್ರಾಧ್ಯಾಪಕರು ಕಿರ್ಸ್ಟಿ ತರಗತಿ ಯಲ್ಲಿದ್ದರೆ ತಾವು ಬೋಧನೆ ಮಾಡುವುದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿ, ಅಧ್ಯಯನ ನಿಲ್ಲಿಸುವಂತೆ ಹೇಳಿದರು. ತುಂಬ ಖಿನ್ನರಾದ ಕಿರ್ಸ್ಟಿ ಅಧ್ಯಯನ ನಿಲ್ಲಿಸಲು ಆಲೋಚಿಸಿದರು. ಆದರೆ ಸಹವಿದ್ಯಾರ್ಥಿಗಳು ಈ ವಿಚಾರವನ್ನು ಅಲ್ಲಿಯ ಮಾಧ್ಯಮಗಳ ಗಮನಕ್ಕೆ ತಂದರು. ವಿ.ವಿಯ ಹಿರಿಯ ಪ್ರಾಧ್ಯಾಪಕರೊಬ್ಬರು ಹೀಗೆ ಹೇಳಿದ್ದು ತುಂಬ ಚರ್ಚೆ ಹುಟ್ಟುಹಾಕಿತಲ್ಲದೇ, ಅಪಾರ ಖಂಡನೆಯೂ ವ್ಯಕ್ತವಾಯಿತು. ನಂತರ ಕಿರ್ಸ್ಟಿಗೆ ಅಲ್ಲಿ ಅಧ್ಯಯನ ಮುಂದುವರೆಸಲು ಅವಕಾಶವಾಯಿತು, ಆದರೆ ಇದು 80ರ ದಶಕದಲ್ಲಿ ಮತ್ತು ಈ ಮೂರು ದಶಕದಲ್ಲಿ ಬದಲಾವಣೆಗಳು ಆಗಿವೆ ಎನ್ನುವ ಕಿರ್ಸ್ಟಿ ‘ಈಗ ನಾನು ಗಾಲಿಕುರ್ಚಿಯಲ್ಲಿ ಕುಳಿತೇ ವೈದ್ಯರು ಮತ್ತು ನರ್ಸ್‌ಗಳಿಗೆ ಬೋಧನೆ ಮಾಡುತ್ತೇನೆ’ ಎನ್ನುತ್ತಾರೆ.

ಮತ್ತೆ ಕನ್ಯಾಕುಮಾರಿಯ ವಿಷಯಕ್ಕೆ ಬರೋಣ. ‘ವಿ.ವಿಯಲ್ಲಿ ತರಗತಿ ನಡೆಸಲು ಕೊಠಡಿಗಳ ಕೊರತೆ ಇದೆ. ಹೀಗಾಗಿ, ಅವರು ಮೆಟ್ಟಿಲು ಹತ್ತುವ ಅನಿವಾರ್ಯ ಇದೆ. ಪ್ರವೇಶಕ್ಕೂ ಮುಂಚೆಯೇ ಈ ಬಗ್ಗೆ ಅವರ ಪಾಲಕರೊಂದಿಗೆ ಚರ್ಚಿಸಲಾಗಿದೆ’ ಎಂದು ವಿ.ವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

ಅವರು ಹೇಳಿದಂತೆ ಕೊಠಡಿಗಳ ಕೊರತೆಯೇ ಇರಬಹುದು. ಆದರೆ ವಿ.ವಿಯಲ್ಲಿರುವ ಸೌಲಭ್ಯ ಮತ್ತು ಕೊರತೆಯ ಬಗ್ಗೆ ಪಾಲಕರಿಗೆ ಮೊದಲೇ ತಿಳಿವಳಿಕೆ ನೀಡಿರುವುದು ಅಥವಾ ಚರ್ಚಿಸಿರು ವುದು ಸಮಸ್ಯೆಯ ಪರಿಹಾರವಲ್ಲ. ವಿ.ವಿಯ ಎಲ್ಲ ವಿಷಯಗಳ ತರಗತಿಗಳಲ್ಲಿ ದೈಹಿಕ ಸವಾಲು ಗಳನ್ನು ಎದುರಿಸುವವರು ಇರಲಿಕ್ಕಿಲ್ಲ. ಹೀಗಾಗಿ ದೈಹಿಕ ಸವಾಲು ಎದುರಿಸುವ ವಿದ್ಯಾರ್ಥಿಗಳು ಇರುವ ಕೆಲವೇ ತರಗತಿಗಳನ್ನು ನೆಲಮಹಡಿಯ ಲ್ಲಿರುವ ಕೊಠಡಿಗಳಲ್ಲಿ ನಡೆಸುವುದು ಅಷ್ಟು ಕಷ್ಟದ ವಿಚಾರವೇ? ಹೊಂದಾಣಿಕೆ ಮಾಡಿ ಕೊಳ್ಳಲು ಸಾಧ್ಯವೇ ಇಲ್ಲದ ಸಮಸ್ಯೆಯೇ ಇದು? ವಿವಿಗಳ ಅಧಿಕಾರಿಗಳು ವಿಶೇಷ ಅಥವಾ ಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ ಸಾಧಿಸಲು ಅಗತ್ಯವಾದ ಸೌಲಭ್ಯಗಳನ್ನು ತಮ್ಮ ಮಿತಿಯಲ್ಲಿಯೇ ಒದಗಿಸಲು ಕೇವಲ ನಿಯಮಾ ವಳಿಗಳ ಪ್ರಕಾರವೇ ನಡೆದು ಕೊಳ್ಳದೇ, ‘ಬುದ್ಧಿ ಮತ್ತು ಹೃದಯ’ ಎರಡರಿಂದಲೂ ಆಲೋಚಿಸ ಬೇಕಿದೆ ಮತ್ತು ಸಂವೇದನಾ ಶೀಲತೆಯಿಂದ ಸೂಕ್ತ ಯೋಜನೆ ಮಾಡಬೇಕಿದೆ.

ಎಲ್ಲಕ್ಕಿಂತ  ಮುಖ್ಯವಾಗಿ ವಿಶೇಷ  ಸಾಮರ್ಥ್ಯ ವುಳ್ಳ ವ್ಯಕ್ತಿಗಳಿಗೆ ಆರೋಗ್ಯ,  ಶಿಕ್ಷಣದ ಹಕ್ಕು ಸೇರಿ ದಂತೆ ಘನತೆಯಿಂದ ಬದುಕುವ ಎಲ್ಲ ಹಕ್ಕುಗಳು ಇದ್ದೇ ಇದೆ, ಆ ಹಕ್ಕುಗಳನ್ನು ಅವರು ಪೂರ್ಣ ರೀತಿಯಲ್ಲಿ ಅನುಭವಿಸಲು ಸೂಕ್ತ ವಾತಾವರಣ ಕಲ್ಪಿಸುವುದು ನಾಗರಿಕ ಸಮಾಜದ ಕರ್ತವ್ಯ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳ ಬೇಕಿದೆ. ಇನ್ನಾದರೂ ವಿ.ವಿ.ಗಳು  ಸೇರಿದಂತೆ ಶಿಕ್ಷಣ ಸಂಸ್ಥೆಗಳು ದೈಹಿಕ ಸವಾಲು ಎದುರಿಸು ವವರಿಗೆ ಅನುಕೂಲವಾಗಲು ರ್‍ಯಾಂಪ್‌ಗಳನ್ನು (ramp) ಅಥವಾ ಲಿಫ್ಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಿ. ಅದಾಗದಿದ್ದಲ್ಲಿ ಅಗತ್ಯಬಿದ್ದಾಗ ಕೆಲವು ಹೊಂದಾಣಿಕೆಗಳೊಡನೆ ನೆಲಮಹಡಿಯ ಲ್ಲಾದರೂ ತರಗತಿಗಳನ್ನು ನಡೆಸಲು ಕ್ರಮ ತೆಗೆದುಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT