ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣಾದರೆ ಹೊರೆ’ ಮನೋಭಾವ ಹುಟ್ಟಿದ್ದು ಎಲ್ಲಿಂದ?

ಚರ್ಚೆ
Last Updated 11 ಮಾರ್ಚ್ 2014, 19:30 IST
ಅಕ್ಷರ ಗಾತ್ರ

‘ಸಂಗತ’­ದಲ್ಲಿ (ಮಾ. 7)  ಡಾ.    ಶಿವ­ಮೂರ್ತಿ ಮುರುಘಾ ಶರಣರ ‘ಗಂಡಾ­ದರೆ ದೊರೆ, ಹೆಣ್ಣಾದರೆ ಹೊರೆ; ಹೀಗೇಕೆ?’ ಲೇಖನದ ಆಶಯ ಒಳ್ಳೆಯದೇ. ಅವರು ನಿದರ್ಶನ ನೀಡಿ ವಿವರಿಸಿರುವಂತೆ ಗಂಡು ಸಂತಾನ ಬೇಕೆಂದು ಸೊಸೆಯಂದಿರಿಗೆ ಒತ್ತಾ­ಯಿಸು­ವವರಲ್ಲಿ ಅತ್ತೆಯಂದಿರೂ ಇದ್ದಾರೆ. ಆದರೆ ಮಗನಿಂದಲೇ ಮೋಕ್ಷ, ಮಗನೇ ಮುಪ್ಪಿನ ಕಾಲಕ್ಕೆ ನೋಡಿಕೊಳ್ಳುವವನು, ಗಂಡುಮಕ್ಕಳೇ ಅಪ್ಪ­ಅಮ್ಮಂದಿರ ಉತ್ತರಕ್ರಿಯಾದಿಗಳನ್ನು ಮಾಡು­­­ವವರು ಎಂಬ ಮನೋಧರ್ಮ ನಮ್ಮಲ್ಲಿ ಇರು­ವವರೆಗೆ ಗಂಡು ಸಂತಾನಕ್ಕೆ ಅತ್ತೆ ಒತ್ತಾಯ ಮಾಡುವ ಸಾಮಾಜಿಕ ವಾತಾವರಣ ಬದಲಾ­ಗುವುದಿಲ್ಲ.

ಅತ್ತೆ ಏಕೆ ಸೊಸೆಗೆ ಮಗನನ್ನೇ ಹೆತ್ತು­ಕೊಡು­­ವಂತೆ ಒತ್ತಾಯಿಸುತ್ತಿದ್ದಾಳೆ ಎಂದು ಹಿನ್ನೆಲೆ ನೋಡ­ಬೇಕಾ­ಗುತ್ತದೆ. ಏಕೆಂದರೆ ಒತ್ತಾಯಿ­ಸುತ್ತಿ­ರುವವಳು ಅತ್ತೆಯಾದರೂ, ಇಲ್ಲಿ ಅತ್ತೆ ಒಂದು ಸಾಧನ ಮಾತ್ರ. ನಿಜವೆಂದರೆ ಅತ್ತೆಯ ಮೂಲಕ ನಮ್ಮ ಸಾಮಾಜಿಕ ಮನೋಧರ್ಮ ಹಾಗೂ ನಮ್ಮ ಸಾಮಾಜಿಕ ಸ್ಥಿತಿಗತಿಗಳು ಹೀಗೆ ಗಂಡು­ಮಗು­ವನ್ನೇ ಹೆತ್ತು ಕೊಡುವಂತೆ ಸೊಸೆಗೆ ಒತ್ತಾ­ಯಿಸುತ್ತಿವೆ ಎಂಬುದನ್ನು ನಾವು ಮರೆಯು­ವಂತಿಲ್ಲ.

ಇಲ್ಲಿ ನಾವು ಬದಲಿಸಬೇಕಾಗಿದ್ದು ‘ಮಗನಿಂ­ದಲೇ ಮೋಕ್ಷ’ ಎಂಬ ಸಾಮಾಜಿಕ ಮನೋ­ಧರ್ಮ­­ವನ್ನು. ಒಂದು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಮಹಿಳೆ­ಯರು ಮತ್ತು ಪುರುಷರು ಇಬ್ಬರ ಮೇಲೂ ಇರು­ತ್ತದೆ, ಮಹಿಳೆಯರು ಮಾತ್ರವಲ್ಲ ಅಥವಾ ಕೇವಲ ಪುರುಷರದೂ ಅಲ್ಲ. ತಾಯಿ ಎಂದರೆ ಜಗದ್ರಕ್ಷಕಿ, ಇಡೀ ಜಗತ್ತನೇ ಕಾಯುವವಳು ಎಂಬಿತ್ಯಾದಿ ಸವಕಲು ಹೇಳಿಕೆ­ಗಳಿಂದ ಹೊರಬಂದು, ತಾಯಿ ಅಥವಾ ಒಟ್ಟಾರೆ­ಯಾಗಿ ಮಹಿಳೆಯರು ಎಂದರೆ ಪುರುಷರ ಹಾಗೆಯೇ ಒಂದು ಮಾನವಪ್ರಾಣಿ ಅಷ್ಟೇ, ಅದಕ್ಕಿಂತ ಕಡಿಮೆಯೂ ಅಲ್ಲ, ಹೆಚ್ಚೂ ಅಲ್ಲ ಎಂಬ ಆಲೋಚನೆಗಳಿಗೆ ನಾವು ತೆರೆದು­ಕೊಳ್ಳ­ಬೇಕಿದೆ.

ಲಿಂಗಾನುಪಾತವನ್ನು ಕಾಯ್ದು­ಕೊಳ್ಳು­ವುದು ಮಹಿಳೆ ಮತ್ತು ಪುರುಷ ಸೇರಿದಂತೆ ಇಡೀ ಒಂದು ನಾಗರಿಕ ಸಮಾಜದ ಜವಾಬ್ದಾರಿ. ಈಗಾ­ಗಲೇ ಮನೆ ಹೊರಗಿನ ಮತ್ತು ಒಳಗಿನ ಕೆಲಸ­ಗಳಲ್ಲಿ ಬಸವಳಿಯುತ್ತಿರುವ ಮಹಿಳೆಯರಿಗೆ ‘ಈ ಭುವಿ­ಯಲ್ಲಿ ಮಹಿಳಾ ಸಂತತಿ  ಸದಾ ಮುಂದು­ವರಿಯು­ವಂತೆ ನೋಡಿಕೊಳ್ಳುವ ಜವಾ­ಬ್ದಾರಿಯು ನಿನ್ನದೇ, ನಿನ್ನದೇ’ ಎಂದು ಅವ­ಳೊ­ಬ್ಬಳ ಮೇಲೆ ಜವಾಬ್ದಾರಿ ಹೊರೆಸುವ ಬದಲಿಗೆ ‘ಗಂಡು­ಮಗು­ವಿನಂದಲೇ ಮೋಕ್ಷ’ ಎಂಬ ಸಾಮಾ­ಜಿಕ ಮನೋ­­­ಭಾವ­ವನ್ನು ಬದ­ಲಿಸಲು ಎಲ್ಲರೂ ಸೇರಿ ಪ್ರಯ­ತ್ನಿ­ಸುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ.

ವಿಪರ್ಯಾಸವೆಂದರೆ ಜಗ­ದ್ರಕ್ಷಕಿ, ಇಡೀ ಜಗತ್ತನ್ನೇ ಕಾಯು­ವವಳು ಎಂದೆಲ್ಲ ಪುರು­ಷರು ವರ್ಣಿಸುವ ಮಹಿ­ಳೆ­­ಯರು ತನ್ನನ್ನು ಅಂದರೆ ತನ್ನ ದೇಹವನ್ನು ರಕ್ಷಿಸಿ­ಕೊಳ್ಳಬೇಕು ಎಂದೂ ನಾವು ಬಯಸುತ್ತೇವೆ. ಮುಂಬೈನಲ್ಲಿ ಪತ್ರಕರ್ತೆಯ ಮೇಲೆ ಅತ್ಯಾಚಾರ ನಡೆದ ನಂತರ ಹೆಚ್ಚಿನ ಜನರು, ‘ಅಯ್ಯೋ, ಅಷ್ಟ್ ಸಾಯಂಕಾಲ ಅಂಥ ನಿರ್ಜನ ಪ್ರದೇಶಕ್ಕೆ ಅವ­ಳ್ಯಾಕೆ ಹೋಗಬೇಕಿತ್ತು’ ಎಂದೇ ಅಭಿಪ್ರಾಯ­ಪಟ್ಟಿದ್ದರು.

ಪುರುಷರು ಅತ್ಯಾಚಾರ ಅಥವಾ ದೈಹಿಕ ದೌರ್ಜನ್ಯ ಎಸಗದಂತೆ ಸಾಮಾಜಿಕವಾಗಿ ಮತ್ತು ಕಾನೂನಾತ್ಮಕವಾಗಿ ಏನೆಲ್ಲ ಪ್ರಯತ್ನ­ಗಳನ್ನು ಮಾಡ­ಬೇಕಿದೆ ಎಂಬುದನ್ನು ಆಲೋ­ಚಿಸುವ ಬದಲಿಗೆ ಮಹಿಳೆಯರು ಸಂಜೆ, ರಾತ್ರಿ ಒಬ್ಬರೇ ಓಡಾಡು­ವುದು ನಿಲ್ಲಿ­ಸಲಿ, ಪ್ರಚೋದಕ ರೀತಿಯಲ್ಲಿ ಬಟ್ಟೆ ಧರಿಸುವುದು ನಿಲ್ಲಿಸಲಿ, ಭಾರ­ತೀಯ ನಾರಿಯ­ರಾಗಿರಲಿ ಎಂದೆಲ್ಲ ಹತ್ತು ಹಲವು ಪುಕ್ಕಟೆ ಸಲಹೆ­ಗಳನ್ನು ಕೊಡುತ್ತಿದ್ದೇವೆ.

ಪುರು­ಷರಿಗೆ ಸಂಯಮ­ದ ಪಾಠ ಹೇಳುವ ಬದಲಿಗೆ,   ಮಹಿಳೆ­ಯರೇ ಎಚ್ಚರಿಕೆಯಿಂದ ಇರಲಿ ಎಂದು ಒತ್ತಿ ಹೇಳುತ್ತೇವೆ. ಈ 21ನೇ ಶತ­ಮಾನ­ದಲ್ಲಿಯೂ ನಾವು ಮಹಿಳೆಯರಿಗೇ ಇನ್ನೂ ಪುಕ್ಕಟೆ ಸಲಹೆಗಳನ್ನು ಕೊಡುತ್ತಿದ್ದೇವೆ, ಅತ್ಯಾಚಾರವಾದ ಸಂದರ್ಭ­ಗಳಲ್ಲಿ ಮಹಿಳೆಯರ ಮೇಲೇ ಗೂಬೆ ಕೂರಿಸುತ್ತಿದ್ದೇವೆ ಎಂದಾದ ಮೇಲೆ ಹೆಣ್ಣು ಹೆತ್ತವರ ಅಳುಕು ಅಳಿಯು­ವುದಾದರೂ ಹೇಗೆ? ಸಂಸ್ಕೃತಿ ರಕ್ಷಣೆಯ ಹೊಣೆ­ಯನ್ನು ಹೆಣ್ಣಿಗೇ ಸೀಮಿತ ಮಾಡಬಾರದು ಎಂಬ ಹೊಸ ಚಿಂತನೆಯನ್ನು ಬಿತ್ತುವುದು ಏಕೆ ಇಂದಿಗೂ ಸಾಧ್ಯವಾಗಿಲ್ಲ...?

ಮಹಿಳೆಯರನ್ನು ನೋಡುವ ಪುರುಷರ ದೃಷ್ಟಿಕೋನವನ್ನು ಬದಲಿಸುವ, ಪುರುಷರಿಗೂ ಸಂಯಮದ ಪಾಠ ಕಲಿಸುವ ನಿಟ್ಟಿನಲ್ಲಿ ಸಾಮಾ­ಜಿಕ ಸಂಘಟನೆಗಳು, ಶೈಕ್ಷಣಿಕ ವ್ಯವಸ್ಥೆಗಳು ಆಲೋಚಿಸುವುದು ಅಗತ್ಯವಿದೆ. ಋತುಮತಿ­ಯಾಗುವ ಹುಡುಗಿಗೆ ಹೈಸ್ಕೂಲುಗಳಲ್ಲಿ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಳ್ಳುವ ಹಾಗೆಯೇ, ಹುಡುಗರಿಗೆ ಮನಸ್ಸಿನ ಹತೋಟಿ, ಹೆಣ್ಣು ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಇತ್ಯಾದಿ ಸೇರಿ­ದಂತೆ ಲೈಂಗಿಕ ವಿಚಾರಗಳ ಬಗ್ಗೆ ಪ್ರತ್ಯೇಕ ತರಗತಿಗಳನ್ನು ನಡೆಸುವುದು ಅಗತ್ಯವಿದೆ. ಇದೆಲ್ಲ­ವನ್ನೂ ಶಿಕ್ಷಣ ಇಲಾಖೆಯೇ ಮಾಡಬೇಕು ಎಂದೂ ಅಲ್ಲ, ಶೈಕ್ಷಣಿಕ ವಿಚಾರದಲ್ಲಿ ಕೆಲಸ ಮಾಡು­ತ್ತಿರುವ ಸಂಘ–ಸಂಸ್ಥೆಗಳು ಮಾಡ­ಬಹುದು. 

ಮಹಿಳೆ ಎಂದರೆ ದೇವಿ, ಜಗದ್ರಕ್ಷಕಿ ಎಂದೋ ಅಥವಾ ಮಹಿಳೆ ಎಂದರೆ ಪುರುಷ ವ್ಯಾಖ್ಯಾ­ನಿಸಬಹು­ದಾದ ಒಂದು ಸಂಗತಿ, ಪುರುಷನಿಗಿಂತ ಕನಿಷ್ಠ ಎಂದೋ, ಎರಡು ಅತಿಗಳಲ್ಲಿ ನಿಂತು ಮಾತ­ನಾಡುವ ಬದಲಿಗೆ ಪುರುಷ ಮತ್ತು ಮಹಿಳೆ ಇಬ್ಬರೂ ಭೂಮಿಯಲ್ಲಿ ಬೇರೆಲ್ಲ ಪ್ರಾಣಿಗಳಂತೆಯೇ ಇರುವ ಮನುಷ್ಯ ಪ್ರಾಣಿಗಳು, ಸಮಾನ ವ್ಯಕ್ತಿಗಳು ಎಂಬ ಸಾಮಾಜಿಕ ಮನಸ್ಥಿತಿ ನಿರ್ಮಾಣಕ್ಕೆ ಕಾರ್ಯಸಾಧ್ಯ ಪರಿಹಾರಗಳನ್ನು ಆಲೋಚಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT