ಮೀನು ಈಜುತ್ತದೆ. ಅದಕ್ಕೆ ಅದನ್ನು ಯಾರೂ ಹೇಳಿಕೊಟ್ಟಿಲ್ಲ. ಅಥವಾ ಅದು ಕಲಿಕೆಯ ಹಂತದಲ್ಲಿ ಮುಳಗಿ, ನೀರು ಕುಡಿದು, ಉಸಿರು ಕಟ್ಟಿ ಒದ್ದಾಡಿ ಆಮೇಲೆ ಈಜಲು ಕಲಿತುಕೊಂಡೆ ಎಂದು ಆಗುವುದೇ ಇಲ್ಲ. ಇನ್ನೂ ಹೇಳಬೇಕೆಂದರೆ ಈಜು ಕಲಿತಾದ ಮೇಲೆ ತಾನು ಹೇಗೆಲ್ಲ ಸಾಸಹಪಟ್ಟು ಈಜನ್ನು ಕಲಿತೆ, ಆ ಕಲಿಕೆಯ ಹಾದಿಯಲ್ಲಿ ಏನೆಲ್ಲ ಅಡ್ಡಿ ಆತಂಕಗಳು ಎದುರಾದವು, ಅದನ್ನು ಮೀರಿದ ಸಾಹಸ ಎಂಥದ್ದು, ಅದಕ್ಕೆ ನೆರವಾದವರು ಯಾರೆಲ್ಲ.... ಎಂಬಿತ್ಯಾದಿ ಬಡಾಯಿಯನ್ನು ಅದು ಎಂದಿಗೂ ಕೊಚ್ಚಿಕೊಂಡದ್ದನ್ನು ಎಂದಿಗೂ ಕಾಂಡಿಲ್ಲ.

ಹಕ್ಕಿಯನ್ನು ನೋಡಿ, ಅದಕ್ಕೆ ಯಾವತ್ತೂ ಹಾರುವ ಪಾಠವನ್ನು ಯಾರೂ ಹೇಳಿಕೊಡುವುದಿಲ್ಲ. ರೆಕ್ಕೆ ಬಲಿಯುತ್ತಿದ್ದಂತೆಯೇ ತನ್ನಿಂದ ತಾನೆಯೇ ಅದು ಗೂಡು ಬಿಟ್ಟು ಆಗಸದತ್ತ ಮುಖಮಾಡಿಯೇಬಿಡುತ್ತದೆ. ಕಪ್ಪೆಗೆ ನೆಗೆಯುವುದನ್ನು, ಕುಪ್ಪಳಿಸಿ ಕುಪ್ಪಳಿಸಿ ಮುಂದೆಕ್ಕೆ ಹಾರುವುದನ್ನು ಕಲಿಸಲು ಯಾವುದೇ ಕೋಚ್ಗಳಿರುವುದಿಲ್ಲ. ಕೈಕಾಲುಗಳು ಗಟ್ಟಿಯಾಗುತ್ತಿದ್ದಂತೆಯೇ ಕುಪ್ಪಳಿಸುತ್ತ ನಡೆದುಬಿಡುತ್ತದೆ. ಜಿಂಕೆಗೆ ಓಡಲು, ಕೋಗಿಲೆಗೆ ಹಾಡಲು, ಹುಲಿಗೆ ಬೇಟೆಯಾಡುವುದನ್ನು ಕಲಿಯಲು ಯಾರ ಸಹಾಯವೂ ಬೇಕಿಲ್ಲ. ಅಥವಾ ಅದಕ್ಕೆಲ್ಲ ಯಾವುದೇ ಕೋಚಿಂಗ್ ಸೆಂಟರ್ಗಳಿರುವುದಿಲ್ಲ.

ಇವೆಲ್ಲವೂ ತಾವೇನು ಮಾಡಬೇಕೆಂಬುದನ್ನು ತಂತಮ್ಮ ಹೆತ್ತವರನ್ನು ಕಂಡು, ಸುತ್ತಮುತ್ತಲಿನ ತಮ್ಮದೇ ಸಮುದಾಯದ ಸದಸ್ಯರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ನಿರ್ಧರಿಸಿಬಿಡುತ್ತವೆ. ಮತ್ತೂ ಹಾಗೆಯೇ ಆಗುತ್ತವೆ ಕೂಡ. ಅಂತಾದ ಮೇಲೆ ನಾವೇನಾಗಬೇಕೆಂದು ಅಂದುಕೊಂಡಿರುತ್ತೇವೋ ಅದಕ್ಕೆ ಇನ್ನೊಬ್ಬರ ಸಹಾಯ ನಮಗೆ ಮನುಷ್ಯರಿಗೆ ಏಕೆ ಬೇಕು? ಯಾರೋ ನಮ್ಮನ್ನು ಬೆಳೆಸಬೇಕು, ಇನ್ಯಾರೋ ಕರೆದು ಅವಕಾಶಗಳನ್ನು ಕೊಡಬೇಕೆಂದು ನಾವು ಬಯಸುವುದಾದರೂ ಏಕೆ? ನೋಡಿ ಬೇಕಿದ್ದರೆ ನಮ್ಮದು ಒಂದಲ್ಲಾ ಒಂದು ವರಾತ–‘ನಮಗೆ ಯಾರೂ ಗಾಡ್ಫಾದರ್ಗಳೇ ಇಲ್ಲ. ಯಾರೂ ನಮ್ಮನ್ನು ಸಪೋರ್ಟ್ ಮಾಡಿಲ್ಲ. ಸರಿಯಾದ ಕೋಚಿಂಗೇ ನಮಗೆ ಇಲ್ಲ. ಕನಿಷ್ಠ ಪಕ್ಷ ಯಾರೂ ಒಂದು ಸಣ್ಣ ಅಪಾರ್ಚುನಿಟಿಯನ್ನೂ ಕೊಡುತ್ತಿಲ್ಲ....’ ಹೀಗೆ ನಮ್ಮ ಕೊರಗಿನ ಪಟ್ಟಿ ಬೆಳೆಯುತ್ತಲೇ ಇರುತ್ತವೆ. ಹಾವು, ಕಪ್ಪೆ, ಹಕ್ಕಿ ಮೀನುಗಳೇ ಅಂತಲ್ಲ, ಸಾಧನೆ ಮಾಡಿದ ಬಹುತೇಕರಿಗೆ ಸಹ ಅವಕಾಶಗಳನ್ನು ಯಾರು ಸೃಷ್ಟಿಸಿಕೊಟ್ಟಿರುವುದಿಲ್ಲ. ಅವರ ಬೆನ್ನೆಲುಬಾಗಿ ನಿಂತು ಯಾರೂ ಕಾದವರಿರುವುದಿಲ್ಲ. ಅಥವಾ ಕೈ ಹಿಡಿದು ಮೇಲೆತ್ತಿದವರು ತೀರಾ ಕಡಿಮೆಯೆ. ಅವರೇ ಸ್ವತಂತ್ರವಾಗಿ, ಸನ್ನಿವೇಶಗಳನ್ನು ತಮ್ಮತ್ತ ತಿರುಗಿಸಿಕೊಂಡು ತಮ್ಮ ಪಾಡಿಗೆ ತಾವು ಸಾಧನೆ ಮಾಡಿರುತ್ತಾರೆ. ಅವರಿಗೆಲ್ಲ ಸಾಧ್ಯವಾಗುವುದು ನಮಗೇಕೆ ಅಸಾಧ್ಯ?

ಅಸಲಿಗೆ ನಮ್ಮಲ್ಲಿ ಸ್ವಸಾಮರ್ಥ್ಯದ ಬಗ್ಗೆ ನಾವು ಅರಿತುಕೊಳ್ಳದಿರುವುದೇ ನಮ್ಮ ಬಹುದೊಡ್ಡ ವೀಕ್ನೆಸ್.
ನಮ್ಮಷ್ಟಕ್ಕೆ ನಾವು ನೆಗೆಯುವ, ಹಾರುವ, ನಡೆಯುವ, ಓಡುವ, ಹಾಡುವ ಮನಸ್ಸನ್ನು ಮಾಡುವುದೇ ಇಲ್ಲ. ಇದಕ್ಕೆ ಬಹುಮುಖ್ಯ ಕಾರಣ ನಮ್ಮಲ್ಲಿನ ಹಿಂಜರಿಕೆ, ಅಂಜಿಕೆ. ಏನಾಗಿ ಬಿಡುತ್ತದೋ, ಏನೋ? ನಾವೆಲ್ಲಿ ಜೀವನದಲ್ಲಿ ಎಡವಿಬಿಡುತ್ತೇವೋ? ಒಂದೊಮ್ಮೆ ನಮಗೆ ಯಶಸ್ಸು ಸಿಗದೇ ಸೋತು ಹೋಗಿಬಿಟ್ಟರೆ! ಇಂಥ ಸಲ್ಲದ ಸಂಶಯಗಳು ನಮ್ಮನ್ನು ಸ್ಪರ್ಧೆಗೆ ಒಡ್ಡಿಕೊಳ್ಳಲೇ ಬಿಡುವುದಿಲ್ಲ.

ಯಾರಿಗೂ ಆಗದ್ದು ನಮಗೆ ಮಾತ್ರವೇ ಆಗಲು ಏನೂ ಸಾಧ್ಯವೇ ಇಲ್ಲ. ಒಂದೊಮ್ಮೆ ಬಿದ್ದರೂ ನೆಲಕ್ಕಿಂತ ಕೆಳಕ್ಕೆ ಬೀಳುವುದಿಲ್ಲವಲ್ಲ?! ನೆಲಕ್ಕೆ ಬಿದ್ದರೂ ಏಳಲು ನಮ್ಮ ಕೈ-ಕಾಲುಗಳಲ್ಲಿ ಶಕ್ತಿ ಇದ್ದೇ ಇದೆ. ಅವನ್ನೂರಿ ಮತ್ತೆ ಏಳೋಣ. ಎದ್ದು ನಡೆಯೋಣ. ಹಾಗೆ ನಡೆಯುತ್ತ ನಡೆಯುತ್ತ ತುಸು ವೇಗ ಹೆಚ್ಚಿಸಿಕೊಂಡರೆ ಓಡಲೂ ನಾವು ಸಮರ್ಥರಿದ್ದೇವೆ. ಬರೀ ಓಡುವುದಲ್ಲ, ಓಟದಲ್ಲಿ ನಮ್ಮನ್ನು ಯಾರೂ ಹಿಂದಿಕ್ಕಲು ಸಾಧ್ಯವೇ ಆಗದಷ್ಟು ವೇಗವನ್ನೂ ರೂಢಿಸಿಕೊಳ್ಳುವುದು ನಮಗೆ ಗೊತ್ತು.

ಎಲ್ಲಕ್ಕಿಂತ ಹೆಚ್ಚಾಗಿ ನಾವು ನಮ್ಮ ಸಹಾಯಕ್ಕೆ ಬೇರೆ ಯಾರಾದರೂ ಬರಲಿ ಎಂದು ಕಾಯುವುದೇ ದೊಡ್ಡ ಹಿನ್ನಡೆ. ಅದೇ ಅವಲಂಬನೆ ನಮ್ಮನ್ನು ಸ್ವತಂತ್ರವಾಗಿ ಸಾಧನೆ ಮಾಡದಂತೆ ತಡೆಯುತ್ತದೆ. ಹೌದು, ಮನುಷ್ಯನಿಗೆ ಹುಟ್ಟಿನಿಂದಲೇ ಎಲ್ಲ ವಿದ್ಯೆಗಳೂ ಬರುವುದಿಲ್ಲ. ಮೀನಿನಂತೆ, ಹಕ್ಕಿಯಂತೆ ನಮಗೆ ಸ್ವತಂತ್ರ ಕಲಿಕಾ ಸಾಮರ್ಥ್ಯ ಜನ್ಮಜಾತವಲ್ಲ. ಆದರೆ, ಎಲ್ಲ ವಿದ್ಯೆಗಳಲ್ಲೂ ಕಲಿಕೆಯ ಹಂತದಲ್ಲಿ ತಪ್ಪಿಗೆ ಅವಕಾಶ ಇದ್ದೇ ಇದೆ. ತಪ್ಪು ಮಾಡಲೇ ಹಿಂಜರಿಯುವವ ಯಶಸ್ವಿಯಾಗಲು ಅಸಾಧ್ಯ . ಮಾಡಿದ ತಪ್ಪನಿಂದಲೇ ಪಾಠ ಕಲಿಯುತ್ತ ಹೋಗಬೇಕು. ಒಮ್ಮೆ ಸೋತ ಮಾತ್ರಕ್ಕೆ ಮತ್ತೆ ಮುನ್ನುಗ್ಗಲು ಹಿಂಜರಿಯಬಾರದು. ಪ್ರತಿ ತಪ್ಪೂ ಸಹ ಕಲಿಕೆಯ ಪ್ರಗತಿಯ ದ್ಯೋತಕ. ಅದು ನಮ್ಮ ವಿಕಾಸದ ಹಂತ.

ಹೆಚ್ಚು ಹೆಚ್ಚು ತಪ್ಪು ಮಾಡಿದವನು ಹೆಚ್ಚು ಬೆಳೆಯುತ್ತಿದ್ದಾನಂತಲೇ ಅರ್ಥ. ಹಾಗೆಂದು ತಪ್ಪು ಮಾಡುವುದೇ ನಮ್ಮ ಗುರಿಯಾಗಬೇಕಿಲ್ಲ. ಪರಾಜಯವೆನ್ನುವುದು ನಮ್ಮ ಕಲಿಕೆಯ ಮೈಲುಗಲ್ಲುಗಳಾಗಲಿ. ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳುವುದು ಬೇಡ. ಸೋಲು ಜೀವನದುದ್ದಕ್ಕೂ ಇದ್ದದ್ದೇ. ಜೀವಿಸಿದ್ದಷ್ಟೂ ದಿನ ಸೋಲುತ್ತಲೇ ಹೋಗೋಣ. ಪ್ರತಿ ಸೋಲಿನಿಂದಲೂ ಪಾಠ ಕಲಿತು ಮುನ್ನುಗ್ಗೋಣ. ಯಾರಾದರೂ ಎಲ್ಲಿಯವರೆಗೆ ಬಂದಾರು? ಅವಲಂಬನೆಯನ್ನು ಬಿಟ್ಟು ಸ್ವತಂತ್ರವಾಗಿ ಮುನ್ನುಗ್ಗುವ ಆತ್ಮಶಕ್ತಿಯನ್ನು ಗಳಿಸಿಕೊಳ್ಳೋಣ. ಸೋಲಿನ ಸಂಖ್ಯೆ ಕಡಿಮೆಯಾದೀತು. ತಪ್ಪಿನ ಅವಕಾಶಗಳು ಇಲ್ಲದಂತಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.