ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಒಲವು

Published 14 ಏಪ್ರಿಲ್ 2024, 19:24 IST
Last Updated 14 ಏಪ್ರಿಲ್ 2024, 19:24 IST
ಅಕ್ಷರ ಗಾತ್ರ

ಬಿಕ್ಕಟ್ಟಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇಂದೇ ವಿಶ್ವಾಸಮತ ಯಾಚನೆ

ನವದೆಹಲಿ, ಏ. 14– ದೆಹಲಿಯಲ್ಲಿ ಇಂದು ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ
ಗಳಿಂದಾಗಿ 13 ತಿಂಗಳ ಬಿಜೆಪಿ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಸರ್ಕಾರ ವಿಶ್ವಾಸಮತ ನಿಲುವಳಿ ಮಂಡಿಸುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪಿ.ಆರ್. ಕುಮಾರಮಂಗಳಂ ಮಧ್ಯರಾತ್ರಿ ಪ್ರಕಟಿಸಿದ್ದಾರೆ.

ಇಂದು ಬೆಳಿಗ್ಗೆ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು, ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರನ್ನು ಭೇಟಿಯಾಗಿ ಸರ್ಕಾರಕ್ಕೆ ನೀಡಿರುವ ತಮ್ಮ ಪಕ್ಷದ ಬೆಂಬಲವನ್ನು ವಾಪಸು ಪಡೆದಿರು ವುದನ್ನು ಅಧಿಕೃತವಾಗಿ ತಿಳಿಸಿದರು. ಇದರೊಂದಿಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಬಹುಮತ ಕುಸಿದು, ರಾಜಕೀಯ ಅಸ್ಥಿರತೆ ತಲೆದೋರಿತು. ಸಂಜೆಯವರೆಗೆ ರಾಜಧಾನಿಯಲ್ಲಿ ರಾಜಕೀಯ ಕೋಲಾಹಲ, ಪ್ರತಿಪಕ್ಷಗಳು ಗುಂಪುಗೂಡಿ ರಾಷ್ಟ್ರಪತಿಗಳ ಬಳಿ ತೆರಳಿ, ಪ್ರಸ್ತುತ ಸರ್ಕಾರ ಬಹುಮತ ಕಳೆದು ಕೊಂಡಿರುವುದನ್ನು ಒತ್ತಿಹೇಳಿ, ವಿಶ್ವಾಸಮತ ಯಾಚಿಸಲು ಸೂಚಿಸುವಂತೆ ಒತ್ತಾಯಿಸಿದ್ದವು. ಲೋಕಸಭೆಯಲ್ಲಿ ವಿಶ್ವಾಸ ಮತ ಯಾಚಿಸುವಂತೆ ವಾಜಪೇಯಿಯವರಿಗೆ ರಾಷ್ಟ್ರಪತಿಯವರು ರಾತ್ರಿ ಸೂಚಿಸಿದರು.

ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಒಲವು

ನವದೆಹಲಿ, ಏ. 14– ಎಐಎಡಿಎಂಕೆಯು ತನ್ನ ಬೆಂಬಲ ಹಿಂತೆಗೆದುಕೊಂಡಿರುವುದರಿಂದ ಬಿಜೆಪಿ ನೇತೃತ್ವದ ಸರ್ಕಾರವು ಬಹುಮತ ಕಳೆದುಕೊಂಡಿದ್ದು, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿರುವ ಕಾಂಗ್ರೆಸ್ ಪಕ್ಷವು, ಸಮ್ಮಿಶ್ರ ಸರ್ಕಾರ ರಚನೆಗೆ ಒಲವು ತೋರಿದೆ.

ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಬಗೆಗೆ ಪಕ್ಷದ ಪರವಾಗಿ ಮಾತನಾಡಲು ವಕ್ತಾರರಾಗಿ ನೇಮಕಗೊಂಡಿರುವ ಅರ್ಜುನ್ ಸಿಂಗ್‌, ರಾಷ್ಟ್ರವನ್ನು ಕೋಮುವಾದಿ ಮತ್ತು ಭ್ರಷ್ಟ ಸರ್ಕಾರದಿಂದ ಮುಕ್ತಗೊಳಿಸಬೇಕಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT