ಅಭಿಮಾನಿಗಳ ಒತ್ತಡ: ಅಂಬರೀಷ್ ಹಠಾತ್ ನಿವೃತ್ತಿ ಘೋಷಣೆ
ಮೈಸೂರು, ಆ. 4– ಜನತಾದಳದಲ್ಲೇ ಉಳಿಯುವಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಂದ ಒತ್ತಡದಿಂದ ಬೇಸತ್ತ ವಿಸರ್ಜಿತ ಲೋಕಸಭಾ ಸದಸ್ಯ, ಸಿನಿಮಾ ನಟ ಅಂಬರೀಷ್, ‘ನನಗೆ ರಾಜಕೀಯವೇ ಬೇಡ. ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ’ ಎಂದು ಘೋಷಿಸಿ ಕಾರು ಹತ್ತಿ ಹೊರಟು ಹೋದ ಘಟನೆ ಇಂದು ಕೆ.ಆರ್.ಎಸ್‌ನಲ್ಲಿ ನಡೆದಿದೆ.
ಕನ್ನಂಬಾಡಿ ಕಟ್ಟೆಯ ಬಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲು ಸಕುಟುಂಬ ಸಮೇತರಾಗಿ ಬಂದಿದ್ದ ಅವರು, ಪೂಜೆಯ ನಂತರ ಅಲ್ಲಿ ಸೇರಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜೊತೆ ಮಾತನಾಡುವಾಗ ಸಿನಿಮೀಯ ಮಾದರಿಯಲ್ಲಿ ಈ ಘಟನೆ ನಡೆದಿದೆ. ಒಂದು ಹಂತದಲ್ಲಿ ಕಾಂಗ್ರೆಸ್ ಸೇರುವುದನ್ನು ವಿರೋಧಿಸಿ ಅಂಬರೀಷ್ ಅವರನ್ನು ಅಭಿಮಾನಿಗಳು ಮತ್ತು ದಳ ಕಾರ್ಯಕರ್ತರು ಘೇರಾವ್ ಮಾಡುವ ಯತ್ನ ನಡೆಸಿದರು.
ಅಂಬರೀಷ್ ಕೆ.ಆರ್.ಎಸ್‌ಗೆ ಬರುತ್ತಾರೆಂದು ತಿಳಿದು ದಳ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಅಲ್ಲಿ ಸೇರಿದ್ದರು. ‘ದಳದಿಂದ ಆರಿಸಿಹೋದ ನೀವು ದಳದಲ್ಲೇ ಉಳಿಯಬೇಕು’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಪೂಜೆ ಮುಗಿಸಿ ಬಂದ ಅಂಬರೀಷ್ ಕಾರ್ಯಕರ್ತ
ರನ್ನು ಉದ್ದೇಶಿಸಿ ಮಾತನಾಡತೊಡಗಿದಾಗಲೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ಚುನಾವಣೆ: ವೀರಪ್ಪನ್ ವಿರುದ್ಧ ಕಟ್ಟೆಚ್ಚರ
ಕೊಯಮತ್ತೂರು, ಆ. 4 (ಪಿಟಿಐ)– ಮುಂಬರುವ ಲೋಕಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು, ದಂತಚೋರ ಹಾಗೂ ಶ್ರೀಗಂಧ ಕಳ್ಳಸಾಗಣೆದಾರ ವೀರಪ್ಪನ್ ಚಟುವಟಿಕೆಗಳಿರುವ ಪಶ್ಚಿಮಘಟ್ಟ ಪ್ರದೇಶಗಳ ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಜಂಟಿ ವಿಶೇಷ ಕಾರ್ಯಾಚರಣೆ ಪಡೆಯ ಮಹಾನಿರ್ದೇಶಕ ಬಾಲಚಂದ್ರನ್ ಇಂದು ಇಲ್ಲಿ ತಿಳಿಸಿದರು.