ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಈ ದಿನ: ಖಾಸಗಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಕರಣಕ್ಕೆ ಶಿಫಾರಸು

Published 15 ಏಪ್ರಿಲ್ 2024, 19:16 IST
Last Updated 15 ಏಪ್ರಿಲ್ 2024, 19:16 IST
ಅಕ್ಷರ ಗಾತ್ರ

ಖಾಸಗಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಕರಣಕ್ಕೆ ಶಿಫಾರಸು

ನವದೆಹಲಿ, ಏ. 15– ಸಹಕಾರಿ ಕ್ಷೇತ್ರಕ್ಕೆ ಸೇರದಿರುವ ಸಕ್ಕರೆ ಕಾರ್ಖಾನೆಗಳನ್ನು
ರಾಷ್ಟ್ರೀಕರಿಸಬೇಕೆಂದು ಸಕ್ಕರೆ ಉದ್ಯಮ ವಿಚಾರಣಾ ಆಯೋಗವು ಶಿಫಾರಸು ಮಾಡಿದೆ.

ಸಹಕಾರೇತರ ಕಾರ್ಖಾನೆಗಳವರು ತಮ್ಮ ಸಂಸ್ಥೆಗಳನ್ನು ಸಾರ್ವಜನಿಕರ ಷೇರು ಬಂಡವಾಳಕ್ಕೂ ಅವಕಾಶವಿರುವ ಉದ್ಯಮ ಸಂಸ್ಥೆಗಳನ್ನಾಗಿ ನಿಶ್ಚಿತ ಅವಧಿಯೊಳಗೆ ಪರಿವರ್ತಿಸಲು ಒಪ್ಪಿಕೊಂಡರೆ ಅವನ್ನು ರಾಷ್ಟ್ರೀಕರಿಸಬಾರದೆಂದು ಆಯೋಗದ ಅಧ್ಯಕ್ಷರನ್ನೂ ಒಳಗೊಂಡಂತೆ ಅರ್ಧದಷ್ಟು ಸದಸ್ಯರು ಅಭಿಪ್ರಾಯಪಟ್ಟಿದ್ದರು. ಆದರೂ ಇನ್ನರ್ಧ ಜನ ರಾಷ್ಟ್ರೀಕರಣದ ಪರವಾಗಿ ಶಿಫಾರಸು ಮಾಡಿದರು.

ಅಧ್ಯಕ್ಷ ವಿ. ಭಾರ್ಗವ ಹಾಗೂ ಇತರ ನಾಲ್ವರು ಒಂದು ಶಿಫಾರಸನ್ನು, ಇನ್ನು ಐವರು ಇನ್ನೊಂದು ಶಿಫಾರಸನ್ನು ನೀಡಿದರು.

ಕಚ್ಚಾ ವಸ್ತುಗಳ ಪೋಲು ನಿಲ್ಲಿಸಿ ಉದ್ಯಮಿಗಳಿಗೆ ಪ್ರಧಾನಿ ಇಂದಿರಾ ಕರೆ

ನವದೆಹಲಿ, ಏ. 15– ಕೊರತೆಯಿರುವ ಕೈಗಾರಿಕಾ ಕಚ್ಚಾವಸ್ತುಗಳು ಪೋಲಾಗುವು ದನ್ನು ತಡೆಯಲು ಹಾಗೂ ಉತ್ಪಾದನಾವೃದ್ಧಿಗೆ ಬಂಡವಾಳ ದೊರೆಯುವಂತೆ ಉಳಿತಾಯ ಹೆಚ್ಚಿಸಲು ಸಹಕಾರ ನೀಡಬೇಕು ಎಂದು ಉದ್ಯಮಿಗಳಿಗೆ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಕರೆ ನೀಡಿದರು.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಫೆಡರೇಷನ್ನಿನ ವಾರ್ಷಿಕ
ಅಧಿವೇಶನವನ್ನು ಉದ್ಘಾಟಿಸಿದ ಅವರು, ವಿಶ್ವದಾದ್ಯಂತ ಉಲ್ಬಣಗೊಂಡಿರುವ ಕಚ್ಚಾವಸ್ತು ಕೊರತೆ ಹಾಗೂ ದುಬಾರಿ ಬೆಲೆಗಳನ್ನು ಪ್ರಸ್ತಾಪಿಸಿ, ಇಂಥ ಪರಿಸ್ಥಿತಿಯಲ್ಲೂ ರಾಷ್ಟ್ರದಲ್ಲಿ ಅವುಗಳು ಸಾಕಷ್ಟು
ಪೋಲಾಗುತ್ತಿರುವುದು ಸರಿಯಲ್ಲ ಎಂದರು.

ಎಲ್‌.ಎಂ.ಪಿ. ಮಾದರಿಯ ಅಲ್ಪಾವಧಿ ವೈದ್ಯಕೀಯ ಶಿಕ್ಷಣಕ್ಕೆ ಎಚ್ಚೆನ್‌ ಕರೆ

ಬೆಂಗಳೂರು, ಏ. 15– ದೇಶದ ಅಗತ್ಯವನ್ನು ಪೂರೈಸಬಲ್ಲ ಹಾಗೂ ಬಡವರ ಮಕ್ಕಳಿಗೂ ಕೈಗೆಟಕುವ ಹಿಂದಿನ ಎಲ್‌.ಎಂ.ಪಿ. ಮಾದರಿಯ ಅಲ್ಪಾವಧಿಯ ವೈದ್ಯಕೀಯ ಶಿಕ್ಷಣವನ್ನು ಜಾರಿಗೆ ತರುವುದು ಅಗತ್ಯ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಚ್‌. ನರಸಿಂಹಯ್ಯ ಅವರು ಇಂದು ಇಲ್ಲಿ ನುಡಿದರು.

ಭಾರತದ ವಿದ್ಯಾರ್ಥಿ ದಾದಿಯರ ಸಂಘದ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿದ ಅವರು, ಇಂದಿನ
ಎಂ.ಬಿ.ಬಿ.ಎಸ್‌. ಶಿಕ್ಷಣ ಸಾಮಾನ್ಯರ ಮಕ್ಕಳಿಗೆ ದೊರಕದಷ್ಟು ದುಬಾರಿಯಾಗಿದ್ದು ಒಬ್ಬ ವೈದ್ಯ ತಯಾರಾಗಲು ಒಂದು ಲಕ್ಷ ರೂಪಾಯಿ ವೆಚ್ಚ ಮಾಡಬೇಕಾದ ಪ್ರಸಂಗ ಇದೆ ಎಂದರು.

ಪ್ರತಿಯೊಬ್ಬ ವೈದ್ಯನೂ ಪ್ರತಿಯೊಂದು ವಿಭಾಗದಲ್ಲೂ ಪರಿಣತನಾಗಿರಬೇಕೆಂಬ ಭಾವನೆ ತಪ್ಪು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT