ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ | ನಗು ಹಂಚಿದ ಕನ್ನಡದ ವೈದ್ಯ

Published 21 ಏಪ್ರಿಲ್ 2023, 21:42 IST
Last Updated 21 ಏಪ್ರಿಲ್ 2023, 21:42 IST
ಅಕ್ಷರ ಗಾತ್ರ

ಎಂ.ಎಸ್‌. ಆಶಾದೇವಿ

‘ನೀವೂ ಒಬ್ಬರು ವಿಮರ್ಶಕರು ಅನ್ನೋ ಕಾರಣಕ್ಕ ಕೇಳ್ತೀನಿ, ನೀವು ನನ್ನ ಬರವಣಿಗಿ ಬಗ್ಗೆ ಏನೂ ಅಭಿಪ್ರಾಯ ಇಲ್ಲಿ ತನಾ  ಹೇಳಿಲ್ಲ, ಯಾಕಂತ ಕೇಳಬಹುದಾ’ ಅಂತ ಶ್ರೀನಿವಾಸ ವೈದ್ಯರು ಒಮ್ಮೆ ಕೇಳಿದ್ದರು. ‘ನಿರ್ದಿಷ್ಟವಾದ ಕಾರಣ ಏನೂ ಇಲ್ಲ, ಸಂದರ್ಭ ಬಂದಿಲ್ಲ. ಅದಕ್ಕೇ ಏನೂ ಬರೆದಿಲ್ಲ’ ಅಂತ ಸಹಜವಾಗಿ ಉತ್ತರಿಸಿದ್ದೆ. ‘ನನ್ನುವು ಪುಸ್ತಕ ಕಳಿಸ್ತೀನಿ, ನಿಮ್ಮ ಅಭಿಪ್ರಾಯದ ಬಗ್ಗೆ ನನಗೆ ಕುತೂಹಲ ಬಹಳ ದಿನದಿಂದ ಅದೆ’ ಅನ್ನುವ ಮಾತಿಗೆ, ‘ನಿಮ್ಮ ಎಲ್ಲ ಪುಸ್ತಕಗಳೂ ನನ್ನ ಬಳಿ ಇವೆ, ನಿಮ್ಮ ಪ್ರಬಂಧಗಳು ನನಗೆ ಬಹಳ ಮೆಚ್ಚಿನವು’ ಎಂದಿದ್ದೆ. ಆ ಹಿರಿಯರು ಇದ್ದಾಗಲೇ ಬರೆಯಬೇಕಾಗಿದ್ದ ಮಾತುಗಳನ್ನು ಹೀಗೆ, ಇಂಥ ಸನ್ನಿವೇಶದಲ್ಲಿ ಬರೆಯುತ್ತಿರುವಾಗ ಪಾಪಪ್ರಜ್ಞೆ ಕಾಡುತ್ತಿದೆ ನನಗೆ.

ವೈದ್ಯರ ವ್ಯಕ್ತಿತ್ವ ಥೇಟು ಅವರ ಪ್ರಬಂಧಗಳ ನಾಯಕರಂತೆಯೇ. ಗಂಭೀರವಾದ ಸಾಹಿತ್ಯಕ ಚರ್ಚೆಗೆ ಅವರು ಸಿದ್ಧರಿರುತ್ತಿದ್ದರು ಎನ್ನುವುದು ನಿಜವೇ. ಆದರೆ, ಅವರ ನಗುಮುಖದಂತೆಯೇ ಅವರ ವ್ಯಕ್ತಿತ್ವದಲ್ಲೂ ಸದಾ ಒಂದು ಬಗೆಯ ಪ್ರಸನ್ನತೆಯಿರುತ್ತಿತ್ತು. ಕುಮಾರವ್ಯಾಸನನ್ನು ಕುರಿತ ಒಂದು ಸಭೆ. ಅ.ರಾ. ಮಿತ್ರ ಅವರ ಉಪನ್ಯಾಸ. ಕುಮಾರವ್ಯಾಸನ ಹಾಸ್ಯಪ್ರಜ್ಞೆಯನ್ನು ಕುರಿತಂತೆ ಮಿತ್ರರು, ಅವರಿಗೆ ಸಹಜವಾದ ವೈನೋದಿಕ ಶೈಲಿಯಲ್ಲಿ ಹೇಳುತ್ತಿದ್ದರೆ ವೈದ್ಯರು ನಿಸ್ಸಂಕೋಚವಾಗಿ ನಗುತ್ತಾ ಅದನ್ನು ಅನುಮೋದಿಸುತ್ತಿದ್ದರು. ಸಭೆಯೊಂದರಲ್ಲಿ ಇರಬೇಕು ಎಂದು ನಿರೀಕ್ಷಿಸುವ ಗಾಂಭೀರ್ಯ, ನಗು ಬಂದರೂ ಅದನ್ನು ಹತ್ತಿಕ್ಕಿ ಕೊಲ್ಲುವ ಅಸಹಜತೆ ಈ ಎಲ್ಲವನ್ನೂ ಗಾಳಿಗೆ ತೂರುತ್ತಿದ್ದರು ವೈದ್ಯರು. ತಾವೂ ನಗುತ್ತಾ ಇತರರೂ ಆ ಕೃತಕತೆಯಿಂದ ಹೊರಬಂದು ಸಹಜ ಮಾನವರಾಗಲಿ ಎಂದು ತಾವೇ ಮೇಲ್ಪಂಕ್ತಿ ಹಾಕಿಕೊಟ್ಟರೇನೋ ಎಂದು ಈಗ ಅನ್ನಿಸುತ್ತಿದೆ.

ಸಭೆ ಮುಗಿದ ಮೇಲೂ ಅವರು ಮಿತ್ರರೊಡನೆ ಅದೇ ನಗುವಿನಲ್ಲೇ ಮಾತು ಮುಂದುವರಿಸಿದ್ದರು. ಮೊದಲ ಬಾರಿಗೆ ಆ ಸಭೆಯಲ್ಲೇ ನಾನು ಈ ಹಿರಿಯರನ್ನು ನೋಡಿದ್ದು. ಓಹೋಹೋ ವಿಮರ್ಶಕಿಯವರೂ ಈ ಸಭೆಗೆ ಬಂದು ಬಿಟ್ಟಿದ್ದಾರೆ ಎಂದು ಮತ್ತದೇ ನಗುವನ್ನು ಮುಂದುವರಿಸಿದರು. ಇವರ ಪ್ರಬಂಧಗಳ ನಾಯಕ ಸೃಷ್ಟಿಯಾದವನಲ್ಲ, ಆತ ಸ್ವತಃ ವೈದ್ಯರು ಅಂತ ನನಗೆ ಎನ್ನಿಸಿಬಿಟ್ಟಿತ್ತು. ನಗುವು ಸಹಜದ ಧರ್ಮ ಎನ್ನುವ ಮಾತು ನಿಜ ಮಾಡಿದ ಕೆಲವರಲ್ಲಿ ಇವರೂ ಒಬ್ಬರು. ಇವರದು ದೊಡ್ಡ ಗೆಳೆಯರ ಗುಂಪು. ಆ ಗುಂಪಿನಲ್ಲಿ ವಿಭಿನ್ನ ನೋಟದವರಿದ್ದರು, ಯಾಕೆ ವಿರುದ್ಧ ನಿಲುವಿನವರೂ ಖಂಡಿತಾ ಇದ್ದರು. ಆದರೆ, ಆ ಭಿನ್ನತೆಗಳನ್ನು ಮೀರಿ ಗೆಳೆತನ ಉಳಿಸಿಕೊಳ್ಳಬಲ್ಲವರಾಗಿದ್ದರು ವೈದ್ಯರು. ಬದುಕನ್ನು ಪ್ರೀತಿಸುವವರಿಗೆ ಮಾತ್ರ ಇದು ಸಾಧ್ಯ ಎನ್ನುವುದು ನಿಜ.

ವೈದ್ಯರ ಪ್ರಬಂಧವೊಂದರಲ್ಲಿ ಫಲಿಸದ ಸಂಬಂಧವನ್ನು ನೆನಪಿಸಿಕೊಳ್ಳುವಾಗ, ಪ್ರಬಂಧದ ನಾಯಕನಿಗೆ ಹೃದಯದ ಮೇಲೆ ಸೂಜಿಯಿಂದ ಎಳೆದಾಗ ಆಗುವ ನೋವು ಮಧುರವಾದ ನೋವು ಎನ್ನಿಸುತ್ತದೆ. ಅದು ನೋವು ಹೌದು; ಆದರೆ, ಅದು ಜೀವ ತೆಗೆಯುವಂಥದಲ್ಲ. ಸದಾ ಮಧುರತೆಯನ್ನೂ ನೋವನ್ನೂ ಒಟ್ಟಿಗೇ ಉಳಿಸುವ ಗುಣದ್ದು.ವೈದ್ಯರ ಬದುಕಿನ ದೃಷ್ಟಿಕೋನವೇ ಇದೇನೋ. ಏನೆಲ್ಲ ಏರಿಳಿತಗಳ ನಡುವೆಯೂ ಬದುಕನ್ನು ಹಳಿತಪ್ಪದಂತೆ, ಆಯ ತಪ್ಪದಂತೆ ಕಾಪಾಡುವ ದಿವ್ಯಶಕ್ತಿ ನಗುವಿಗೆ ಇದೆ ಎಂದು ಇವರು ಮನಸಾ ನಂಬಿ ಪಾಲಿಸುವಂಥವರಾಗಿದ್ದರು. ಮಾತಿಗೆ ಮುಂಚಿನ ನಗು ಎನ್ನುತ್ತಾರಲ್ಲ, ಅದು ಇವರ ಆಪ್ತ ವಲಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಹೋಯಿತು. ಜಿ. ವೆಂಕಟಸುಬ್ಬಯ್ಯನವರಿಂದ ಹಿಡಿದು ರಹಮತ್ ತರೀಕೆರೆಯವರ ತನಕ ಹಲವು ತಲೆಮಾರಿನವರ ಜೊತೆ ನಿರ್ಮಲವಾದ ಸ್ನೇಹವನ್ನು ಕಟ್ಟಿಕೊಳ್ಳುವುದು ಸಾಧ್ಯವಾದದ್ದು ಬದುಕನ್ನು, ಮನುಷ್ಯರನ್ನು ನೋಡುವ ಈ ದೃಷ್ಟಿಯಿಂದಲೇ.

ವೈದ್ಯರ ಬರವಣಿಗೆಯ ಭಿತ್ತಿಯೇ ಕುತೂಹಲಕರ ವಾದುದು. ಅವರ ಮೂಲಮಾಧ್ಯಮವೆಂದೇ ಅನ್ನಿಸುವ ಪ್ರಬಂಧಗಳು ಒಂದು ಕಡೆಯಾದರೆ, ಆಶ್ವರ್ಯಕರವೆನಿಸುವಂತೆ ಕಾದಂಬರಿ ಮತ್ತು ಕತೆಗಳನ್ನೂ ಅವರು ಬರೆದರು. ಸಾಮಾನ್ಯವಾಗಿ ಬರಹಗಾರರಲ್ಲಿ ಒಂದು ಇನ್ನೊಂದಕ್ಕೆ ಪೂರಕವಾಗಿ ಒದಗಿ ಬರುವಂತೆ ವೈದ್ಯರಲ್ಲಿ ಅವು ಒದಗಿ ಬರಲಿಲ್ಲ. ಅವು ಎರಡು ಭಿನ್ನ ಶೋಧಗಳಾಗಿಯೇ ಉಳಿದವು. ಹೀಗೆ ತಮ್ಮ ಬರವಣಿಗೆಯ ಭಿತ್ತಿಯನ್ನು ಎರಡು ಕವಲಾಗಿಸಿಕೊಂಡ ಕೆಲವರಲ್ಲಿ ವೈದ್ಯರೂ ಒಬ್ಬರು. ಅವರು ತಮ್ಮ  ಕಾದಂಬರಿ ಮತ್ತು ಕತೆಗಳಲ್ಲಿ ಬದುಕನ್ನು ತುಸು ಉದ್ವಿಗ್ನವೆಂದು ತೋರುವ, ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳುತ್ತಾ ಹೋಗುವುದೇ ಮನುಷ್ಯನ ವಿಧಿಯೋ ಎನ್ನುವ ಅಸಹಾಯಕತೆ ಬೆರೆತ ಮನಸ್ಥಿತಿಯಲ್ಲಿ ಶೋಧಿಸುತ್ತಾ ಹೋದವರು.

ಕೈಮೀರಿದ ಬದುಕನ್ನು ತನ್ನ ಹಿಡಿತಕ್ಕೆ ತಂದುಕೊಳ್ಳಲು ಹೆಣಗುವ ಮನುಷ್ಯಲೋಕದ ಮೆರವಣಿಗೆಯಂತೆ ಕಾಣುತ್ತದೆ ಹಳ್ಳ ಬಂತು ಹಳ್ಳ ಕಾದಂಬರಿ. ಇತಿಹಾಸವೆನ್ನುವುದು ಸಂಗತ ದಾಖಲೆಗಳ ಸಂಗತಿ ಮಾತ್ರವಲ್ಲ, ಅದರೊಳಗಿನ ಅಸಂಗತವಾದ, ಅರ್ಥ ಅನರ್ಥಗಳನ್ನು ಮೀರಿದ, ತರ್ಕ, ಸತ್ಯಗಳನ್ನೂ ದಿಗಿಲಿಕ್ಕಿಸುವಂತೆ ಮಾಡಬಲ್ಲ ಅಗೋಚರ ಹೆಣಿಗೆಗಳನ್ನು ಹೇಗೆ ಎದುರಿಸುವುದು ಎನ್ನುವ ದೊಡ್ಡ ಪ್ರಶ್ನೆಯನ್ನು ಈ ಕಾದಂಬರಿ ಸತತವಾಗಿ ಮುಖಾಮುಖಿಯಾಗುತ್ತಾ ಹೋಗುತ್ತದೆ. ನವಲಗುಂದ ಎನ್ನುವ ಪ್ರಾಂತ್ಯ, ಅಲ್ಲಿನ ಜಮೀನ್ದಾರಿಕೆಯ ಮೂಲದ ಸಾಮಂತರು, ಬ್ರಿಟಿಷರ ಆಳ್ವಿಕೆ, ಶಿಕ್ಷಣದ ಪ್ರವೇಶ, ಬುಡ ಅಲುಗುತ್ತಿದೆಯೋ ಎಂದು ಅಧೀರವಾದ ಪುರೋಹಿತ ವರ್ಗ, ಹೊಸ ತಲೆಮಾರಿನ ಆತಂಕ ಮತ್ತು ಆಮಿಷಗಳು ಎಲ್ಲವನ್ನೂ ಈ ಕಾದಂಬರಿ ಚಿತ್ರಿಸುತ್ತಾ ಹೋಗುತ್ತದೆ.

ಅಗ್ನಿ ಕಾರ್ಯ ಕಥಾ ಸಂಕಲನದ ಹಲವು ಕತೆಗಳು ನೋವಿನಲ್ಲಿ ಮುಳುಗೇಳುವ ಕುಟುಂಬಗಳ ಕಥನಗಳನ್ನು ನಿರೂಪಿಸುತ್ತವೆ (ಇಲ್ಲಿನ ಹಲವು ಕತೆಗಳು ರಾಘವೇಂದ್ರ ಖಾಸನೀಸರ ಕತೆಗಳನ್ನು ನೆನಪಿಸುತ್ತವೆ. ಅನುಭವ ಮತ್ತು ನಿರೂಪಣೆಯಲ್ಲಿನ ಸಾದೃಶ್ಯ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ). ಹೇಳಲೇಬೇಕಾದ ಒಂದು ಅಂಶವಿದೆ. ಅದು ಇವರ ಸ್ತ್ರೀಪಾತ್ರಗಳದ್ದು. ಹೆಣ್ಣಿನ ಧಾರಣ ಶಕ್ತಿಯನ್ನು ಇವರ ಕಾದಂಬರಿ ಮತ್ತು ಕತೆಗಳು ತಪ್ಪದೇ ಗುರುತಿಸುತ್ತವೆ. ಅವರ ಸಹನೆ, ಕರ್ತೃತ್ವ ಶಕ್ತಿಯಿಲ್ಲದೆ ದಾಂಪತ್ಯ, ಕುಟುಂಬ ಯಾವುದೂ ಬಾಳಿಕೆ ಬರುವುದೂ ಇಲ್ಲ, ಉಳಿಯುವುದೂ ಇಲ್ಲ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿಯೇ ಇವರು ಗಮನಿಸಿದವರು.

ವೈದ್ಯರ ಸಾಧನೆಯ ಬಹುದೊಡ್ಡ ಪಾಲು ಅವರ ಪ್ರಬಂಧಗಳಿಗೆ ಹೋಗಬೇಕು. ಪ್ರಬಂಧ ಪ್ರಕಾರದ ಕಾಲವೇ ಮುಗಿಯುತ್ತಿದೆ ಎನ್ನುವ ಸಂದರ್ಭದಲ್ಲಿ ಆ ಪ್ರಕಾರವನ್ನು ಅದರ ಮೇಯ್ಗೆಡೆಯಲೀಯದೆ, ಅದಕ್ಕೆ ಮರುಸ್ಥಾನವನ್ನು ಕಟ್ಟಿಕೊಟ್ಟವರು ವೈದ್ಯರು. ಮನಸುಖರಾಯನ ಮನಸ್ಸು, ತಲೆಗೊಂದು ತರತರ, ರುಚಿಗೆ ಹುಳಿಯೊಗರು ಮೊದಲಾದ ಪ್ರಬಂಧ ಸಂಕಲನಗಳಲ್ಲಿ ಕಾದಂಬರಿ ಮತ್ತು ಕಥಾಲೋಕಗಳಲ್ಲಿ ಎದುರಾಗುವ ಅಪ್ರಿಯ ಸತ್ಯಗಳ ಎದುರಿಗೆ ಸೋತು ನಿಲ್ಲುವ ಮನುಷ್ಯರ ಬದಲು ನಗುನಗುತ್ತಲೇ ಬದುಕಿನ ವಾಸ್ತವಗಳನ್ನು ಬರಮಾಡಿಕೊಳ್ಳುವ, ನಗೆಯೇ ಮದ್ದು ಎಂದು ನಂಬಿ ಬದುಕನ್ನು ಸಹ್ಯವಾಗಿಸಿಕೊಳ್ಳುತ್ತಾ, ಅದನ್ನು ಆನಂದಿಸುವ ದಾರಿಗಳನ್ನು ಹುಡುಕುವವರಂತೆ ಕಾಣಿಸಿದವರು. ಬದುಕನ್ನು ನಗುನಗುತ್ತಾ ನೋಡಿದರೆ ಅದೂ ನಮ್ಮನ್ನು ನೋಡಿ ನಕ್ಕೀತು ಎನ್ನುವ ಆದಿಮ ನಂಬಿಕೆಯನ್ನು ನೆಮ್ಮಿ ಅವರ ಪ್ರಬಂಧಗಳು ರೂಪಿತವಾಗಿವೆ.

ನಾಯಕನ ಸ್ವಗೇಲಿಯ ಗುಣದಿಂದಲೇ ಅವರ ಪ್ರಬಂಧಗಳು ಗೆದ್ದಿವೆ. ಮೊದಲು ತನ್ನನ್ನು ತಾನು ನೋಡಿ ನಗಲು ಪ್ರಾರಂಭಿಸುವುದರಿಂದ ಇತರರನ್ನು ನೋಡಿ ನಗಲು ಬೇಕಾಗುವ ನೈತಿಕ ಹಕ್ಕು ಸಿಗುತ್ತದೆ. ಬ್ಯಾಂಕಿನ ವೃತ್ತಿಯಲ್ಲಿದ್ದ ವೈದ್ಯರು ಅಲ್ಲಿನ ಲೋಕವನ್ನು ಅನೇಕ ಪ್ರಬಂಧಗಳಲ್ಲಿ ಕಾಣಿಸಿದವರು. ಯಾರ ಬಗೆಗೂ ಚುಚ್ಚುವ ವ್ಯಂಗ್ಯವಿಲ್ಲದ, ಅಸಹನೆಯಿಲ್ಲದ, ಗೇಲಿ ಮಾಡುವಾಗಲೂ ಮನುಷ್ಯ ಪ್ರೀತಿಯನ್ನು ಕಳೆದುಕೊಳ್ಳದ ಇಲ್ಲಿನ ಪ್ರಬಂಧಗಳು ಇವತ್ತಿನ ಸನ್ನಿವೇಶದಲ್ಲಿ ಓದಿದಷ್ಟೂ ಮತ್ತೂ ಮತ್ತೂ ಬೇಕೆನ್ನಿಸುತ್ತವೆ, ಅವುಗಳ ಮನುಷ್ಯ ಪ್ರೀತಿಯ ಕಾರಣಕ್ಕಾಗಿ.

ಬರಹ ಮತ್ತು ಬದುಕು ಎರಡರಲ್ಲೂ ಅಂತಃಕರಣ ವನ್ನು ಹಂಚಿಹೋದ ವೈದ್ಯರಿಗೆ ನಮಸ್ಕಾರ.

- ಲೇಖಕಿ,ವಿಮರ್ಶಕಿ

ಸಾಹಿತಿ ವೈದ್ಯ ನಿಧನ

ಬೆಂಗಳೂರು: ಕೆನರಾ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕರೂ ಆಗಿದ್ದ ಸಾಹಿತಿ ಶ್ರೀನಿವಾಸ ವೈದ್ಯ (87) ಅವರು ಅನಾರೋಗ್ಯದಿಂದ ಶುಕ್ರವಾರ ಇಲ್ಲಿ ನಿಧನರಾದರು. ಧಾರವಾಡ ಜಿಲ್ಲೆಯ ನವಲಗುಂದದ ಶ್ರೀನಿವಾಸ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

ಧಾರವಾಡದಲ್ಲಿ ಎಂ.ಎ ವ್ಯಾಸಂಗ ಮುಗಿಸಿದ್ದ ಶ್ರೀನಿವಾಸ ಬ್ಯಾಂಕಿಂಗ್ ಪರೀಕ್ಷೆ ತೇರ್ಗಡೆಗೊಂಡು 1959ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ ವೃತ್ತಿ ಆರಂಭಿಸಿದ್ದರು. ನಿವೃತ್ತಿ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಬ್ಯಾಂಕಿಂಗ್ ವೃತ್ತಿ ಜತೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ ಅವರು ನಗೆಬರಹ ಲಲಿತ ಪ್ರಬಂಧ ಕಾದಂಬರಿ ಕಥಾ ಪ್ರಕಾರದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.

‘ತಲೆಗೊಂದು ತರತರ’ ಹಾಸ್ಯ ಲೇಖನ ಸಂಕಲನ ‘ಮನಸುಖರಾಯನ ಮನಸು’ ಲಲಿತ ಪ್ರಬಂಧಗಳ ಸಂಕಲನ ‘ರುಚಿಗೆ ಹುಳಿಯೊಗರು’ ‘ಹಳ್ಳ ಬಂತು ಹಳ್ಳ’ ಕಾದಂಬರಿ ‘ಅಗ್ನಿಕಾರ್ಯ’ ‘ಕಪ್ಪೆ ನುಂಗಿದ ಹುಡುಗ’ ಕಥಾ ಸಂಕಲನ ‘ಮೊದಲ ಓದು’ ಹಾಗೂ ‘ಕರ್ನಲ್‍ನಿಗೆ ಯಾರೂ ಬರೆಯುವುದೇ ಇಲ್ಲ’(ಅನುವಾದ) ಸೇರಿ ಹಲವು ಕೃತಿಗಳನ್ನು ಹೊರತಂದಿದ್ದರು.

ಶ್ರೀನಿವಾಸ್ ಅವರ ‘ಮನಸುಖರಾಯನ ಮನಸು’ ಕೃತಿಗೆ 2003ರಲ್ಲಿ ಪರಮಾನಂದ ಪ್ರಶಸ್ತಿ ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ 2004ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2008ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದವು. 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಶ್ರೀನಿವಾಸ್ ಭಾಜನರಾಗಿದ್ದರು. ಶ್ರೀನಿವಾಸ್ ಅವರು 1997ರಲ್ಲಿ ‘ಸಂವಾದ ಟ್ರಸ್ಟ್’ ಸ್ಥಾಪಿಸಿದ್ದರು. ಈ ಟ್ರಸ್ಟ್‌ ಮೂಲಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯ ಪ್ರಚಾರದಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT