ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಮಗನ ‘ಚಿನ್ನ’ದ ಪಿಸ್ತೂಲ್‌

Last Updated 8 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಮೂರು ವರ್ಷಗಳ ಹಿಂದೆ ತಿರುವನಂತಪುರದಲ್ಲಿ ನಡೆದಿದ್ದ ಸುರೇಂದರ್‌ ಸಿಂಗ್‌ ಸ್ಮಾರಕ ಶೂಟಿಂಗ್‌ ಚಾಂಪಿಯನ್‌ಷಿಪ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದ ಫೈನಲ್ ಪಂದ್ಯವದು. ಆ ವೇಳೆಗಾಗಲೇ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಛಾಪು ಮೂಡಿಸಿದ್ದ ಜಿತು ರಾಯ್‌ ಮತ್ತು ಶೂಟಿಂಗ್‌ ರೇಂಜ್‌ನಲ್ಲಿ ಆಗ ತಾನೆ ಅಂಬೆಗಾಲಿಡುತ್ತಿದ್ದ ಸೌರಭ್‌ ಚೌಧರಿ ಮುಖಾಮುಖಿಯಾಗಿದ್ದರು. ಎಲ್ಲರ ನಿರೀಕ್ಷೆ ಅನುಭವಿ ಜಿತು ಮೇಲಿತ್ತು. ಆದರೆ, ಅಂದಿನ ಸ್ಪರ್ಧೆಯಲ್ಲಿ 13ರ ಹರೆಯದ ಹುಡುಗ ಸೌರಭ್‌ ಚಿನ್ನದ ಪದಕ ಜಯಿಸಿ ಭಾರತದ ಶೂಟಿಂಗ್ ನಕಾಶೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ.

ಅಂದಿನ ಫಲಿತಾಂಶ ನೋಡಿದವರಿಗೆಲ್ಲ ಅಚ್ಚರಿ. ಏಕೆಂದರೆ, ಜಿತು 2015ರ ವೇಳೆಗಾಗಲೇ ವಿಶ್ವ ಚಾಂಪಿಯನ್‌ಷಿಪ್‌, ಎರಡು ಬಾರಿ ವಿಶ್ವಕಪ್‌, ಕಾಮನ್‌ವೆಲ್ತ್ ಕ್ರೀಡಾಕೂಟ, ಏಷ್ಯನ್‌ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಜಯಿಸಿದ್ದರು. ಆದ್ದರಿಂದ ಶೂಟಿಂಗ್‌ ಲೋಕಕ್ಕೆ ಗೊತ್ತೇ ಇರದಿದ್ದ ಸೌರಭ್‌ ಎನ್ನುವ ‘ಚಿಗುರು’ ಪ್ರತಿಭೆ ಬಗ್ಗೆ ಯಾರಿಗೂ, ಯಾವ ನಿರೀಕ್ಷೆಯೂ ಇರಲಿಲ್ಲ.

ಅಂದಿನ ಫೈನಲ್‌ ಪಂದ್ಯದಲ್ಲಿ ಸೋತ ಬಳಿಕ ಜಿತು ರಾಯ್‌ ‘ಭಾರತದಲ್ಲಿ ಮತ್ತೊಬ್ಬ ಅಭಿನವ್‌ ಬಿಂದ್ರಾ ಉದಯಿಸಿದ್ದಾರೆ’ ಎಂದು ಬಣ್ಣಿಸಿದ್ದರು. ಅವರ ಮಾತು ಈಗ ನಿಜವಾಗತೊಡಗಿದೆ. ಮೂರು ವರ್ಷಗಳ ಹಿಂದೆಯಷ್ಟೇ ವೃತ್ತಿಪರ ಶೂಟಿಂಗ್‌ಗೆ ಕಾಲಿಟ್ಟಿದ್ದ 16 ವರ್ಷದ ಸೌರಭ್‌, ಒಂದೇ ವರ್ಷದಲ್ಲಿ ಮೂರು ಚಿನ್ನದಂಥ ಸಾಧನೆಗಳನ್ನು ಮಾಡಿದ್ದಾರೆ.

ಇತ್ತೀಚೆಗೆ ಇಂಡೊನೇಷ್ಯಾದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲೂ ಸೌರಭ್‌ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಈ ಸಾಧನೆ ಮಾಡಿದ ಭಾರತದ ಐದನೇ ಶೂಟರ್‌ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದಕ್ಕೂ ಮೊದಲು ಜಸ್ಪಾಲ್‌ ರಾಣಾ, ರಣಧೀರ್‌ ಸಿಂಗ್‌, ಜಿತು ರಾಯ್‌ ಮತ್ತು ರಂಜನ್‌ ಸೋಧಿ ಪದಕ ಜಯಿಸಿದ್ದರು.

ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲೂ ದಾಖಲೆಯೊಂದಿಗೆ ಚಿನ್ನ ಗೆದ್ದು ಸಂಚಲನ ಮೂಡಿಸಿದ್ದಾರೆ. ತಾವು ಭಾಗವಹಿಸಿದ್ದ ಮೊದಲ ಜೂನಿಯರ್‌ ವಿಶ್ವಕಪ್‌ನಲ್ಲಿ
ಗಳಿಸಿದ್ದ 243.7 ಸ್ಕೋರ್‌ಗಳ ವಿಶ್ವ ದಾಖಲೆಯನ್ನು ಚಾಂಗ್ವಾನ್‌ನಲ್ಲಿ ಮುರಿದಿದ್ದಾರೆ. ಅಲ್ಲಿ 245.5 ಸ್ಕೋರ್‌ ಕಲೆ ಹಾಕಿ ಗಮನ ಸೆಳೆದಿದ್ದಾರೆ.

ಹೀಗೆ ಪ್ರತಿ ಚಾಂಪಿಯನ್‌ಷಿಪ್‌ನಲ್ಲೂ ಸೌರಭ್‌ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿದ್ದಾರೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಅವರು ಗೆದ್ದ ಚಿನ್ನಕ್ಕೆ ದೊಡ್ಡ ಮೌಲ್ಯವಿದೆ. ಏಕೆಂದರೆ, ಆ ಕೂಟದ ಫೈನಲ್‌ನಲ್ಲಿ ಎದುರಾಳಿಯಾಗಿದ್ದವರು ಟೊಮೊಯುಕಿ ಮುಸುದಾ. ಜಪಾನ್‌ನ ಈ ಶೂಟರ್‌ 2008ರ ಬೀಜಿಂಗ್‌ ಒಲಿಂಪಿಕ್ಸ್‌, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. 2010ರಲ್ಲಿ ಮ್ಯೂನಿಚ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಇಂಥ ಅನುಭವಿಯ ಮುಂದೆ ಸೌರಭ್‌ ಪದಕ ಗೆಲ್ಲುತ್ತಾರೆನ್ನುವ ಆಸೆ ಇಟ್ಟುಕೊಂಡಿದ್ದವರು ಬಹಳ ಕಡಿಮೆ ಮಂದಿ. ಸಾಗಿದ ಹಾದಿಯಲ್ಲಿ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಿರುವ ಸೌರಭ್‌, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಶೂಟರ್‌ ಎನಿಸಿದ್ದಾರೆ.

ರೈತನ ಮಗ, ಅಪ್ಪನ ನೆಚ್ಚಿನ ಪುತ್ರ: ಸೌರಭ್‌, ಉತ್ತರ ಪ್ರದೇಶದ ಮೀರಟ್‌ ಬಳಿಯ ಕಾಲಿನಾ ಗ್ರಾಮದವರು. ಇವರ ತಂದೆ ಹೊಲದಲ್ಲಿ ಕೆಲಸ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಮೀರಟ್‌ನಿಂದ 50 ಕಿ.ಮೀ. ದೂರದಲ್ಲಿರುವ ಬೆನೋಲಿ ಎಂಬಲ್ಲಿ ಅಮಿತ್‌ ಶೆರಾನ್ ಶೂಟಿಂಗ್‌ ಅಕಾಡೆಮಿ ಇದೆ. ಇಲ್ಲಿ ತರಬೇತಿ ಪಡೆಯಲು ಪ್ರತಿದಿನವೂ ಪ್ರಯಾಣ ಮಾಡುವ ಸೌರಭ್‌, ತಪ್ಪದೆ ಶಾಲೆಗೂ ಹೋಗುತ್ತಾರೆ. ‌ ಬಿಡುವಿನ ವೇಳೆಯಲ್ಲಿ ಹೊಲದಲ್ಲಿ ಅಪ್ಪನಿಗೆ ಸಹಾಯ ಮಾಡುತ್ತಾರೆ. ಇವುಗಳೆಲ್ಲದರ ನಡುವೆಯೂ ಚಿನ್ನದ ಸಾಧನೆ ಮಾಡಿ ದೇಶದ ಗೌರವ ಹೆಚ್ಚಿಸಿದ್ದಾರೆ.

ಮಗನಿಗೆ ಎಳವೆಯಲ್ಲೇ ಶೂಟಿಂಗ್‌ ಬಗ್ಗೆ ಅಪಾರ ಒಲವಿತ್ತು ಎಂದು ಅವರ ತಂದೆ ಜಗಮೋಹನ್‌ ಸಿಂಗ್ ಹೇಳುತ್ತಾರೆ. ಕಲಿನಾ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಜಾತ್ರೆ ನಡೆದಾಗ ಎಲ್ಲಾ ಮಕ್ಕಳು ಬಲೂನು ಖರೀದಿ ಮಾಡುತ್ತಿದ್ದರು. ಆದರೆ ಸೌರಭ್‌ ಮಾತ್ರ ಪ್ಲಾಸ್ಟಿಕ್‌ ಪಿಸ್ತೂಲ್‌ ತೆಗೆದುಕೊಡುವಂತೆ ಹಟ ಮಾಡುತ್ತಿದ್ದ. ಬಲೂನಿಗೆ ಪಿಸ್ತೂಲಿನಿಂದ ಗುರಿಯಿಟ್ಟು ಹೊಡೆಯುವ ಆಟಕ್ಕೆ ಒತ್ತು ಕೊಡುತ್ತಿದ್ದ ಎಂದು ಜಗಮೋಹನ್ ನೆನಪಿಸಿಕೊಳ್ಳುತ್ತಾರೆ.

ಪ್ರೌಢಶಾಲಾ ಹಂತಕ್ಕೆ ಬರುವ ವೇಳೆಗೆ ಗಂಭೀರವಾಗಿ ಶೂಟಿಂಗ್ ಅಭ್ಯಾಸ ಆರಂಭಿಸಿದ ಸೌರಭ್‌, ಈಗ ನಿತ್ಯ ಹತ್ತು ತಾಸು ಶೂಟಿಂಗ್‌ ರೇಂಜ್‌ನಲ್ಲಿ ತಾಲೀಮು ನಡೆಸುತ್ತಾರೆ. ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾರೆ. ತಮ್ಮ ಗುರು ಹಾಗೂ ಶೂಟಿಂಗ್‌ನಲ್ಲಿ ಸಾಧನೆ ಮಾಡಲು ಸ್ಫೂರ್ತಿಯಾದ ಒಲಿಂಪಿಯನ್‌ ಅಭಿನವ್‌ ಬಿಂದ್ರಾ ಅವರ ದೊಡ್ಡ ಚಿತ್ರವನ್ನು ಅಭ್ಯಾಸದ ವೇಳೆ ಎದುರಿಗೆ
ಇಟ್ಟುಕೊಳ್ಳುತ್ತಾರೆ.

ಸೌರಭ್‌, ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಾಗ ಅವರ ಪೋಷಕರಿಗಿಂತ ಹೆಚ್ಚು ಖುಷಿಪಟ್ಟಿದ್ದು ಕೋಚ್‌ ಅಮಿತ್‌ ಶೆರಾನ್‌. ‘ಶೂಟಿಂಗ್‌ನಲ್ಲಿ ಸಾಧನೆ ಮಾಡಲು ಏಕಾಗ್ರತೆ ಬಹಳ ಅಗತ್ಯ. ಆ ಕಲೆಯನ್ನು ಸೌರಭ್‌ ಬಹುಬೇಗ ಕರಗತ ಮಾಡಿಕೊಂಡಿದ್ದಾನೆ. ಅಭ್ಯಾಸದ ವೇಳೆ ಆತ ನನ್ನಿಂದ ಪಿಸ್ತೂಲ್‌ ಪಡೆದುಕೊಳ್ಳುತ್ತಿದ್ದ. ಈಗ ಅವನ ಬಳಿ ಮೂರು ‘ಚಿನ್ನ’ದ ಪಿಸ್ತೂಲ್‌ಗಳು ಇವೆ. ಈ ಪಿಸ್ತೂಲ್‌ಗಳೇ ನನಗೆ ಸಿಕ್ಕ ಗುರುದಕ್ಷಿಣೆ’ ಎಂದು ಶೆರಾನ್‌ ಗದ್ಗದಿತರಾಗುತ್ತಾರೆ.

ಬೆಡ್‌ರೂಮಿನಲ್ಲಿ ಅರಳಿತು ಕನಸು:ಬಿಂದ್ರಾ ಮತ್ತು ಗಗನ್‌ ನಾರಂಗ್‌ ಅವರ ಸಾಧನೆಗಳನ್ನು ಟಿ.ವಿ.ಯಲ್ಲಿ ನೋಡಿ ಖುಷಿ‍ಪಡುತ್ತಿದ್ದ ಸೌರಭ್‌ಗೆ ತಾನೂ ಮುಂದೊಂದು ದಿನ ಅವರಂತೆ ಆಗಬೇಕು ಎನ್ನುವ ದೊಡ್ಡ ಕನಸಿತ್ತು. ಆ ಕನಸು ಅರಳಿದ್ದು ಅವರ ಬಾಡಿಗೆ ಮನೆಯ ಬೆಡ್‌ರೂಮಿನಲ್ಲಿ!

‘ಎಲ್ಲರಂತೆ ನಾನೂ ಶಾಲೆಗೆ ಹೋಗಿ ಬರುತ್ತಿದ್ದೆ. ಯಾವ ಸೆಳೆತವೋ ಗೊತ್ತಿಲ್ಲ. ಶೂಟಿಂಗ್‌ನಲ್ಲಿ ಸಾಧನೆ ಮಾಡಬೇಕೆನ್ನುವ ತುಡಿತ ಬಾಲ್ಯದಿಂದಲೇ ಇತ್ತು. ಗುರಿ ಸ್ಪಷ್ಟವಾಗಿತ್ತು. ಮುಂದಿನ ಹಾದಿಯ ಬಗ್ಗೆಯೂ ತಿಳಿದಿತ್ತು. ಆದ್ದರಿಂದ ಹೆಚ್ಚು ಯೋಚಿಸಲು ಹೋಗಲಿಲ್ಲ. ಅದೊಂದು ದಿನ ಬೆಡ್‌ರೂಮಿನಲ್ಲಿ ಗಂಟೆಗಟ್ಟಲೇ ಯೋಚನೆ ಮಾಡಿ ಕಠಿಣ ನಿಲುವು ತಳೆದೆ. ಅದರ ಫಲವೇ ಈಗಿನ ಸಾಧನೆ’ ಎನ್ನುತ್ತಾರೆ ಹತ್ತನೇ ತರಗತಿ ಓದುತ್ತಿರುವ ಸೌರಭ್‌.

ಒಲಿಂಪಿಕ್ಸ್, ವಿಶ್ವಕಪ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಲ್ಲಿ ಭಾರತ ಶೂಟಿಂಗ್‌ನಲ್ಲಿ ಮೊದಲಿನಿಂದಲೂ ಪ್ರಾಬಲ್ಯ ಮೆರೆಯುತ್ತಾ ಬಂದಿದೆ. 2004ರ ಒಲಿಂಪಿಕ್ಸ್‌ನಿಂದ 2012ರ ತನಕ ಭಾರತದ ಶೂಟರ್‌ಗಳು ಒಂದಿಲ್ಲೊಂದು ಪದಕ ಗೆಲ್ಲುತ್ತಲೇ ಬಂದಿದ್ದಾರೆ. ರಾಜ್ಯವರ್ಧನ್‌ ಸಿಂಗ್ ರಾಥೋಡ್‌, ಗಗನ್ ನಾರಂಗ್‌, ಅಭಿನವ್‌ ಬಿಂದ್ರಾ, ವಿಜಯ ಕುಮಾರ್‌ ಅವರ ಕಾಲ ಮುಗಿದ ಬಳಿಕ ಮುಂದೆ ಯಾರು ಎನ್ನುವ ಪ್ರಶ್ನೆ ಭಾರತದ ಶೂಟಿಂಗ್ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಅದಕ್ಕೆ ಸೌರಭ್‌ ಚೌಧರಿ ಉತ್ತರವಾಗಿ ಸಿಕ್ಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT