ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕೂಟ ತತ್ವಕ್ಕೆ ಅಪಾಯ

Last Updated 7 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ನಡುವಣ ಅತ್ಯಂತ ಸೂಕ್ಷ್ಮವಾದ ಹಣಕಾಸು ಸಂಬಂಧದಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ಮತ್ತು ಭಾರತ ಸರ್ಕಾರವು ಸಂವಿಧಾನದತ್ತ ಒಕ್ಕೂಟ ತತ್ವವನ್ನು ನಿರ್ಲಕ್ಷಿಸುತ್ತಿರುವುದರಿಂದ ಅಸಮತೋಲನ ಉಂಟಾಗಿದೆ. ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಅವರ ಪ್ರಕಾರ, 2021-22ರಿಂದ 2025-26ರ ಒಕ್ಕೂಟ ಸರ್ಕಾರದ ತೆರಿಗೆ ರಾಶಿ ಅಂದಾಜು ₹ 135.2 ಲಕ್ಷ ಕೋಟಿ.

ಇದರಲ್ಲಿ ಹಂಚಬಹುದಾದ ಮೊತ್ತ ₹ 103 ಲಕ್ಷ ಕೋಟಿ (ಪ್ರ.ವಾ., ಮಾರ್ಚ್‌ 7). ಏಕೆಂದರೆ ಒಕ್ಕೂಟ ತೆರಿಗೆ ಮೊತ್ತದಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳ ಬಾಬ್ತು ಹಂಚಬಹುದಾದ ರಾಶಿಯಲ್ಲಿ ಸೇರುವುದಿಲ್ಲ. ಅಂದರೆ ಒಕ್ಕೂಟದ ತೆರಿಗೆ ರಾಶಿಯಾದ ₹ 135.2 ಲಕ್ಷ ಕೋಟಿಯಲ್ಲಿ ರಾಜ್ಯಗಳಿಗೆ ₹ 55.43 ಲಕ್ಷ ಕೋಟಿ ದೊರೆಯಬೇಕಾಗಿತ್ತು (ಶೇ 41). ಆದರೆ ಈಗ ದೊರೆಯುತ್ತಿರುವುದು ಕೇವಲ ₹ 42.2 ಲಕ್ಷ ಕೋಟಿ. ಒಕ್ಕೂಟದ ತೆರಿಗೆ ರಾಶಿಯಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳ ಪ್ರಮಾಣ 2011-12ರಲ್ಲಿ ಶೇ 10.4ರಷ್ಟಿದ್ದುದು 2020-21ರಲ್ಲಿ ಶೇ 20ಕ್ಕೇರಿದೆ.

ಒಕ್ಕೂಟ ಸರ್ಕಾರದ ಹಂಚಬಹುದಾದ ತೆರಿಗೆ ರಾಶಿಯಲ್ಲಿ 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ 4.71ರಷ್ಟನ್ನು ಶಿಫಾರಸು ಮಾಡಿದ್ದರೆ 15ನೇ ಹಣಕಾಸು ಆಯೋಗವು ಶೇ 3.64ರಷ್ಟನ್ನು ಶಿಫಾರಸು ಮಾಡಿದೆ. ಅಂದರೆ ಮುಂದಿನ ಐದು ವರ್ಷಗಳಲ್ಲಿ (2021-22ರಿಂದ 2025-26) ಒಕ್ಕೂಟ ತೆರಿಗೆ ರಾಶಿಯಲ್ಲಿ (₹ 103 ಲಕ್ಷ ಕೋಟಿ) ಕರ್ನಾಟಕದ ಪಾಲು ವಾರ್ಷಿಕ ₹ 75,000 ಕೋಟಿ. ಒಂದು ಅಧ್ಯಯನದ ಪ್ರಕಾರ, 2017ರಲ್ಲಿ ಕರ್ನಾಟಕವು ಒಕ್ಕೂಟಕ್ಕೆ (ಕೇಂದ್ರಕ್ಕೆ) ನೀಡಿದ ಪ್ರತೀ ₹ 100 ಮೊತ್ತದ ತೆರಿಗೆಗೆ ಪ್ರತಿಯಾಗಿ ತೆರಿಗೆಯ ವರ್ಗಾವಣೆ ಮೂಲಕ ರಾಜ್ಯ ಪಡೆದ ಮೊತ್ತ ಕೇವಲ ₹ 36. ಮೇಲಾಗಿ ತೈಲದ ಮೇಲೆ ಒಕ್ಕೂಟ ವಿಧಿಸುವ ತೆರಿಗೆ ಸಹ ಹಂಚಬಹುದಾದ ತೆರಿಗೆ ರಾಶಿಯಲ್ಲಿ ಸೇರುವುದಿಲ್ಲ. ಏಕೆಂದರೆ ಇದು ಜಿಎಸ್‍ಟಿ ಭಾಗವಲ್ಲ. ಈ ಅಸಮತೋಲನವನ್ನು ಶೀಘ್ರ ಸರಿಪಡಿಸದಿದ್ದರೆ ಒಕ್ಕೂಟ ಮತ್ತು ರಾಜ್ಯಗಳ ನಡುವಣ ಸಂಬಂಧ ವಿವಾದಾತ್ಮಕವಾಗುವ ಸಾಧ್ಯತೆಯಿದೆ.

-ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT