ಭಾನುವಾರ, ಡಿಸೆಂಬರ್ 8, 2019
19 °C
.

ಮಂಗಳವಾರ, 7–12–1993

Published:
Updated:

ಅಲ್ಲೇ ನಿರ್ಮಾಣ ಭರವಸೆ ನೀಡಿಲ್ಲ: ಚವಾಣ್

ನವದೆಹಲಿ, ಡಿ. 6 (ಪಿಟಿಐ)– ಕೆಡವಿದ ಬಾಬರಿ ಮಸೀದಿಯನ್ನು ಪುನರ್ ನಿರ್ಮಿಸಲಾಗುವುದು ಎಂಬ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಭರವಸೆಯ ಅರ್ಥ ಅದನ್ನು ಮೊದಲು ಇದ್ದ ಸ್ಥಳದಲ್ಲೇ ನಿರ್ಮಿಸಲಾಗುವುದು ಎಂದಲ್ಲ ಎಂದು ಹೇಳುವ ಮೂಲಕ ಗೃಹ ಸಚಿವ ಎಸ್.ಬಿ. ಚವಾಣ್ ಅವರು ಇಂದು ಲೋಕಸಭೆಯಲ್ಲಿ ವಿವಾದದ ಸುಳಿಯಲ್ಲಿ ಸಿಲುಕಿಬಿದ್ದರು.

ಒಂದು ವರ್ಷದ ಹಿಂದೆ ಇದೇ ದಿನ ಅಯೋಧ್ಯೆಯಲ್ಲಿ ಸಂಭವಿಸಿದ ಘಟನೆಗಳಿಗೆ ಸಂಬಂಧಿಸಿ ಸದನದಲ್ಲಿ ಶೂನ್ಯಕಾಲದಲ್ಲಿ ಪ್ರಸ್ತಾಪ ಬಂದಾಗ ಚವಾಣ್ ಅವರು ಮೇಲಿನಂತೆ ಸ್ಪಷ್ಟನೆ ನೀಡಿದ್ದು, ಹಲವಾರು ಬಿಜೆಪಿಯೇತರ ಸದಸ್ಯರ ತೀವ್ರ ಕೋಪಕ್ಕೆ ಕಾರಣವಾಯಿತು. ಅದಕ್ಕೆ ಮೊದಲು ಸದಸ್ಯರ ಕೋಪ ಮುಖ್ಯವಾಗಿ ಬಿಜೆಪಿಯ ಮೇಲೇ ಇದ್ದು ಅಡ್ವಾಣಿಯವರು ಮಸೀದಿ ನೆಲಸಮ ಕೃತ್ಯವನ್ನು ಸಮರ್ಥಿಸಲೂ ಆಗದೆ ಖಂಡಿಸಲೂ ಆಗದೆ ಮುಜುಗರಪಟ್ಟರು.

4 ರಾಜಧಾನಿ ಎಕ್ಸ್‌ಪ್ರೆಸ್ ಸೇರಿ 5 ರೈಲಿನಲ್ಲಿ ಸ್ಫೋಟ

ನವದೆಹಲಿ, ಡಿ. 6 (ಪಿಟಿಐ, ಯುಎನ್ಐ)– ವಿವಾದಿತ ಬಾಬರಿ ಮಸೀದಿ ನೆಲಸಮದ ಮೊದಲ ವಾರ್ಷಿಕ ದಿನವಾದ ಇಂದು ದೇಶದ ಹಲವು ಸ್ಥಳಗಳಲ್ಲಿ ಒಟ್ಟು 5 ಪ್ರತಿಷ್ಠಿತ ರೈಲುಗಳಲ್ಲಿ ಹಾಗೂ ಜಮ್ಮುವಿನ ಒಂದು ಬಸ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಒಬ್ಬ ವ್ಯಕ್ತಿ ಸತ್ತು 30 ಮಂದಿ ಗಾಯಗೊಂಡರು. ದೆಹಲಿಗೆ ಹೊರಟಿದ್ದ ಎ.ಪಿ. ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸಿಕಂದರಾಬಾದ್ ಸಮೀಪದ  ಮೌಲಾಲಿಯಲ್ಲಿ ಇಂದು ಬೆಳಿಗ್ಗೆ 7.10ಕ್ಕೆ ಸ್ಫೋಟಗೊಂಡು ಅಬ್ದುಲ್ ಮಜೀದ್ ಎಂಬ ವೃದ್ಧ ಪ್ರಯಾಣಿಕ ಸತ್ತು 14 ಜನ ಗಾಯಗೊಂಡರು. ಅವರಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ.

ದಿಲ್ಲಿಯಲ್ಲಿ ಬಾಂಬ್ ಸ್ಫೋಟ: 2 ಸಾವು

ನವದೆಹಲಿ, ಡಿ. 6 (ಪಿಟಿಐ, ಯುಎನ್ಐ)– ನೈರುತ್ಯ ದೆಹಲಿಯ ಈಶಪುರ ಗ್ರಾಮದಲ್ಲಿ ಇಂದು ಮಧ್ಯಾಹ್ನ ಕಚ್ಚಾ ಬಾಂಬೊಂದು ಸ್ಫೋಟಗೊಂಡ ಪರಿಣಾಮವಾಗಿ ಕನಿಷ್ಠ ಇಬ್ಬರು ಮೃತರಾದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಫರ್‌ಪುರ ಕಲನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸ್ಫೋಟ ಸಂಭವಿಸಿದೆ.

ಮಧ್ಯಪ್ರದೇಶ: ಸರ್ಕಾರ ರಚಿಸಲು ದಿಗ್ವಿಜಯ್‌ಗೆ ಆಹ್ವಾನ

ಭೋಪಾಲ್, ಡಿ. 6 (ಪಿಟಿಐ, ಯುಎನ್ಐ)– ಮಧ್ಯ‍ಪ್ರದೇಶ ಕಾಂಗೈ ಶಾಸಕ ಪಕ್ಷದ (ಸಿಎಲ್‌ಪಿ) ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲ ಮೊಹಮದ್ ಷಫಿ ಖುರೇಶಿ ಆಹ್ವಾನಿಸಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು