ಭಾನುವಾರ, ಜುಲೈ 3, 2022
24 °C

ಸ್ಟುಡಿಯೊದಲ್ಲಿ ಸ್ಮಾರಕ ನಿರ್ಮಾಣ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯ ನಟ ಅಂಬರೀಷ್‌ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ₹ 5 ಕೋಟಿ ದೇಣಿಗೆ ನೀಡುತ್ತಿರುವುದು ಸಂತೋಷದ ವಿಷಯ. ಆದರೆ ಅದಕ್ಕಾಗಿ ಕಂಠೀರವ ಸ್ಟುಡಿಯೊ ಆವರಣದಲ್ಲಿ ಎಕರೆಗಟ್ಟಲೆ ಜಾಗ ಬಿಟ್ಟುಕೊಡುತ್ತಿರುವುದು ಯುಕ್ತ ನಡೆ ಅಲ್ಲ. ಮಂಡ್ಯ ಹಾಗೂ ಬೆಂಗಳೂರಿನ ರಾಜಕಾರಣಿಗಳಿಗೆ ತಮ್ಮ ಲಾಭಕ್ಕಾಗಿ ಅಂಬರೀಷ್‌ ಅವರ ಅಭಿಮಾನಿಗಳನ್ನು ಓಲೈಸಿಕೊಳ್ಳಬೇಕಾದ ಅನಿವಾರ್ಯ ಇರಬಹುದು. ಆದರೆ ಅದಕ್ಕಾಗಿ ಅವರು ಈ ಮಟ್ಟಕ್ಕೆ ಇಳಿಯಬಾರದು. ಕಂಠೀರವ ಸ್ಟುಡಿಯೊದಲ್ಲಿ ಹೆಚ್ಚುವರಿ ಜಾಗವಿದ್ದರೆ ಉತ್ತಮ ಚಿತ್ರಗಳನ್ನು ನಿರ್ಮಿಸಲು ಅಗತ್ಯವಿರುವ ಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲಿ. ಬೇಕಿದ್ದರೆ ಅಂಬರೀಷ್ ಕುಟುಂಬದವರು ತಮ್ಮ ಖಾಸಗಿ ಜಮೀನಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಲಿ. ಆಗ ಸರ್ಕಾರ ಹಣ ನೀಡುವುದೇನು ಬಂತು, ಅಂಬರೀಷ್ ಅವರ ಅಭಿಮಾನಿಗಳೇ ಸ್ಮಾರಕ ನಿರ್ಮಾಣಕ್ಕೆ ₹ 5 ಕೋಟಿ ದೇಣಿಗೆಯನ್ನು ಸಂತೋಷವಾಗಿ ನೀಡುತ್ತಾರೆ.

ಅಂಬರೀಷ್ ಬದುಕಿದ್ದರೆ ಸರ್ಕಾರದ ಈ ನಿರ್ಧಾರವನ್ನು ಸರ್ವಥಾ ಒಪ್ಪುತ್ತಿರಲಿಲ್ಲ. ಭವಿಷ್ಯದಲ್ಲಿ ಅಂಬರೀಷ್‌ ಅವರಂತಹ ಅಸಂಖ್ಯ ಪ್ರತಿಭೆಗಳಿಗೆ ಜನ್ಮ ನೀಡಲಿರುವ ಕಂಠೀರವ ಸ್ಟುಡಿಯೊದಂತಹ ಕಲೆಯ ಜೀವಂತ ಮಂದಿರವನ್ನು ಈ ರೀತಿ ಮೃತರ ಸ್ಮಾರಕವನ್ನಾಗಿಸಲು ಅಭಿಮಾನಿಗಳೂ ಒಪ್ಪಲಾರರು. ಪ್ರತಿಯೊಬ್ಬ ಸಾಧಕನಿಗೂ ಹೀಗೆ ಅವನ ಕರ್ಮಭೂಮಿಯಲ್ಲೇ ಸಮಾಧಿ ಅಥವಾ ಸ್ಮಾರಕ ನಿರ್ಮಿಸುತ್ತಾ ಹೋದರೆ ವಿಶ್ವವಿದ್ಯಾಲಯ, ಕ್ರೀಡಾಂಗಣ, ಕಲಾಕ್ಷೇತ್ರ, ಸ್ಟುಡಿಯೊ, ವಿಧಾನಸೌಧ- ವಿಕಾಸಸೌಧ ಮುಂತಾದ ಕರ್ಮಭೂಮಿಗಳೆಲ್ಲ ಮೃತರ ಸ್ಮಾರಕಗಳಾಗಿ ಮಾರ್ಪಡುತ್ತವೆ. 

–ಡಾ. ಟಿ.ಎನ್.ವಾಸುದೇವಮೂರ್ತಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು