ಶನಿವಾರ, ಅಕ್ಟೋಬರ್ 23, 2021
20 °C

ವಿಶ್ವಾಸ ತುಂಬಿದ ಕೋರ್ಟ್‌ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವವಿದ್ಯಾಲಯವೊಂದರ ಘನತೆ ಹೆಚ್ಚಲು ಹಾಗೂ ಸಂಶೋಧನೆ ಮೂಲಕ ಅದು ಉನ್ನತ ಸ್ಥಾನಕ್ಕೆ ಏರಲು ಅಲ್ಲಿರುವ ಬೋಧಕ ಸಿಬ್ಬಂದಿ ಕಾರಣರಾಗುತ್ತಾರೆ. ದುರ್ದೈವದ ಸಂಗತಿ ಎಂದರೆ, ರಾಜ್ಯದ ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿಯನ್ನು ಆಯ್ಕೆ ಮಾಡುವ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸಿರುವುದು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2014ರಲ್ಲಿ ನಡೆದಿದ್ದ ಅಭ್ಯರ್ಥಿಯೊಬ್ಬರ ನೇಮಕಾತಿಯನ್ನು ಆರು ವರ್ಷಗಳ ನಂತರ ಹೈಕೋರ್ಟ್‌ ಇತ್ತೀಚೆಗೆ ಅಸಿಂಧುಗೊಳಿಸಿರುವುದು ಇದಕ್ಕೊಂದು ನಿದರ್ಶನ. ಸ್ನಾತಕೋತ್ತರ ವಿಭಾಗವೊಂದಕ್ಕೆ ನೇಮಕಗೊಂಡ ಅಭ್ಯರ್ಥಿಯು ಸಾಮಾನ್ಯ ಶೈಕ್ಷಣಿಕ ಅರ್ಹತೆಯನ್ನೂ ಹೊಂದಿಲ್ಲ ಹಾಗೂ ಯುಜಿಸಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಈ ನೇಮಕ ಮಾಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಈ ನೇಮಕಾತಿಯನ್ನು ರದ್ದುಪಡಿಸಲು ನ್ಯಾಯಾಲಯ ಉಲ್ಲೇಖಿಸಿರುವ ಕಾರಣಗಳನ್ನು ನೋಡಿದರೆ, ಆಯ್ಕೆ ಸಮಿತಿಯ ಕಣ್ತಪ್ಪಿನಿಂದ ಈ ನೇಮಕಾತಿ ಆಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿರುವ ಕುಲಪತಿಯವರ ಮೂಗಿನ ನೇರದಲ್ಲೇ ಇದು ಆಗಿರುತ್ತದೆ. ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಈ ರೀತಿಯ ಅಕ್ರಮ ನೇಮಕಾತಿಗಳಾಗಿವೆ ಎಂಬ ಕೂಗಿಗೆ ಈ ಆದೇಶ ಇನ್ನಷ್ಟು ಪುಷ್ಟಿ ನೀಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ವಿಶ್ವವಿದ್ಯಾಲಯಗಳ ಮೂವರು ಬೋಧಕ ಸಿಬ್ಬಂದಿಯ ನೇಮಕಾತಿಯನ್ನು ಹೈಕೋರ್ಟ್‌ ರದ್ದುಗೊಳಿಸಿರುವುದು ನೇಮಕಾತಿಯ ಅಪಾರದರ್ಶಕತೆಗೆ ಹಿಡಿದ ಕೈಗನ್ನಡಿ ಎಂದೇ ಭಾವಿಸಬೇಕಾಗುತ್ತದೆ.

ಈ ಪ್ರಕರಣ ಕೇವಲ ಒಬ್ಬ ವ್ಯಕ್ತಿ ಅಥವಾ ವಿಶ್ವವಿದ್ಯಾಲಯಕ್ಕೆ ಸೀಮಿತವಾಗಿರುವುದಲ್ಲ. ಅನರ್ಹರ ನೇಮಕದಿಂದ ವಿಶ್ವವಿದ್ಯಾಲಯದ ಘನತೆಗೆ ಕುಂದುಂಟಾಗುವುದಲ್ಲದೆ ಪ್ರತಿಭಾವಂತ ಯುವಕರು ವ್ಯವಸ್ಥೆಯ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ವಿಶ್ವವಿದ್ಯಾಲಯಗಳು ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದಿದ್ದಲ್ಲಿ ಉನ್ನತ ಶಿಕ್ಷಣದ ಅಭಿಲಾಷೆಯನ್ನೇ ಕೊಂದಂತೆ ಆಗುತ್ತದೆ. ಕುಲಪತಿಗಳ ನೇಮಕಾತಿಯಿಂದ ಹಿಡಿದು ಸಿಬ್ಬಂದಿ ನೇಮಕಾತಿ ಆಯ್ಕೆ ಸಮಿತಿಯಲ್ಲಿನ ಸದಸ್ಯರ ಆಯ್ಕೆಯೂ ಪಾರದರ್ಶಕವಾಗಿ ಇರಬೇಕು. ಇಲ್ಲವಾದರೆ ವಿಶ್ವವಿದ್ಯಾಲಯದ ಆಡಳಿತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಅನಿವಾರ್ಯವಾಗುತ್ತದೆ. ಕೋರ್ಟ್‌ನ ಈಗಿನ ಆದೇಶದಿಂದ ಜನರಿಗೆ ನ್ಯಾಯಾಂಗದಲ್ಲಿ ವಿಶ್ವಾಸ ಮತ್ತಷ್ಟು ಗಟ್ಟಿಗೊಂಡಿರುವುದಂತೂ ಸತ್ಯ. ಇದರಿಂದಲಾದರೂ ಪಾಠ ಕಲಿತು, ನೇಮಕ ಮಾಡುವವರು ಮತ್ತು ನೇಮಕಗೊಳ್ಳುವವರು ವಾಮಮಾರ್ಗ ಬಿಟ್ಟು ಪ್ರತಿಭೆಗೆ ಅವಕಾಶ ಸಿಗುವಂತಾಗಲಿ.

-ಜಯಂತ ಕೆ.ಎಸ್., ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.