ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬ್ಯಾಂಕ್‌ ಸಿಬ್ಬಂದಿಯನ್ನೂ ತನಿಖೆಗೊಳಪಡಿಸಿ

Last Updated 21 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ವಂಚನೆ ಆರೋಪ ಹೊತ್ತ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೊಆಪರೇಟಿವ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ಸಿಬ್ಬಂದಿಯ ₹ 45.32 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಚುಗೋಲು ಹಾಕಿಕೊಂಡಿದೆ ಎಂದು ವರದಿಯಾಗಿದೆ (ಪ್ರ.ವಾ., ಸೆ. 19). ಸಹಕಾರ ಬ್ಯಾಂಕ್ ಮತ್ತು ಸೊಸೈಟಿಗಳು ಸಂಬಂಧಿಸಿದ ಸಹಕಾರಿ ಕಾನೂನಿನನ್ವಯವೇ ಸ್ಥಾಪಿತವಾಗುವುದರಿಂದ, ಅವು ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಸಂಸ್ಥೆಗಳೇ. ಆದ್ದರಿಂದಲೇ ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರು ತಾವು ಕಷ್ಟಪಟ್ಟು ದುಡಿದ ಹಣವನ್ನು ಏರಿಳಿತ ಮತ್ತು ಅನಿಶ್ಚಯದಿಂದ ಕೂಡಿರುವ ಷೇರುಪೇಟೆ ಮತ್ತಿತರೆಡೆ ತೊಡಗಿಸಲು ಬಯಸದೆ, ಭದ್ರತೆ ಇರುತ್ತದೆಯೆಂಬ ಭರವಸೆಯಿಂದ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿಯಿಡಲು ಬಯಸುತ್ತಾರೆ. ಆದರೆ, ರಾಜಕೀಯ ಹಸ್ತಕ್ಷೇಪ, ಬೇನಾಮಿ ಸಾಲ ವಿತರಣೆ ಮತ್ತು ಸ್ವಜನಪಕ್ಷಪಾತ ಅಲ್ಲಿ ಮನೆ ಮಾಡಿರುವುದಕ್ಕೆ ಈ ಹಗರಣಗಳೇ ಸಾಕ್ಷಿ.

ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಪದಾಧಿಕಾರಿಗಳು ಅದೇ ಬ್ಯಾಂಕಿನಲ್ಲಿ ಹತ್ತಾರು ಖಾತೆಗಳನ್ನು ತೆರೆಯಲು, ಸೂಕ್ತ ಭದ್ರತೆಯನ್ನೇ ಪ‍ಡೆಯದೆ ನೂರಾರು ಕೋಟಿ ರೂಪಾಯಿ ಸಾಲ ವಿತರಿಸಲು ಮತ್ತು ದೀರ್ಘಕಾಲ ಸಾಲ ಮರುಪಾವತಿಯಾಗದೇ ಇರಲು ಅಲ್ಲಿನ ಸಿಬ್ಬಂದಿಯ ನೆರವಿಲ್ಲದೆ ಹೇಗೆ ಸಾಧ್ಯವಾಗುತ್ತದೆ? ಈ ರೀತಿಯ ಲೋಪದೋಷಗಳು ಲೆಕ್ಕ ಪರಿಶೋಧಕರ ಗಮನಕ್ಕೆ ಬಂದಿಲ್ಲವೆಂದರೆ ನಂಬಲು ಅಸಾಧ್ಯ. ಬ್ಯಾಂಕಿನ ಅಧಿಕೃತ ಲೆಕ್ಕ ಪರಿಶೋಧಕರು, ಸಂಬಂಧಿಸಿದ ಇಲಾಖೆಯ ಮತ್ತು ಬ್ಯಾಂಕಿನ ಸಿಬ್ಬಂದಿಯನ್ನೂ ತನಿಖೆಗೊಳಪಡಿಸಬೇಕು. ಸಾರ್ವಜನಿಕರಲ್ಲಿ ಸಹಕಾರಿ ಬ್ಯಾಂಕುಗಳ ಬಗ್ಗೆ ವಿಶ್ವಾಸ ವೃದ್ಧಿಸಲು ಇಂತಹ ಕ್ರಮ ಅವಶ್ಯಕ.

–ಪುಟ್ಟೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT