ಭಾನುವಾರ, ಏಪ್ರಿಲ್ 11, 2021
21 °C

ವಾಚಕರ ವಾಣಿ: ಅನ್ಯೋನ್ಯ ಬಾಳ್ವೆಗೆ ದಾರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಹಬಾಳ್ವೆಗೆ ಯಾವುದು ಮಾನದಂಡ?’ ಎಂದು ಜ್ಯೋತಿ ಭಾಸ್ಕರ್ ಅವರು ಪ್ರಶ್ನಿಸುತ್ತ, ಅಂತರ್ಜಾತಿ ವಿವಾಹ ತಡೆಗೆ ಪೇಜಾವರ ಮಠಾಧೀಶರು ಪ್ರತಿಪಾದಿಸಿರುವ ಮಾತೃ ಮಂಡಳಿ ಸಲಹೆಯನ್ನು ಆಕ್ಷೇಪಿಸಿದ್ದಾರೆ (ಪ್ರ.ವಾ., ಮಾರ್ಚ್‌ 19). ವಿವಾಹವು ಜಾತಿ, ಧರ್ಮಗಳಿಗೆ ಸಂಬಂಧಿಸಿದ್ದಲ್ಲ ಮತ್ತು ವೈವಾಹಿಕ ಬದುಕಿನ ಗುಣಲಕ್ಷಣಗಳು ಜಾತಿ, ಧರ್ಮ ಇತ್ಯಾದಿಗಳ ಮೇಲೆ ಅವಲಂಬಿತವಲ್ಲ ಎನ್ನುವ ಅವರ ಮಾತು ಒಪ್ಪುವಂಥದ್ದು. ಮದುವೆಯ ವಿಷಯದಲ್ಲಿ ಈಗಿನ ತರುಣ ಪೀಳಿಗೆಗೂ ಇಪ್ಪತ್ತೈದು– ಮೂವತ್ತು ವರ್ಷಗಳ ಹಿಂದಿನ ಇದೇ ವಯೋಮಾನದ ತರುಣ ಪೀಳಿಗೆಗೂ ಮದುವೆಯ ಪರಿಕಲ್ಪನೆ, ಆಸೆ, ನಿರೀಕ್ಷೆ, ಆಯ್ಕೆಯ ಸ್ವಾತಂತ್ರ್ಯದ ವಿಷಯಗಳಲ್ಲಿ ಅಂತರವಿದೆ ಎನ್ನುವುದನ್ನು ಗಮನಿಸಿದರೂ ಈಗಲೂ ಮದುವೆಗಳಲ್ಲಿ ಬಹಳ ಹೆಚ್ಚಿನವು ಜಾತಿ, ಧರ್ಮ, ಕುಲ, ಜಾತಕ, ಹಿರಿಯರ ಅಪೇಕ್ಷೆ ಇವನ್ನು ಲಕ್ಷಿಸಿಯೇ ನಡೆಯುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ! ಆದ್ದರಿಂದ, ‘ತಮ್ಮತಮ್ಮೊಳಗೆ’ ನಡೆದ ಮದುವೆಗಳಲ್ಲಿ ಸಕಾರಣವಾಗಿಯೋ ಅಲ್ಲದೆಯೋ ಮುರಿದುಬಿದ್ದವು ಎಷ್ಟು ಎಂಬ ಪ್ರಶ್ನೆ ಮೂಡುವಂತೆಯೇ, ಪ್ರೀತಿ, ಪ್ರೇಮ, ಆಯ್ಕೆಯ ಸ್ವಾತಂತ್ರ್ಯ ಎಂದುಕೊಂಡು ತಂದೆತಾಯಿ ಅಥವಾ ಬಂಧುವರ್ಗವನ್ನು ಕೇಳದೆಯೇ ಅಥವಾ ಕೇಳಿಯೂ ಅಲಕ್ಷಿಸಿ ಮದುವೆಯಾದ ನೂರಕ್ಕೆ ನೂರರಷ್ಟು ಜೋಡಿಗಳು ಸಹಬಾಳ್ವೆಯಿಂದಲೇ ಬದುಕು ಸಾಗಿಸುತ್ತಿವೆ ಎನ್ನುವುದೂ ಸತ್ಯವಿರಲಾರದು.

ಅಷ್ಟಕ್ಕೂ, ಹಿರಿಯರು ಮುಂದೆ ನಿಂತು ಮದುವೆ ನಿಶ್ಚಯಿಸುವುದು ತಮ್ಮ ಮಕ್ಕಳ ವೈವಾಹಿಕ ಜೀವನ ಚೆನ್ನಾಗಿರಬೇಕು ಎಂಬ ಹಾರೈಕೆಯಿಂದಲೇ ಅಲ್ಲವೇ? ಈಗಂತೂ ಗಂಡು ಹೆಣ್ಣಿನ ಒಪ್ಪಿಗೆಯೇ ಅತಿ ಮುಖ್ಯವಾದುದು ಎನ್ನುವುದೇ ಹಿರಿಯರ ವಿಚಾರ ಕೂಡ. ಒಟ್ಟಾರೆ ಹೇಳಬಹುದಾದ ಮಾತೆಂದರೆ, ಗಂಡು ಮತ್ತು ಹೆಣ್ಣು ಗಂಡ-ಹೆಂಡಿರಾಗಿ ಅನ್ಯೋನ್ಯವಾಗಿ ಬಾಳ್ವೆ ಮಾಡುವುದೇ ಮುಖ್ಯ. ಒಟ್ಟಿನಲ್ಲಿ ಗಂಡು- ಹೆಣ್ಣು ತಾವೇ ತೆಗೆದುಕೊಳ್ಳುವ ನಿರ್ಧಾರ ಎರಡೂ ಕಡೆಯ ಹಿರಿಯರಿಗೆ, ಬಂಧುಬಾಂಧವರಿಗೆ ಅಸಮ್ಮತವೆನಿಸಿದರೂ ಅವರನ್ನು ಕಡೆಗಣಿಸದೆ, ಪ್ರೀತಿ ಗೌರವಗಳಿಂದಲೇ ನೋಡಿ ನಡೆದುಕೊಂಡರೆ ಆಗ ಅಂಥ ಮದುವೆ ಸಾರ್ಥಕವೆನಿಸುತ್ತದೆ.

–ಸಾಮಗ ದತ್ತಾತ್ರಿ, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು