ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಮಂಗಳವಾರ, 21 ಮಾರ್ಚ್‌ 2023

Last Updated 20 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಇದೇನು ಮಾತು ಇವರದು?

‘ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಬೆಳಗಾವಿ ಭೇಟಿಯು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕನ್ನಡ ನೆಲದ ಬಗ್ಗೆ ಏನೂ ಗೊತ್ತಿಲ್ಲದ ಅವರಿಗೆ ಕನ್ನಡಿಗರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ (ಪ್ರ.ವಾ., ಮಾರ್ಚ್‌ 20). ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರುತ್ತಲೇ ಇರುತ್ತಾರೆ. ಅವರಿಗೆ ಕನ್ನಡ ಗೊತ್ತುಂಟೊ? ಕನ್ನಡ ಗೊತ್ತಿಲ್ಲದೆ ಕನ್ನಡಿಗರ ಮನಸ್ಸನ್ನು ಗೆಲ್ಲಬಲ್ಲರೊ? ಈ ಪ್ರಶ್ನೆಗಳಿಗೆ ಯಾರು ಉತ್ತರ ನೀಡುತ್ತಾರೆ? ಇದೇನು ಮಾತು ಕರಂದ್ಲಾಜೆಯವರದು?

ಎಂ.ಕೆ.ವಾಸುದೇವರಾಜು, ಮೈಸೂರು

***

‘ಅಪರಾಧ’ವಾಗಿದ್ದರೆ ಮೊಕದ್ದಮೆ ಹೂಡಲಿ

ರಾಹುಲ್ ಗಾಂಧಿ ಅವರು ಕ್ಷಮೆ ಯಾಚಿಸುವ ತನಕ ಅವರನ್ನು ಸಂಸತ್ತಿನಲ್ಲಿ ಮಾತನಾಡಲು ಬಿಡುವುದಿಲ್ಲ ಎಂಬ ಆಳುವ ಪಕ್ಷದ ಸದಸ್ಯರ ಹಟ ಮತ್ತು ಅದರಿಂದ ಸಂಸತ್ತಿನಲ್ಲಿ ಯಾವ ಕಲಾಪವೂ ನಡೆಯದೇ ಇರುವ ಪರಿಸ್ಥಿತಿ ಕುರಿತು ಚರ್ಚಿಸಿರುವ ಸಂಪಾದಕೀಯ (ಪ್ರ.ವಾ., ಮಾರ್ಚ್‌ 20) ಅತ್ಯಂತ ಸಮಯೋಚಿತ ಹಾಗೂ ಸತಾರ್ಕಿಕ. ಸಂಸತ್ತಿಗೆ ಆಯ್ಕೆ ಆಗಿರುವ ಸದಸ್ಯರಿಗೆ ಮಾತನಾಡಲು ಅಡ್ಡಿಪಡಿಸಿದರೆ, ಆ ಕಾರ್ಯವು ಅವರನ್ನು ಚುನಾಯಿಸಿದ ಪ್ರಜೆಗಳಿಗೆ ಮಾಡುವ ಅಪಮಾನ. ಹಾಗೆಯೇ, ರಾಹುಲ್ ಗಾಂಧಿ ಅವರು ನಮ್ಮ ರಾಷ್ಟ್ರಕ್ಕೆ ಹೊರದೇಶದಲ್ಲಿ ಅಪಮಾನ ಮಾಡಿದ್ದಾರೆ ಎಂದಾದರೆ ‘ದೇಶದ್ರೋಹ’ ಎಂಬ ‘ಅಪರಾಧ’ದಡಿ ಅವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು. ಹೇಗೂ ‘ಸೆಡಿಶನ್’ ಕಾನೂನು ಇದ್ದೇ ಇದೆ.

ಸಿ.ಎನ್.ರಾಮಚಂದ್ರನ್, ಬೆಂಗಳೂರು

***

ನ್ಯಾಕ್ ಮಾನ್ಯತೆ: ನಡೆಯಲಿ ಗಂಭೀರ ಚರ್ಚೆ

‘289 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ಸಿಕ್ಕಿರುವುದರಿಂದ ಈ ಕಾಲೇಜುಗಳಿಗೆ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ (ರೂಸಾ) ಅನುದಾನ ಸುಲಭವಾಗಿ ಸಿಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರು ಹೇಳಿರುವುದು (ಪ್ರ.ವಾ., ಮಾರ್ಚ್‌ 20) ವರದಿಯಾಗಿದೆ. ಆದರೆ ಹಿಂದಿನ ಮೂರು ವರ್ಷಗಳಲ್ಲಿ ರೂಸಾ ಅನುದಾನದಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಅನುದಾನವನ್ನು ಕಡಿತಗೊಳಿಸಿದೆ. 2019- 20ರಲ್ಲಿ ₹ 69.75 ಕೋಟಿಯಷ್ಟು ರೂಸಾ ಅನುದಾನವನ್ನು ಕರ್ನಾಟಕಕ್ಕೆ ಕೇಂದ್ರ ನೀಡಿತ್ತು. ಇದು 2021-22ರಲ್ಲಿ ₹ 4.50 ಕೋಟಿಗೆ ಇಳಿಮುಖವಾಗಿದೆ. ಇದು ತುಂಬಾ ಕಳವಳಕಾರಿ. ಕರ್ನಾಟಕದ ಬಹುತೇಕ ಪದವಿ ಕಾಲೇಜುಗಳು ನ್ಯಾಕ್ ಮಾನ್ಯತೆಗೆ ಒಳಪಡುತ್ತಿವೆ. ಆದರೆ ಹಿಂದಿನ ಮೂರು ವರ್ಷಗಳಲ್ಲಿ ನಮಗೆ ಕೇಂದ್ರದ ರೂಸಾದಡಿಯಲ್ಲಿ ಸಿಕ್ಕ ಒಟ್ಟು ಅನುದಾನ ₹ 74.25 ಕೋಟಿ ಮಾತ್ರ. ಆದರೆ ಕೆಲವೇ ಕೆಲವು ಕಾಲೇಜುಗಳಷ್ಟೇ ನ್ಯಾಕ್ ಮಾನ್ಯತೆಗೆ ಒಳಪಟ್ಟಿರುವ ಉತ್ತರ ಭಾರತದ ರಾಜ್ಯಗಳಾದ ಉತ್ತರಪ್ರದೇಶ, ಜಾರ್ಖಂಡ್ ಮತ್ತು ಉತ್ತರಾಖಂಡವು ನಮ್ಮ ರಾಜ್ಯಕ್ಕಿಂತ ಹೆಚ್ಚು ಅನುದಾನವನ್ನು ರೂಸಾದಡಿಯಲ್ಲಿ ಪಡೆದಿವೆ.

ಜೊತೆಗೆ ನ್ಯಾಕ್ ಮಾನ್ಯತೆ ಬಗ್ಗೆ ಅನೇಕ ಸಂಶಯಗಳು ಮೂಡುತ್ತಿದ್ದು, ಕೆಲ ಉನ್ನತ ಶಿಕ್ಷಣ ಸಂಸ್ಥೆಗಳು ಅಡ್ಡದಾರಿಗಳ ಮೂಲಕ ಹೆಚ್ಚಿನ ಗ್ರೇಡ್ ಪಡೆದಿರುವ ಬಗ್ಗೆ ಮತ್ತು ನ್ಯಾಕ್ ಮಾನ್ಯತೆಗೆ ಸಂಬಂಧಿಸಿದಂತೆ ನ್ಯಾಕ್ ಅಳವಡಿಸಿಕೊಂಡಿರುವ ಮೌಲ್ಯಮಾಪನ ವಿಧಾನಗಳ ಬಗ್ಗೆ ಕೂಡ ಅನೇಕ ಪ್ರಶ್ನೆಗಳನ್ನು ಇತ್ತೀಚೆಗೆ ಹಲವರು ಎತ್ತಿದ್ದಾರೆ. ನ್ಯಾಕ್‌ನ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರಾಗಿದ್ದ ಡಾ. ಭೂಷಣ್ ಪಟವರ್ಧನ್ ಅವರು ನ್ಯಾಕ್ ಮಾನ್ಯತೆಯ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನಗೊಂಡು ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಒಟ್ಟಾರೆ ಉನ್ನತ ಶಿಕ್ಷಣ ವಲಯದಲ್ಲಿ ನ್ಯಾಕ್ ಮಾನ್ಯತೆಗೆ ಸಂಬಂಧಿಸಿದಂತೆ ಗಂಭೀರ ಚರ್ಚೆಯ ಅವಶ್ಯಕತೆ ಇದೆ.

ವಸಂತ್, ತಲಕಾಡು

***

ಇದು ರೈತರ ಸಮಸ್ಯೆಗೆ ಉತ್ತರವೇ?

‘ರೈತರ ಮಕ್ಕಳು ಬೇರೆ ಬೇರೆ ರಂಗಗಳಿಗೂ ಪ್ರವೇಶ ಮಾಡಿದರೆ ವಧು ಮತ್ತು ಗೌರವ ಎರಡೂ ಹುಡುಕಿಕೊಂಡು ಬರಲಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂವಾದವೊಂದರಲ್ಲಿ ಹೇಳಿದ್ದಾರೆ (ಪ್ರ.ವಾ., ಮಾರ್ಚ್ 20). ‘ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ, ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲು ನಿಮ್ಮ ಕಾರ್ಯಕ್ರಮಗಳೇನು’ ಎಂಬ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಅಂದರೆ ಏನರ್ಥ? ರೈತರ ಮಕ್ಕಳು ಒಕ್ಕಲುತನವನ್ನು ಬಿಟ್ಟು ಬೇರೆ ಉದ್ಯೋಗ, ವೃತ್ತಿಯ ಕಡೆ ಹೊರಳಬೇಕೆಂದೇ? ಇದು ನಿಜವಾಗಿ ರೈತರ ಸಮಸ್ಯೆಗೆ ಉತ್ತರವೇ? ಅಂದರೆ ಕಾಡಂಚಿನ ಪ್ರದೇಶಗಳ ಜನರ ಚಿರತೆ ಕಾಟದ ಸಮಸ್ಯೆಗೆ ಹಳ್ಳಿ ಬಿಟ್ಟು ಪಟ್ಟಣ ಸೇರಿ ಎಂದಂತಲ್ಲವೇ?

– ಹೊಸಮನೆ ವೆಂಕಟೇಶ, ಟಿ.ನರಸೀಪುರ

***

ನ್ಯಾಯದಾನದ ಮೇಲೆ ಪರಿಣಾಮ ಬೀರೀತು

‘ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವ್ಯವಸ್ಥೆಯು ಕಾಂಗ್ರೆಸ್ ಪಕ್ಷದ ಪ್ರಮಾದದ ಫಲ ಹಾಗೂ ಭಾರತ ವಿರೋಧಿ ಗ್ಯಾಂಗ್‌ನ ಭಾಗವಾಗಿರುವ ಕೆಲ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಲವು ಹೋರಾಟಗಾರರು ಭಾರತೀಯ ನ್ಯಾಯಾಂಗ ವ್ಯವಸ್ಥೆಯು ವಿರೋಧ ಪಕ್ಷದ ಪಾತ್ರ ವಹಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂಬ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಹೇಳಿಕೆ (ಪ್ರ.ವಾ., ಮಾರ್ಚ್‌ 19) ಅಸಮಂಜಸವಾಗಿದೆ. ಸಾಂವಿಧಾನಿಕ ವ್ಯವಸ್ಥೆಯಡಿಯಲ್ಲಿ ನ್ಯಾಯಾಂಗಕ್ಕೆ ನೀಡಿರುವ ಸ್ವಾತಂತ್ರ್ಯವನ್ನು ಕಬಳಿಸುವ ಪ್ರಯತ್ನದಲ್ಲಿ ಕಾಣದ ಕೈಯಾಗಿ ಕೆಲಸ ಮಾಡುವ ಹುನ್ನಾರ ಸರ್ಕಾರದ ಇಂತಹ ನಾಯಕರಿಂದ ನಡೆಯುತ್ತಿದೆಯೇನೋ ಎಂಬಂತೆ ಗೋಚರವಾಗುತ್ತಿದೆ.

ದೇಶದ ಕಾನೂನು ಸಚಿವರಾಗಿ ಸಾಂವಿಧಾನಿಕ ಚೌಕಟ್ಟನ್ನು ಮೀರಿ ಬಹಿರಂಗವಾಗಿ ನ್ಯಾಯಿಕ ವ್ಯವಸ್ಥೆಯನ್ನು ಟೀಕಿಸುವುದು ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ನ್ಯಾಯದಾನಕ್ಕೆ ಅಡ್ಡಿಪಡಿಸಿದಂತೆ ಹಾಗೂ ಅವರ ಹುದ್ದೆಗೆ ಶೋಭೆ ತರುವಂತಹದ್ದಲ್ಲ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಕೊಲಿಜಿಯಂ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸಲು ಹೊರಟಿರುವುದು ಮುಂದೆ ನಿಷ್ಪಕ್ಷಪಾತ ನ್ಯಾಯದಾನದ ಮೇಲೆ ಕೆಟ್ಟ ಪರಿಣಾಮ ಬೀರದಿರದು. ಕಾರ್ಯಾಂಗ ಮತ್ತು ನ್ಯಾಯಾಂಗವು ಪ್ರಜಾಪ್ರಭುತ್ವ ಎಂಬ ರಥದ ಎರಡು ಚಕ್ರಗಳು ಎಂಬುದನ್ನು ಮರೆಯಬಾರದು. ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.

ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT