ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ಹೆಸರಲ್ಲಿ ಪುಂಡಾಟಿಕೆ ಸಹಿಸಬೇಕೇ?

Last Updated 3 ಜೂನ್ 2020, 20:00 IST
ಅಕ್ಷರ ಗಾತ್ರ

‘ಪೊಲೀಸ್‌ ದೌರ್ಜನ್ಯಕ್ಕೆ ಉಗ್ರ ಪ್ರತಿಭಟನೆ’ ತಲೆಬರಹದಲ್ಲಿ ಪ್ರಕಟವಾಗಿರುವ ಲೇಖನಕ್ಕೆ (ಸಂಗತ, ಜೂನ್‌ 2) ಈ ಪ್ರತಿಕ್ರಿಯೆ. ಅಮೆರಿಕದಲ್ಲಿ ಒಬ್ಬ ಕಪ್ಪು ವರ್ಣೀಯ ವ್ಯಕ್ತಿಯನ್ನು ಶ್ವೇತ ವರ್ಣೀಯ ಪೊಲೀಸ್‌ ಕೊಂದಿರುವ ಕೃತ್ಯ ಅತ್ಯಂತ ಅಮಾನವೀಯ. ಅದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಮಾತ್ರವಲ್ಲದೆ ಯುರೋಪ್‌ನಲ್ಲೂ ತೀವ್ರ ಪ್ರತಿಭಟನೆಗಳು ನಡೆದಿವೆ. ಇದು ಆತಂಕಕಾರಿ ವಿದ್ಯಮಾನ. ಆದರೆ, ಲೇಖಕ ನಾರಾಯಣ ಎ. ಅವರು ಈ ಘಟನೆಯ ಬಗ್ಗೆ ಬರೆಯುತ್ತಾ , ‘ದೇಶದ ಜನತೆ ಪೊಲೀಸ್‌ ವ್ಯವಸ್ಥೆ ವಿರುದ್ಧ ದಂಗೆ ಎದ್ದರೆ ತಪ್ಪೇನು’ ಎಂಬ ಅರ್ಥ ಬರುವಂತೆ ಬರೆದಿದ್ದಾರೆ. ಮಧ್ಯದಲ್ಲಿ ಭಾರತವನ್ನು ಎಳೆದುತಂದಿದ್ದಾರೆ. ಇಲ್ಲಿಯೂ ಪೊಲೀಸರ ವಿರುದ್ಧ ದಂಗೆಗೆ ಪ್ರಚೋದನೆ ನೀಡುವ ಧಾಟಿಯಲ್ಲಿ ಬರೆದಿದ್ದಾರೆ. ಇಡೀ ಬರಹ ಸಮಚಿತ್ತದಿಂದ ಕೂಡಿರದೆ, ರ್‍ಯಾಡಿಕಲ್‌ ಆಗಿದೆ.

‘ಅಮೆರಿಕದ ಜನರು ನಡೆಸುತ್ತಿರುವ ಉಗ್ರ ಪ್ರತಿಭಟನೆ ನೋಡಿದ ಯಾರಿಗೂ ಪ್ರತಿಭಟನಕಾರರ ಮೇಲೆ ಕೋಪ ಬರಲು ಸಾಧ್ಯವಿಲ್ಲ’ ಎಂದರೆ ಅರ್ಥವೇನು? ಯಾವನೋ ಒಬ್ಬ ಪೊಲೀಸ್ ಅಧಿಕಾರಿ ಮಾಡಿದ ಕೃತ್ಯಕ್ಕೆ ಇಡೀ ದೇಶಕ್ಕೇ ಬೆಂಕಿ ಹಾಕಿ ಸುಟ್ಟರೂ ತಪ್ಪಿಲ್ಲ ಎಂಬ ಅರ್ಥ ಬರುತ್ತದೆ. ‘...ಪೊಲೀಸ್‌ ವ್ಯವಸ್ಥೆಯ ಕ್ರೌರ್ಯವನ್ನೆಲ್ಲಾ ಒಪ್ಪಿಕೊಂಡು ಸುಮ್ಮನಿರಲು ಅಮೆರಿಕವು ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರವಲ್ಲ’ ಎಂದಿದ್ದಾರೆ. ಈ ವಾದವು ಭಾರತದಲ್ಲಿರುವ ಜನ ದಂಗೆ ಏಳದೇ ಷಂಡರಂತೆ ಇದ್ದಾರೆ ಎಂದಲ್ಲವೇ?

ಗಾಂಧಿ, ಬುದ್ಧ, ಬಸವಣ್ಣನವರ ಜಾಡಿನಲ್ಲಿ ಬಂದ ದೇಶ ಭಾರತ. ಹೀಗಾಗಿ ಬಹುಪಾಲು ಜನ ಹಿಂಸೆಗೆ, ಪ್ರತಿಹಿಂಸೆ ತೋರಿಸುವುದಿಲ್ಲ. ಇಲ್ಲಿ ಪ್ರಜಾತಂತ್ರ ಇದೆ, ವಿರೋಧ ಪಕ್ಷಗಳಿವೆ, ನ್ಯಾಯಾಂಗ ವ್ಯವಸ್ಥೆ ಇದೆ. ಅವುಗಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಚೀನಾ, ರಷ್ಯಾದಂತಹ ಕಮ್ಯುನಿಸ್ಟ್‌ ದೇಶ ಭಾರತವಲ್ಲ.‘... ಕೊರೊನಾ ಸಂಕಷ್ಟದಲ್ಲೂ ದೇಶದ ಹಲವೆಡೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ನರಕದ ವಕ್ತಾರರೂ ಕ್ಷಮಿಸಲಾರರು’ ಎಂದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಆಶಾ ಕಾರ್ಯಕರ್ತೆಯರು, ವೈದ್ಯರ ಮೇಲೆ ಪುಂಡರು ಹಲ್ಲೆ ನಡೆಸಿದ್ದನ್ನು ಸರಿ ಎಂದು ಇವರು ಭಾವಿಸಿರಬೇಕು. ಅಂದರೆ, ದೇಶದಲ್ಲಿ ಪ್ರತಿಭಟನೆ ಹೆಸರಲ್ಲಿ ಪುಂಡಾಟಿಕೆ ಮಾಡುವುದನ್ನು ಎಲ್ಲರೂ ಸಹಿಸಿಕೊಂಡಿರ ಬೇಕು ಎಂಬುದು ಇವರ ಅಭಿಪ್ರಾಯವೇ?

–ಶಂಕರ ಬಂಡೀಮಠ,ಕೊಪ್ಪ, ಚಿಕ್ಕಮಗಳೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT