ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಡಿಸೆಂಬರ್ 08, 2023

Published 7 ಡಿಸೆಂಬರ್ 2023, 23:35 IST
Last Updated 7 ಡಿಸೆಂಬರ್ 2023, 23:35 IST
ಅಕ್ಷರ ಗಾತ್ರ

ಎಲ್ಲ ಶಿಕ್ಷಕರಿಗೂ ಬೇಕು ಮತದಾನದ ಅವಕಾಶ

ರಾಜ್ಯದ ಶಿಕ್ಷಕರ ಕ್ಷೇತ್ರಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬರೀ ಪ್ರೌಢಶಾಲೆ, ಪಿಯುಸಿ, ಪದವಿ ಕಾಲೇಜು, ಪಾಲಿಟೆಕ್ನಿಕ್‌, ಐಟಿಐ, ವಿಶ್ವವಿದ್ಯಾಲಯ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಯಂ ಬೋಧಕರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಿರುವುದು ಅರ್ಥಹೀನವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅತಿ ಮಹತ್ವಪೂರ್ಣವಾದ, ಶಿಕ್ಷಣದ ಬುನಾದಿಯಂತಿರುವ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಪದವೀಧರ ಶಿಕ್ಷಕರು ಹಾಗೂ ಹಲವಾರು ವರ್ಷಗಳಿಂದ ಶಾಲಾ–ಕಾಲೇಜುಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಅತಿಥಿ ಶಿಕ್ಷಕರು–ಉಪನ್ಯಾಸಕರು ಮತದಾನದಿಂದ ವಂಚಿತರಾಗಿದ್ದಾರೆ. ಇಂತಹ ಶೇ 80ರಷ್ಟು ಶಿಕ್ಷಕರು ಮತದಾನದಿಂದ ಹೊರಗುಳಿದಿರುವುದು ವಿಪರ್ಯಾಸವೇ ಸರಿ. ಶಿಕ್ಷಕರಾಗಿರುವ ಎಲ್ಲರಿಗೂ ಮತದಾನಕ್ಕೆ ಅರ್ಹತೆ ನೀಡದ ಈ ಚುನಾವಣೆಗೆ ‘ಶಿಕ್ಷಕರ ಕ್ಷೇತ್ರದ ಚುನಾವಣೆ’ ಎಂದು ಕರೆಯುವುದರಲ್ಲಿ ಅರ್ಥವಿಲ್ಲ.

ಇದೇ ವಿಧಾನಪರಿಷತ್‌ನ ಪದವೀಧರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಪದವಿ ಪಡೆದ ಎಲ್ಲರಿಗೂ, ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೂ ಮತದಾನಕ್ಕೆ ಅವಕಾಶವಿದೆ. ಹೀಗಿರುವಾಗ, ಈ ನಿಯಮ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಮಾತ್ರ ಏಕೆ ಅನ್ವಯಿಸು ವುದಿಲ್ಲ? ಸರ್ಕಾರವು ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತಂದು, ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಎಲ್ಲ ಶಿಕ್ಷಕರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡುವ ಮೂಲಕ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಅರ್ಥಪೂರ್ಣಗೊಳಿಸಬೇಕಿದೆ.

–ನಂಜಿರೆಡ್ಡಿ, ಮಿಟ್ಟೇಮರಿ, ಬಾಗೇಪಲ್ಲಿ

ಮಾವುತರು, ಕಾವಾಡಿಗರಿಗೆ ಮನ್ನಣೆ ಸಿಗಲಿ

ಆನೆ ದ್ರೋಣ ಇದ್ದ ಕಾಲದಿಂದಲೂ ನಾನು ಮಕ್ಕಳಿಗೆ ಆನೆಗಳನ್ನು ತೋರಿಸುವ ಸಲುವಾಗಿ ಎಚ್‌.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಆನೆ ಶಿಬಿರಕ್ಕೆ ಆಗಾಗ ಹೋಗಿ ಬರುತ್ತಿದ್ದೆ. ಆಗಿನ್ನೂ ಪ್ರೌಢಾವಸ್ಥೆಯಲ್ಲಿದ್ದ ಅರ್ಜುನನಿಗೆ ತರಬೇತಿ ನೀಡಲಾಗುತ್ತಿತ್ತು. ದೈತ್ಯ ಪ್ರಾಣಿ ಆನೆಯನ್ನು ಪಳಗಿಸುವುದು ಅಷ್ಟು ಸುಲಭದ ಕೆಲಸವಲ್ಲ‌. ಮಾವುತರು ಹಾಗೂ ಕಾವಾಡಿಗರು ಆನೆಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಯಿಂದ ಸಾಕುವುದರ ಜೊತೆಗೆ ತರಬೇತಿಯನ್ನು ನೀಡುತ್ತಾರೆ.

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾರಿ ತೂಕದ ಅಂಬಾರಿಯನ್ನು ಹೊತ್ತ ಆನೆಯು ಜನಜಂಗುಳಿಗೆ ಬೆದರದೆ ಗಾಂಭೀರ್ಯದಿಂದ ಸಾಗಿ, ದಸರಾ ಮೆರವಣಿಗೆಗೆ ಕಳೆ ಕಟ್ಟುವಂತೆ ಮಾಡುತ್ತದೆ. ನನಗೆ ತಿಳಿದಿರುವಂತೆ, ಇದುವರೆಗೂ ಯಾವುದೇ ದಸರಾ ಮೆರವಣಿಗೆಯಲ್ಲಿ ಆನೆಗಳಿಂದ ಅನಾಹುತ ನಡೆದಿಲ್ಲ‌. ಹಾಗಾಗಿ, ಪ್ರತಿ ದಸರೆಯೂ ಸಾಂಗವಾಗಿ ನೆರವೇರಲು ಆನೆಗಳಿಗೆ ಮಾರ್ಗದರ್ಶನ ಮಾಡುವ ಮಾವುತರು ಹಾಗೂ ಕಾವಾಡಿಗರ ಶ್ರಮ ಪ್ರಮುಖ ವಾಗಿರುತ್ತದೆ. ಅವರು ತಮ್ಮ ಇಡೀ ಜೀವನವನ್ನು ಆನೆಗಳ ತರಬೇತಿಯಲ್ಲೇ ಕಳೆಯುತ್ತಾರೆ. ಹಾಗಾಗಿ, ಸರ್ಕಾರವು ಇವರ ಸಾಧನೆಯನ್ನು ಗುರುತಿಸಬೇಕು. ಹಲವು ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿಗೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಕೊಡುಗೆ ನೀಡುತ್ತಿರುವ ಇವರನ್ನೂ ಪರಿಗಣಿಸಬೇಕು.

– ಭಾಗ್ಯ ಎಸ್., ಎಚ್.ಡಿ.ಕೋಟೆ

ನಮ್ಮದಾದ ಆಯ್ಕೆ: ನಡೆಯಲಿ ಚಿಂತನೆ

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಆರ್‌ಎಸ್‌ಎಸ್ ಕಚೇರಿ ಪ್ರವೇಶಾವಕಾಶ ಕುರಿತು ನೀಡಿದ್ದಾರೆ ಎನ್ನಲಾದ ಆಡಿಯೊ, ಆ ಸಂಬಂಧದ ಆರೋಪ, ಪ್ರತ್ಯಾರೋಪ ಮತ್ತು ಸ್ಪಷ್ಟನೆಯ ನಡುವೆ ನಾವು ಅರ್ಥೈಸಿಕೊಳ್ಳಬೇಕಾದ ವಿಷಯವೊಂದಿದೆ. ಅದೆಂದರೆ, ಜೀವನದಲ್ಲಿ ನಮ್ಮದಾದ ಮತ್ತು ನಮ್ಮದಲ್ಲದ ಎಂಬ ಎರಡು ಬಗೆಯ ಆಯ್ಕೆಗಳಿರುತ್ತವೆ.

ಎಲ್ಲ ಜೀವಿಗಳ ಹುಟ್ಟುವಿಕೆಯು ನಿಸರ್ಗದ ಒಂದು ಆಕಸ್ಮಿಕ. ಮನುಷ್ಯಜೀವಿ ಇದಕ್ಕೆ ಹೊರತಾಗಿಲ್ಲ. ನಾವು ಇದೇ ಧರ್ಮ, ಜಾತಿ, ಲಿಂಗ ಅಥವಾ ಸಮುದಾಯದಲ್ಲಿ ಜನಿಸಬೇಕು ಎನ್ನುವುದು ಕೂಡ ನಮ್ಮದಲ್ಲದ ಆಯ್ಕೆ. ಹಾಗೆಯೇ ಸಾವು ಸಹ ನಮ್ಮದಾದ ಆಯ್ಕೆಯಲ್ಲ. ಆದರೆ ಈ ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಒಳ್ಳೆಯದು ಶ್ರೇಷ್ಠ ಮತ್ತು ಕೆಟ್ಟದ್ದು ಕನಿಷ್ಠ ಎಂಬುದು ಜೀವನಪರ್ಯಂತ ಇರುವ ನಮ್ಮದಾದ ಎರಡು ಆಯ್ಕೆಗಳು. ನಾಡಿನ ಶರಣರು, ದಾಸರು, ಸಂತರು ಮತ್ತು ಮಹನೀಯರು ಹಾಕಿಕೊಟ್ಟ ಮನುಜಮತದ ಪಥಗಳಾದ, ದಯವಿಲ್ಲದ ಧರ್ಮ ಯಾವುದಯ್ಯಾ? ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ? ಮನುಷ್ಯನಿಗೆ ಇರುವುದು ಎರಡೇ ಜಾತಿ, ಅವೆಂದರೆ ಹೆಣ್ಣು ಮತ್ತು ಗಂಡು, ಮನುಷ್ಯ ಧರ್ಮವೇ ಶ್ರೇಷ್ಠ ಧರ್ಮ, ಮನುಕುಲದ ಉದ್ಧಾರಕ್ಕಾಗಿ ಧರ್ಮಗಳ ಪಾತ್ರ ಅನನ್ಯ ಎಂಬ ಬಗ್ಗೆ ಚಿಂತನ, ಮಂಥನ ನಡೆಸುವುದು ನಮ್ಮ ಆಯ್ಕೆಯಾಗಬೇಕು. ಆಗ ಮಾತ್ರ ಅವು ನಮ್ಮ ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯುತ್ತಮ ಕೊಡುಗೆಗಳಾಗಿರುತ್ತವೆ.

– ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

‘ಪ್ರಶಸ್ತಿ ಉದ್ಯಮ’ ತಡೆಗಟ್ಟುವುದು ಹೇಗೆ?

ಗುಣಮಟ್ಟದ ಸಾಹಿತ್ಯಕ್ಕೆ ಸೋಲಿಲ್ಲ ಎಂದಿದ್ದಾರೆ ಸಂತೇಬೆನ್ನೂರು ಫೈಜ್ನಟ್ರಾಜ್ (ವಾ.ವಾ., ಡಿ. 7). ಗಟ್ಟಿ ಸಾಹಿತ್ಯ ಸದಾ ಕಾಲ ಉಳಿಯುತ್ತದೆ ಎಂಬ ಅವರ ಮಾತೂ ಒಪ್ಪತಕ್ಕದ್ದೇ. ಆದರೆ ಪ್ರಶ್ನೆ ಅದಲ್ಲ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಹಿರಿಯ ಸಾಹಿತಿಯೊಬ್ಬರು ನಂತರ ಕೃತಿಚೌರ್ಯ ಮಾಡಿದ ಆರೋಪಕ್ಕೆ ಒಳಗಾಗಿದ್ದರು. ಇದೇ ಥರದ ಇನ್ನೂ ಎರಡು– ಮೂರು ಪ್ರಕರಣಗಳು ನಡೆದಿವೆ. ಅಂದರೆ, ಗಟ್ಟಿ ಸಾಹಿತ್ಯಕ್ಕೆ ಮಾತ್ರ ಮನ್ನಣೆ ಎಂಬ ಮಾನದಂಡ ನಮ್ಮ ಸಮಾಜದಲ್ಲಿ ಎಲ್ಲಿ ಹೋಯಿತು?

ಸಾಮಾನ್ಯವಾಗಿ ಉದಯೋನ್ಮುಖ ಸಾಹಿತಿಗಳು, ಕಲಾವಿದರನ್ನು ಪ್ರಶಸ್ತಿಯ ಹಪಹಪಿಗೆ ದೂಡಿ, ಅವರಲ್ಲಿ ಸ್ವಾಭಿಮಾನ, ಘನತೆ, ಗೌರವವನ್ನು ಹಾಳುಮಾಡುವ ‘ಪ್ರಶಸ್ತಿ ಉದ್ಯಮ’ವನ್ನು ನಾವು ತಡೆಗಟ್ಟುವುದು ಹೇಗೆ? ಈ ದಿಸೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾಲಯ, ಅಕಾಡೆಮಿಯಂತಹ ಜವಾಬ್ದಾರಿಯುತ ಸಂಸ್ಥೆಗಳು ಸಹ ಮಾಡುತ್ತಿಲ್ಲ. ಹೀಗಾಗಿ, ಪ್ರಶಸ್ತಿಯ ಮೌಲ್ಯಕ್ಕೆ ಕುಂದುಂಟಾಗುತ್ತಿದೆ. ನಿಜಕ್ಕೂ ಪ್ರಶಸ್ತಿಗೆ ಅರ್ಹರಾದರೂ, ಪ್ರಶಸ್ತಿಯಿಂದ ವಂಚಿತರಾದ ಹಲವು ಸ್ವಾಭಿಮಾನಿಗಳಿಗೆ ಇದರಿಂದ ಮುಜುಗರ ಉಂಟಾಗುತ್ತದೆ. ಆದ್ದರಿಂದ, ಅರುಣ್ ಜೋಳದಕೂಡ್ಲಿಗಿ ಅವರು ಎತ್ತಿರುವ ಅನೇಕ ಪ್ರಶ್ನೆಗಳು (ಸಂಗತ, ಡಿ. 6) ಸೂಕ್ತವಾಗಿವೆ.

– ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT