ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 22 ಜುಲೈ 2023

Published 22 ಜುಲೈ 2023, 0:02 IST
Last Updated 22 ಜುಲೈ 2023, 0:02 IST
ಅಕ್ಷರ ಗಾತ್ರ

ಏನು ನಿನ್ನ ಲೀಲೆ?!

ಆಗಾಗ ಕುಸಿದಾಗ ನಿನ್ನ ಬೆಲೆ 
ಬೆಳೆಗಾರ ರಸ್ತೆಯಲಿ ಚೆಲ್ಲಾಡಿದ್ದ...
ಮಾಡಿದ್ದ ನಿನ್ನ ಬೀದಿಪಾಲು...
ಓ ಟೊಮೆಟೊ, ಹೇಗಿದೆ ನೋಡು 
ಈಗಿನ ನಿನ್ನ ಜಮಾನ,
ಹಾಕಿಹನು ಬೆಳೆಗಾರ ನಿನಗೆ
ಸಿ.ಸಿ. ಟಿ.ವಿ ಕ್ಯಾಮೆರಾ ಕಣ್ಗಾವಲು!

– ಮ.ಗು.ಬಸವಣ್ಣ, ನಂಜನಗೂಡು

ಕೋರ್ಟ್ ತಪರಾಕಿ ತಾಕೀತೇ?!

ಮನ ವಿಹ್ವಲಗೊಂಡಿದೆ, ಕೈ ನಡುಗುತ್ತಿದೆ. ನೂರು ಜ್ಯೋತಿ ವರ್ಷಗಳ ಪರ್ಯಂತ ಯತ್ನಿಸಿದರೂ ಗಂಡು ಜಾತಿಗೆ ಹೆಣ್ಣು ಕುಲದ ಋಣ ತೀರಿಸಲಾಗದು. ಹೀಗಿರುವಾಗ, ಮಣಿಪುರದಲ್ಲಿ ಅದೆಂಥ ಹೇಯ ವಿದ್ಯಮಾನ! ಮಣಿಪುರ ಕಾದು ಕಾದು ಹೆಂಚಾಗುವವರೆಗೆ ಕಾಯ್ದ ಕೇಂದ್ರ ಸರ್ಕಾರದ ನಡೆ ಹಾಗೂ ಆ ರಾಜ್ಯ ಸರ್ಕಾರದ ಅಸಹಾಯಕ ಹೇಡಿತನ ಕ್ಷಮಾರ್ಹವಲ್ಲ.

ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ ತಾಕೀತೇ?! ಫ್ರಾನ್ಸ್, ಆಸ್ಟ್ರೇಲಿಯಾವು ಮಣಿಪುರಕ್ಕಿಂತಲೂ ಹತ್ತಿರದಲ್ಲಿವೆ ಎಂಬ ಸಂಗತಿ ನಮಗೆ ತಿಳಿದದ್ದೇ ನಮ್ಮ ಪ್ರಧಾನಿಯಿಂದ. ಇಡೀ ನಾಗರಿಕತೆಯನ್ನೇ ತೊಟ್ಟಿಲು ಕಟ್ಟಿ ತೂಗುವ ಸ್ತ್ರೀಗೆ, ಇದು ನಾವು ನೀಡುವ ಉಪಚಾರ. ನಮ್ಮ ಗಂಡು ಜಾತಿಗೆ ಧಿಕ್ಕಾರವಿರಲಿ.

– ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

ಸಂಬಂಧಕ್ಕೆ ಮುಳುವಾಗದಿರಲಿ ತಾಂತ್ರಿಕತೆ

ಮಾಧ್ಯಮ ಲೋಕದಲ್ಲಿ ಸದ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡುತ್ತಿರುವ ಸಂಗತಿಯೆಂದರೆ, ಕೃತಕ ಬುದ್ಧಿಮತ್ತೆ (ಎಐ) ನಿರೂಪಕಿಯರು. ದೇಶದಲ್ಲಿ ಪ್ರಥಮ ಬಾರಿಗೆ ಒಡಿಶಾದ ಖಾಸಗಿ ಚಾನೆಲ್‌ವೊಂದು, ಲೀಸಾ ಎಂಬ ಎ.ಐ ಆಧಾರಿತ ಸುದ್ದಿ ನಿರೂಪಕಿಯನ್ನು ಪರಿಚಯಿಸಿದ್ದೇ ತಡ, ವಿವಿಧೆಡೆ ಹಲವು ಮಾಧ್ಯಮ ಸಂಸ್ಥೆಗಳು ಈ ಪ್ರಯೋಗಕ್ಕೆ ಮುಂದಾದವು. ಎಷ್ಟರಮಟ್ಟಿಗೆ ಎಂದರೆ, ರಾಜ್ಯದ ವಿಶ್ವವಿದ್ಯಾಲಯಗಳು ಸಹ ತಮ್ಮ ತಮ್ಮ ಎ.ಐ ನಿರೂಪಕರನ್ನು ಪರಿಚಯಿಸುತ್ತಿವೆ. ಕೃತಕ ಬುದ್ಧಿಮತ್ತೆಯ ದೆಸೆಯಿಂದ ಈ ತರಹದ ತಾಂತ್ರಿಕ ಅನ್ವೇಷಣೆಗೆ ಇಳಿದಿದ್ದು ಖುಷಿಯ ಸಂಗತಿ. ವಿದ್ಯಾರ್ಥಿಗಳು ಸಹ ತಮ್ಮ ಕಲಿಯುವಿಕೆಯ ಭಾಗವಾಗಿ ಇಂತಹ ತಾಂತ್ರಿಕ ಸಂಗತಿಗಳನ್ನು ಅರಿಯುವುದು ಅತಿ ಮಹತ್ವದ್ದಾಗಿದೆ.

ಈ ಬೆಳವಣಿಗೆ ಮುಂದೆ ಹಲವು ಕೆಲಸಗಳನ್ನು ಕಿತ್ತುಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗೆ ಅಂದುಕೊಳ್ಳುವುದು ಬಹುಶಃ ಉತ್ಪ್ರೇಕ್ಷೆಯಾದೀತು. ಒಬ್ಬ ನಿರೂಪಕ ಅಥವಾ ನಿರೂಪಕಿ ತಾನು ಓದುವ ಸುದ್ದಿಯ ಹಿಂದೆ ಅನೇಕ ಅಂಶಗಳನ್ನು ಹೆಣೆದುಕೊಂಡಿರುತ್ತಾರೆ. ಪದಗಳ ಹಿಂದಿನ ಅರ್ಥ, ಅವುಗಳ ಉಚ್ಚಾರಣೆ, ಅಲ್ಪಪ್ರಾಣ, ಮಹಾಪ್ರಾಣ, ಧ್ವನಿಯ ಏರಿಳಿತದಂತಹವು ಇದರಲ್ಲಿ ಸೇರಿರುತ್ತವೆ. ಈ ಎಲ್ಲದರಿಂದ ಕೂಡಿದ ಸುದ್ದಿಯನ್ನು ಪ್ರಸ್ತುತಪಡಿಸಿದಾಗಲೇ ನೋಡುಗರಲ್ಲಿಯೂ ಭಾವೋತ್ಪತ್ತಿ ಆಗುವುದು. ಇವೆಲ್ಲವನ್ನೂ ಬಿಟ್ಟು, ಕೊಟ್ಟ ಮಾಹಿತಿಯನ್ನಷ್ಟೇ ಸಂಗ್ರಹಿಸಿಕೊಂಡು, ಒಂದೇ ಸ್ವರದಲ್ಲಿ ಏಕತಾನತೆಯ ಶೈಲಿಯಲ್ಲಿ ಸುದ್ದಿಯನ್ನು ವ್ಯಾಖ್ಯಾನಿಸುವ ನಿರೂಪಕರಿಗೆ ಮನುಷ್ಯನ ಭಾವಲೋಕದಲ್ಲಿ ಆಪ್ತವಾದ ಸ್ಥಾನವಿಲ್ಲ. ಮೊಗ್ಗಾಗಿ ಅರಳಿದ ಹೂವಿಗೂ ಕೃತಕವಾಗಿ ತಯಾರಾದ ಹೂವಿಗೂ ತಾಜಾತನದಲ್ಲಿ ವ್ಯತ್ಯಾಸ ಇರುತ್ತದೆ. ಮೊದಲಿನಿಂದಲೂ ಅತಿಯಾದ ತಾಂತ್ರಿಕತೆ ಮನುಷ್ಯ ಸಂಬಂಧಗಳನ್ನು ಪಾತಾಳಕ್ಕೆ ಇಳಿಸಿದೆ. ಈ ಅಂಶವನ್ನು ತಲೆಯಲ್ಲಿ ಇಟ್ಟುಕೊಂಡು ಮುನ್ನಡೆಯುವುದು ಎಲ್ಲರಿಗೂ ಸೂಕ್ತ.

–ಆದಿತ್ಯ ಯಲಿಗಾರ, ಧಾರವಾಡ 

ಸೇವಾ ನಿಯಮ ಉಲ್ಲಂಘನೆಯಲ್ಲದೆ ಬೇರೇನು?

‘ಐಎಎಸ್ ಅಧಿಕಾರಿಗಳು ಗಣ್ಯರನ್ನು ಸ್ವಾಗತಿಸಿದರೆ ತಪ್ಪೇನು?’ ಎಂದು ಎಎಪಿ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ (ಪ್ರ.ವಾ., ಜುಲೈ 21). ಇದಕ್ಕೆ ಉತ್ತರವಾಗಿ ಕೆಲವು ಮರುಪ್ರಶ್ನೆಗಳಿವೆ: 2024ರಲ್ಲಿ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಒಕ್ಕೂಟ ಬಲಪಡಿಸಿಕೊಳ್ಳುವ ಉದ್ದೇಶದಿಂದ ಅಲ್ಲವೇ ವಿರೋಧಪಕ್ಷಗಳ ಗಣ್ಯರು ಬೆಂಗಳೂರಿನ ಸಭೆಗೆ ಬಂದಿದ್ದು? ಇದರಲ್ಲಿ ಏನೇನೂ ತಪ್ಪಿಲ್ಲ. ಆದರೆ ಇದು ಬರೀ ರಾಜಕೀಯ ಸಭೆ ಆಗಿತ್ತು ಅಲ್ಲವೇ? ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದಂತೆ ಈ ಗಣ್ಯರು ಚರ್ಚಿಸುವ ವಿಷಯ ಸಭೆಯ ಮುಂದೆ ಇರಲಿಲ್ಲ ಅಲ್ಲವೇ? ರಾಜಕೀಯ ಪಕ್ಷಗಳು ಒಂದು ರಾಜ್ಯದಲ್ಲಿ ಸಭೆ ಸೇರಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯವನ್ನು ಚರ್ಚಿಸುವ ಉದ್ದೇಶ ಹೊಂದಿದ್ದು ಸ್ಪಷ್ಟವಿರುವಾಗ, ಅಲ್ಲಿ ಆ ರಾಜ್ಯ ಸರ್ಕಾರದ ಅಧಿಕಾರಿಗಳ ಪಾತ್ರ ಏನಿತ್ತು?  

ರಾಜ್ಯ ಸರ್ಕಾರದ ಪರವಾಗಿ ಅಧಿಕಾರಿಗಳು ಗಣ್ಯರನ್ನು ಸ್ವಾಗತಿಸಿದರೇ? ಹಾಗಿದ್ದರೆ, ಬಂದಿದ್ದ ಗಣ್ಯರು ಸರ್ಕಾರದ ಅತಿಥಿಗಳೇ? ಐಎಎಸ್ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜಿಸಿದ್ದನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಮರ್ಥಿಸುತ್ತಾರೆಯೇ? ಹೀಗೆ ಅಧಿಕಾರಿಗಳನ್ನು ನಿಯೋಜಿಸಿದವರು ಯಾರು? ಅದಕ್ಕೆ ಆದೇಶ ನೀಡಿದವರು ಯಾರು? ಆದೇಶದ ಒಕ್ಕಣೆ ಏನು? ರಾಜಕೀಯ ಪಕ್ಷಗಳು ನಡೆಸುವ ಸಭೆಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನೇಮಿಸಿದ್ದು ಎಷ್ಟು ತಪ್ಪೋ, ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ಅಂಥ ಸಭೆಗಳಿಗೆ ಹೋಗಿದ್ದೂ ಅಷ್ಟೇ ತಪ್ಪು. ಏಕೆಂದರೆ ಸರ್ಕಾರಿ ಅಧಿಕಾರಿಗಳ ನಿಷ್ಠೆ, ಬದ್ಧತೆಯು ಯಾವುದೇ ರಾಜಕೀಯ ಪಕ್ಷಕ್ಕಲ್ಲ. ಕೇಂದ್ರ ನಾಗರಿಕ ಸೇವಾ ನಿಯಮಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರದ ಐಎಎಸ್ ಅಧಿಕಾರಿಗಳು ಮೈತ್ರಿಕೂಟದ ಸಭೆಯ ಸಂದರ್ಭದಲ್ಲಿ ಸ್ವಾಗತಕಾರರಾಗಿ ಹೋಗಿದ್ದು, ಸೇವಾ ನಿಯಮಗಳ ಉಲ್ಲಂಘನೆಯಲ್ಲ ಎಂದು ಕಾಳಪ್ಪ ಅವರು ಹೇಗೆ ಹೇಳುತ್ತಾರೆ?

– ಸಾಮಗ ದತ್ತಾತ್ರಿ, ಬೆಂಗಳೂರು

ಮಾಲೀಕನಿಲ್ಲದ ಗಾಳಿಪಟ...

‘ಗುರುವಿಗೆ ಗುರ್ರ್ ಎನ್ನುವ ಮುನ್ನ’ ಎಂಬ ಲೇಖನದಲ್ಲಿ (ಸಂಗತ, ಜುಲೈ 19) ಸಮಾಜದಲ್ಲಿ ಗುರುವಿನ ಸ್ಥಾನದ ಬಗ್ಗೆ ಅರ್ಥಪೂರ್ಣ ವಿವರಣೆ ಇದೆ. ನಾನು ಕೂಡ ಒಬ್ಬ ಶಿಕ್ಷಕರ ಮಗ. ಊರ ದಾರಿಯಲ್ಲಿ ಅದೆಷ್ಟೋ ಬಾರಿ ಶಿಕ್ಷಕರು ಎದುರಿಗೆ ಸಿಕ್ಕಾಗ ಅವರನ್ನು ಕಂಡೂ ಕಾಣದಂತೆ ಮರೆಯಾಗುವುದೇ ಇಂದಿನ ಪೀಳಿಗೆಯ ಹವ್ಯಾಸವಾಗಿ ಬಿಟ್ಟಿದೆ. ಹೌದು, ಏರುಪೇರಾಗಿರುವ ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುವವರೇ ಗುರುಗಳು. ಬಾನೆತ್ತರಕ್ಕೆ ರೆಕ್ಕೆ ಪುಕ್ಕಗಳಿಲ್ಲದೆ ಹಾರಾಡುತ್ತಿರುವ ಯಾವ ಗಾಳಿಪಟವಾದರೂ ತನ್ನ ಮಾಲೀಕನ ಕೈಯಲ್ಲಿ ತನ್ನನ್ನು ಹಿಡಿದು ನಡೆಸುವ ದಾರ ಇರುವ ಕಾಲವಷ್ಟೇ ತನ್ನ ಆಯಸ್ಸನ್ನು ಹೊಂದಿರುತ್ತದೆ. ನಿಯಂತ್ರಿಸಲು ಮಾಲೀಕನಿಲ್ಲದೆ ಎಲ್ಲಾ ಗಾಳಿಪಟಗಳು ಕ್ಷಣಮಾತ್ರದಲ್ಲಿ ಉರುಳಿಬಿದ್ದ ಚರಿತ್ರೆಯೇ ನಮ್ಮ ಮುಂದಿದೆ.

ಒಬ್ಬ ಶಿಕ್ಷಕ ಗಾಳಿಪಟದಂತೆ ವಿದ್ಯಾರ್ಥಿಯನ್ನು ತನ್ನ ಕೈಯಲ್ಲಿ ಸುಭದ್ರವಾಗಿ ಇಟ್ಟುಕೊಂಡು ನಿಯಂತ್ರಿಸುತ್ತಾನೆ. ಆದ್ದರಿಂದ ಇಂದಿನ ಪುಟಾಣಿಗಳು ನಾಳೆಯ ನಾಯಕರಾಗಿ ಬೆಳೆಯಬೇಕೆಂದರೆ ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. 

– ಶಮಿ, ಉಪ್ಪಿನಂಗಡಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT