ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 31 ಆಗಸ್ಟ್ 2023

Published 31 ಆಗಸ್ಟ್ 2023, 0:08 IST
Last Updated 31 ಆಗಸ್ಟ್ 2023, 0:08 IST
ಅಕ್ಷರ ಗಾತ್ರ

ವರ್ಗಾವಣೆ ಮುಗಿಯಿತು, ಕೊರತೆ ಹೆಚ್ಚಿತು!

ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಶಿಕ್ಷಕ

ರಿಲ್ಲದ ಶಾಲೆಗೆ ಮಕ್ಕಳನ್ನು ಪೋಷಕರು ಹೇಗೆ ಕಳುಹಿಸಿಯಾರು?! ಬಡವರಾದರೂ ಅವರಿಗೆ ತಮ್ಮ ಮಕ್ಕಳ ಭವಿಷ್ಯದ ಯೋಚನೆ ಇರುವುದಿಲ್ಲವೇ? ಪ್ರಸ್ತುತ 13,363 ಮಂದಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾಗಿದ್ದರೂ

ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಖಟ್ಲೆಯೊಂದು ನ್ಯಾಯಾಲಯದಲ್ಲಿ ಇರುವುದರಿಂದ ಅವರಿಗೆ ಕೆಲಸದ ಆದೇಶಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ‘ವಿಷಯ ಕೋರ್ಟ್‌ನಲ್ಲಿ ಇರುವುದರಿಂದ ನಾವೇನೂ ಹೇಳುವುದಕ್ಕೆ ಆಗದು’ ಎಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಕೈಚೆಲ್ಲಿ ಕುಳಿತಿದ್ದಾರೆ.

ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಯೂ ನಿರುದ್ಯೋಗಿಗಳಾಗಿರುವ ಗುಂಪು ಒಂದು ಕಡೆಯಾದರೆ, ವಿಷಯವಾರು ಶಿಕ್ಷಕರಿಲ್ಲದೆ ಶಾಲೆಗೆ ‘ಬಂದ ಪುಟ್ಟ ಹೋದ ಪುಟ್ಟ’ ಎಂಬಂತಾಗಿರುವ ಮಕ್ಕಳು ಇನ್ನೊಂದು ಕಡೆ. ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ತಯಾರು ಮಾಡುತ್ತಿರುವ ಖಾಸಗಿ ಶಾಲೆಗಳ ಮುಂದೆ ಸರ್ಕಾರಿ ಶಾಲೆಗಳು ಮಂಕಾಗು

ತ್ತಿರುವುದಂತೂ ಸತ್ಯದ ಸಂಗತಿ. ಇಂತಹ ಕಾರಣಗಳಿಂದ ನೂರಾರು ಶಾಲೆಗಳು ಮುಚ್ಚಿಹೋಗಿವೆ. ಸರ್ಕಾರ ಈಗಲಾದರೂ ಶಾಲೆಗಳ ಅಭಿವೃದ್ಧಿ ಬಗ್ಗೆ ಆಸಕ್ತಿ ವಹಿಸದೇ ಇದ್ದರೆ ಮುಂದೊಂದು ದಿನ ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸಂಪೂರ್ಣ ಮುಚ್ಚಿಹೋದರೂ ಆಶ್ಚರ್ಯಪಡಬೇಕಾಗಿಲ್ಲ.

–ಸೋಮಶೇಖರ ಯು.ಟಿ., ಮೈಸೂರು

ಭೂ ಸುಧಾರಣೆ: ಅನಾಹುತ ಸರಿಪಡಿಸಿ

ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಕೃಷಿಕರಲ್ಲದವರೂ ಕೃಷಿ ಭೂಮಿಯನ್ನು ಕೊಳ್ಳಲು ಅನುವಾಗಿಸಿದ್ದರ ಪರಿಣಾಮ ಆಗಲೇ ಕಾಣಲಾರಂಭಿಸಿದೆ. ರೈತರು ಕುಂಟೆ ಲೆಕ್ಕದಲ್ಲಿ ಕೊಳ್ಳಲೂ ಆಗದಂತಾಗಿ, ಹೊರರಾಜ್ಯದಿಂದ ಬಂದ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಫಲವತ್ತಾದ ಭೂಮಿಯನ್ನು ಹತ್ತು, ಇಪ್ಪತ್ತೈದು, ಐವತ್ತು ಎಕರೆ ಲೆಕ್ಕದಲ್ಲಿ ಕೊಳ್ಳುವುದು ಶುರುವಾಗಿದೆ.

ಇಂದು ರೈತನಾದವನು ಜಮೀನನ್ನು ಮಾರಬಹುದೇ ವಿನಾ ಕೊಳ್ಳಲು ಆಗುತ್ತಿಲ್ಲ. ಇದು ಹೀಗೆಯೇ ಸಾಗಿದರೆ ಮುಂದೆ ಗತಿ ಏನು?! ರಾಜ್ಯದ ಆಹಾರ ಭದ್ರತೆಯ ಪಾಡೇನು? ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಇದ್ದಾಗ ಈ ತಿದ್ದುಪಡಿಯನ್ನು ವಿರೋಧಿಸಿದ್ದರು. ಈಗ ಅವರದೇ ನೇತೃತ್ವದ ಸರ್ಕಾರ ಇದೆ. ಆಗಿರುವ ಅನಾಹುತವನ್ನು ಸರಿಪಡಿಸಬೇಕು.

– ಎಂ.ಎನ್.ಮಂಜುನಾಥ, ಮಾಚನಹಳ್ಳಿ, ತುಮಕೂರು

ಎಲ್‌ಪಿಜಿ ದರ ಇಳಿಕೆ: ಚುನಾವಣಾ ತಂತ್ರ?

ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರ್ಕಾರ ₹ 200 ಇಳಿಕೆ ಮಾಡಿದ್ದು, ‘ಇದು ನನ್ನ ಕುಟುಂಬದ ಸಹೋದರಿಯರಿಗೆ ಹೆಚ್ಚು ನೆಮ್ಮದಿ ತರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2014ರಲ್ಲಿ ₹ 400 ಇದ್ದ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ₹ 1,152ಕ್ಕೆ ಏರಿಸಿ ಜನರ ನೆಮ್ಮದಿಯನ್ನು ಹಾಳು ಮಾಡಲಾಗಿತ್ತು. ಈಗ ಚುನಾವಣೆ ಸಮಯದಲ್ಲಿ ಅದರಲ್ಲಿ ₹ 200ರಷ್ಟು ಇಳಿಕೆ ಮಾಡಿರುವುದು ಮತದಾರರನ್ನು ಮೂರ್ಖರನ್ನಾಗಿಸುವ ತಂತ್ರವೇನೋ ಎಂಬಂತೆ ಭಾಸವಾಗುತ್ತಿದೆ.

ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ಕಲುಷಿತ ನೀರು: ಬೇಜವಾಬ್ದಾರಿಯ ಪರಮಾವಧಿ

ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಇತ್ತೀಚೆಗೆ ಕಲುಷಿತ ನೀರು ಕುಡಿದು ಸಾವುಗಳು ಸಂಭವಿಸಿ, ಬಹಳಷ್ಟು ಮಂದಿ ಅಸ್ವಸ್ಥರಾದ ಪ್ರಕರಣದ ನೆನಪು ಮಾಸುವ ಮುನ್ನವೇ ಯಾದಗಿರಿಯ ಸುರಪುರ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಹಲವರು ಅಸ್ವಸ್ಥರಾಗಿದ್ದಾರೆ (ಪ್ರ.ವಾ., ಆ. 29). ಈ ಎರಡೂ ಪ್ರಕರಣಗಳು ಆಡಳಿತದ ವೈಫಲ್ಯ, ಧೋರಣೆ ಮತ್ತು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತವೆ. ಚಿತ್ರದುರ್ಗದ ಪ್ರಕರಣವನ್ನು ನೋಡಿದ ಮೇಲೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇರುವುದು ಬೇಜವಾಬ್ದಾರಿಯ ಪರಮಾವಧಿ.

ಶುದ್ಧ ಕುಡಿಯುವ ನೀರು ಪಡೆಯುವುದು ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ್‌ ಮಿಷನ್‌ ಸಮಾಜದ ಕಟ್ಟಕಡೆಯ ಮನುಷ್ಯನನ್ನೂ ತಲುಪುವ ಉತ್ತಮ ಯೋಜನೆಯಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ರಾಜ್ಯದ

ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮಾಡಬೇಕು. ಮತ್ತೊಮ್ಮೆ ಈ ರೀತಿಯ ಅವಘಡಗಳು ನಡೆಯದ ಹಾಗೆ ಎಚ್ಚರಿಕೆ ವಹಿಸಬೇಕು. ದೇಶವು ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ಆಚರಿಸುವ ವೇಳೆಯಲ್ಲಿ ದೇಶದ ಒಂದು ವರ್ಗದ ಪ್ರಜೆಗಳು ಶುದ್ಧ ಕುಡಿಯುವ ನೀರು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ ಎಂಬುದು ಚಿಂತಿಸಲೇಬೇಕಾದ ಸಂಗತಿ.

– ಪ್ರಸಾದ್ ಜಿ.ಎಂ., ಮೈಸೂರು

ಶೋಷಣೆಯ ನಾನಾ ಮುಖ...

ಕಿವಿ ಮುಟ್ಟಲಿ ಕಾರ್ಮಿಕರ ಕೂಗು ಎಂಬ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ, ಆ. 29) ಸಮಯೋಚಿತವೂ ವಾಸ್ತವಾಂಶಗಳಿಂದ ಕೂಡಿದುದೂ ಆಗಿದೆ. ನಮ್ಮ ಸಮಾಜದ ವಿವಿಧ ವಲಯಗಳಲ್ಲಿ ಕಾರ್ಮಿಕರನ್ನು ನಾನಾ ಬಗೆಯಲ್ಲಿ ಶೋಷಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಶೋಷಣೆ ಬೇರೆ ಬೇರೆ ರೂಪದಲ್ಲಿ ನಡೆಯುತ್ತಿತ್ತು. ಸಾಲದ ಬಲೆಗೆ ದೂಡಿ, ಅವರ ಕೈ ಕಟ್ಟಿಹಾಕಲು ಏನೇನೋ ಮಸಲತ್ತುಗಳು ನಡೆಯುತ್ತಿದ್ದವು. ಈಗ ಅವುಗಳ ಪ್ರಮಾಣ ಕಡಿಮೆ ಆಗಿರುವುದು ತುಸು ಸಮಾಧಾನಕರ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT