ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಉತ್ತರದ ಮರುಳು ದಕ್ಷಿಣಕ್ಕೂ ಬಂತೆ?

Last Updated 18 ಅಕ್ಟೋಬರ್ 2022, 22:00 IST
ಅಕ್ಷರ ಗಾತ್ರ

‘ಕಾವೇರಿ- ಹೇಮಾವತಿ- ಲಕ್ಷ್ಮಣತೀರ್ಥ ನದಿಗಳು ಕೂಡುವ ತ್ರಿವೇಣಿ ಸಂಗಮದಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ
ಸರ್ಕಾರದಿಂದಲೇ ಕುಂಭಮೇಳ ಆಚರಿಸಲು ಶೀಘ್ರ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿರುವುದನ್ನು (ಪ್ರ.ಜಾ., ಅ. 17) ತಿಳಿದು, ನಮ್ಮ ಸಂವಿಧಾನದ ಗುರಿಯೇನು, ನಾವು ಸಾಗುತ್ತಿರುವ ಮಾರ್ಗ ಯಾವುದು ಎಂದೆನಿಸಿ ವಿಷಾದವಾಯಿತು. ನಮ್ಮ ಸಂವಿಧಾನ ಗುರುತಿಸಿರುವ ಮೂಲಭೂತ ಕರ್ತವ್ಯಗಳಲ್ಲಿ ಹೇಳಲಾಗಿರುವ: ‘ವೈಜ್ಞಾನಿಕ ಮನೋಭಾವ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವುದು’ ಎಂಬ ಸಂದೇಶಕ್ಕೆ ವಿರುದ್ಧವಾಗಿ ಈಗ ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆಯ ಹಣವನ್ನು ಅನಗತ್ಯವಾಗಿ ವ್ಯಯಿಸಿದ್ದಲ್ಲದೆ ಅದನ್ನು ಆದೇಶದ ಮೂಲಕ ಸ್ಥಿರಗೊಳಿಸುವುದು ಎಷ್ಟರಮಟ್ಟಿಗೆ ಸಮರ್ಥನೀಯ? ಇದು ಉತ್ತರದ ಮರುಳನ್ನು ದಕ್ಷಿಣದಲ್ಲಿ ಜಾರಿಗೊಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವುದಲ್ಲದೆ ಮತ್ತೇನು?

ಸುಮಾರು 400 ವರ್ಷಗಳ ಹಿಂದೆ ಇದ್ದ ಕನ್ನಡದ ಜನಮಾನಸದ ಕವಿ, ‘ಸತ್ಯರಾ ನುಡಿ ತೀರ್ಥ, ನಿತ್ಯರಾ ನಡೆ ತೀರ್ಥ, ಉತ್ತಮರ ಸಂಗವದು ತೀರ್ಥ| ಹರಿವ ನೀರೆತ್ತಣದು ತೀರ್ಥ- ಸರ್ವಜ್ಞ’ ಎಂದದ್ದು ಕನ್ನಡದ ಪ್ರಜ್ಞೆ ಅಲ್ಲವೆ? ಬಾಕ್ರಾ ನಂಗಲ್ ಅಣೆಕಟ್ಟಿನ ನಿರ್ಮಾಣದ ಆರಂಭದಲ್ಲಿ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ‘ಡ್ಯಾಮ್ಸ್‌ ಆರ್‌ ದಿ ಟೆಂಪಲ್ಸ್‌ ಆಫ್‌ ಮಾಡರ್ನ್‌ ಇಂಡಿಯಾ’ ಎಂದ ಮಾತಿನಲ್ಲಿ ಅಡಗಿರುವ ಕೃಷಿ ಮತ್ತು ಕೈಗಾರಿಕಾಭಿವೃದ್ಧಿಯ ಮುಂಗಾಣ್ಕೆಯನ್ನು ಮೂಲೆಗುಂಪಾಗಿಸಿ, ಜನರ ಭ್ರಮೆಗಳನ್ನು ಪ್ರೋತ್ಸಾಹಿಸುವುದಲ್ಲದೆ ಅದಕ್ಕೆ ಶಾಸನದ ನೆಲೆಗಟ್ಟನ್ನು ಉಂಟು ಮಾಡುವುದು ಯಾವ ರೀತಿಯ ಮುತ್ಸದ್ದಿತನವಾದೀತು?

ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT