ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 22 ಆಗಸ್ಟ್ 2023, 18:39 IST
Last Updated 22 ಆಗಸ್ಟ್ 2023, 18:39 IST
ಅಕ್ಷರ ಗಾತ್ರ

‘ಕನ್ನಡ ರತ್ನಕೋಶ’ ಕೈಗೆಟಕುವಂತಿರಲಿ

‘ಕನ್ನಡ ರತ್ನಕೋಶ’ದ ಬೆಲೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಆಗಾಗ್ಗೆ ಹೆಚ್ಚಿಸುತ್ತಲೇ ಬಂದಿದೆ. ನಾನು ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ. ಮಕ್ಕಳಿಗೆ ಪದ ಸಂಪತ್ತನ್ನು ಹೆಚ್ಚಿಸಬೇಕು ಎಂಬ ಅಭಿಲಾಷೆ ಹೊಂದಿದವನು. ಬಡ ಮಕ್ಕಳಿಗೆ ಈ ಪುಸ್ತಕವನ್ನು ಕೊಂಡುಕೊಳ್ಳಲು ಆರ್ಥಿಕ ತೊಂದರೆಯಾಗುತ್ತಿದೆ.

ಕನ್ನಡ ರತ್ನಕೋಶದ ಬಳಕೆಯಿಂದ ಮಕ್ಕಳಲ್ಲಿ ಜ್ಞಾನ, ಕೌಶಲ, ಪದ ಭಂಡಾರ, ವಾಕ್ಚಾತುರ್ಯ, ಬರವಣಿಗೆ ಕೌಶಲ ಹೆಚ್ಚಾಗುವ ಅವಕಾಶ ಇರುತ್ತದೆ. ಹೀಗಾಗಿ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಕನ್ನಡ ರತ್ನಕೋಶವನ್ನು ಸಾಧ್ಯವಾದಷ್ಟು ಮಟ್ಟಿಗೆ ರಿಯಾಯಿತಿ ದರದಲ್ಲಿ ಒದಗಿಸಲು ಪರಿಷತ್ತಿನ ಅಧ್ಯಕ್ಷರು ಮುಂದಾಗಬೇಕು.

⇒ಡಾ. ರಾಜೇಂದ್ರ ಕುಮಾರ್ ಕೆ. ಮುದ್ನಾಳ್, ಠಾಣಗುಂದಿ, ಯಾದಗಿರಿ

ಪಾಪದ ಅರಿವು ಕಾಡದೇಕೆ?

ಸುಮಾರು ಐದು ವರ್ಷಗಳಿಂದ ಶಾಲೆಗೆ ಗೈರುಹಾಜರಾಗಿದ್ದ ಶಿಕ್ಷಕರೊಬ್ಬರು ಸಂಬಳವನ್ನು ಮಾತ್ರ ನಿರಂತರವಾಗಿ ಪಡೆಯುತ್ತಿದ್ದ ಸುದ್ದಿಗೆ ಎಂ.ಪರಮೇಶ್ವರ ಬೇಸರ ವ್ಯಕ್ತ
ಪಡಿಸಿದ್ದಾರೆ (ವಾ.ವಾ., ಆ. 22). ಇದು ಸತ್ಯವಾದರೂ ಅಚ್ಚರಿಯ ಸಂಗತಿ ಎನಿಸುವುದಿಲ್ಲ! ಏಕೆಂದರೆ ಇಂಥ ಭೂಪರು ರಾಜ್ಯದಾದ್ಯಂತ ಇದ್ದಾರೆ. ಶಿಕ್ಷಕರ ಹೆಸರಿನಲ್ಲಿ ಇರುವ ಸಂಘಟನೆಗಳಲ್ಲಿ ತೂರಿಕೊಂಡು, ಒಂದು ದಿನವೂ ಸೀಮೆಸುಣ್ಣ ಹಿಡಿಯದೆ ಬರೀ ರಾಜಕಾರಣ, ಚೀಟಿ- ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಕೆಲಸ ನಡೆಸಿಕೊಂಡು ಬಿಟ್ಟಿ ಸಂಬಳ ತೆಗೆದುಕೊಳ್ಳುತ್ತಿರುವ ನೂರಾರು ಶಿಕ್ಷಕ ರಿದ್ದಾರೆ. ತಮ್ಮ ಬದಲಿಗೆ ಅಲ್ಪ ಮೊತ್ತಕ್ಕೆ ಬೇರೆಯವರಿಂದ ದುಡಿಸಿಕೊಂಡು ಪೂರ್ಣ ಪಗಾರವನ್ನು ಜೇಬಿಗೆ ಇಳಿಸಿಕೊಳ್ಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುವುದಿಲ್ಲ.

ಅವರ ಪರಾಕ್ರಮ ಏನಿದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಶಿಕ್ಷಕರನ್ನು ದಾಖಲೆಗಳ ಹೆಸರಿನಲ್ಲಿ ಗೋಳು ಹೊಯ್ದುಕೊಳ್ಳುವುದಷ್ಟೇ! ‘ಆತ್ಮಸಾಕ್ಷಿರಹಿತ ಭೋಗ’ವನ್ನು ಮಹಾತ್ಮ ಗಾಂಧಿ ‘ಮಹಾಪಾಪ’ವೆಂದು ಕರೆಯುತ್ತಾರೆ. ಈ ಪಾಪದ ಅರಿವು ಇವರನ್ನು ಕಾಡದೇ ಇರುವುದು ದುರದೃಷ್ಟಕರ.

⇒ಭೀಮಾನಂದ ಮೌರ್ಯ, ಮೈಸೂರು

ಕುಲಪತಿಗಳೇ ಮೌಢ್ಯ ಬಿತ್ತುವವರಾಗಿದ್ದರೆ..?

ಮೌಢ್ಯ ಬಿತ್ತುವ ಅತಿಥಿಗಳನ್ನು ರಾಜ್ಯದ ವಿಶ್ವವಿದ್ಯಾಲಯಗಳು ತಾವು ಆಯೋಜಿಸುವ ಕಾರ್ಯಕ್ರಮಗಳಿಗೆ ಕರೆಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಲಪತಿಗಳಿಗೆ ತಾಕೀತು ಮಾಡಿರುವುದು ಸರಿಯಷ್ಟೆ (ಪ್ರ.ವಾ., ಆ. 22). ಆದರೆ ಕುಲಪತಿಗಳೇ ಇಂತಹ ಬಳಗಕ್ಕೆ ಸೇರಿದ್ದರೆ ಏನು ಮಾಡುವುದು?

ರಾಜ್ಯದ ಕುಲಪತಿಗಳಿಗೆ ಕೆಲವು ವಾರಗಳ ಹಿಂದೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ತಮ್ಮ ಅಭಿಪ್ರಾಯ ತಿಳಿಸುವಂತೆ ಉನ್ನತ ಶಿಕ್ಷಣ ಸಚಿವರು ಕೇಳಿದ್ದರು. ಇದರ ಪರವಾಗಿ ಮಾತನಾಡಿದರೆ ಪ್ರಸ್ತುತ ಸರ್ಕಾರದ ವಿರೋಧ ಕಟ್ಟಿಕೊಳ್ಳ ಬೇಕಾಗುತ್ತದೆ, ವಿರುದ್ಧವಾಗಿ ಮಾತನಾಡಿದರೆ ಒಕ್ಕೂಟ ಸರ್ಕಾರದ ಮತ್ತು ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಅನೇಕರು ತುಟಿ ಬಿಚ್ಚಿಲ್ಲ ಎನ್ನಲಾಗಿದೆ. ಇಂತಹ ಕುಲಪತಿಗಳು ಎಂತಹ ಜಾಗತಿಕ ಗುಣಮಟ್ಟದ ವಿಶ್ವವಿದ್ಯಾಲಯಗಳನ್ನು ಕಟ್ಟಬಹುದು? ಅಭಿಪ್ರಾಯ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಬೇರು ಎನ್ನುವುದೇ ಇಲ್ಲಿ ಗೈರಾಗಿದೆ. ಈ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ.

⇒ಟಿ.ಆರ್.ಚಂದ್ರಶೇಖರ, ಬೆಂಗಳೂರು

ಫ್ಯಾಕ್ಟ್ ಚೆಕ್ ಘಟಕ: ಅಪಪ್ರಚಾರಕ್ಕೆ ಕಡಿವಾಣ

ರಾಜ್ಯದಲ್ಲಿ ‘ಫ್ಯಾಕ್ಟ್ ಚೆಕ್’ (ಸುಳ್ಳು ಸುದ್ದಿ ಪತ್ತೆ) ಘಟಕ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ನೀಡಿರುವುದು (ಪ್ರ.ವಾ., ಆ. 22) ಸ್ವಾಗತಾರ್ಹ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡಿ ಜನರನ್ನು ತಪ್ಪುದಾರಿಗೆ ಎಳೆಯುವ ಜಾಲಗಳು ಇತ್ತೀಚೆಗೆ ಬಹಳಷ್ಟು ಸಕ್ರಿಯವಾಗಿರುವುದನ್ನು ಕಾಣುತ್ತಿದ್ದೇವೆ. ಇದು ಅಕ್ಷಮ್ಯ ಅಪರಾಧ. ಇಂಥ ಕೃತ್ಯಗಳನ್ನು ನಡೆಸುತ್ತಿರುವವರ ಮೇಲೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು. ಆಗಲೇ ಇದಕ್ಕೆ ಕಡಿವಾಣ ಹಾಕಲು ಸಾಧ್ಯ.

⇒ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ಪ್ರತ್ಯೇಕ ಸೂಚಕ ಬಳಕೆಯಾಗಲಿ

ವ್ಯಕ್ತಿಯ ಹೆಸರಿನ ಹಿಂದೆ ಡಾ. ಎಂದಿದ್ದರೆ ಅವರು ವೈದ್ಯರು ಎಂದು ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಬರುತ್ತದೆ. ಸಂಶೋಧನೆ ನಡೆಸಿ, ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದವರ ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೇಟ್‌ ಪಡೆದವರ ಹೆಸರುಗಳ ಹಿಂದೆಯೂ ಡಾ. ಎಂದು ಬರೆಯುವುದರಿಂದ ಜನಸಾಮಾನ್ಯರಿಗೆ ಸಹಜವಾಗಿಯೇ ಗೊಂದಲ ಉಂಟಾಗುತ್ತದೆ.

ತುರ್ತು ಆತಂಕದ ಸಂದರ್ಭಗಳಲ್ಲಿ, ಮನೆಯ ಹೊರಗಿನ ನಾಮಫಲಕದಲ್ಲಿ ಹೆಸರಿನ ಹಿಂದೆ ಡಾ. ಎಂದಿದ್ದುದನ್ನು ನೋಡಿ, ಅವರು ವೈದ್ಯರಿರಬಹುದೆಂದು ತಪ್ಪಾಗಿ ಭಾವಿಸಿ, ಜನರು ಅವರ ಬಳಿ ಚಿಕಿತ್ಸೆಗಾಗಿ ತೆರಳಿ ನಿರಾಸೆ ಅನುಭವಿಸಿದ ನಿದರ್ಶನಗಳೂ ಇವೆ. ವೈದ್ಯರು ಹಾಗೂ ಇತರ ಡಾಕ್ಟರೇಟ್‌ ಪದವಿ ಹೊಂದಿದವರನ್ನು ಸರಿಯಾಗಿ ಗುರುತಿಸಲು ಅನುವಾಗುವಂತೆ, ಅವರ ಹೆಸರುಗಳ ಹಿಂದೆ ಪ್ರತ್ಯೇಕವಾದ ಸೂಚಕಗಳನ್ನು ಬಳಸುವ ಬಗ್ಗೆ ಪರಿಶೀಲಿಸಬೇಕಾಗಿದೆ.

⇒ಬಿ.ಎನ್.ಭರತ್, ಬೆಂಗಳೂರು

--

ಕವನ

ಮೂರ್ಖರಾಗುತಿಹರು!

ಸುದ್ದಿ ಹರಿದಾಡುತ್ತಿದೆ
ಹಿಂದಿನ ಬಾರಿ ಆಪರೇಷನ್
ಮಾಡಿಸಿಕೊಂಡವರು
ಮತ್ತೆ ತವರುಮನೆಗೆ?
ಮೂರ್ಖರಾಗುತಿಹರು
ಮತದಾರರು ಕೊನೆಗೆ!

ಮಹಾಂತೇಶ ಮಾಗನೂರ

ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT