ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published : 19 ಆಗಸ್ಟ್ 2024, 0:53 IST
Last Updated : 19 ಆಗಸ್ಟ್ 2024, 0:53 IST
ಫಾಲೋ ಮಾಡಿ
Comments
ಕಡ್ಡಾಯವಾಗಿ ರೂಪಿಸಿ ದೂರು ಸಮಿತಿ

ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ, ಕೆಲಸದ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ, 10 ಅಥವಾ ಅದಕ್ಕಿಂತ ಹೆಚ್ಚಿನ ಮಹಿಳಾ ಉದ್ಯೋಗಿಗಳು ಕೆಲಸ ಮಾಡುತ್ತಿರುವ ಸಂಸ್ಥೆಯು ‘ಆಂತರಿಕ ದೂರು ಸಮಿತಿ’ಯನ್ನು ಕಡ್ಡಾಯವಾಗಿ ರೂಪಿಸಬೇಕು ಎಂಬ ನಿಯಮ ಇದೆ. ಇದನ್ನು ಅನುಷ್ಠಾನಗೊಳಿಸಲು ಆಗ್ರಹಿಸಿ ಸರ್ಕಾರಿ ಆದೇಶಗಳು ಮತ್ತೆ ಮತ್ತೆ ಜಾರಿಯಾಗುತ್ತಲೇ ಇವೆ. ಆದರೂ ಬಹಳಷ್ಟು ಕಡೆ ಈಗಲೂ ಈ ಸಮಿತಿಗಳು ರೂಪುಗೊಂಡಿಲ್ಲ.

ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಈ ಸಮಿತಿಯು ಮೊದಲ ಹಂತದಲ್ಲೇ ಸುರಕ್ಷತೆಯ ಅಭಯವನ್ನು ನೀಡುತ್ತದೆ. ಇದರಲ್ಲಿ ಸಂಸ್ಥೆಯವರಲ್ಲದೆ ಕಡ್ಡಾಯವಾಗಿ ಹೊರಗಿನ ತಜ್ಞರನ್ನೂ ಸದಸ್ಯರನ್ನಾಗಿ ನೇಮಿಸಿಕೊಳ್ಳಬೇಕಾಗಿರುತ್ತದೆ. ಹೀಗಾಗಿ, ಮಹಿಳಾ ಉದ್ಯೋಗಿಗಳು ತಮ್ಮ ಸಮಸ್ಯೆಗಳನ್ನು ಇಲ್ಲಿ ಮುಕ್ತವಾಗಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಕೆಲಸದ ಸ್ಥಳದಲ್ಲಿ ಆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯು ಪೊಲೀಸರ ಬಳಿ ದೂರು ದಾಖಲಿಸಲು ಹೋದಾಗಲೂ ಅವರು ಮೊದಲಿಗೆ ಈ ಆಂತರಿಕ ಸಮಿತಿಯ ವರದಿಯನ್ನು ಪರಿಶೀಲಿಸಿ, ಅದರ ಆಧಾರದಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳುತ್ತಾರೆ. ಹೀಗಾಗಿ, ಈ ಸಮಿತಿಗೆ ಒಂದು ಹಂತದ ಕಾನೂನಾತ್ಮಕ ಮಹತ್ವವಿದೆ. ಕೆಲಸದ ಸ್ಥಳಗಳಲ್ಲಿ ಎಲ್ಲೆಡೆಯೂ ಸಶಕ್ತ ಸಮಿತಿ ರೂಪುಗೊಳ್ಳುವಂತೆ ಮಹಿಳಾ ಸಂಘಟನೆಗಳೂ ಒತ್ತಡ ಹೇರಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಈಗಲಾದರೂ ವಿಕೇಂದ್ರೀಕೃತವಾಗಿ ಈ ದೂರು ಸಮಿತಿಗಳನ್ನು ಎಲ್ಲೆಡೆ ರೂಪಿಸಲು ಜವಾಬ್ದಾರಿ ವಹಿಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ನಿಯಮದ ಅನುಷ್ಠಾನಕ್ಕೆ ತುರ್ತಾಗಿ ಮುಂದಾಗಬೇಕು ಹಾಗೂ ಈ ಮೂಲಕ ಕೆಲಸದ ಸ್ಥಳದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯನ್ನು ಸರ್ಕಾರವು ಖಾತರಿಗೊಳಿಸಬೇಕು.

- ರೂಪ ಹಾಸನ, ಹಾಸನ

ಹೊರರಾಜ್ಯದ ಕನ್ನಡಿಗರಿಗೂ ಬೇಕು ಹಾಸ್ಟೆಲ್ ಸೌಲಭ್ಯ

ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಸತಿ ನಿಲಯಗಳ ಪ್ರವೇಶಕ್ಕೆ ಸಂಬಂಧಿಸಿದಂತೆ
ಪ್ರಕಟಣೆ ಹೊರಡಿಸಿದೆ. ಅದರಲ್ಲಿ, ಕರ್ನಾಟಕದ ನಿವಾಸಿಯಾಗಿರಬೇಕು ಎಂಬ ಅರ್ಹತೆಯ ಮೂಲಕ ಹೊರರಾಜ್ಯದ ಕನ್ನಡಿಗರ ಸೇರ್ಪಡೆಗೆ ತಡೆ ಒಡ್ಡಲಾಗಿದೆ. ಉದಾಹರಣೆಗೆ, ಆಂಧ್ರಪ್ರದೇಶದಲ್ಲಿ ಕನ್ನಡ ಮಾಧ್ಯಮ ಕಾಲೇಜುಗಳೇ ಇಲ್ಲ. ಹೀಗಾಗಿ, ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ಆಂಧ್ರ ಕನ್ನಡಿಗರು ಕಾಲೇಜು ಓದಿಗಾಗಿ ಅವಲಂಬಿಸುವುದು ಕರ್ನಾಟಕವನ್ನೇ. ಇವರಲ್ಲಿ ಹೆಚ್ಚಿನವರು ಬಡ ಹಾಗೂ ಮಧ್ಯಮ‌ ವರ್ಗದ ಕುಟುಂಬಗಳಿಗೆ ಸೇರಿದವರೇ ಆಗಿರುತ್ತಾರೆ.

ಕನ್ನಡ ಮಾಧ್ಯಮದ ಮಕ್ಕಳಿಗೆ ಊಟ–ವಸತಿ ಕಲ್ಪಿಸಿಕೊಡುವುದು ಕರ್ನಾಟಕ ಸರ್ಕಾರದ ಜವಾಬ್ದಾರಿ. ಅದಕ್ಕಾಗಿ ಕೂಡಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ‌, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿ ನಿಲಯಗಳಲ್ಲಿ ಆಂಧ್ರ ಒಳಗೊಂಡಂತೆ ಹೊರರಾಜ್ಯದ ಕನ್ನಡಿಗರೆಲ್ಲರಿಗೂ ಹಾಸ್ಟೆಲ್ ಸೇರಲು ಅವಕಾಶ ಮಾಡಿಕೊಡಬೇಕು.

-ರಂಗಸ್ವಾಮಿ ಮಾರ್ಲಬಂಡಿ, ದೊಡ್ಡ ಹರಿವಾಣ, ಆದವಾನಿ

ಪರೀಕ್ಷಾರ್ಥಿಗಳಿಗೆ ಹೊರೆಯಾಗದಿರಲಿ

ಈ ತಿಂಗಳ 27ರಂದು ಆಯೋಜನೆಗೊಂಡಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಅಭ್ಯರ್ಥಿಗಳು ತಾವು ವಾಸವಿರುವ ಜಿಲ್ಲೆಯ ಬದಲಿಗೆ ಹೊರ ಜಿಲ್ಲೆಗಳಲ್ಲಿ ಬರೆಯಬೇಕಾಗಿದೆ. ಮೈಸೂರಿನ ಅಭ್ಯರ್ಥಿ ಚಿಕ್ಕಮಗಳೂರಿನಲ್ಲಿ ಪರೀಕ್ಷೆ ಬರೆಯಬೇಕಾದರೆ ಅವನು ಪರೀಕ್ಷೆಯ ಹಿಂದಿನ ದಿನವೇ ಆ ಊರನ್ನು ತಲುಪಬೇಕಾಗುತ್ತದೆ. ಇದು ಅಭ್ಯರ್ಥಿಗಳ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಇದೇ ಮಾದರಿಯನ್ನು ಕೇಂದ್ರ ಲೋಕಸೇವಾ ಆಯೋಗವೂ ಅನುಸರಿಸಿದರೆ, ಕರ್ನಾಟಕದ ಅಭ್ಯರ್ಥಿಗಳು ಹೊರ ರಾಜ್ಯಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ ಎಂಬುದನ್ನು ನೆನಪಿಡಬೇಕು.

- ಪ್ರಶಾಂತ್, ಚಾಮರಾಜನಗರ 

ಈ ಗ್ರಂಥಾಲಯ 24/7 ಬಂದ್‌!

ಸಾರ್ವಜನಿಕ ಗ್ರಂಥಾಲಯಗಳ ಮಹತ್ವವನ್ನು ವಿವರಿಸುವ ರಾಜಕುಮಾರ ಕುಲಕರ್ಣಿ ಅವರ ಲೇಖನವನ್ನು (ಸಂಗತ, ಆ. 17) ಓದಿ ಮನಸ್ಸಿಗೆ ಪಿಚ್ಚೆನ್ನಿಸಿತು. ನನ್ನದು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಪುಟ್ಟ ಗ್ರಾಮ ಯರಗುಪ್ಪಿ. ತಾಲ್ಲೂಕಿಗೆ ನಾಲ್ವರು ಶಾಸಕರನ್ನು ನೀಡಿದ (ಹಾಲಿ ಶಾಸಕರನ್ನೂ ಸೇರಿಸಿ) ಗ್ರಾಮ ನಮ್ಮದಾದರೂ ಒಂದೂ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ನಮ್ಮೂರಲ್ಲಿ ಇಲ್ಲದಿರುವುದು ದುರದೃಷ್ಟಕರ.

ಗ್ರಾಮದಲ್ಲಿ ಮೂರು ಕನ್ನಡ ಶಾಲೆ, ಒಂದು ಪಿಯು ಕಾಲೇಜು, ಒಂದು ಉರ್ದು ಶಾಲೆ, ಒಂದು ಕಾನ್ವೆಂಟ್ ಮತ್ತು ಅಂಗನವಾಡಿ ಇದ್ದರೂ ಇಲ್ಲಿನ ಮಕ್ಕಳಿಗೆ ಸಾರ್ವಜನಿಕ ಗ್ರಂಥಾಲಯದ ಪ್ರಯೋಜನ ಸಿಗುತ್ತಿಲ್ಲ. ಹಳೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿರುವ ಗ್ರಂಥಾಲಯದ ಬೀಗ ತೆರೆದು ದಶಕಗಳೇ ಕಳೆದಿವೆ. ಅಲ್ಲಿ ಯಾವ ಪುಸ್ತಕಗಳಿವೆ, ಅಲ್ಲಿನ ಗ್ರಂಥಪಾಲಕ ಯಾರು ಎಂಬುವು ಯಕ್ಷಪ್ರಶ್ನೆಗಳಾಗಿವೆ. ಗ್ರಂಥಾಲಯ ಕಟ್ಟಡದ ಪಕ್ಕ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುವುದು, ತ್ಯಾಜ್ಯ ಎಸೆಯುವ ಕೆಲಸ ಮಾಡುತ್ತಿದ್ದಾರೆ. ಆಸ್ತಿ ತೆರಿಗೆಯಲ್ಲಿ ಮಾತ್ರ ಗ್ರಂಥಾಲಯ ಕರ ವಸೂಲಿ ಮಾಡುವ ಪಂಚಾಯಿತಿಯವರು, ಗ್ರಂಥಾಲಯ ನಿರ್ವಹಣೆ ಮಾಡಲು ಆಸಕ್ತಿ ತೋರುತ್ತಿಲ್ಲ. ಸರ್ಕಾರದ ಅರಿವು ಯೋಜನೆ, ಡಿಜಿಟಲ್ ಲೈಬ್ರರಿ, ಮಕ್ಕಳಸ್ನೇಹಿ ಗ್ರಂಥಾಲಯ ಎಲ್ಲವೂ ನಮ್ಮೂರಲ್ಲಿ ಬರೀ ಪತ್ರಿಕೆಯಲ್ಲಿ ಬರುವ ವಿಷಯಗಳಾಗಿಯೇ ಉಳಿದಿವೆ.

- ಬಸನಗೌಡ ಪಾಟೀಲ, ಯರಗುಪ್ಪಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT