ನಾಗರಿಕರ ಖಾಸಗಿ ಹಕ್ಕಿಗೆ ಸಂದ ಗೆಲುವು

ವಿರೋಧಪಕ್ಷಗಳ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸುವ ನಿರ್ಧಾರದಿಂದ ಹಿಂದಡಿ ಇಟ್ಟಿದೆ. ಇದು ಭಾರತದ ನಾಗರಿಕರ ಖಾಸಗಿತನದ ಮೂಲಭೂತ ಹಕ್ಕಿಗೆ ದಕ್ಕಿದ ಗೆಲುವು. ಸರ್ಕಾರವು ತಂತ್ರಜ್ಞಾನ ಬಳಸಿದರೂ, ಅದು ಜನರ ಹಕ್ಕುಗಳನ್ನು ಗೌರವಿಸಬೇಕು. ಮೊಬೈಲ್ಗಳಲ್ಲಿ ಕಣ್ಗಾವಲು ಸಾಧನ ಕಡ್ಡಾಯಗೊಳಿಸುವ ಪ್ರಯತ್ನದ ವಿರುದ್ಧ ಜನರು ಮತ್ತು ತಂತ್ರಜ್ಞಾನ ಕಂಪನಿಗಳು ಧ್ವನಿ ಎತ್ತಿದ್ದು, ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣ. ಈ ಆ್ಯಪ್ ಕಳವಾದ ಅಥವಾ ಕಳೆದುಹೋದ ಮೊಬೈಲ್ ಟ್ರ್ಯಾಕ್ ಮಾಡಲು ಉಪಯುಕ್ತವಾಗಿದ್ದರೂ, ‘ಕಡ್ಡಾಯ ಅಳವಡಿಕೆ’ ಅನಗತ್ಯ ಕಣ್ಗಾವಲಿಗೆ ಅನುವು ಮಾಡಿಕೊಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

⇒ಲಾರೆನ್ಸ್ ಡಿಸೋಜಾ, ರಾಯಚೂರು

ಅಡಿಕೆ ಬೆಳೆಗಾರರಿಗೆ ಬೇಕಿದೆ ಸಹಾಯಹಸ್ತ

ಮಲೆನಾಡಿನಾದ್ಯಂತ ಎಲೆಚುಕ್ಕಿ ಮತ್ತು ಕೊಳೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಎಚ್ಚತ್ತುಕೊಳ್ಳಬೇಕು. ಬಜೆಟ್ನಲ್ಲಿ ಘೋಷಿಸಿದ ₹62 ಕೋಟಿ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಅನುದಾನವಿಲ್ಲದೆ ಸ್ಥಗಿತಗೊಂಡಿರುವ ಅಡಿಕೆ ಸಂಶೋಧನಾ ಕೇಂದ್ರಗಳನ್ನು ತಕ್ಷಣ ಪುನರಾರಂಭಿಸಿ, ರೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗೋಪಾಯ ಕಂಡುಕೊಳ್ಳಬೇಕು. ಸಾಲದ ಮೇಲಿನ ಬಡ್ಡಿ ಮನ್ನಾ ಮತ್ತು ಮರುಪಾವತಿ ಅವಧಿ ವಿಸ್ತರಣೆ ಮಾಡಿ, ಕಂಗಾಲಾಗಿರುವ ರೈತರ ಬದುಕಿಗೆ ಆರ್ಥಿಕ ಶಕ್ತಿ ತುಂಬಬೇಕು. ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದು.

⇒ನಿರಂಜನ್, ಶಿವಮೊಗ್ಗ

ನಿವೃತ್ತರಿಗೆ ಸೌಲಭ್ಯ: ಕೆಎಂಎಫ್ ಮಾದರಿ

ಮಹಾಲೇಖಪಾಲರ (ಎಜಿ) ಕಚೇರಿಯಲ್ಲಿನ ಅವ್ಯವಸ್ಥೆಯಿಂದ ಸರ್ಕಾರಿ ನಿವೃತ್ತ
ನೌಕರರು ಸಕಾಲದಲ್ಲಿ ಪಿಂಚಣಿ ಸೌಲಭ್ಯ ದೊರೆಯದೆ ನೋವು ಅನುಭವಿಸುತ್ತಿ ದ್ದಾರೆ. ಇಂತಹದ್ದೇ ಸ್ಥಿತಿಯನ್ನು ಹಿಂದೆ ಕೆಎಂಎಫ್ನ ನಿವೃತ್ತ ಸಿಬ್ಬಂದಿಯೂ ಅನುಭವಿಸುತ್ತಿದ್ದುದು ಉಂಟು. 1996–97ರಿಂದ ಹೊಸ ವ್ಯವಸ್ಥೆ ಜಾರಿ ಗೊಂಡಿದ್ದು, ನೌಕರರು ಮತ್ತು ಸಿಬ್ಬಂದಿ ನಿವೃತ್ತಿ ಹೊಂದಿದ ದಿನವೇ ಅವರಿಗೆ ಸಲ್ಲಬೇಕಾದ ಎಲ್ಲಾ ಆರ್ಥಿಕ ಸೌಲಭ್ಯವನ್ನು ಚೆಕ್ ಮೂಲಕ ನೀಡಲಾಗುತ್ತಿದೆ. ಈಗಲೂ ಅದೇ ವ್ಯವಸ್ಥೆಯಿದೆ. ಸಿಬ್ಬಂದಿ ನಿವೃತ್ತರಾಗುವ ಮೂರು ತಿಂಗಳ ಮುಂಚಿತವಾಗಿಯೇ ಅವರ ಸೇವಾವಧಿಯ ಎಲ್ಲಾ ಪೂರ್ವಾಪರ ಮಾಹಿತಿಯನ್ನು ಅವರು ಸೇವೆ ಸಲ್ಲಿಸಿದ ಘಟಕ, ವಿಭಾಗದಿಂದ ಪಡೆದುಕೊಂಡು, ಅವರಿಂದ ಸಂಸ್ಥೆಗೆ ಯಾವುದೇ ಬೇಬಾಕಿ ಇಲ್ಲವೆಂದು ಖಚಿತಪಡಿಸಿಕೊಂಡು ಪೂರ್ಣ ಮೊತ್ತ ನೀಡಲಾಗುತ್ತಿದೆ. ಎಲ್ಲಾ ಇಲಾಖೆ ಮತ್ತು ಸಂಸ್ಥೆಗಳು ಈ ಮಾದರಿ ಅಳವಡಿಸಿ ಕೊಳ್ಳುವುದು ಉತ್ತಮ.

⇒ಡಿ. ಪ್ರಸನ್ನಕುಮಾರ್, ಬೆಂಗಳೂರು

ಸರ್ಕಾರ ‘ಭ್ರಷ್ಟಾಚಾರ ಇಲಾಖೆ’ ರಚಿಸಲಿ

ಕರ್ನಾಟಕದಲ್ಲಿ ಶೇ 63ರಷ್ಟು ಭ್ರಷ್ಟಾಚಾರ ಇದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರ ಹೇಳಿಕೆ ಆತಂಕ ಹುಟ್ಟಿಸುವಂತಿದೆ. ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಹಿಂದಿನ ಬಿಜೆಪಿ ಆಡಳಿತವು ಕಾಮಗಾರಿಗಳಿಗೆ ಶೇ 40ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ತುತ್ತೂರಿ ಊದಿತ್ತು. ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುತ್ತೇವೆ ಎಂದು ಹೇಳಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಿತು. ಈಗ ಉಪ ಲೋಕಾಯುಕ್ತರ ಹೇಳಿಕೆಯು ಕಾಂಗ್ರೆಸ್ ನೀಡಿದ್ದ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ಸುಳ್ಳು ಎಂಬುದನ್ನು ಸಾಕ್ಷೀಕರಿಸಿದೆ. ಸರ್ಕಾರವು ಹೊಸದಾಗಿ ‘ಭ್ರಷ್ಟಾಚಾರ ಇಲಾಖೆ’ಯನ್ನು ಸೃಷ್ಟಿಸಿದರೆ ಹಲವು ಅತೃಪ್ತ ಶಾಸಕರಿಗೆ ಮಂತ್ರಿಗಿರಿ ಭಾಗ್ಯವಾದರೂ ಸಿಗುತ್ತದೆ. ಈ ಇಲಾಖೆಯ ನಿರ್ವಹಣೆಗೆ ನೂಕುನುಗ್ಗಲು ಶುರುವಾದರೂ ಅಚ್ಚರಿಪಡಬೇಕಿಲ್ಲ.

⇒ರಮೇಶ್, ಬೆಂಗಳೂರು

ಡಿಜಿಟಲ್ ಇ–ಸ್ಟ್ಯಾಂಪ್: ದಿಟ್ಟ ನಿರ್ಧಾರ

ಕಂದಾಯ ಇಲಾಖೆಯು ಡಿಜಿಟಲ್ ಇ–ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು ಕೇಂದ್ರಗಳಲ್ಲಿ ನಾಗರಿಕರು ಸ್ಟ್ಯಾಂಪ್ ಪಡೆಯಲು ಸರದಿಯಲ್ಲಿ ನಿಂತು ಪರದಾಡುತ್ತಿದ್ದಾರೆ. ಹೊಸ ವ್ಯವಸ್ಥೆಯಿಂದ ಮನೆಯಲ್ಲಿಯೇ ಕುಳಿತು ತಮ್ಮ ದಾಖಲೆಗಳನ್ನು ಪಡೆದುಕೊಳ್ಳಲಿದ್ದಾರೆ. ಮತ್ತೊಂದೆಡೆ ಸ್ಟ್ಯಾಂಪ್ ಪಡೆಯುವಾಗ ಅವ್ಯವಹಾರ ಸಾಮಾನ್ಯವಾಗಿತ್ತು. ಇಲಾಖೆಗೆ ಇದು ತಲೆನೋವಾಗಿತ್ತು. ಹೊಸ ವ್ಯವಸ್ಥೆಯಿಂದ ಈ ಅಕ್ರಮಕ್ಕೆ ಕಡಿವಾಣ ಬೀಳಲಿದೆ.

⇒ಬೀರಪ್ಪ ಡಿ. ಡಂಬಳಿ, ಅಥಣಿ

ಅಂಗನವಾಡಿ ನೌಕರರ ಬಗ್ಗೆ ಅನಾದರ

ಗ್ರಾಮೀಣ ಮತ್ತು ಬಡವರ್ಗದ ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಅಪೌಷ್ಟಿಕತೆ ನಿಯಂತ್ರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಹಿರಿದು. ಮಹಿಳೆಯರ ತಾಯ್ತನದ ಆರೈಕೆ ಪ್ರಕ್ರಿಯೆಯಲ್ಲೂ ಅವರ ಸೇವೆಯನ್ನು ಅಲ್ಲಗಳೆಯುವಂತಿಲ್ಲ. ಮಕ್ಕಳ ಆರೈಕೆಯಲ್ಲೂ ಕಾಳಜಿ ವಹಿಸುತ್ತಾರೆ. ಸರ್ಕಾರ ನಡೆಸುವ ಹಲವು ಸಮೀಕ್ಷೆಗಳು, ಮತದಾರರ ಪಟ್ಟಿಯ ನೋಂದಣಿಗೂ ಶ್ರಮಿಸುತ್ತಾರೆ. ಆದರೆ, ಅವರ ಸೇವೆಗೆ ನೀಡುತ್ತಿರುವ ಗೌರವಧನ ಅತ್ಯಲ್ಪ. ವಿಧಾನಮಂಡಲದ ಅಧಿವೇಶನದ ವೇಳೆ ಅವರ ಹೋರಾಟ ನಡೆಯುತ್ತಲೇ ಇರುತ್ತದೆ. ಆದರೆ, ಆಳುವ ವರ್ಗವು ಅವರ ಧ್ವನಿ ಕೇಳಿಸಿಕೊಳ್ಳದೆ ಕಿವುಡಾಗಿದೆ. ಸದ್ಯ ನೀಡುತ್ತಿರುವ ಗೌರವಧನದಿಂದ ಅವರು ಐಷಾರಾಮಿ ಜೀವನ ನಡೆಸಲು ಆಗುವುದಿಲ್ಲ. ಕನಿಷ್ಠ ಕುಟುಂಬದ ನಿರ್ವಹಣೆಗೆ ಅಗತ್ಯ ಇರುವಷ್ಟು ಸಂಬಳ ಕೇಳುವುದು ಅವರ ಹಕ್ಕಲ್ಲವೆ?

ಭಾಸ್ಕರ ಸುಧೀಂದ್ರ ತಳಕೇರಿ, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.