ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 4 ಜೂನ್ 2024, 0:26 IST
Last Updated 4 ಜೂನ್ 2024, 0:26 IST
ಅಕ್ಷರ ಗಾತ್ರ

ಶಾಲೆಯ ಪರಿಸರ ಮಕ್ಕಳನ್ನು ಸೆಳೆಯಲಿ

ಅಥಣಿ ತಾಲ್ಲೂಕಿನ ಅಡಹಳ್ಳಟ್ಟಿಯ ಹಿಪ್ಪರಗಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣನೀಯವಾಗಿ ಕುಸಿದಿರುವ ಮಕ್ಕಳ ದಾಖಲಾತಿ ಹೆಚ್ಚಿಸುವ ಕ್ರಮವಾಗಿ, ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಹೆಸರಿನಲ್ಲಿ ಮುಖ್ಯ ಶಿಕ್ಷಕರು ಸ್ವಂತ ಹಣದಿಂದ ₹ 1,000 ಠೇವಣಿ ಇರಿಸಲು ಮುಂದಾಗಿರುವ ಬಗ್ಗೆ ವರದಿಯಾಗಿದೆ (ಪ್ರ.ವಾ., ಜೂನ್‌ 3). ಮುಖ್ಯ ಶಿಕ್ಷಕರ ಈ ನಡೆ ಮೇಲ್ನೋಟಕ್ಕೆ ಶ್ಲಾಘನೀಯ ಎನಿಸಿದರೂ ಇದು ಸಮಸ್ಯೆಗೆ ಪರಿಹಾರವಲ್ಲ.

ಶಿಕ್ಷಕರ ಮತ್ತು ಮೂಲ ಸೌಕರ್ಯದ ಕೊರತೆಯು ಶಾಲೆಯಲ್ಲಿ ದಾಖಲಾತಿ ಕುಸಿಯಲು ಕಾರಣ ಎಂದು ವರದಿಯಾಗಿದೆ. ಹೀಗಾಗಿ, ಸರ್ಕಾರವು ಶಾಲೆಗೆ ಅಗತ್ಯವಾದ ಶಿಕ್ಷಕರನ್ನು ನೇಮಿಸಬೇಕು ಮತ್ತು ಶಾಲೆಗೆ ಉತ್ತಮ ಕಟ್ಟಡ, ಅದರ ಸುತ್ತ ಕಾಂಪೌಂಡ್, ಅಗತ್ಯ ಪೀಠೋಪಕರಣ, ಪಾಠೋಪಕರಣ, ಆಟದ ಮೈದಾನ, ಶೌಚಾಲಯ, ನೀರಿನಂತಹ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಈ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕೇ ವಿನಾ ಮುಖ್ಯ ಶಿಕ್ಷಕರ ಠೇವಣಿ ಹಣದ ಯೋಜನೆಯಿಂದ ಅಲ್ಲ. ಶಾಲೆಯ ಪರಿಸರ, ಅಲ್ಲಿ ನಡೆಯುವ ಪಾಠ-ಪ್ರವಚನ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಂತಹವು ಮಕ್ಕಳನ್ನು ಶಾಲೆಗೆ ಸೆಳೆದಾಗ ಮಾತ್ರವೇ ಅದಕ್ಕೊಂದು ಸೊಗಸು ಪ್ರಾಪ್ತವಾಗುವುದು.

⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು  

ಯುವಜನರಿಂದ ಅಡ್ಡಮಾರ್ಗ: ವ್ಯವಸ್ಥೆಯೇ ಹೊಣೆ

ಪುಣೆಯ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿ ಬಾಲಕನ ಕುಟುಂಬಸ್ಥರು ಆತನನ್ನು ರಕ್ಷಿಸಲು ಹಲವು ಅಡ್ಡಮಾರ್ಗಗಳನ್ನು ಹಿಡಿದಿರುವುದನ್ನು ಮುಂದಿಟ್ಟು, ಇಂದಿನ ಯುವಜನರ ವರ್ತನೆಗಳನ್ನು ಚನ್ನು ಅ. ಹಿರೇಮಠ ಅವರು ವಿಶ್ಲೇಷಿಸಿರುವುದು (ಸಂಗತ, ಜೂನ್ 1) ಸರಿಯಾಗಿದೆ. ಅವರು ಲೇಖನದಲ್ಲಿ ಸೂಚಿಸಿರುವ ಎಲ್ಲಾ ಅಂಶಗಳು ಒಂದಲ್ಲ ಒಂದು ರೀತಿಯಲ್ಲಿ ಸಮಾಜದಲ್ಲಿನ ಅವಾಂತರಗಳಿಗೆ ಅದರಲ್ಲಿಯೂ ಯುವಕರ ಮೇಲಿನ ಪ್ರಭಾವಕ್ಕೆ ಕಾರಣಗಳಾಗಿವೆ ಎಂಬುದು ದಿಟವಾದರೂ, ಇವೆಲ್ಲಕ್ಕಿಂತ ಹೆಚ್ಚಾಗಿ ಈ ಅಪಸವ್ಯಗಳನ್ನು ಸಹಜ ಕ್ರಿಯೆಗಳೆಂದು ಒಪ್ಪಿ, ಅಪ್ಪಿ ನಡೆಯುತ್ತಿರುವ ಇಡೀ ವ್ಯವಸ್ಥೆಯೇ ಇದಕ್ಕೆ ಮೂಲ ಕಾರಣ ಎಂಬುದೂ ಅಷ್ಟೇ ದಿಟ. ಅವಾಂತರಗಳನ್ನು ಸೃಷ್ಟಿಸುವವರಿಗೆ ಈ ಕಾರಣಕ್ಕಾಗಿಯೇ ಆ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪ, ವಿಷಾದ ಇಲ್ಲದಿರುವುದು.

ವಿಲಕ್ಷಣವನ್ನೇ ಲಕ್ಷಣವೆಂದು, ಭ್ರಷ್ಟಾಚಾರವನ್ನೇ ಸದಾಚಾರವೆಂದು, ಭೋಗಲಾಲಸೆಯೇ ಬದುಕಿನ ಉದ್ದೇಶವೆಂದು, ವಿಕೃತಿಯನ್ನೇ ಸುಕೃತಿಯೆಂದು ಸಮಾಜ ಇಷ್ಟಕ್ಕೋ ಕಷ್ಟಕ್ಕೋ ಒಪ್ಪಿಕೊಂಡಂತಿದೆ. ತಪ್ಪುಗಳನ್ನೇ ಸಹಜ ನಡವಳಿಕೆಗಳೆಂದು ಮುಗ್ಧ ಮನಸ್ಸುಗಳ ಮೇಲೆ ಬಲವಂತದ ಹೇರಿಕೆ ಮಾಡುತ್ತಿರುವ, ಅದರ ಅರಿವಿಲ್ಲದೆ ಅಸಹಾಯಕ ಕಣ್ಣುಗಳಿಂದ ನೋಡುತ್ತಿರುವ ಈ ಎರಡು ವರ್ಗಕ್ಕೂ ಚಿಕಿತ್ಸೆ ಕೊಡಬೇಕಾದುದು ಈ ಹೊತ್ತಿನ ತುರ್ತು. ಆದರೆ ಈ ಹೊಣೆಗಾರಿಕೆಯನ್ನು ಹೊರುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.

⇒ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ

ಶೀಘ್ರ ಫಲಿತಾಂಶ: ಮಾದರಿ ವಿ.ವಿ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಎಂಜಿನಿಯರಿಂಗ್‌ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್‌ನ ಫಲಿತಾಂಶವನ್ನು ಇತ್ತೀಚೆಗೆ ಪರೀಕ್ಷೆ ನಡೆದ 3 ಗಂಟೆಗಳ ಅವಧಿಯಲ್ಲೇ ಪ್ರಕಟಿಸುವ ಮೂಲಕ ದಾಖಲೆ ನಿರ್ಮಿಸಿರುವುದು ಶ್ಲಾಘನೀಯ. ಸಂಜೆ 5 ಗಂಟೆಗೆ ಪರೀಕ್ಷೆ ಕೊನೆಗೊಂಡಿದ್ದು, 42,323 ವಿದ್ಯಾರ್ಥಿಗಳ ಫಲಿತಾಂಶ ಅದೇ ದಿನ ರಾತ್ರಿ 8 ಗಂಟೆಯ ವೇಳೆಗೆ ಪ್ರಕಟವಾಯಿತು. ಫಲಿತಾಂಶವನ್ನು ವಾಟ್ಸ್ಆ್ಯಪ್‌ನಲ್ಲಿ ಕೂಡ ಹಂಚಿಕೊಳ್ಳಲಾಯಿತು.

ಹಿಂದೆಲ್ಲಾ ಪರೀಕ್ಷೆ ನಡೆದ ಅನೇಕ ದಿನಗಳ ನಂತರ ಫಲಿತಾಂಶ ಪ್ರಕಟವಾಗುತ್ತಿತ್ತು. ಅದಕ್ಕೆಲ್ಲಾ ಬೇರೆ ಬೇರೆ ಕಾರಣಗಳಿರಬಹುದು. ಇತ್ತೀಚಿನ ವರ್ಷಗಳಲ್ಲಿ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶಗಳು ಸಹ ಬೇಗ ಪ್ರಕಟವಾಗುತ್ತಿವೆ. ಫಲಿತಾಂಶಗಳು ಬೇಗ ಪ್ರಕಟವಾದರೆ, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಚಟುವಟಿಕೆಗೆ ಅಥವಾ ಉದ್ಯೋಗಕ್ಕೆ ನೆರವಾಗುತ್ತದೆ. ಈ ದಿಸೆಯಲ್ಲಿ ವಿಟಿಯು ಉಳಿದ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿದೆ.

⇒ಕೆ.ವಿ.ವಾಸು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT