ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 6 ಜೂನ್ 2024, 0:26 IST
Last Updated 6 ಜೂನ್ 2024, 0:26 IST
ಅಕ್ಷರ ಗಾತ್ರ

ಮತಗಟ್ಟೆ ಸಮೀಕ್ಷೆ: ಹುಸಿಯಾದ ನಂಬಿಕೆ

ಮತಗಟ್ಟೆ ಸಮೀಕ್ಷೆಗಳನ್ನು ನಂಬಬಾರದು ಎಂಬುದು ಈಗ ಮತ್ತೊಮ್ಮೆ ಸ್ಪಷ್ಟವಾಗಿದೆ. ಈ ಬಾರಿಯ ಮತಗಟ್ಟೆ ಸಮೀಕ್ಷೆಗಳಿಗೂ ಫಲಿತಾಂಶಕ್ಕೂ ಕೊಂಚವೂ ಹೊಂದಾಣಿಕೆ ಆಗಿಲ್ಲ. ಈ ಹಿಂದೆ, ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶದ ವಿಚಾರದಲ್ಲಿಯೂ ಹೀಗೇ ಆಗಿತ್ತು. ಬಹುಪಾಲು ಮತಗಟ್ಟೆ ಸಮೀಕ್ಷೆಗಳಿಗೂ ಫಲಿತಾಂಶಕ್ಕೂ ಹೊಂದಾಣಿಕೆಯಾಗಿರಲಿಲ್ಲ. ಮತದಾರರ ಒಲವು–ನಿಲುವು ಅರಿಯುವಲ್ಲಿ ಅವು ಸೋಲುತ್ತಿವೆ ಎಂಬುದಕ್ಕೆ ಇದಕ್ಕಿಂತ ಪುರಾವೆ ಬೇಕಿಲ್ಲ. ಗೋಪ್ಯತೆಯನ್ನು ಮತದಾರ ಅಷ್ಟು ಸಲೀಸಾಗಿ ಬಿಟ್ಟುಕೊಡುವುದಿಲ್ಲ ಎಂಬ ಸತ್ಯವನ್ನು ಸಮೀಕ್ಷೆ ನಡೆಸುವವರು ಅರಿಯಬೇಕು. 

ದೇಶದ ಜನ ಯಾರನ್ನೂ ಸರ್ವಾಧಿಕಾರಿಯಾಗಲು ಬಿಡುವುದಿಲ್ಲ ಎನ್ನುವುದು ಇತಿಹಾಸದಿಂದ ತಿಳಿಯುತ್ತದೆ. ರಾಜಕಾರಣಿಗಳು ಸುಳ್ಳು ಹೇಳಿ ಮತ ಗಳಿಸುವುದನ್ನು ಜನಸಾಮಾನ್ಯರು ಹೆಚ್ಚು ದಿನ ಸಹಿಸುವುದಿಲ್ಲ ಎನ್ನುವುದನ್ನೂ ಈ ಫಲಿತಾಂಶ ತಿಳಿಸುತ್ತದೆ. ಮುಂದಿನ ದಿನಗಳಲ್ಲಿ ನಾವು ಜನಸಾಮಾನ್ಯರು ಜಾತಿ, ಧರ್ಮ, ಹಣ, ಮದ್ಯದಂತಹ ಆಮಿಷಗಳಿಗೆ ಒಳಗಾಗದೆ, ಯಾವುದೇ ಪಕ್ಷದವರಾಗಿರಲಿ, ಅವರ ವ್ಯಕ್ತಿತ್ವವನ್ನು ಗುರುತಿಸಿ, ಇರುವುದರಲ್ಲಿ ಉತ್ತಮ ಎನಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಅದರಲ್ಲೂ ಯುವಪೀಳಿಗೆ ಮನಸ್ಸು ಮಾಡಿದರೆ ಇದೇನೂ ಕಷ್ಟವಲ್ಲ. ನಮ್ಮ ಯುವಕರು ಸಮೂಹ ಸನ್ನಿಗೆ ಒಳಗಾಗಬಾರದು. ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಮುಂದಿನ ಪೀಳಿಗೆಯ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ ಚಲಾಯಿಸಬೇಕು. 

ಕೃಷ್ಣಮೂರ್ತಿ ಹಿಳ್ಳೋಡಿ, ಶಿವಮೊಗ್ಗ 

ಗುಂಡಿ ತೋಡಿ, ಮುಚ್ಚುವ ಈ ಕಾಯಕ...!

ಸೋಮ, ಭೀಮ ಮತ್ತು ರಾಮ ಎಂಬ ಸ್ನೇಹಿತರು ಷರತ್ತಿಗೊಳಪಟ್ಟು ರಸ್ತೆಬದಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿರುತ್ತಾರೆ. ಸೋಮ ಗುಂಡಿ ತೋಡುವುದು, ಭೀಮ ಗಿಡ ನೆಡುವುದು ಹಾಗೂ ರಾಮ ಗುಂಡಿ ಮುಚ್ಚುವ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ. ಒಂದು ದಿನ ಭೀಮನಿಗೆ ಕೆಲಸಕ್ಕೆ ಬರಲು ಆಗುವುದಿಲ್ಲ. ಆದರೆ ಆಗಲೂ ಸೋಮ ಮತ್ತು ರಾಮ ತಮ್ಮ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ‘ತಮ್ಮಂದಿರಾ, ಇದೇನು ಮಾಡುತ್ತಿರುವಿರಿ? ನೀನೊಬ್ಬ ಗುಂಡಿ ತೋಡುತ್ತಿದ್ದೀಯೆ, ಈತ ಅದನ್ನು ಮುಚ್ಚುತ್ತಿದ್ದಾನೆ. ಇದರಲ್ಲಿ ಗಿಡ ನೆಡದೇ ಇರುವುದರಿಂದ ನಿಮ್ಮ ಶ್ರಮ ವ್ಯರ್ಥವಾಗುತ್ತಿದೆಯಲ್ಲವೇ?’ ಎಂದು ಕೇಳಿದಾಗ, ‘ಅದು ಹೇಗೆ ನಮ್ಮ ಶ್ರಮ ವ್ಯರ್ಥ ಎಂದು ಹೇಳುತ್ತೀರಿ? ಗಿಡ ನೆಡಬೇಕಾದ ಭೀಮ‌ ಕೆಲಸಕ್ಕೆ ಬಂದಿಲ್ಲ. ಆದರೆ ನಾವು ನಮ್ಮ ಪಾಲಿನ ಕಾರ್ಯವನ್ನು ತುಂಬಾ ಶ್ರದ್ಧೆಯಿಂದಲೇ ಮಾಡುತ್ತಿದ್ದೇವೆ’ ಎಂದು ಇಬ್ಬರೂ ವಾದಿಸುತ್ತಾರೆ.

ಈ ಪುಟ್ಟ ಕಥೆ ಕೇಳಲು ತಮಾಷೆಯಾಗಿ ಇದೆಯಾದರೂ ಪ್ರತಿ ವರ್ಷವೂ ಪರಿಸರ ದಿನಾಚರಣೆಯ ಅಂಗವಾಗಿ ರಸ್ತೆಯ ಇಕ್ಕೆಲಗಳಲ್ಲಿ, ಶಾಲಾ ಕಾಲೇಜುಗಳ ಆವರಣದಲ್ಲಿ ನೆಟ್ಟಿರುವ ಗಿಡಮರಗಳು ಕಾಣೆಯಾಗಿ, ಗುಂಡಿ ತೋಡಿ ಮುಚ್ಚಿರುವಂತೆ ಕಾಣುತ್ತಿರುವುದು ಸಾಮಾನ್ಯರಿಗೂ ತಿಳಿಯದ ಸಂಗತಿಯೇನಲ್ಲ. ಇಂದಿನ ಹಾಗೂ ಮುಂದಿನ ಪೀಳಿಗೆಗಾಗಿ ನಿರಂತರವಾಗಿ ಗಿಡಮರಗಳನ್ನು ಬೆಳೆಸಿ ಸಂರಕ್ಷಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡ ನೆಟ್ಟು ಬರ ಅಟ್ಟು, ಮನೆಗೊಂದು ಮರ ಊರಿಗೊಂದು ವನ, ಕಾಡಿನ ಹಸಿರು ನಮ್ಮೆಲ್ಲರ ಉಸಿರು... ಹೀಗೆ ಪರಿಸರದ ಮಹತ್ವ ಸಾರುವ ಘೋಷಣೆಗಳೊಂದಿಗೆ ಜಾಗೃತಿ ಮೂಡಿಸುತ್ತ ಸಸಿಗಳನ್ನು ನೆಡುತ್ತಿರುವ ಕಾರ್ಯ ಶ್ಲಾಘನೀಯ. ಆದರೂ ಪ್ರತಿ ವರ್ಷ ನೆಟ್ಟಿರುವ ಅಷ್ಟೂ ಗಿಡಗಳೆಲ್ಲ ಬೆಳೆದು ನಿಂತಿದ್ದರೆ ಸಾಲು ಮರದ ತಿಮ್ಮಕ್ಕನ ನೆರಳು ನಮಗೆಲ್ಲ ಸೋಕಿರುತ್ತಿತ್ತು. ಬರೀ ಪರಿಸರ ದಿನಾಚರಣೆಯಂದು ಗಿಡ ನೆಡುವಂತೆ ಪೋಸು ಕೊಟ್ಟು, ‘ಪರಿಸರ ದಿನ ಆಚರಿಸಿದ್ದೇವೆ’ ಎಂದು ಹೆಮ್ಮೆಪಡುವ ಬದಲು, ಇದುವರೆಗೂ ನೆಟ್ಟ ಗಿಡಗಳಲ್ಲಿ ಎಷ್ಟು ಬೆಳೆದು ನಿಂತಿವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವೈಜ್ಞಾನಿಕವಾಗಿ ಗಿಡಮರಗಳನ್ನು ನೆಡುವುದು, ಅಭಿವೃದ್ಧಿಯ ನೆಪದಲ್ಲಿ ಮತ್ತೆ ಅವುಗಳ ಮಾರಣಹೋಮ ಮಾಡುವುದು ಎಷ್ಟು ಸರಿ ಎಂಬುದರ ಬಗ್ಗೆಯೂ ಯೋಚಿಸಬೇಕಿದೆ.

⇒ರವಿ ಕಂಗಳ, ಬಾದಾಮಿ

ನೆಹರೂ ಜೊತೆಗಿನ ಹೋಲಿಕೆ ಸರಿಯೇ?

‘ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ದಾಖಲೆ ಬರೆದಿದ್ದರು. ಅವರ ನಂತರ ಅಂತಹುದೇ ವಿಕ್ರಮವನ್ನು ನಾನು ಸಾಧಿಸಿರುವೆ’ ಎಂದು ನರೇಂದ್ರ ಮೋದಿ ಅವರು ಹೇಳಿರುವುದು (ಪ್ರ.ವಾ., ಜೂನ್‌ 5) ಎಷ್ಟು ಸರಿ? ಈ ದೇಶದ ಎಲ್ಲಾ ಮೂಲ ಸಮಸ್ಯೆಗಳಿಗೂ ನೆಹರೂ ಅವರೇ ಕಾರಣ ಎಂಬಂತೆ ಈ ಕೆಲವು ವರ್ಷಗಳಿಂದ ಬಿಂಬಿಸುತ್ತಾ ಬಂದಿರುವ ಮೋದಿ ಅವರು, ಈಗ ತಮ್ಮ ಸಾಧನೆಯನ್ನು ಮಾತ್ರ ನೆಹರೂ ಅವರ ಜೊತೆಯಲ್ಲಿ ಏಕೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ? ಇಷ್ಟಕ್ಕೂ ಹಿಂದಿನ ಬಾರಿಯ 300ಕ್ಕೂ ಹೆಚ್ಚು ಸ್ಥಾನಗಳಿಗೆ ಬದಲಾಗಿ, ಈ ಚುನಾವಣೆಯಲ್ಲಿ ಸರಳ ಬಹುಮತಕ್ಕೂ ಎಟುಕದಷ್ಟು ಸ್ಥಾನಗಳನ್ನು ಮಾತ್ರವೇ ಗೆದ್ದು ‘ನಾನು ನೆಹರೂ ವಿಕ್ರಮವನ್ನು ಸಾಧಿಸಿದ್ದೇನೆ’ ಎನ್ನುವುದು ಸಹ ಸರಿಯಲ್ಲ.

ನೆಹರೂ ಅವರು ಪ್ರಧಾನಿಯಾಗಿದ್ದಾಗ ಶಿಕ್ಷಣ, ಕೈಗಾರಿಕೆ, ಕೃಷಿ, ನೀರಾವರಿ, ವಿಜ್ಞಾನ– ತಂತ್ರಜ್ಞಾನ, ಆರೋಗ್ಯ, ರಕ್ಷಣೆಯಂತಹ ಕ್ಷೇತ್ರಗಳಿಗೆ ಬಹಳ ಒತ್ತು ಕೊಟ್ಟಿದ್ದರು. ನೆಹರೂ ಸಾಧನೆ ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ಮೋದಿ ತಮ್ಮ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಅಷ್ಟಾಗಿ ಒತ್ತು ಕೊಡಲಿಲ್ಲ. ಇತ್ತೀಚಿನ ತಮ್ಮ ಚುನಾವಣಾ ಭಾಷಣದಲ್ಲೂ ಮುಸ್ಲಿಂ ಮೀಸಲಾತಿ, ಹಿಂದೂ ಧರ್ಮ, ಮಂಗಳಸೂತ್ರ, ರಾಮಮಂದಿರ
ದಂತಹ ವಿಷಯಗಳನ್ನೇ ಪ್ರಧಾನವಾಗಿ ಎಳೆದುತಂದರು. ಶಿಕ್ಷಣ, ಉದ್ಯೋಗ, ಆರೋಗ್ಯ, ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಮಾಧ್ಯಮಗಳು ಮೋದಿಯವರನ್ನು ‘ಹಿಂದೂ ಹೃದಯ ಸಾಮ್ರಾಟ’ನನ್ನಾಗಿ ಚಿತ್ರಿಸಿ ಪ್ರಚಾರ ಕೊಟ್ಟು ಗೆಲ್ಲಿಸಿರುವುದನ್ನು ಮರೆಯುವಂತಿಲ್ಲ.

→⇒ತಾ.ಸಿ.ತಿಮ್ಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT