ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 6 ಜೂನ್ 2024, 23:43 IST
Last Updated 6 ಜೂನ್ 2024, 23:43 IST
ಅಕ್ಷರ ಗಾತ್ರ

ಸಂಸದರಿಗೆ ಕನ್ನಡ ಆದ್ಯತೆಯಾಗಲಿ

ಒಕ್ಕೂಟ ಭಾರತದಲ್ಲಿ ಹದಿನೆಂಟನೇ ಲೋಕಸಭೆ ಅಸ್ತಿತ್ವಕ್ಕೆ ಬರಲಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು ಸಂಸತ್ತಿನಲ್ಲಿ ಧೈರ್ಯ, ಆತ್ಮವಿಶ್ವಾಸದಿಂದ, ಹಿಂದಿ, ಇಂಗ್ಲಿಷ್ ಬಂದರೂ ಕನ್ನಡದಲ್ಲಿಯೇ ಮಾತನಾಡಲಿ. ಅದು ನಮ್ಮ ಸಾಂವಿಧಾನಿಕ ಹಕ್ಕು ಕೂಡ. ಕೆಲವು ಸಂಸದರಿಗೆ ಹಿಂದಿ, ಇಂಗ್ಲಿಷ್ ಭಾಷೆ ಬರದೇ ಇರಬಹುದು ಅಥವಾ ಸರಿಯಾಗಿ ಬರದೆಯೂ ಇರಬಹುದು. ಅದರಿಂದ ಕೀಳರಿಮೆ ಅನುಭವಿಸಬೇಕಾದ ಅಗತ್ಯವಿಲ್ಲ. ಸಂವಿಧಾನದಲ್ಲಿ ಮಾನ್ಯ ಮಾಡಿರುವ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಕ್ಷಣಾರ್ಧದಲ್ಲಿ ಅನುವಾದ ಆಗುವ ವ್ಯವಸ್ಥೆಯು ಹೊಸ ಸಂಸತ್ ಭವನದಲ್ಲಿದೆ.

ನಮ್ಮ ಸಂಸದರು ನಾಡು ನುಡಿಯ ಪರವಾಗಿ ಧ್ವನಿ ಎತ್ತಬೇಕು. ಇದೇ 16ರಂದು ಒಕ್ಕೂಟ ಭಾರತದಾದ್ಯಂತ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ಅದು ಹಿಂದಿ, ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರ ಇರಲಿದೆ. ಇಂತಹ ವಿಷಯಗಳ ವಿರುದ್ಧ ದನಿ ಎತ್ತುವುದು ಅವರ ಆದ್ಯತೆಯಾಗಬೇಕು. ರಾಜಕೀಯ ಪಕ್ಷಗಳ ಕನ್ನಡ ಪ್ರೀತಿಯು ಚುನಾವಣೆಯಲ್ಲಿ ಮತ ಸೆಳೆಯುವುದಕ್ಕಷ್ಟೇ ಸೀಮಿತವಾಗಿದೆ. ಅದು ತಪ್ಪಬೇಕು. ಅಂತೆಯೇ ಕೇಂದ್ರ ಸರ್ಕಾರ ಎಂದು ಹೇಳುವ ಬದಲು ಒಕ್ಕೂಟ ಸರ್ಕಾರ ಎಂದೇ ಹೇಳಬೇಕು. ಏಕೆಂದರೆ, ಭಾರತದ ಸಂವಿಧಾನದಲ್ಲಿ ಕೇಂದ್ರ ಸರ್ಕಾರ ಎಂದು ಇಲ್ಲ, ಬದಲಾಗಿ ಒಕ್ಕೂಟ ಭಾರತ ಎಂದೇ ಇದೆ.

⇒ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ, ಚನ್ನಗಿರಿ

ಜೈಲಿನಿಂದಲೇ ಸ್ಪರ್ಧೆ ಸರಿಯೇ?

ಕಠಿಣ ಕಾಯ್ದೆಗಳ ಅಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದರೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಆಯ್ಕೆ
ಆಗಿರುವ ಕಾಶ್ಮೀರದ ಎಂಜಿನಿಯರ್ ರಶೀದ್ ಹಾಗೂ ಪಂಜಾಬ್‌ನ ಅಮೃತ್‌ಪಾಲ್ ಸಿಂಗ್ ಅವರು ಲೋಕಸಭೆಗೆ ಹಾಜರಾಗಿ ಪ್ರಮಾಣವಚನ ಸ್ವೀಕರಿಸಬಹುದಾದರೂ ಕಲಾಪಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ (ಪ್ರ.ವಾ., ಜೂನ್‌ 6). ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿ ಕನಿಷ್ಠ ಎರಡು ವರ್ಷಗಳ ಶಿಕ್ಷೆಗೆ ಗುರಿಪಡಿಸಿದರೆ ಮಾತ್ರ ಅವರು ಲೋಕಸಭಾ ಸದಸ್ಯತ್ವ ಕಳೆದುಕೊಳ್ಳುತ್ತಾರೆ ಎಂದು ಕಾನೂನು ಹೇಳುತ್ತದೆ. ಆದರೆ ದೋಷಿತರು ಎಂಬ ಕಾರಣದಿಂದಲೇ ಅವರನ್ನು ಪೊಲೀಸರು ಬಂಧಿಸಿರುತ್ತಾರೆ. ಹೀಗಿರುವಾಗ, ಗಂಭೀರ ಆರೋಪ ಹೊತ್ತ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದು ಎಷ್ಟು ಸರಿ? ಇಂತಹ ಆಪಾದನೆ ಹೊತ್ತವರನ್ನು ಜನ ತಾನೇ ಅದು ಹೇಗೆ ಮತ ಹಾಕಿ ಗೆಲ್ಲಿಸುತ್ತಾರೆ?

ಒಂದು ವೇಳೆ ಆಪಾದನೆ ಸಾಬೀತಾಗಿ ಅವರು ಎರಡು ವರ್ಷದ ಜೈಲು ಶಿಕ್ಷೆಗೆ ಗುರಿಯಾದರೆ ಸದಸ್ಯತ್ವಕ್ಕೆ ಅನರ್ಹರಾಗುತ್ತಾರೆ ಎನ್ನುವುದೇನೋ ಸರಿ. ರಶೀದ್ ಐದು ವರ್ಷಗಳಿಂದಲೂ ಜೈಲಿನಲ್ಲಿಯೇ ಇದ್ದಾರೆ. ತಪ್ಪಿತಸ್ಥರಲ್ಲದಿದ್ದರೂ ಜೈಲಿನಲ್ಲಿ ಇದ್ದಾರೆಯೋ ಅಥವಾ ತಪ್ಪಿತಸ್ಥರಾಗಿ ಜೈಲಿನಲ್ಲಿ ಇರುವರೋ ಎಂಬುದು ತಿಳಿಯುವುದಿಲ್ಲ. ಇಂತಹ ವಿಷಯಗಳ ಬಗ್ಗೆ ಸರಿಯಾದ ಕಾನೂನು ರೂಪಿಸಬೇಕಾದ ಅಗತ್ಯ ಇದೆ.

⇒ಮುಳ್ಳೂರು ಪ್ರಕಾಶ್, ಮೈಸೂರು

ಕಲ್ಯಾಣ ಕರ್ನಾಟಕ: ಅಭಿವೃದ್ಧಿಗೆ ವೇಗ ತುಂಬಿ

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೀದರ್‌, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುಮತ ಪಡೆದು ಆಯ್ಕೆಯಾಗಿದ್ದಾರೆ. ಇದರಿಂದ, ಕಲ್ಯಾಣ ಕರ್ನಾಟಕವು ಕಾಂಗ್ರೆಸ್‍ನ ಕೈ ಹಿಡಿದಿದೆ ಎಂದೇ ಹೇಳಬಹುದು. ಈ ಪ್ರದೇಶವು ‘ಹಿಂದುಳಿದ ಪ್ರದೇಶ’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಇದನ್ನು ಕಳಚಲು ಇನ್ನು ಮೇಲಾದರೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕಾಳಜಿ ತೋರಿಸಿ ಈ ಪ್ರದೇಶದ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲಿನ ಶಾಸಕರು, ಮಂತ್ರಿಗಳು, ಸಂಸದರು, ಪ್ರಾಮಾಣಿಕ ಅಧಿಕಾರಿಗಳು ಒಟ್ಟಾಗಿ ನಿಂತರೆ ಈ ಕಾರ್ಯ ಸಾಧ್ಯ.

10 ಮತ್ತು 12ನೇ ತರಗತಿಗಳ ಫಲಿತಾಂಶದಲ್ಲಿ ನಿರಂತರವಾಗಿ ಈ ಭಾಗದ ಸಾಧನೆ ಕಳಪೆ ಎಂದೇ ಹೇಳಬಹುದು. ಈ ಕಳಂಕ ತಪ್ಪಬೇಕಾದರೆ ಶಾಲಾ, ಕಾಲೇಜುಗಳನ್ನು ಸುಸಜ್ಜಿತಗೊಳಿಸಬೇಕು. ಬೋಧನೆಯಲ್ಲಿ ಸುಧಾರಣೆ ತರಬೇಕು. ಪದವಿ ಓದುವವರ ಪ್ರಮಾಣ ಹೆಚ್ಚಾಗುವಂತೆ ಮಾಡಬೇಕು. ಇನ್ನೂ ಬೇಸಾಯವನ್ನೇ ನಂಬಿಕೊಂಡಿರುವ ಈ ಪ್ರದೇಶದ ಬಡರೈತರ ಪ್ರಗತಿಗಾಗಿ ಶ್ರಮಿಸಬೇಕು. ನೀರಾವರಿ, ಉದ್ಯೋಗ, ರಸ್ತೆ, ಸಾರಿಗೆಯಂತಹ ವ್ಯವಸ್ಥೆಯನ್ನು ಸುಧಾರಿಸಿ, ಹಿಂದುಳಿದ ಜಿಲ್ಲೆಗಳು ಎಂಬ ಹಣೆಪಟ್ಟಿಯನ್ನು ತೊಲಗಿಸಬೇಕು.

⇒ನಂದೀಶ್ವರ ದಂಡೆ, ಹೊಸಪೇಟೆ

ಪುರುಷನ ಅಡುಗೆ ಅಧ್ಯಾಯ: ಬೇಕು ಪ್ರೋತ್ಸಾಹ

ಮಕ್ಕಳಲ್ಲಿ ಲಿಂಗ ಸಮಾನತೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕೇರಳ ಸರ್ಕಾರವು ಪುರುಷರು ಅಡುಗೆ ಮಾಡುವ ಹಾಗೂ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವಂತಹ ದೃಶ್ಯಸಹಿತ ಪಾಠವನ್ನು ಪಠ್ಯಪುಸ್ತಕಗಳಲ್ಲಿ ಪರಿಚಯಿಸಿರುವುದರ ಬಗ್ಗೆ ವರದಿಯಾಗಿದೆ (ಪ್ರ.ವಾ., ಜೂನ್‌ 5). ಅಡುಗೆಯಂಥ ಒಂದು ಉತ್ತಮ ಕಲೆಯನ್ನು ಬರೀ ಹೆಂಗಸರಿಗೆ ಸೀಮಿತಗೊಳಿಸಿರುವುದು, ಅಡುಗೆ ಮಾಡುವ ಗಂಡಸರನ್ನು ಕೀಳಾಗಿ ಕಾಣುವುದು ಯಾಕೆ ಎಂಬುದು ಅರ್ಥವಾಗದ ಒಗಟು. ಹಿಂದೆ ಗಂಡಸರು ಸೊಗಸಾಗಿ ಅಡುಗೆ ಮಾಡುತ್ತಿದ್ದರು ಎಂಬುದಕ್ಕೆ, ರುಚಿಕಟ್ಟಾದ ಭೋಜನಕ್ಕೆ ‘ನಳಪಾಕ’ ಎಂಬ ಪದ ಪ್ರಯೋಗ ಬಳಕೆಯಲ್ಲಿರುವುದೇ ನಿದರ್ಶನ. ಪಾಂಡವರು ವಿರಾಟರಾಜನ ಅರಮನೆಯಲ್ಲಿ ಅಜ್ಞಾತವಾಸ ಮಾಡುತ್ತಿದ್ದ ಸಂದರ್ಭದಲ್ಲಿ, ಭೀಮ ಆರಿಸಿಕೊಂಡದ್ದು ಬಾಣಸಿಗ ಕೆಲಸವನ್ನು. ಅಷ್ಟು ದೂರ ಯಾಕೆ, ಇಂದಿನ ಹೋಟೆಲ್‍ಗಳಲ್ಲಿ, ಕಲ್ಯಾಣಮಂಟಪಗಳಲ್ಲಿ, ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ, ನಿತ್ಯ ದಾಸೋಹ ನೀಡುವ ಮಠಗಳಲ್ಲಿ, ಹಾಸ್ಟೆಲ್ಲುಗಳಲ್ಲಿ ಅಡುಗೆ ಕಾಯಕದಲ್ಲಿ ತೊಡಗಿರುವವರು ಗಂಡಸರೇ ವಿನಾ ಹೆಂಗಸರಲ್ಲ. ಆದರೆ ಮನೆಯಲ್ಲಿ ಗಂಡಸರು ಅಡುಗೆ ಮನೆಗೆ ಹೋದರೆ ಅಂಥವರನ್ನು ‘ಹೆಣ್ಣಿಗ’ ಎಂದು ಹೆಂಗಸರು ಮತ್ತು ಗಂಡಸರು ಕೂಡಿಯೇ ಹಂಗಿಸುತ್ತಾರೆ!

ಶಾಲೆಯ ಪಠ್ಯಕ್ರಮದಲ್ಲಿ ಗಂಡಸರು ಅಡುಗೆ ಮಾಡುವುದನ್ನು ಅಳವಡಿಸುವುದರ ಜೊತೆಗೆ, ಮನೆಯಲ್ಲಿ ಅಡುಗೆ ಮಾಡುವ ಗಂಡಸರನ್ನು ಹೀಗಳೆಯದೇ ಪ್ರೋತ್ಸಾಹಿಸಬೇಕಿದೆ.

⇒ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT